ಅಯೋಧ್ಯೆ ಶ್ರೀರಾಮ ಮಂದಿರ...

ಅಯೋಧ್ಯೆ ಶ್ರೀರಾಮ ಮಂದಿರ...

ರಾಮ ಭಕ್ತರಿಗೆ ಶುಭಾಶಯಗಳು. ದೈವ ನಂಬಿಕೆಯ ಜನರಿಗೆ ತುಂಬಾ ಸಂತೋಷವಾಗುತ್ತಿದೆ. ಅವರ ಭಾವನೆಗಳನ್ನು ಗೌರವಿಸುತ್ತಾ... ಈ ಸಂದರ್ಭದಲ್ಲಿ ಅವರ ಗೌರವಯುತ ಜವಾಬ್ದಾರಿಯ ಬಗ್ಗೆ ಒಂದು ಮನವಿ.

ತುಂಬಾ ಆಳವಾದ ಸತ್ಯ ಏನಿದೆಯೋ ತೀರಾ ಸ್ಪಷ್ಟವಾಗಿಲ್ಲ. ಆದರೆ ವಾಸ್ತವದಲ್ಲಿ ಈ ವಿವಾದ ಪ್ರಾರಂಭವಾಗುವುದು ಅಲ್ಲಿ ಮೊದಲಿಗೆ ಶ್ರೀರಾಮರ ಮಂದಿರ ಇತ್ತು, ತದನಂತರ ಮೊಗಲರ ಆಡಳಿತದಲ್ಲಿ ಅದನ್ನು ಒಡೆದು ಬಾಬರಿ ಮಸೀದಿ ನಿರ್ಮಿಸಲಾಯಿತು. ಸುಮಾರು ಮೂರು ಎಕರೆ ಜಾಗದ ಈ ವಿವಾದ ಬಹಳ ವರ್ಷಗಳಿಂದ ನ್ಯಾಯಾಲಯದಲ್ಲಿತ್ತು. ಹಿಂದು ಮುಸ್ಲಿಂ ಪರವಾಗಿ ನ್ಯಾಯಾಲಯದಲ್ಲಿ ವಾದ ನಡೆಯುತ್ತಿತ್ತು. ಆದರೆ  ಸುಮಾರು 31 ವರ್ಷಗಳ ಹಿಂದೆ ನ್ಯಾಯಾಲಯದ ಮತ್ತು ಕಾನೂನಿನ ನಿಯಮಗಳನ್ನು ಮೀರಿ ಬಾಬರಿ ಮಸೀದಿ ಒಡೆದು ಹಾಕಲಾಯಿತು. ಮುಂದೆ ಶ್ರೇಷ್ಟ ನ್ಯಾಯಾಲಯದ ಸಂವಿಧಾನ ಪೀಠ ಹಿಂದುಗಳ ಪರವಾಗಿ ತೀರ್ಪು ನೀಡಲಾಯಿತು. ಮಸೀದಿಗಾಗಿ ಬೇರೆ ಜಾಗ ನಿಗದಿಪಡಿಸಲಾಯಿತು. ಈಗ ಅಲ್ಲಿ ಅಧಿಕೃತವಾಗಿ ರಾಮ ಮಂದಿರ ನಿರ್ಮಾಣವಾಗಿದೆ.

ಮುಂದಿನ ವರ್ಷದ ಜನವರಿ 22 ರಂದು ಉದ್ಘಾಟನೆ. ಇದು ಒಂದು ಸಂಕ್ಷಿಪ್ತ ವಿವರಣೆ. ಆಳದಲ್ಲಿ ದೀರ್ಘ ಮತ್ತು ವಾಸ್ತವ ಸತ್ಯ ಬೇರೆ ಇರಬಹುದು. ಅದು ಮಂದಿರವೋ ಮಸೀದಿಯೋ ನನ್ನ ಪಾಲಿಗೆ ಒಂದು ದೇವ ಮಂದಿರ ಮಾತ್ರ. ಅದು ಸಹ ಒಂದು ಕಾಲ್ಪನಿಕ ಪಾತ್ರ ಮತ್ತು ವಿವಾದವಲ್ಲದ ಅನಾಗರಿಕ ವಿವಾದ. ಒಂದು ರಾಜಕೀಯ ಮತ್ತು ಧಾರ್ಮಿಕ ಕುತಂತ್ರ. ಭಾವನಾತ್ಮಕ ಬ್ಲಾಕ್ ಮೇಲ್ ಅಷ್ಟೇ ‌ ಅದು ಇತಿಹಾಸ.

ಅದೆಲ್ಲಾ ಮುಗಿದಿದೆ. ಈಗ ನಮ್ಮ ಮುಂದಿರುವುದು ಅತ್ಯಂತ ಸಂಯಮದ ಪ್ರಬುದ್ಧ ನಡವಳಿಕೆ ಮಾತ್ರ. ಸರಿ ತಪ್ಪುಗಳು, ಐತಿಹಾಸಿಕ ದಾಖಲೆಗಳು, ನ್ಯಾಯಾಲಯದ ವಾದ ವಿವಾದಗಳು, ಸತ್ಯದ ಹುಡುಕಾಟಗಳ ಅವಶ್ಯಕತೆ ಈಗ ಸಾಮಾನ್ಯರಿಗೆ ಬೇಕಾಗಿಲ್ಲ. ಶಾಂತಿ ಸೌಹಾರ್ದತೆ ಮತ್ತು ಜನರ ಜೀವನಮಟ್ಟ ಸುಧಾರಣೆಯ ಅಭಿವೃದ್ಧಿ ಮಾತ್ರ ಈಗ ಮುಖ್ಯ. ಅದನ್ನೇ ಮುಖ್ಯ ಉದ್ದೇಶವಾಗಿ ಇಟ್ಟುಕೊಂಡ ಅಭಿಪ್ರಾಯವಿದು.

ದೇವರು - ಧರ್ಮಕ್ಕಿಂತ ಈ ನೆಲ ಈ ಜನ ಮುಖ್ಯ ಎಂದು ಭಾವಿಸುವ ಜವಾಬ್ದಾರಿಯುತ ನಾಗರಿಕರು ನಾವಾಗಿದ್ದರೆ ಈ ಉದ್ಘಾಟನಾ ಕಾರ್ಯಕ್ರಮದ ವಿಜೃಂಭಣೆ ಬೇಡ. ಮಾಧ್ಯಮಗಳೇ ಆಗಲಿ, ಸಾಮಾಜಿಕ ಜಾಲತಾಣಗಳೇ ಆಗಿರಲಿ, ದೈವ ಭಕ್ತರೇ ಆಗಿರಿ, ಯಾವುದೇ ಪಕ್ಷದ ಕಾರ್ಯಕರ್ತರೇ ಆಗಿರಿ ಸಾಧ್ಯವಾದಷ್ಟು ಅದನ್ನು ಆಂತರಿಕವಾಗಿ ಅನುಭವಿಸಿ. ಘೋಷಣೆ - ಪ್ರದರ್ಶನಗಳು ಒಳ್ಳೆಯದಲ್ಲ.

ಈ ರಾಮ ಮಂದಿರ ಭಾರತದ ಅಸ್ಮಿತೆ, ಹಿಂದೂಗಳ ಗೆಲುವು, ಶತಮಾನಗಳ ದಾಳಿಗೆ ಪ್ರತ್ಯುತ್ತರ ಎಂಬ ಮಾತುಗಳ ಅವಶ್ಯಕತೆ ಇಲ್ಲ. ಅದು ಕೇವಲ ಒಂದು ಮಂದಿರ ಮಾತ್ರ. ಯಾರದೋ ಚಿತಾವಣೆಗೆ ಬಲಿಯಾಗಿ ಪ್ರಚೋದನೆಗೆ ಒಳಗಾಗದಿರಿ. ಒಂದು ವೇಳೆ ನಿಮಗೆ ಆಸಕ್ತಿ ಇದ್ದರೆ, ಅನುಕೂಲ ಇದ್ದರೆ ಅಯೋಧ್ಯೆಗೆ ಹೋಗಿ ಬನ್ನಿ. ಭಕ್ತಿ ಸಮರ್ಪಣೆ ಮಾಡಿ. ಅದು ನಿಮ್ಮ ಸ್ವಾತಂತ್ರ್ಯ. ಆದರೆ ಉದ್ವೇಗ ಒಳ್ಳೆಯದಲ್ಲ. ದೇಶ ಭಕ್ತಿ ಎಂದರೆ ದೇಶದ ಹಿತಕ್ಕಾಗಿ ಶ್ರಮಿಸುವುದು. ದೇಶದ ಹಿತ ಶಾಂತಿ ಸೌಹಾರ್ದತೆಯಲ್ಲಿ ಅಡಗಿದೆ. ಅದಕ್ಕೆ ವಿರುದ್ಧವಾಗಿ ವರ್ತಿಸುವುದು ದೇಶದ್ರೋಹ ಎಂದೆನಿಸುತ್ತದೆ ಎಂಬುದು ನೆನಪಿರಲಿ.

ಇದನ್ನು ಇಲ್ಲಿ ಪ್ರಸ್ತಾಪಿಸಲು ಕಾರಣ ಅಯೋಧ್ಯೆ ರಾಮ ಮಂದಿರ ಸಹಜ ದೇವಸ್ಥಾನವಲ್ಲ. ಇಡೀ ದೇಶವನ್ನೇ ಅಲುಗಾಡಿಸಿದ ವಿವಾದಾತ್ಮಕ ವಿಷಯ. ಮುಸ್ಲಿಂ ಸಮುದಾಯಕ್ಕೆ ಇದರಿಂದ ಸಾಕಷ್ಟು ಅಸಮಾಧಾನವಿದೆ. ಸ್ವಾತಂತ್ರ್ಯ ನಂತರ ಒಂದು ಮಸೀದಿಯನ್ನು ಹಿಂದೆ ನಡೆದಿರಬಹುದಾದ ಘಟನೆಯ ಊಹೆ ಅಥವಾ ಆಧಾರದ ಮೇಲೆ ಧ್ವಂಸ ಮಾಡಿದ್ದು ಪ್ರಜಾಪ್ರಭುತ್ವದ ಜಾತ್ಯಾತೀತ ಮೌಲ್ಯಗಳಿಗೆ ಮಾಡಿದ ಅಪಚಾರ ಎಂಬ ಭಾವನೆಯಿದೆ. 31 ವರ್ಷಗಳ ನಂತರ ಅದು ಈಗ ಕಡಿಮೆಯಾಗಿದೆ. ಈಗ ಈ ಉದ್ಘಾಟನೆಯನ್ನು‌ ಸೌಮ್ಯವಾಗಿ ಮಾಡಬೇಕು ಮತ್ತು ಇನ್ನೊಂದು ಸಮುದಾಯ ಇದನ್ನು ವೀಕ್ಷಿಸುತ್ತಿದೆ ಎಂಬ ಪ್ರಜ್ಞೆಯೊಂದಿಗೆ ಆಚರಿಸಬೇಕು. ಡೋಂಟ್ ಕೇರ್ ಮನೋಭಾವ ‌ಬಹುತ್ವ ರಾಷ್ಟ್ರದ ದೀರ್ಘಕಾಲದ ಹಿತಾಸಕ್ತಿಗೆ ಮಾರಕ ಎಂಬುದನ್ನು ಪ್ರಜ್ಞಾವಂತರು ಮರೆಯಬಾರದು. ಯಾರೋ ಕೆಲವು ಮೂಲಭೂತವಾದಿ ಯುವಕರ ಹುಚ್ಚಾಟಗಳಿಗೆ ದೇಶದ ಹಿತ ಬಲಿಕೊಡಬಾರದು. ಅದರಿಂದ ಅಪಾಯವೇ ಹೆಚ್ಚು.

ಇಡೀ ವಿಶ್ವದಲ್ಲೇ ಭಾರತ ಆರ್ಥಿಕವಾಗಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ. ಇದನ್ನು ಮುಂದುವರಿಸಬೇಕು. ಒಂದು ದೇಶದ ಆಂತರಿಕ ಸಾಮರಸ್ಯ ಅಭಿವೃದ್ಧಿಗೆ ಅತ್ಯವಶ್ಯಕ. ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬುದು ಕೇವಲ ಘೋಷಣೆಯಾಗಬಾರದು. ಅದು ವಾಸ್ತವವಾಗಬೇಕು.

" ಇವ ನಾರವ ಇವ ನಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ " ಎಂಬ ವಚನ ಸಂಸ್ಕೃತಿ, " ವಸು ದೈವ ಕುಟುಂಬಂ " ಎಂಬ ಗೀತ ಸಾರದ ನಿಜವಾದ ಪ್ರಯೋಗ ಈಗ ನಡೆಯಬೇಕಿದೆ. ಯಾರೋ ಕೆಲವು ಉಡಾಫೆ ಮನೋಭಾವದವರು ಸನಾತನ ಧರ್ಮದ ಪುನರುತ್ಥಾನ ಎಂದು ಗುಲ್ಲೆಬ್ಬಿಸಿ ತಾಖತ್ತಿನ ಪ್ರದರ್ಶನ ಮಾಡುವುದು ಆಘಾತಕಾರಿ ಮತ್ತು ಅನಾಹುತಕಾರಿ ಆಗಬಹುದು. ಇಲ್ಲಿ ಇತಿಹಾಸದ ಘಟನೆಗಳು ಪಾಠವಾಗಬೇಕು. ಇತಿಹಾಸದ ಅರಿವಿಲ್ಲದ ಕೆಲವರ ಮಾತುಗಳಿಗೆ ಪ್ರಾಮುಖ್ಯತೆ ನೀಡಬೇಡಿ. ನಿಮ್ಮ ಅನಿಸಿಕೆ ಅಭಿಪ್ರಾಯ ಸಂತೋಷ ಆಕ್ರೋಶ ಏನಾದರೂ ವ್ಯಕ್ತಪಡಿಸುವ ಸ್ವಾತಂತ್ರ್ಯ ನಿಮಗಿದೆ. ಆದರೆ ಅದು ಸಭ್ಯತೆ ಸಂಯಮ ಜನಹಿತ ಮೀರದಿರಲಿ. ಇಡೀ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಭಕ್ತಿಯಿಂದ ಆಚರಿಸಿದರೆ ಅದೊಂದು ಶಾಂತಿಯ ಸಂದೇಶವಾಗುತ್ತದೆ. ಭಾರತದ ಹೆಮ್ಮೆಯಾಗುತ್ತದೆ. ಅದನ್ನು ಮೀರಿದ ಅತಿರೇಕ ಭಾರತದ ಭವಿಷ್ಯಕ್ಕೆ ಮಾರಕವಾಗಬಹುದು ಎಚ್ಚರವಿರಲಿ.

ಖಂಡಿತವಾಗಿಯೂ ಸಾರ್ವಜನಿಕವಾಗಿ ಹೇಳಲಾಗದ ಅನೇಕ ವಿಷಯಗಳು ದೇಶದ ಆಂತರಿಕ ಭದ್ರತೆಯ ದೃಷ್ಟಿಯಿಂದ ಅಡಕವಾಗಿರುತ್ತದೆ. ಸಾಮಾನ್ಯ ಮೂಲಭೂತವಾದಿ ಉತ್ಸಾಹಿಗಳಿಗೆ ಇದು ಅರ್ಥವಾಗುವುದಿಲ್ಲ. ಅವರು ಹಿಂಸೆಯನ್ನು ಆನಂದಿಸುತ್ತಾರೆ. ಅದರ ಪರಿಣಾಮ ಮಾತ್ರ ಮುಗ್ದ ಜನರು ಅನುಭವಿಸಬೇಕು. ದಯವಿಟ್ಟು ತಾಳ್ಮೆಯಿಂದ ಯೋಚಿಸಿ ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳಿ. ಇದು ಕಳಕಳಿಯ ಮನವಿ.

-ವಿವೇಕಾನಂದ ಎಚ್ ಕೆ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

Comments