ಬ್ರೋಚೇವಾರೆವರುರಾ ನಿನುವಿನಾ?

ಬ್ರೋಚೇವಾರೆವರುರಾ ನಿನುವಿನಾ?

ಇದೇನಿದು, ಕನ್ನಡ ಬರಹಕ್ಕೆ ತೆಲುಗು ತಲೆಬರಹವೇ ಎಂದಿರಾ? ಕಾರಣವಿದೆ. ಇಂದು ಮೇ ೨೮ -ಮೈಸೂರು ವಾಸುದೇವಾಚಾರ್ಯರು ೧೮೬೫ರಲ್ಲಿ ಇದೇ ದಿನ ಹುಟ್ಟಿದ್ದು. ಮೈಸೂರು ವಾಸುದೇವಾಚಾರ್ಯ ಎಂದ ಕೂಡಲೆ, ನನಗೆ ನೆನಪಿಗೆ ಬರುವ ಕೃತಿ ಖಮಾಚ್ ರಾಗದ ಬ್ರೋಚೇವಾರೆವರುರಾ ಎನ್ನುವ ರಚನೆ. ಕೆ.ವಿಶ್ವನಾಥರ, ಮತ್ತು ಕೆ.ವಿ.ಮಹಾದೇವನ್ ಅಂತಹವರ ದಯದಿಂದ ಸಂಗೀತದ ಪರಿಚಯ ಇಲ್ಲದವರಿಗೂ, ಶಂಕರಾಭರಣಂ ಮೊದಲಾದ ತೆಲುಗು ಸಿನೆಮಾಗಳ ಮೂಲಕ ಶಾಸ್ತ್ರೀಯ ಸಂಗೀತದ ಅಲ್ಪ ಸ್ವಲ್ಪ ಪರಿಚಯವಾದದ್ದು, ಬ್ರೋಚೇವಾರೆವರುರಾ, ಸಾಮಜವರಗಮನ ಮೊದಲಾದ ಕೃತಿಗಳು ಎಲ್ಲರ ಬಾಯಲ್ಲೂ ನಲಿದಾಡಿದ್ದು ೮೦ರ ದಶಕದ ಸಂಗತಿ.

ಮೈಸೂರು ವಾಸುದೇವಾಚಾರ್ಯರು ಕರ್ನಾಟಕ ಸಂಗೀತದ ವಾಗ್ಗೇಯಕಾರರಲ್ಲಿ ಮೊದಲಸಾಲಿನಲ್ಲಿ ನಿಲ್ಲಬಲ್ಲಂತಹವರು. ತ್ಯಾಗರಾಜಾದಿ ಸಂಗೀತ ತ್ರಿಮೂರ್ತಿಗಳ ನಂತರ ಬರಬಲ್ಲ ಹೆಸರುಗಳಲ್ಲಿ ಮೊದಲದ್ದೇ ವಾಸುದೇವಾಚಾರ್ಯರದ್ದು ಎಂದರೂ ತಪ್ಪಿಲ್ಲ. ತ್ಯಾಗರಾಜರ ಶಿಷ್ಯ ಪರಂಪರೆಯಲ್ಲಿ ಬಂದ ವಾಸುದೇವಾಚಾರ್ಯರು, ಪಟ್ಟಣಂ ಸುಬ್ರಮಣ್ಯ ಅಯ್ಯರ್ ಅವರ ಪಟ್ಟ ಶಿಷ್ಯ.

ತ್ಯಾಗರಾಜರ ರೀತಿಯಲ್ಲಿ ರಚನೆ ಮಾಡಿದ ವಾಸುದೇವಾಚಾರ್ಯರು, ತಮ್ಮ ರಚನೆಗಳಿಗೆ ತ್ಯಾಗರಾಜರಂತೆಯೇ ಆಯ್ದದ್ದು ಸಂಸ್ಕೃತ ಹಾಗೂ ತೆಲುಗು ಭಾಷೆಗಳನ್ನು. ಅಲ್ಲದೆ, ಅವರಂತೆಯೇ ವಾಸುದೇವಾಚಾರ್ಯರೂ ಸ್ವನಾಮಮುದ್ರೆಯನ್ನೇ ಉಪಯೋಗಿಸಿದರು. ತ್ಯಾಗರಾಜರ ರಚನೆಗಳಲ್ಲಿ, ತ್ಯಾಗರಾಜ ಎಂಬ ಮುದ್ರೆ ಕಂಡುಬಂದರೆ, ವಾಸುದೇವಾಚಾರ್ಯರು ವಾಸುದೇವ ಅನ್ನುವ ಅಂಕಿತವನ್ನು ಉಪಯೋಗಿಸಿದ್ದಾರೆ.

ವಾಸುದೇವಾಚಾರ್ಯರು ಸುಮಾರು ೨೦೦ಕ್ಕೂ ಹೆಚ್ಚು ರಚನೆಗಳನ್ನು ಮಾಡಿದ್ದಾರೆ. ಅವುಗಳಲ್ಲಿ ವರ್ಣ,ಕೃತಿ,ಜಾವಳಿ, ರಾಗಮಾಲಿಕೆಗಳು, ತಿಲ್ಲಾನ ಮೊದಲಾದ ಎಲ್ಲ ಪ್ರಕಾರಗಳೂ ಸೇರಿವೆ. ಅವರ ಎಲ್ಲ ರಚನೆಗಳ ಪಟ್ಟಿಯನ್ನು ಇಲ್ಲಿ ಚಿಟಕಿಸಿ ನೋಡಬಹುದು. ಕರುಣಿಸೌ ತಾಯೇ ಎಂಬ ಸರಸ್ವತಿ ಮನೋಹರಿ ರಾಗದ ರಚನೆಯನ್ನುಳಿದು, ಇನ್ನೆಲ್ಲಕ್ಕೂ ಅವರು ತೆಲುಗು ಅಥವಾ ಸಂಸ್ಕೃತ ಭಾಷೆಯನ್ನು ಉಪಯೋಗಿಸಿದ್ದಾರೆ.

ಹೇಗೆ ತ್ಯಾಗರಾಜರು ತಮ್ಮ ಕಾಲದಲ್ಲಿ ಇನ್ನೂ ಹೆಚ್ಚು ಬಳಕೆಯಲ್ಲಿಲ್ಲದ ಖರಹರಪ್ರಿಯ, ಹರಿಕಾಂಭೋಜಿ, ವಾಗಧೀಶ್ವರಿ ಮೊದಲಾದ ಮೇಳಕರ್ತ ರಾಗಗಳಲ್ಲಿ ರಚನೆಗಳನ್ನು ಮಾಡಿ ಅವುಗಳನ್ನು ಪ್ರಚಲಿತಕ್ಕೆ ತಂದರೋ, ಹಾಗೆಯೇ ವಾಸುದೇವಾಚಾರ್ಯರು ತ್ಯಾಗರಾಜರು ಕೈಹಾಕದಿದ್ದ ಸಿಂಹೇಂದ್ರ ಮಧ್ಯಮ,ಧರ್ಮವತಿ, ನಾಟಕಪ್ರಿಯ, ರಿಷಭಪ್ರಿಯ ಮೊದಲಾದ ಮೇಳರಾಗಗಳಲ್ಲಿ ರಚನೆಗಳನ್ನು ಮಾಡಿ, ಆ ರಾಗಗಳಿಗೆ ಒಳ್ಳೆ ಲಕ್ಷ್ಯವನ್ನು ಕಲ್ಪಿಸಿಕೊಟ್ಟರು.

ಅದೇ ರೀತಿ, ಹೇಗೆ ತ್ಯಾಗರಾಜರು ಜನ್ಯ ರಾಗಗಳಲ್ಲಿ ಹೊಸ ಸಾಧ್ಯತೆಗಳನ್ನು ಊಹಿಸಿಕೊಂಡು ಅದರಲ್ಲೆಲ್ಲ ರಚನೆಗಳನ್ನು ಮಾಡಿದರೋ, ಅದೇ ರೀತಿ ವಾಸುದೇವಾಚಾರ್ಯರೂ ಸುನಾದವಿನೋದಿನಿ ಎಂಬೊಂದು ಹೊಸರಾಗದಲ್ಲಿ ದೇವಾದಿದೇವ ಶ್ರೀವಾಸುದೇವ ಎಂಬ ಕೃತಿಯನ್ನು ರಚಿಸಿದ್ದಾರೆ. ಇದರ ಅರ್ಥವನ್ನು ಡಾ.ಎಮ್.ಬಾಲಮುರಳಿಕೃಷ್ಣ ಅವರು ವಿವರಿಸುವುದನ್ನು ಇಲ್ಲಿ ನೋಡಬಹುದು.

 

ಹಾಗೇ ತಮ್ಮ ಗುರು ಪಟ್ಟಣಂ ಸುಬ್ರಮಣ್ಯ ಅಯ್ಯರ್ ಅವರು ಕಲ್ಪಿಸಿದ ಕದನಕುತೂಹಲ ರಾಗದಲ್ಲೂ, ನೀವೇ ರಕ್ಷಕುಡನಿ ಎನ್ನುವ ವರ್ಣವನ್ನೂ, ನೀಕೇಲ ದಯರಾದು ಎನ್ನುವ ಕೃತಿಯನ್ನೂ ರಚಿಸಿದ್ದಾರೆ. ಈ ರಚನೆಯನ್ನು ನೀವು ಎಮ್.ಎಸ್.ಶೀಲಾ ಅವರ ಕಂಠದಲ್ಲಿ ಇಲ್ಲಿ ಚಿಟಕಿಸಿ ಕೇಳಬಹುದು. ಚಿತ್ತಾಕರ್ಷಕ ಚಿಟ್ಟೆಸ್ವರವನ್ನೂ, ಕಡೆಯಲ್ಲಿರುವ ವಾಸುದೇವ ಎನ್ನುವ ಅಂಕಿತವನ್ನೂ ಗಮನಿಸಿ.

ವಾಸುದೇವಾಚಾರ್ಯರು ಮೈಸೂರಿನ ಅರಮನೆಯಲ್ಲಿ ದೀರ್ಘಕಾಲ ಆಸ್ಥಾನ ವಿದ್ವಾಂಸರಾಗಿದ್ದವರು. ಕಡೆಯ ಅರಸರಾದ ಜಯಚಾಮರಾಜೇಂದ್ರ ಒಡೆಯರಿಗೆ ಸಂಗೀತಗುರುಗಳೂ ಆಗಿದ್ದರು. ನಂತರ, ಒಡೆಯರು ತಾವೇ ಸಂಗೀತರಚನೆಗಳನ್ನು ಮಾಡುವಾಗ,ಮೊದಲಿಗೆ ಅವರು ಅದನ್ನು ಕೇಳಿಸುತ್ತಿದ್ದುದ್ದೇ ವಾಸುದೇವಾಚಾರ್ಯರಿಗೆ. ನಂತರ,ಅವರ ಅಭಿಪ್ರಾಯವನ್ನು ಕೇಳಿ ಅಗತ್ಯವಿದ್ದರೆ ರಚನೆಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡುತ್ತಿದ್ದರಂತೆ. ಮೈಸೂರು ಅರಮನೆಯಲ್ಲಿ, ಮತ್ತೆ ಬೇರೆಡೆಯಲ್ಲೆಲ್ಲ ಅವರು ಕಂಡ ಕಲಾವಿದರ ಬಗ್ಗೆ, "ನಾ ಕಂಡ ಕಲಾವಿದರು" ಎಂಬ ಪುಸ್ತಕವೊಂದನ್ನು ಕೂಡ ಬರೆದಿದ್ದರೆ. ಆಸಕ್ತರು ಇದನ್ನು ಓದಿ ಅನ್ನುವ ಶಿಫಾರಸ್ಸು ನನ್ನದು. ಇನ್ನು. ಕೃತಿಗಳ ಬಗ್ಗೆ ಬರೀ ಮಾತಾಡಿ, ಹೆಚ್ಚಿಗೆ ಕೇಳಿಸಲಿಲ್ಲ ಎನ್ನುವ ದೂರು ನಿಮ್ಮದಾಗಿದ್ದರೆ, ಈ ಕೆಳಗಿನ ಕೊಂಡಿಯನ್ನು ಚಿಟಕಿಸಿ.

ವಾಸುದೇವಾಚಾರ್ಯರ ಕೃತಿಗಳು - ನನ್ನ ಮೆಚ್ಚಿನ ಐದು ರಚನೆಗಳು.

-ಹಂಸಾನಂದಿ

Rating
No votes yet

Comments