ಕಿವಿಯ ಕಿತ್ತರಡಗಿತು ಹಾವಿನ ವಿಷ?

ಕಿವಿಯ ಕಿತ್ತರಡಗಿತು ಹಾವಿನ ವಿಷ?

ಮನೆಯ ಸುತ್ತ ಹಾವು ಚೇಳುಗಳ ಭರಾಟೆ ಹಾಗೂ ಭೇಟಿ ಹೆಚ್ಚಾಗುತ್ತಿರುವಂತೆ ಎಲ್ಲೆಡೆ ಲೈಟು ಹಾಕಿಕೊಂಡು ಓಡಾಡುವುದಷ್ಟೇ ಅಲ್ಲದೆ ಮನೆಯೆದುರಿಗಿರುವ ಪಾರ್ಕಿನ ಮೇಲೂ ಒಂದು ನಿಗಾ ಇಡೋದು ಮನೆಯಲ್ಲಿ ಎಲ್ಲರಿಗೂ ಯಾರೂ ಹೇಳದೆಯೇ ರೂಢಿಯಾದಂತಾಗಿಬಿಟ್ಟಿದೆ.

ಮೊನ್ನೆ ಪಾರ್ಕಿನಲ್ಲಿ ಕೆಲಸ ಮಾಡುತ್ತಿರುವವರು ಆರಡಿ ಉದ್ದದ ನಾಗರ ಹಾವೊಂದನ್ನು ಕಂಡರಂತೆ. ಕಂಡರೆ ಹೊಡಿಯಬೇಡ್ರಿ, ನನಗೆ ಬಂದು ತಿಳಿಸಿ ಎಂದು ಹೇಳಿದ್ದೆ. ದೊಡ್ಡ ಹಾವು ಕಂಡು ಹೆದರಿದರು ಅನ್ಸತ್ತೆ, ಅದನ್ನು ಹಾಗೇ ಬಿಟ್ಟರೂ ಮಧ್ಯಾಹ್ನ ಕಂಡ ಪುಟ್ಟದೊಂದನ್ನು ಹೊಡೆದೇ ಹಾಕಿಬಿಟ್ಟರು. ಅದಾದ ಮೇಲೆ ಎದುರು ಬಂದ ಒಂದೆರಡು ಚೇಳುಗಳ ಇಹಲೋಕದ ಕಥೆಯನ್ನೂ ಮುಗಿಸಿಬಿಟ್ಟರಂತೆ.

ಸಾಯಂಕಾಲ ನಾವು ಕರೆಸಿದ್ದು ಸೆಲೆಬ್ರಿಟಿ ಸ್ನೇಕ್ ಕ್ಯಾಚರ್ ಒಬ್ಬರನ್ನು (ಟಿ ವಿ ೯ ಖ್ಯಾತಿಯವರಂತೆ). ಅವರು ಬಂದು ಒಂದೆರಡು ಹುತ್ತಕ್ಕೆ ಡ್ರಮ್ಮುಗಟ್ಟಲೆ ನೀರು ಬಿಟ್ಟು 'ಹಾವು ಹೊರಟುಹೋಗಿದೆ' ಎಂದು ತೀರ್ಪಿತ್ತು ಸಂಭಾವನೆ ಪಡೆದು ಹೊರಟುಹೋದರು. ಹೊರಡುವ ಮುನ್ನ ಅವರ ಕೈಗೆ ಸುಮಾರು ನಾಲ್ಕು ಚೇಳುಗಳು ಸಿಕ್ಕಿದ್ದವು! ಪ್ಲಾಸ್ಟಿಕ್ ಕವರ್ರಿನಲ್ಲಿ ಹಾಕಿಕೊಂಡು 'ರೈಟ್' ಹೇಳಿದರು.
(ಹಿಂದೊಂದ್ ಸಾರಿ ಹೀಗೆಯೇ ಕರೆಸಿದ್ದಾಗ ರೈಟ್ ಹೇಳುವ ಮುನ್ನ ಪರಿಚಯ ಮಾಡಿಕೊಂಡು ನಮ್ಮ ಮೇಸ್ತ್ರಿಯ ಕೈ ಕುಲುಕಿದವರು "ಏನಾದರೂ ತಿನ್ನೋಕೆ?" ಎಂದು ಅದೇ ಮೇಸ್ತ್ರಿ ಕೇಳಿದಾಗ ನಯವಾಗಿ "ಇಲ್ಲ ಸರ್, ವಿಷದ ಹಾವು, ಚೇಳೆಲ್ಲ ಮುಟ್ಟಿರ್ತೀವಿ, ಈ ಕೈಯಲ್ಲಿ ಏನಾದರೂ ತಿಂದು ಏನಾದರೂ ಆದ್ರೆ? ಸುಮ್ಮನೆ riskಉ" ಅಂದುಬಿಡಬೇಕೆ? ಮೇಸ್ತ್ರಿಯೂ ಒಂದು ನಿಮಿಷ ಕೈ ನೋಡಿಕೊಂಡವನು, ಸ್ವಲ್ಪ ಹೊತ್ತಿನಲ್ಲಿ ಗಡದ್ದಾಗಿ ಉಪ್ಪಿಟ್ಟು ಕಣ್ಣು ಮುಚ್ಚಿಕೊಂಡು ಹೊಡೆದಿದ್ದ),

ಮಾರನೆಯ ದಿನ ಕುರಿ ಮೇಯಿಸಿಕೊಂಡು ಹೋಗಲು ಬರುವ ಹುಡುಗ ಪಾರ್ಕಿನ ಸುತ್ತ ರೌಂಡು ಹೊಡೆಯುತ್ತಿದ್ದ. ಇವನಿಗೂ ಏನಾದರೂ ಕಂಡಿತೋ ಎಂದು ವಿಚಾರಿಸಿದಾಗ "ಇಲ್ ಸಾಮಿ, ಏನೂ ಇಲ್ಲ. ಅವು ಬಿಸಿಲು ಏರಿದಾಗ ಬರತ್ವೆ. ನಾ ಕುರಿಗ್ ಹಾಕೋಕ್ ಸೊಪ್ಪು ಕೀಳ್ತಿದ್ದೆ" ಅಂದ. ಹಾಗೇ ಮಾತನಾಡುತ್ತ "ಕುರಿಗಳಿಗೆ ಹಾವು ಕಡಿದಿದ್ದು ಇದೆಯೋ?" ಎಂದು ಕುತೂಹಲದಿಂದ ಕೇಳ್ದೆ. "ಹೂ, ಸಾಮಿ. ಅವು ಮೇಯ್ತ ತುಳಿದ್ರಿ ಕಡೀತಾವೆ. ಆ ಕುರಿ ಕಿವಿ ಕತ್ತರಿಸಿ ಸೊಪ್ಪು ಹಚ್ತೀವಿ, ಸರಿಯಾಕ್ಕತೆ" ಅಂದ. ಶಾಕ್ ಆಯ್ತು! ಸೊಪ್ಪು ಓಕೆ - ಬಹುಶಃ ಯಾವುದೋ ಔಷಧದ ಸೊಪ್ಪಿರಬೇಕು. ಆದರೆ ಕಿವಿ ಕಿತ್ತೋದು?

Rating
No votes yet

Comments