"ಭಿಷ್ಟಿ ಪೊಡೇ ಟಪುರ್ ಟುಪುರ್"

"ಭಿಷ್ಟಿ ಪೊಡೇ ಟಪುರ್ ಟುಪುರ್"

ಮಳೆಯಿಲ್ಲದೆ ಮಳೆನೀರ ಹನಿಯ ಸದ್ದು.

ಈ ಶೀರ್ಷಿಕೆ, ಒಂದು ಬಂಗಾಳಿ ಹಾಡಿನ ಸಾಲು. ಟಪ್, ಟಪ್ ಮಳೆ ಬೀಳುತ್ತಿದೆ ಅಂತ ಇದರ ಅರ್ಥ. ಬಾಲ್ಯದಲ್ಲಿ ಕೇಳಿದ ಹಾಡು ಇದು.

ಬೆಂಗಳೂರ್ನಲ್ಲಿ ಬಿಟ್ರೆ ಮಳೆ ಮತ್ತೆಲ್ಲಿ ಶುರುವಾಗಿದ್ಯೋ ಗೊತ್ತಿಲ್ವಲ್ಲ!!. ಇಲ್ಲಿ ತೀರ್ಥಳ್ಳೀಲಿ ಏಪ್ರಿಲ್ ತಿಂಗ್ಳಲ್ಲಿ ಸ್ವಲ್ಪ ಮುಖಹಾಕಿ,"ತಡೀರಿ, ಬರ್ತೀನಿ" ಅಂದಿದ್ದೆ ಅದೆಲ್ಲಿಗ್ಹೋಯ್ತೋ? ಹೆಚ್ಚಿನಂಶ ಮಲೆನಾಡ ಅಡಿಕೆ ಬೆಳೆಗಾರ್ರ ಹಿಡಿಶಾಪಕ್ಕೆ ರೋಸಿ ಎಲ್ಲೋ ಗುಳೇ ಹೋಗಿರ್ಬೇಕು.
ಬೆಂಗ್ಳೂರು ಬೇಡ ಅಂತ ಬಯಸಿ ಬಯ್ಸಿ ನಾನು ಇಲ್ಲಿಗೆ ಬಂದಾಗ ಏನು ಜಲಸಿರಿ!! ಅಬ್ಬಾ ನೆನಸ್ಕೊಂಡ್ರೆ ಮೈಯೆಲ್ಲ ಪುಳಕ ಬರತ್ತೆ! ನನ್ನ ಬಾಲ್ಯಕಾಲದ ಅನೇಕ ನೆನೆಪುಗ್ಳು ಮಳೆ, ಪ್ರವಾಹ, ಮಳೆನೀರಿನ ಸದ್ದು, ಕೊಚ್ಚೆರಾಡಿ ಇವುಗ್ಳ ಜೊತೇನೇ ತೆಕ್ಕೆಯಾಗಿವೆ. ಬಾಲ್ಯಕಾಲದಲ್ಲಿ ಶಿವಮೊಗ್ಗಾದಲ್ಲಿ ಎಷ್ಟು ಮಳೆ ಬರಿತ್ತು ಅಂದ್ರೆ ಹೇಳೋದೇ ಬೇಡ. ದಿನ ಬಿಟ್ದಿನ ಶಾಲೆಗೆ ರಜೆ ಇರ್ತಿತ್ತು. ನದಿ ದಡ್ದಲ್ಲಿ ನಿಂತು ದಡ ಕೊರೀತಾ ಕೆಂಪು ರಾಡಿಯಾಗಿ ಹರಿಯೋ ತುಂಗೆ ನೋಡಿದ್ರೆ ಅದ್ಯಾವ ಪುಣ್ಯಾತ್ಮ "ತುಂಗಾ ಪಾನಂ" ಅಂದ್ನೋ ಅನ್ಸೋದು. ನಮ್ಮ ಮನೆಯ ಹತ್ರಾನೇ ಇದ್ದ ಒಂದು ದೊಡ್ಡ ಮೋರಿ- ವೈತರಣಿ ಅಂತ್ಲೇ ಕರೀತಿದ್ವಿ ಅದನ್ನ- ತುಂಬಿ ನೀರೆಲ್ಲ ಅಕ್ಕ ಪಕ್ಕದ ವಠಾರಕ್ಕೆ ನುಗ್ಗಿ ಒಳ್ಳೇ ಫಜೀತಿ. ನಮ್ಮೂರ ದೇವರ ಅರ್ಚಕರಾದ ರಾಂಭಟ್ರು ತಮ್ಮ ಧಡೂತಿ ಹೆಂಡ್ತೀನ ಅನಾಮತ್ತಾಗಿ ತೋಳಲ್ಲಿ ಬಳಸಿ ಎತ್ಕೊಂಡು ಸೊಂಟಮಟ್ಟ ನೀರಲ್ಲಿ ಅವ್ರನ್ನು ಸುರಕ್ಷಿತ ಜಾಗಕ್ಕೆ ಕರ್ಕೊಂಡ್ಹೋಗ್ತಿದ್ದ ದೃಶ್ಯ ಯಾವತ್ಗೂ ಮರ್ಯೋದೇ ಇಲ್ಲ. ಸೀಗೇಹಟ್ಟಿ ಅನ್ನೋ ಶಿವಮೊಗ್ಗದ ಎಕ್ಸ್‌ಟೆನ್ಶನ್ ಸದಾ ಮಳೆಗಾಲದಲ್ಲಿ ಸುದ್ದಿಯಲ್ಲಿರ್ತಿತ್ತು. ನಾಲ್ಕಾಣೆ ಕೊಟ್ರೆ ಸಾಕು ಪ್ರೈವೇಟ್ ಬಸ್ನೋರು ಗಿಟ್ಟಿಗಿರಿದು ಜನತುಂಬ್ಕೊಡು ಸೀಗೇಹಟ್ಟಿ, ಹರಕೆರೆ, ಗಾಜನೂರು ಎಲ್ಲ ಕಡೆ ಪ್ರವಾಹದ ದೃಶ್ಯ ತೋರ್ಸೋರು.

ಈ ಕಡೆ ತೀರ್ಥಳ್ಳಿಗೆ ಬಂದ್ರೂ ಅಷ್ಟೆ! ಕುರುವಳ್ಳಿ,ಶಿವರಾಜಪುರ, ತುಂಗಾ ಕಾಲೇಜಿನ ಬಳಿ ಡಾಕ್ಟರ್ ರಂಗಪ್ಪನವರ ತೋಟದ ಹತ್ರ ರಸ್ತೆ ಮೇಲೆ ಮೂರಡಿ ನೀರಿರ್ತಿತ್ತು. ಕಾಲೇಜಿಗೆ ನಡ್ಕಂಡು ಹೋಗೋದೆಂಥ ಮಜ!! ದನಗೋಳು ಮಳೆಯ ಜೊತೆಗೆ ರುಮ್ ರುಮ್ ಅಂತ ಅಡ್ಡಾದಿಡ್ಡಿ ರಾಚೋ ಗಾಳಿ. ಬರೀ ಕೊಡೆ ಹಿಡ್ದೋರ ಕತೆಯಂತೂ ದೇವ್ರಿಗೇ ಪ್ರೀತಿ. ಕೊಡೆ ಪೂರ್ತಿ ತಿರುಗಾಮುರುಗಾ ಆಗಿ ನಾವು ಅದನ್ನ ಹೆಣಗಿ ಸರಿ ಮಾಡ್ಕಳೋ ಹೊತ್ಗೆ ಮೈಯೆಲ್ಲ ತೊಯ್ದು ತೊಪ್ಡಿಯಾಗಿರ್ತಿತ್ತು. ಒಂದ್ಸಾರಿ ಅಂತೂ ಮಳೆ ಯಾವಪರಿ ಹೊಯ್ದಿತ್ತು ಅಂದ್ರೆ ಗದ್ದೆತುಂಬಿ ಬತ್ತದ್ ಪೈರೆಲ್ಲ ಮೂರಡಿ ಮಳೆನೀರಲ್ಲಿ ಮುಳ್ಗಿರ್ತಿತ್ತು. ರಸ್ತೆ ಬಂದ್ ಆಗಿ ಮೂರು ದಿನ ಕಾಲೇಜಿಗೆ ರಜಾ. ನಾವು ಕೆಲವು ಪಡ್ಡೆಗಳು ದಿನವಿಡೀ ನದೀದಡದಲ್ಲಿ ಅಡ್ಡಾಡ್ತಿದ್ವಿ. ಎಲ್ಲೆಲ್ಲೂ ನೆಲ ನೀರುಕುಡ್ದು ಹೆಚ್ಚಾಗಿ ಜಲ ಒಡೆದು ರಸ್ತೆ, ಗದ್ದೆಯ ಬದು, ಕಾಲುವೆಗಳಲ್ಲಿ ನೀರೋನೀರು. ಒಂದ್ಸಾರಿ ಅಂತೂ ನಮ್ಮ ಮನೆ ಹಿಂದಿನ ಆರಡಿ ತಗ್ಗು ಪೂರ್ತಿ ತುಂಬಿ ನಮ್ಮ ಹಿತ್ಲಿಗೇ ಬಂದಿದ್ಲು ತುಂಗೆ. ನನ್ನ ಗೆಳೆಯರೆಲ್ಲ ಬಾರೋ ಅಲ್ಲಿ ಹಾಗಂತೆ ಇಲ್ಲಿ ಹೀಗಂತೆ ನೋಡ್ಕೊಂಬರೋಣ ಅಂದ್ರೆ ನಂಗೆ ಹೆಂಡ್ತಿ ಜೊತೆ ಸೇರಿ ಮನೆಯಲ್ಲಿ ತುಂಬಿ,ಸೋರಿ ಸೇರ್ಕೊಂಡ ನೀರು ಮೊಗ್ದೂಮೊಗ್ದೂ ಹೊರ್ಗೆ ಹಾಕೋದೇ ಕೆಲ್ಸ ಆಗಿತ್ತು. ಹರವಿದ ಬಟ್ಟೆಗಳಲ್ಲಿ ನೀರಿನ ಪಸೆ ಆರದೆ ಬಿಳಿ ಬನಿಯನ್‌ಗಳೆಲ್ಲ ಒಳ್ಳೇ ಕಪ್ಪು ಸಾರಿಸೋ ಬಟ್ಟೆ ಥರ ಆಗಿರ್ತಿದ್ವು. ಪಕ್ಕ ಪಕ್ಕದಲ್ಲಿ ಹರವಿದ್ದ ಬಟ್ಟೆಗಳು ಬೂಸ್ಟು ಬಂದು ಒಂದು ಬಟ್ಟೆ ಎಳೆದ್ರೆ ನಾಕು ಬಟ್ಟೆ ಬರೋವು.
ನೀರೊಲೆ ಕಾಯ್ಸೋಕ್ಕೆ ಅಂತ ತರಿಸಿ ರಾಶಿ ಹಾಕಿದ್ದ ಮರದ ಹೊಟ್ಟನ್ನೆಲ್ಲ ತುಂಗೆ ಕದ್ದೊಯ್ದಿದ್ಳು. ಬಾವೀಲಿ ಇಣ್ಕಿ ನೋಡಿದ್ರೆ ನೀರು ಕೈಲೇ ತುಂಬ್ಕಳೋ ಮಟ್ಟಕ್ಕೆ ಬಂದಿರ್ತಿತ್ತು. ಇಷ್ಟ್ರ ಮೇಲೆ ದಿನಾ ಕೋತಿಗ್ಳ ಕಾಟ. ಗಂಡಸ್ರಿಗೆ ಮಾತ್ರ ಹೆದ್ರೋ ಗಡವಕೋತಿಗ್ಳು ಮನೆ ಗಂಡಸ್ರೆಲ್ಲಾ ಕೆಲ್ಸಕ್ಕೆ ಹೋದ ಹೊತ್ತು ನೋಡ್ಕೊಂಡು ಮನೆ ಹೆಂಚುತೆಗ್ದು ಹೆಂಗಸ್ರಿಗೆ ಕೇರೇ ಮಾಡ್ದೆ ಮನೇಲಿದ್ದ ದಿನಸೀನೆಲ್ಲಾ ಸೂರೆ ಮಾಡೋವು. ಒಂದು ಬೇಸಿಗೇಲಿ ಒಂದು ಮನೆಯ ಹೆಂಚು ತೆಗ್ದು ಅಕ್ಕಿ, ಬೇಳೆ, ಬೆಲ್ಲ ಎಲ್ಲ ಕೇಜಿಗಟ್ಳೆ ಹೊರಚೆಲ್ಲಿದ್ವು. ನೆನಪಾಗಿದ್ದು ಆಂಡಯ್ಯನ ಪದ್ಯ.

"ಅಡಱ್ದೇರಿ ಕೋಡಗಂಗಳ್
ಕಡುಪಿಂದೀಡಾಡೆ ಗೞಿಲನೊಡೆದೆಳಗಾಯಿಂ
ದೆಡೆವಿಡದೊಸರ್ವೆಳನೀರ್ಗಳ್
ಮಡುಗೊಂಡೋವುತ್ತುಮಿರ್ಪುವಲ್ಲಿಯ ಬನಮಂ"

ಗಂಟೆಗಟ್ಟಲೆ ಸುರಿದ ಮುಸಲಧಾರೆ ನಿಂತರೂ ಮರದಿಂದ ಉದುರುವ ಮಳೆಹನಿಗಳದ್ದೇ ಮತ್ತೊಂದು ಮಳೆ!! ಹಾಂ, ಮೊನ್ನೆ ಮೊನ್ನೆ ಅಕಸ್ಮಾತ್ತಾಗಿ ಒಂದು ವೆಬ್‌ಸೈಟ್ ನೋಡಿದೆ. ಅದು ಇರುವುದು ಕೇವಲ ಮಳೆಹನಿಯ ಸದ್ದು ಕೇಳಲು. ನನ್ನ ಮನಸ್ಸು ನಾಸ್ಟಾಲ್ಜಿಕ್ ಆಗಿ ಹಿಂದೆ ಹೋಗುತ್ತದೆ. ಶಿವಮೊಗ್ಗಾದ ಸೋರುವ ಹಳೆಯ ಹೆಂಚಿನ ಮನೆಯಲ್ಲಿದ್ದೆವು. ಮಳೆಗಾಲದಲ್ಲಿ ಮಲಗೋ ಜಾಗವಿಲ್ಲದ ಹಾಗೆ ಎಲ್ಲೆಂದರಲ್ಲಿ ಸೋರೋ ಮಳೆಹನಿ. ಅಮ್ಮ ಇದ್ದಬದ್ದ ಕೊಳದಪ್ಪಲೆ, ಅರುಕಿನ ಚೆಟ್ಟಿ, ಇಡ್ಳಿ ಪಾತ್ರೆ, ತೂಕ್ಕು ಹೀಗೆ ನಾನಾ ಥರದ ಪಾತ್ರೆಗಳನ್ನ ಅಟ್ಟದಿಂದಿಳಿಸಿ ಎಲ್ಲ ಕಡೆಗಿಟ್ಟರೆ ನಮ್ಮ ಮನೆ ಧಿಡೀರ್ ರಂಗಮಂಟಪ ಆಗೋದು. ನುರಿತ ಜಲತರಂಗವಾದಕನಂತೆ ಮಳೆ ಟಪ್, ಟಮ್, ಟಿಪ್, ಟಿಮ್, ಡಪ್ ಢಮ್ ಅಂತ ನಾನಾ ಬಗೆಯಲ್ಲಿ ನುಡಿಸೋದು. ಕುತ್ತಿಗೆಯಲ್ಲಿ ಬೊಂಬಿನ ದೊಂಟೆ ಕಟ್ಕೊಂಡು ತಿರುಗೋ ತುಡುಗು ದನಗಳ ಕುತ್ತಿಗೆ ಹಾಗೆ ನಾನಾ ಸದ್ದು ಹೊರಡುತ್ತಿತ್ತು. ನೀವೂ ಆ ಸದ್ದು ಕೇಳಬೇಕೆ?. ಜಪಾನಿನ ಒಂದು ದೇವಾಲಯದಲ್ಲಿ ಹನಿಯುವ ನೀರಿನ ಸದ್ದು ಕೇಳುತ್ತಾ ಮೈಮರೆಯುವ ಸುಖಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

http://aqua-scape.jp/top_en.html

Rating
No votes yet

Comments