ಬರವಣಿಗೆಯ ಕನ್ನಡದ ದಿಕ್ಕು

ಬರವಣಿಗೆಯ ಕನ್ನಡದ ದಿಕ್ಕು

ಕನ್ನಡದಲ್ಲಿ ಸಂಸ್ಕೃತದ ಅತಿಬಳಕೆಯಿಂದ , ಸಂಸ್ಕೃತದ ಕಾಗುಣಿತ(ಸ್ಪೆಲ್ಲಿಂಗ್ಸ್ ) ನಿಂದಾಗಿ ಹಳ್ಳಿಗರಿಗೆ ಮತ್ತು ಸಂಸ್ಕೃತದ ಪರಿಚಯ ಇಲ್ಲದವರಿಗೆ ( ಅಂದರೆ ’ಕೆಳ’ ಎಂದು ತಿಳಿದಿರುವ ಜಾತಿಯ ಜನಕ್ಕೆ) ತೊಂದರೆ ಆಗಿದೆಯಂತೆ . ಅದಕ್ಕಾಗಿ ಮಹಾಪ್ರಾಣ , ಷ ಇತ್ಯಾದಿ ಅಕ್ಷರಗಳನ್ನು ತೆಗೆದು ಹಾಕಿ ಎಂಬ ವಾದ ಒಂದೆಡೆ ಎದ್ದಿದೆ .

( ಅಂದ ಹಾಗೆ ಚಾಯನೀಸ್ ಭಾಶೆಯಲ್ಲಿ ಸಾವಿರಾರು ಅಕ್ಶರಗಳಂತೆ ; ಅವರಿಗೆ ಏನು ತೊಂದರೆ / ಎಷ್ಟು ತೊಂದರೆ ಆಗಿದೆಯೋ ಏನೋ ; ಅವರು ಬಳಸ್ತಾ ಇಲ್ವೀ ; ನೂರಾರು ವರುಷ ಅದು ಬಾಳಿ ಬದುಕಿಲ್ವೇ? -- ನನಗೆ ಸರಿಯಾಗಿ ಗೊತ್ತಿಲ್ಲ)

ಸರಿ ಈ ವಾದಾನೂ ಒಪ್ಕೊಳ್ಳೋಣ ; ಶಂಕರ ಭಟ್ಟರ ವಾದಾನೂ ಒಂತರ ಸರೀನೇ ; ಭಾಶೆಯ ಕಠಿಣತನವನ್ನು ಕಡಿಮೆ ಮಾಡಿ , ಪರಸ್ಪರ ಓದಿ , ಬರೆಯಲು , ಹೆಚ್ಚಿನ ತಿಳಿವು ಪಡೆದು , ಬದುಕನ್ನು ಶ್ರೀಮಂತಗೊಳಿಸಲು ಸರಳಗೊಳಿಸೋಣ ; ಅದಕ್ಕೆ ನನ್ನ ಒಪ್ಪಿಗೆಯೂ ಇದೆ ; ಆದರೆ ಈಗಾಗಲೇ ಬಳಕೆಯಲ್ಲಿರೋ ಎಲ್ಲಾ ಸಂಸ್ಕೃತ ಶಬ್ದಗಳನ್ನ ಬದಲಿಸಲೇಬೇಕೆಂಬ ಹಟ ಏಕೆ ? ಎಲ್ರಿಗೂ ತಿಳಿಯೋ ಕನ್ನಡ ಶಬ್ದ ಇದ್ರೆ ಸರಿ , ಅದನ್ನು ಸಂಸ್ಕ್ರುತ ಶಬ್ದಕ್ಕೆ ಬದಲಾಗಿ ಬಳಸೋಣ ; ಸಂಸ್ಕೃತದ ಮೇಲಿನ ದ್ವೇಶದಿಂದ ಎಲ್ಲರಿಗೂ ತಿಳಿಯೋ ಶಬ್ದಗಳನ್ನು , ಅವು ಸಂಸ್ಕ್ರುತ ಎಂಬ ಒಂದೇ ಕಾರಣಕ್ಕೆ , ಅದಕ್ಕೆ ಬದಲಿಯಾಗಿ ಯಾರಿಗೂ ಗೊತ್ತಿಲ್ಲದ ಶಬ್ದಗಳನ್ನು ಹೆಕ್ಕಿ ತೆಗೆಯೋದು ಏಕೆ ? ದಿನ , ವರ್ಷ ಎಲ್ರಿಗೂ ಗೊತ್ತು ; ಬೇಕೆಂದರೆ ವರುಶ , ವರಶ ಎಂದೆಲ್ಲಾ ಉಚ್ಚಾರಕ್ಕೆ ತಕ್ಕಂತೆ ಬರೆಯಲಿ ; ಆದರೆ ಅದಕ್ಕೆ ಏಡು , ನಾಳು , ಪದುಳ ಗಳೆಂಬ ಶಬ್ದ ಚಲಾವಣೆಗೆ ತಂದರೆ ಇದನ್ನೆಲ್ಲಾ ಕಲಿಯಬೆಕಾಗುತ್ತದೆ ; ನೆನಪಿನಲ್ಲೂ ಇಟ್ಟುಕೊಳ್ಳಬೇಕಾಗುತ್ತದೆ . ಇದು ಎಲ್ಲರಿಗೂ ಸುಲಭವೇ ? ಸಾಧ್ಯವೇ ? ಲಾಭವದರೂ ಏನು ?

ಮತ್ತೆ ಆಶ್ಚರ್ಯ ಎಂದರೆ ಈ ತರಹ ಯೋಚಿಸುವ ಜನಗಳಲ್ಲಿ ಕೆಲವರು ಹಳೆಯ ರ , ಳ ಗಳನ್ನು ಬಳಕೆಗೆ ತರ್ತಿದ್ದಾರೆ ; ಇದರಿಂದ ಜನಕ್ಕೆ ಕಷ್ಟ ಆಗುಲ್ವೇ? ಎಷ್ಟು ಜನ ಈ ಹಳೆಯ ರ - ಳ ಬಲ್ಲರು ? ಷ-ಶ ನಡುವೆ ಏನೂ ವ್ಯತ್ಯಾಸ ಇಲ್ಲ ; ಷ ಕೈ ಬಿಡಬೇಕು ಎನ್ನೋರಿಗೆ ಹೊಸ ಹಳೆಯ ರ-ಳ ಗಳ ನಡುವೆ ಏಕೆ ಭೇದ ಕಲ್ಪಿಸುತ್ತಾರೋ ? ಇದರಿಂದ ಭಾಷೆಯ ಕ್ಲಿಷ್ಟತೆ ಹೆಚ್ಚುಲ್ಲವೋ ?

ಈಗಾಗಲೇ ಕನ್ನಡ ಓದು , ಬರಹ , ಬಳಕೆ ಕಡಿಮೆ ಆಗುತ್ತಿರುವಾಗ ಇಂಗ್ಲೀಷು ಹಿಂದಿ ಜನಜೀವನದಲ್ಲಿ ಹಾಸುಹೊಕ್ಕಾಗುತ್ತಿರುವಾಗ , ನಾನು ಮೇಲೆ ಹೇಳಿದ ಬೆಳವಣಿಗೆಗಳಿಂದ ಜನ ಇನ್ನಷ್ಟು ಕನ್ನಡದಿಂದ ದೂರ ಆಗುಲ್ವೇ ?

ಇನ್ನೂ ಒಂದು ವಿಷಯ ನಾನು ಗಮನಿಸಿದ್ದೀನಿ ; ಈ ತರಹ ಯೋಚಿಸುವ ಜನಗಳಲ್ಲಿ ಕೆಲವರು ಬರಹಕ್ಕೆ ಬೇಕಾದ ಶಿಸ್ತನ್ನು ರೂಢಿಸಿಕೊಂಡಿಲ್ಲ ; ತಾವು ಬರೆದ ಬರಹವನ್ನು ಬೆಳಕಿಗೆ ತರುವ ಮೊದಲು ಇನ್ನೊಂದು ಸಲ ಓದಿ , ತಮ್ಮ ಮನಕ್ಕೆ ಒಪ್ಪುವಂತೆ ಇದೆಯೇ , ತಾವು ಬರೆದದ್ದು ತಮ್ಮ ಅನಿಸಿಕೆಯನ್ನ ಓದುವವರಿಗೆ ತಲುಪಿಸುತ್ತದೆಯೋ ಇಲ್ಲವೋ ಎಂದೂ ನೋಡುವದಿಲ್ಲ ;
ಇಂಥವರಿಂದ ಕನ್ನಡಕ್ಕೆ ಹಾನಿಯೇ ಹೆಚ್ಚಾದೀತು .

ಸೆಂಟು ಎಂದು ಬರೆಯುವವರು ಬರೆಯಲಿ ; ಅದನ್ನಾದರೂ ಸರಿಯಾಗಿ ಬರೆಯಬೇಕಲ್ವೇ ಮತ್ತೇನೋ ಬರೆದರೆ ಅಪಾರ್ಥ ಆಗಲ್ವೆ ?

ಈ ಗತಿಯನ್ನು ಇಂಗ್ಲೀಶಿನಲ್ಲೂ ಗಮನಿಸಿದ್ದಾರೆ ;
ಕಾಗುಣಿತದಿಂದ ,ವ್ಯಾಕರಣದಿಂದ , ನಯ-ನಾಜೂಕಿನಿಂದ ಭಾಶೆಯನ್ನು ಬಿಡುಗಡೆಗೊಳಿಸ್ತಿದಾರೆ !

ಇಂಗ್ಲೀಷು ಲಿಪಿಯಲ್ಲಿ ಕನ್ನಡ ಬರೆವವರು ಓದುಗರ ಕಷ್ಟವನ್ನು ಗಮನದಲ್ಲಿಟ್ಟುಕೊಳ್ಳಬೇಕು , ಬರಹ, ಯೂನಿಕೋಡ್ ಗಳಂತಹ ಸೌಲಭ್ಯಗಳಿರುವಾಗಲೂ ಇಂಗ್ಲೀಷ್ ಲಿಪಿ ಬಳಸಿದರೆ ? ೨೬ ಅಕ್ಶರ ಬಳಸಿ ಅವರೇನೋ ಬರೆದುಬಿಡ್ತಾರೆ , ಓದುವವರು ಹೇಗೆ ಓದಬೇಕು ? ನಿಶ್ಚಿತ ಕೋಡಿಂಗ್ ಇದೆಯೇ ? ’ಹೇಳಿ’ ಅನ್ನೋದನ್ನ heli ಅಂತ ಬರೆಯಬೇಕೋ hELi ಅಂತ ಬರೆಯಬೇಕೋ ? ಓದುವವರು ಈ ಕೋಡಿಂಗ್ ಅನ್ನು ಗಮನದಲ್ಲಿಟ್ಟುಕೊಂಡು ಮೆದುಳಿಗೆ ಕೆಲ್ಸ ಕೊಟ್ಟು ಓದಿಕೊಂಡು ಅರ್ಥ ಮಾಡ್ಕೋಬೇಕು .

ನಾನೇನೂ ಸಂಸ್ಕ್ರುತದ ಅಭಿಮಾನಿ ಏನಲ್ಲ ; ನನ್ನ ಬರಹದಲ್ಲಿ ಸಂಸ್ಕೃತ ಶಬ್ದ ಕಂಡು ನಾನು ಸಂಸ್ಕೃತ ಅಭಿಮಾನಿ ಎಂದೂ , ಬ್ರಾಹ್ಮಣನೆಂದೂ ತಿಳಿದರೆ ತಪ್ಪು ನನ್ನದಲ್ಲ ; ( ದಾಸಸಾಹಿತ್ಯ ಮೆಚ್ಚುವವರು, ಪ್ರತಿಕ್ರಿಯಿಸುವವರು ಬ್ರಾಹ್ಮಣರಂತೆ ! ವಚನಸಾಹಿತ್ಯ ಮೆಚ್ಚುವವರು, ಪ್ರತಿಕ್ರಿಯಿಸುವವರು ಲಿಂಗಾಯತ/ವೀರಶೈವರಂತೆ !! ಹೊಸ ಆರಯ್ಯು :) )

’ಸೆಟ್ಟಿಯೆಂಬೆನೆ ಸಿರಿಯಾಳನಾ,
ಡೋಹರನೆಂಬೆನೆ ಕಕ್ಕಯ್ಯನಾ,
ನಾನು ಹಾರುವನೆಂದೆಡೆ
ನಗುವನಯ್ಯಾ ಕೂಡಲಸಂಗಯ್ಯ’

ಅಷ್ಟೇ ;

( ಅಂದ ಹಾಗೆ ಏನೇನೋ ಕಾರಣಗಳಿಂದಾಗಿ ಸಂಪದದಲ್ಲಿ ನಾನು ಸಕ್ರಿಯನಾಗಿ ಪಾಲ್ಗೊಳ್ಳಲು ಆಗುತ್ತಿಲ್ಲ ; ಇದು ಒಂಥರಾ ಹೇಳಿಕೊಳ್ಳದ ಪ್ರೇಮ ; ಒನ್-ವೇ / ಏಕಮುಖ / ಒಮ್ಮುಖ ( ಯಾರಿಗೆ ಯಾವ್ದು ಬೇಕೋ ಆಯ್ದುಕೊಳ್ಳಿ !! ) ಪ್ರೀತಿ .. ಹಾಗಾಗಿ ಈಗ ಸಂಪದದಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿ , ಅಥವಾ ಈ ಬರಹಕ್ಕೆ ಬರಬಹುದಾದ ಟಿಪ್ಪಣಿಗಳಿಗೆ ಮರುಟಿಪ್ಪಣಿ ಹಾಕೋದಿಕ್ಕೆ ನನಗೆ ಆಗೋದಿಲ್ಲ )

ಎಲ್ಲೋ ಒಂದೆರಡು ಕಾಗುಣಿತ ದೋಷಗಳಿರಬೇಕು. ಮನ್ನಿಸಿ .

Rating
No votes yet

Comments