ಹೇಳಿ, ಇವರು ಜಾತಿವಾದಿಗಳೇ ?

ಹೇಳಿ, ಇವರು ಜಾತಿವಾದಿಗಳೇ ?

Comments

ಬರಹ

ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಮಯ ವಾತಾವರಣವಿರಬೇಕು, ಈ ಯೋಜನೆಗಾಗಿ ಭೂಮಿ ಕಳೆದುಕೊಂಡ ೩೦೦೦ ಬಡ ರೈತರ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ಕಲ್ಪಿಸಬೇಕು, ಬೆಂಗಳೂರನ್ನು ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕು ಎಂದು ಕ.ರ.ವೇ ಹೋರಾಟ ನಡೆಸುತ್ತಲೇ ಬಂದಿದೆ. ಆದ್ರೆ ಕೆಂಪೇಗೌಡರ ಹೆಸರಿಡಬೇಕು ಅನ್ನುವ ಕೂಗು ಕೇಳಿದ್ದೆ ತಡ, ಕನ್ನಡಿಗರನ್ನು ಜಾತಿ ಆಧಾರದ ಮೇಲೆ ಒಡೆಯುವ ಸುವರ್ಣ ಅವಕಾಶ ಸಿಕ್ಕಿತು ಅಂತ ಕೆಲವರು ಕಪೋಲಕಲ್ಪಿತ ವರದಿ ಬರೆದು, ಕನ್ನಡಿಗರನ್ನು ಜಾತಿ ಆಧಾರದ ಮೇಲೆ ಒಡೆಯುವ ಎಲ್ಲ ಪ್ರಯತ್ನ ಮಾಡಿದರು. ಕೆಂಪೇಗೌಡರ ಹೆಸರಿಗೆ ಒತ್ತಾಯಿಸುವ ಮೂಲಕ ಕ.ರ.ವೇ ಒಂದು ಒಕ್ಕಲಿಗರ ಸಂಘಟನೆ, ಜಾತಿವಾದಿ ಎಂದು ಸಾಬಿತಾಗಿದೆ, ಅವರಿಗೆ ನಾಡು ನುಡಿಯ ಬಗ್ಗೆ ಯಾವ ದೂರ ದೃಷ್ಟಿಯೂ ಇಲ್ಲ ಎಂಬ ಒಕ್ಕಣಿಕೆಯ ಬರಹಗಳು ಅಲ್ಲಲ್ಲಿ ಬಂದಿವೆ. ಕಳೆದ ಕೆಲ ವರ್ಷದಿಂದ ನಾಡಿನ ಒಬ್ಬ ಸಾಮಾನ್ಯ ಪ್ರಜೆಯಾಗಿ ಕ.ರ.ವೇ ಹಾಗೂ ಅವರ ಹೋರಾಟವನ್ನು ಟಿ.ವಿ, ಪತ್ರಿಕೆಗಳಲ್ಲಿ ನೋಡಿ ಬಲ್ಲ ನಾನು ಈ ಸಂದರ್ಭದಲ್ಲಿ ಕೆಲ ಮಾತು ಬರೆಯೋಣ ಅಂತ ಈ ಉತ್ತರ .

ಮೊದಲಿಗೆ ಕಳೆದ ೫ ವರ್ಷದಲ್ಲಿ ಕ.ರ.ವೇ ಮಾಡಿರುವ ಕೆಲವು ಪ್ರಮುಖ ಹೋರಾಟಗಳನ್ನು, ಅವುಗಳ ಪರಿಣಾಮವನ್ನು ನೋಡೋಣ:
ಕಾವೇರಿ ನ್ಯಾಯ ಮಂಡಳಿ ತೀರ್ಪು ಬಂದಾಗ, ಈ ಕರುನಾಡಿನ ಒಬ್ಬೆ ಒಬ್ಬ ರಾಜಕಾರಣಿ ಬಾಯಿ ಬಿಟ್ಟು ನಮ್ಮ ರೈತರ ಪರ ಮಾತಾಡದೆ ಹೋದಾಗ, ೨೫೦೦೦ ರೈತರನ್ನ ಸಂಘಟಿಸಿ ದೆಹಲಿಗೆ ಕರ್ಕೊಂಡು ಬಂದು ದೆಹಲಿಯ ಜಂತರ ಮಂತರ್ ಭಾಗದಲ್ಲಿ ಕನ್ನಡದ ಮಣ್ಣಿನ ಮಕ್ಕಳ ಪ್ರತಿಭಟನೆಯ ಬಿಸಿಯನ್ನು ಪ್ರಧಾನಿಗೆ ತಲುಪಿಸಿದ್ದು ನಾರಾಯಣ್ ಗೌಡರ ಕ.ರ.ವೇ.. ಅವತ್ತು ಆ ಪ್ರತಿಭಟನೆ ಆಗದೆ ಹೋಗಿದ್ರೆ ಇವತ್ತಿಗಾಗ್ಲೆ ಕಾವೇರಿ ನ್ಯಾಯ ಮಂಡಳಿ ತೀರ್ಪು ಕಾನೂನು ಆಗಿ, ಕನ್ನಡಿಗರೆಲ್ಲ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕೊಂಡು ಮಲ್ಕೊಬೇಕಿತ್ತು. ಹೇಳಿ, ಕಾವೇರಿ ನೀರು ಬರಿ ಒಕ್ಕಲಿಗರು ಕುಡಿಯುತ್ತಾರೆ ಅಂತ ಕ.ರ.ವೇ ಹೋರಾಟ ಮಾಡಿತೇ??

ಮೈಸೂರು, ಬೆಂಗಳೂರು, ಹುಬ್ಬಳ್ಳಿ ಕೇಂದ್ರಗಳಿಗಾಗಿ ನಡೆದ ರೈಲ್ವೆಯ ಗ್ರೂಪ್ ಡಿ ಹುದ್ದೆಗಳ ನೇಮಕದಲ್ಲಿ ಬಿಹಾರಿಗಳನ್ನೂ ಟ್ರೈನ್ ನಲ್ಲಿ ತಂದು ತುಂಬುವ ಕ್ರಮವನ್ನು ಪ್ರಶ್ನಿಸಿ, ಕನ್ನಡದ ಮಕ್ಕಳಿಗೆ ಆ ಹುದ್ದೆಗಳು ಸಿಗಬೇಕು ಅಂಥ ಪೊಲೀಸ್ ಲಾಠಿ ಏಟು ತಿಂದು ಆಯ್ಕೆ ಪ್ರಕ್ರಿಯೆ ನಿಲಿಸಿದ್ದು ಮತ್ತದೇ ನಾರಾಯಣ ಗೌಡರ ಕ.ರ.ವೇ. ಹೇಳಿ, ಗ್ರೂಪ್ ಡಿ ಹುದ್ದೆಗಳು ಬರಿ ಒಕ್ಕಲಿಗರಿಗೆ ಸಿಗಲಿವೆ ಎಂದು ಕ.ರ.ವೇ ಹೋರಾಟ ಮಾಡಿತ್ತೆ??

ಬಹಳ ಹಿಂದೇನು ಅಲ್ಲ, ಕೇವಲ ೬-೭ ವರ್ಷಗಳ ಹಿಂದೆ ಬೆಳಗಾವಿಯ ನಿಪ್ಪಾಣಿ ಭಾಗದಲ್ಲಿ ಕನ್ನಡ ಪತ್ರಿಕೆಗಳನ್ನು ಮರಾಠಿ ಪತ್ರಿಕೆಗಳ ಮಧ್ಯೆ ಇರಿಸಿ ತಂದು ಓದುವಂತ ಪರಿಸ್ಥಿತಿ ಇತ್ತು. ಅಂತ ಪರಿಸ್ಥಿತಿಯಲ್ಲಿ ಅಲ್ಲಿನ ಕನ್ನಡಿಗರನ್ನು ಸಂಘಟಿಸಿ, ಅವರಲ್ಲಿ ಆತ್ಮವಿಶ್ವಾಸ ತುಂಬಿ, ೧೮ ವರ್ಷದ ನಂತರ ಕನ್ನಡತಿಯೊಬ್ಬರು ಬೆಳಗಾವಿ ಪಾಲಿಕೆಯ ಮೇಯರ್ ಆಗುವಂತೆ ಮಾಡಿದ್ದು ಬೇರಾರು ಅಲ್ಲ, ನಾರಾಯಣ ಗೌಡರ ಕ.ರ.ವೇ. ಬೆಳಗಾವಿಯಲ್ಲಿ ಹುಡುಕಿದರೂ ಒಬ್ಬೆ ಒಬ್ಬ ಒಕ್ಕಲಿಗ ಸಿಗಲಾರ, ಹಾಗಿದ್ದಲ್ಲಿ ಜಾತಿವಾದಿ ಕ.ರ.ವೇ, ಒಕ್ಕಲಿಗರ ಕ.ರ.ವೇ ಅಲ್ಯಾಕೆ ಹೋರಾಟ ಮಾಡಿದರು?

ಒಂದು ಊರಿನ ಭಾಷೆ, ಸಂಸ್ಕುತಿಯನ್ನು ವಲಸಿಗರಿಗೆ ಪರಿಚಯಿಸುವಲ್ಲಿ ಸಮೂಹ ಮಾಧ್ಯಮಗಳ ಜವಾಬ್ದಾರಿ ಗುರುತರವಾದದ್ದು. ಬೆಂಗಳೂರೆಂಬ ವಲಸಿಗರ ಸ್ವರ್ಗದಲ್ಲಿ ಶುರುವಾದ ಎಫ್.ಎಂ ರೇಡಿಯೋ ವಾಹಿನಿಗಳು ಇಲ್ಲಿನ ಭಾಷೆಗೆ ನಯಾ ಪೈಸೆ ಬೆಲೆ ಕೊಡದೆ, ನಮ್ಮದಲ್ಲದ ಹಿಂದಿ ಭಾಷೆಯಲ್ಲಿ ಕಾರ್ಯಕ್ರಮ ನಡೆಸುತ್ತಿದ್ದಾಗ ಕನ್ನಡ ಕಾರ್ಯಕ್ರಮಕ್ಕಾಗಿ ಆಗ್ರಹಿಸಿ, ಪ್ರತಿಭಟಿಸಿ ಇವತ್ತು ಎಲ್ಲ ಎಫ್.ಎಂ ವಾಹಿನಿಗಳು ಕನ್ನಡವನ್ನು ಅಪ್ಪಿಕೊಳ್ಳುವಂತೆ ಮಾಡುವಲ್ಲಿ ಕ.ರ.ವೇ ಪಾತ್ರವು ಮಹತ್ವದ್ದು. ಇಂದು, ಎಫ್.ಎಂ ವಾಹಿನಿಗಳ ಮೂಲಕ ಬೆಂಗಳೂರಿನ ಮೂಲೆ ಮೂಲೆಯಲ್ಲಿ ಕನ್ನಡದ ಕಂಪು ಹರಡುತ್ತಿದ್ದರೆ ಅದರ ಹಿಂದೆ ಕ.ರ.ವೇ ಪಾತ್ರವಿರುವುದನ್ನು ಮರೆಯಬಾರದು. ಹೇಳಿ, ಒಕ್ಕಲಿಗರು ಮಾತ್ರ ಕನ್ನಡ ಹಾಡು ಕೇಳುತ್ತಾರೆ ಎಂದು ಕ.ರ.ವೇ ಈ ಹೋರಾಟ ಮಾಡಿತೇ?

ಹುಬ್ಬಳ್ಳಿಯಲ್ಲಿ ಕಳಸಾ ಬಂಡೂರಿ ಯೋಜನೆ ಅನುಷ್ಟಾನಕ್ಕೆ ಒತ್ತಾಯಿಸಿ ಕ.ರ.ವೇ ಸಂಘಟಿಸಿದ್ದ ಸಭೆಯಲ್ಲಿ ಸೇರಿದ್ದು ಸುಮಾರು ೧೦ ಸಾವಿರ ಜನ. ಅಂದು ಮಾತಾಡಿದ ಹುಬ್ಬಳ್ಳಿ ಭಾಗದ ಪ್ರಭಾವಿಗಳು, ಏಕೀಕರಣ ಹೋರಾಟಗಾರರು ಆದ ಪಾಟೀಲ್ ಪುಟ್ಟಪ್ಪ ಹೇಳಿದ್ದು" ಕ.ರ.ವೇ ಅಂದ್ರೆ ಯಾವುದೋ ಬೆಂಗಳೂರು ಮೂಲದ ಹೋರಾಟಗಾರರು, ಅವರಿಗೆ ಇಡೀ ಕರ್ನಾಟಕದ ಬಗ್ಗೆ ಕನಸಾಗಲಿ, ಸಮಸ್ಯೆಗಳ ಬಗ್ಗೆ ಹೋರಾಡೋ ಸಾಮರ್ಥ್ಯ ಆಗಲಿ ಇಲ್ಲ ಅನ್ಕೊಂಡಿದ್ದೆ, ಆದರೆ ಇಲ್ಲಿ ಸೇರಿರುವ ಜನರು ನನ್ನ ಮಾತನ್ನು ಸುಳ್ಳಾಗಿಸಿದ್ದಾರೆ. ಇವರ ಮೇಲೆ, ಇವರ ಹೋರಾಟದ ಮೇಲೆ ನನಗೆ ನಂಬಿಕೆ ಬಂದಿದೆ." ಹೇಳಿ, ಹುಬ್ಬಳ್ಳಿ ಭಾಗದಲ್ಲಿ ಕಳಸಾ ಬಂಡೂರಿ ಯೋಜನೆ ಅನುಷ್ಟಾನದಿಂದ ಮೈಸೂರು, ಮಂಡ್ಯ ಭಾಗದಲ್ಲಿರುವ ಒಕ್ಕಲಿಗರಿಗೆ ಹೇಗೆ ಉಪಯೋಗವಾದಿತು? ಹಾಗಿದ್ದಲ್ಲಿ, ಜಾತಿವಾದಿ ಕ.ರ.ವೇ ಯಾಕೆ ಹೋರಾಟ ಮಾಡಿತು ?

ಇಂತ ಉದಾಹರಣೆಗಳು ನೂರಿವೆ. ಜಾತಿಯ ಸೊಂಕಿಲ್ಲದೆ, ಕನ್ನಡವೇ ಜಾತಿ, ಕನ್ನಡವೇ ಧರ್ಮ ಎಂದು ಹೋರಾಟ ಮಾಡುತ್ತಾ ಬಂದಿರುವ ಕ.ರ.ವೇ ಅವರ ಬದ್ಧತೆಯನ್ನು ಇಲ್ಲಿ ಕೆಲವರು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ. ಕಣ್ಣ ಮುಂದೆ ಕೋಟಿ ಕೋಟಿ ನುಂಗಿ, ಮತ್ತೆ ಮತ್ತೆ ವಿಧಾನಸೌಧಕ್ಕೆ ಒಕ್ಕರಿಸಿ, ನಾಡು ನುಡಿಗಾಗಿ ನಯಾ ಪೈಸೆ ಕೆಲಸ ಮಾಡದ ಒಬ್ಬೆ ಒಬ್ಬ ರಾಜಕಾರಣಿಯನ್ನು ಪ್ರಶ್ನಿಸದ ನಾವು, ಪೊಲೀಸರಿಂದ ಲಾಠಿ ಏಟು ತಿಂದು, ಕೇಸ್ ಮೇಲೆ ಕೇಸ್ ಹಾಕಿಸಿಕೊಂಡು ನಾಡು-ನುಡಿಗಾಗಿ ಹೋರಾಡುವ ಈ ಧೀರರ ಬದ್ಧತೆಯನ್ನೇ ಪ್ರಶ್ನಿಸುವುದನ್ನು ಕಂಡಾಗ ಅನಿಸೋದು " ಕನ್ನಡಿಗರಿಗೆ ಕನ್ನಡಿಗರೇ ಮೊದಲ ಹಾಗೂ ಕೊನೆಯ ಶತ್ರು ಎಂದು"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet