ಮುಂಜಾನೆದ್ದು ...

ಮುಂಜಾನೆದ್ದು ...

ಮನುಷ್ಯರಲ್ಲಿ ಎರಡೇ ಜಾತಿ.
ಬೆಳಗ್ಗೆ ಬೇಗ ಏಳುವವರು, ಬೆಳಗ್ಗೆ ತಡವಾಗಿ ಏಳುವವರು.

ಸೂರ್ಯನ ತರಹ ಕಟ್ಟುನಿಟ್ಟಾಗಿ ಬೆಳಗ್ಗೆ ಬೇಗನೆ ಏಳುವ,ರಾತ್ರಿ ಬೇಗನೆ ಮಲಗುವವರನ್ನು
ಸೂರ್ಯವಂಶಿಗಳೆನ್ನೋಣ.
ಉಳಿದವರು ಚಂದ್ರವಂಶಿಗಳು.

ಈ ಸೂರ್ಯವಂಶಿಗಳಲ್ಲಿ ಬಹಳ ಮೂಢನಂಬಿಕೆಗಳಿವೆ-
ಬೇಗನೆ ಏಳುವವರು ಚುರುಕು
ಲೇಟಾಗಿ ಏಳುವವರು ಲೇಝಿಗಳು.
ಮುಂಜಾನೆದ್ದು ವಾಕಿಂಗ್ ಹೋಗಿ ತಂಪುಗಾಳಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಮನಸ್ಸು ಫ್ರೆಷ್ ಆಗಿರುವುದು, ಇತ್ಯಾದಿ..

ನಿಜ ಹೇಳಿ-
ಮುಂಜಾನೆಯ ತಂಪು ಗಾಳಿಯಲ್ಲಿ ಹಾಯಾಗಿ ಮಲಗಿರುವುದು ಒಳ್ಳೆಯದೋ? ಓಡಾಡಿ, ಬೆವರುಸುರಿಸಿ ಬೆಳಗ್ಗಿನ ವಾತಾವರಣವನ್ನು ಹಾಳು ಮಾಡುವುದೋ?

ಹಿಂದಿನ ದಿನದ ಗಲೀಜೆಲ್ಲಾ ರಸ್ತೆ,ಪಾರ್ಕ್‌ಗಳಲ್ಲಿ ತುಂಬಿರುವುದು. ಬೆಳಗ್ಗೆ ವಾಕಿಂಗ್ ಹೋಗುವವರಿಗೆ ಒಳ್ಳೆ ಗಾಳಿ ಸಿಗುವುದೇ? ನಾವು ಎದ್ದು ಹೊರಡುವ ಹೊತ್ತಿಗೆ
ಕಾರ್ಪೋರೇಷನ್‌ನವರು ಗುಡಿಸಿ ಕ್ಲೀನ್ ಮಾಡಿಟ್ಟಿರುತ್ತಾರೆ.

ಪಾರ್ಕ್‌ಗೆ ಹೋಗಿ ಸುತ್ತಿ ಬಂದವರು ಆಕ್ಷಿಜನ್ ಎಲ್ಲಾ ತುಂಬಿಸಿಕೊಂಡು ಬಂದವರಂತೆ
ವರ್ತಿಸುತ್ತಾರೆ. ಸಿನಿಮಾ ಆಕ್ಟರ್‌ಗಳ ಮುಖದ ಹಾಗೇ, ಎಲೆಗಳ ಮೇಲೆ ಮಣ್ಣು,ಧೂಳು, ಹೊಗೆಯ ೩-೪ ಲೇಯರ್ ಕೋಟಿಂಗ್ ಇರುವುದು. ಈ ಎಲೆಗಳು ಕಾರ್ಬನ್ ಡೈ
ಆಕ್ಸೈಡ್ ಹೇಗೋ ತೆಗೆದುಕೊಳ್ಳಬಹುದು, ಆಕ್ಸಿಜನ್ ಬಿಡಲು ಸಾಧ್ಯವಾ? ಏನೋ ಪಾಪ,
ಭೂಮಿ ಆಳದ ನೀರು,ಆಹಾರದ ಬಲದಿಂದ ಹಾಗೂ ಹೀಗೂ ಬದುಕಿಕೊಂಡಿವೆ.

ಸೂರ್ಯವಂಶಿಗಳ ಇನ್ನೊಂದು ಚಟ-
ತಮ್ಮ ಮಕ್ಕಳನ್ನು ಬೆಳಗ್ಗೆ ೪ ಗಂಟೆಗೆ ಎದ್ದು ಓದಲು ಹೇಳುವುದು.
ಬೆಳೆಯುತ್ತಿರುವ ಆ ಮಕ್ಕಳ ಸಿಹಿನಿದ್ರೆಗೆ ತೊಂದರೆ ಕೊಡುತ್ತಾರಲ್ಲಾ?
ನಾನು ನೋಡಿದಂತೆ ಬೆಳಗ್ಗೆ ಬೇಗ ಎದ್ದು ಒದ್ದಾಡಿ ಓದಿದವರಿಗಿಂತ ಲೇಟಾಗಿ ಎದ್ದವರೇ ಜಾಸ್ತಿ ಮಾರ್ಕ್ ತೆಗೆದುಕೊಂಡಿರುವುದು.

ಹೇಗೂ ಬೇಗ ಎದ್ದಿರುತ್ತಾರೆ, ಪೇಪರ್ ತುದಿಯಿಂದ ಕೊನೆಯವರೆಗೆ ಓದಿ, ಬೆಳಗ್ಗೇನೆ ಕೊಲೆ ಸುಲಿಗೆ,ರಾಜಕೀಯ ಬಗ್ಗೆ ಮನೆ/ ಆಫೀಸಲ್ಲಿ ಕೊರೆಯಲು ಸುರುಮಾಡುವರು.ತಡವಾಗಿ ಏಳುವವರಿಗೆ
ತಲೆ ಕೆರೆದುಕೊಳ್ಳಲೂ ಸಮಯವಿರುವುದಿಲ್ಲ.

ಕೆಲಸದ ಅನಿವಾರ್ಯವಿರುವವರನ್ನು ಬಿಟ್ಟರೆ, ಈಗಿನ ಜನರೇಶನ್ ಹೆಚ್ಚಿನವರು
ಚಂದ್ರವಂಶಿಗಳು. ಇದೊಂದು ಸಮಾಧಾನದ ವಿಷಯ.

Rating
No votes yet

Comments