ಐಟಿ ಬಾಳು

ಐಟಿ ಬಾಳು

ಕಳೆಯುವೆ ನಾನು ಎಲ್ಲ ದಿನಗಳ
ಹಗಲೂ ರಾತ್ರಿ ದುಡಿಯುತಲಿ
ಉಳಿಸಿದ ನಿದ್ದೆಯ ಮಾಡಿ ಮುಗಿಸುವೆ
ಒಮ್ಮೆಲೆ ವಾರಾಂತ್ಯದಲಿ

ತಿಂಡಿಯೊ ಊಟವೊ ಯಾವುದು ತಿಳಿಯದು
ಮುಳುಗಿಹೆ ನಾ ಪ್ರಾಜೆಕ್ಟಿನಲಿ
ನನ್ನವರೆಲ್ಲರ ಗಮನವೆ ಇಲ್ಲ
ಪ್ರಾಜೆಕ್ಟೇ ತುಂಬಿದೆ ತಲೆಯಲ್ಲಿ

ಕ್ಲೈಂಟ್ ಮಹಾಶಯನ ಒಲುಮೆಗೆ
ನಾಟಕ ರಂಗವೆ ಸಜ್ಜಾಗಿದೆ ಇಲ್ಲಿ
ಕೃತಕ ನಗೆಯನು ಕೃತಕ ಜೀವನವನ್ನು
ನಡೆಸುವ ಪಾತ್ರ ನಾಟಕದಲ್ಲಿ..

ಚೆನ್ನಾಗಿ ಅಭಿನಯಿಸಿ ಕ್ಲೈಂಟನ ಗೆದ್ದರೆ
ಉಂಟು ಭರ್ತಿ ಭಿಕ್ಷೆಯು ಇಲ್ಲಿ
ಆಗಲೆ ಬೇಕು ಪ್ರತಿಯೊಬ್ಬರೂನೂ
ಕಪಟ ನಾಟಕ ಸೂತ್ರಧಾರಿಗಳಿಲ್ಲಿ

'ನಮಸ್ಕಾರ,ಹೇಗಿದ್ದಿರಾ?' ಪದಗಳ
ಮರೆತಿಹರು ನೋಡಿ ನಮ್ಮವರಿಲ್ಲಿ
'hi,hru?' ಬಂದು ಕೊಂದೆ ಹಾಕಿದೆ
ಆತ್ಮೀಯತೆಯ ಬೆಲೆಯನಿಲ್ಲಿ

ಯಾಕೊ ಅಮ್ಮನ ಮಡಿಲ ನೆನಪಾಯ್ತು
ರೋಸಿ ಹೋದ ಮನಸಿಗೆ ಇಲ್ಲಿ
ಅಮ್ಮನ ಮಾತು ಅವಳ ಕೈ ತುತ್ತು
ಆಹಾ! ಸ್ವರ್ಗವೆ ಕೈಯಲ್ಲಿ

ಬ್ಯಾಟನ್ನು ಹಿಡಿದು ಹಿತ್ತಲಿನಿಂದ
ಶಿಳ್ಳೆ ಹಾಕಿ ಕರೀತಿದ್ದರು ಗೆಳೆಯರು ಆಗ
ಕೆಲಸವಾಯಿತಾ ರಿಸಲ್ಟ್ ಬಂತಾ
ಅಂತ ಪಿಂಗ್ ಮಾಡಿ ಕರೀತಾನೆ ಮ್ಯಾನೇಜರ್ ಈಗ

ಜಿಗಿದ-ಕುಣಿದ-ಆಡಿದ-ನಲಿದ
ಮುಗ್ಧತೆಯ ಆ ದಿನಗಳೆಲ್ಲಿ
ಒಳಗೂ-ಹೊರಗೂ ಜವಾಬ್ದಾರಿಯೇ
ತುಂಬಿರುವ ಈ ದಿನಗಳೆಲ್ಲಿ

ಎಷ್ಟಿದ್ದರೇನು ಆಸ್ತಿ-ಪಾಸ್ತಿ
ಎಷ್ಟಿದ್ದರೇನು ಹಣ-ಸವಲತ್ತು
ಸಾಟಿಯಾದುದೇ ಪ್ರೀತಿ-ಸ್ನೇಹ-ನೆಮ್ಮದಿಗೆ
ಆತ್ಮೀಯರ ಆತ್ಮೀಯತೆಗೆ

ಬಾಲ್ಯಕೆ ಮರಳುವ ಮನಸಾಗುತಿದೆ
ಎಲ್ಲ ಜಂಜಡವ ಕಿತ್ತೆಸೆದು
ನೆಮ್ಮದಿ ಬದುಕನು ಬಯಸಿದೆ ಮನಸು
ಕೃತಕ ವೇಷವ ಬದಿಗೆಸೆದು

Rating
No votes yet

Comments