ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!

ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!

ಮಾಧ್ಯಮ ಎತ್ತ ಹೋಗುತ್ತಿದೆ?

ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಹಲವಾರು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆ ಮತ್ತೆ ಮತ್ತೆ ಉದ್ಭವವಾಗುತ್ತಲೇ ಇದೆ. ನಾಲ್ಕು ಗೋಡೆಗಳ ಬೆಚ್ಚನೆಯ ವಾತಾವರಣದಲ್ಲಿ ಏನೋ ಕಂಪನವಾಗುತ್ತದೆ. ಅದು ಪಕ್ಕದ ಮನೆಯವರಿಗೆ ಗೊತ್ತಾಗುವುದಕ್ಕೂ ಮುನ್ನ ಮಾಧ್ಯಮದ ಕಿವಿಗೆ ಬಿದ್ದಿರುತ್ತದೆ. ಇದ್ದಕ್ಕಿದ್ದಂತೆ ಕ್ಯಾಮೆರಾಗಳು, ಮೈಕ್‌ಗಳು, ಲೋಗೋಗಳು, ಪೆನ್‌, ಪ್ಯಾಡ್‌ಗಳು ಬಂದಿಳಿಯುತ್ತವೆ. ಅದುವರೆಗೆ ಜತನದಿಂದ ಕಾಪಾಡಿಕೊಂಡು ಬಂದಿದ್ದ ನಮ್ಮ ಖಾಸಗಿ ಬದುಕು ಮನೆಮನೆಗಳ ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ಬೆತ್ತಲಾಗಿ ಬಿದ್ದುಬಿಡುತ್ತದೆ.

ಮಾಧ್ಯಮಕ್ಕೆ ಈ ಹಕ್ಕು ಕೊಟ್ಟವರು ಯಾರು? ಇನ್ನೊಬ್ಬರ ಖಾಸಗಿ ಬದುಕನ್ನು ಸಾರ್ವತ್ರಿಕಗೊಳಿಸುವ ಜರೂರತ್ತು ಏನಿದೆ?

ಇಲ್ಲಿ ನನಗೆ ಹಳೆಯ ಮಾತೊಂದು ನೆನಪಾಗುತ್ತದೆ: ’ಸಾರ್ವಜನಿಕ ವ್ಯಕ್ತಿಗೆ ಖಾಸಗಿ ಬದುಕು ಇರಲಾರದು’.

ಆದರೆ, ಖಾಸಗಿ ಎನ್ನುವ ಶಬ್ದ ಹುಟ್ಟಿದ್ದೇ ಸಾರ್ವಜನಿಕ ಶಬ್ದಕ್ಕೆ ಎದುರಾಗಿ. ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ಖಾಸಾ ಕ್ಷಣಗಳಿರುತ್ತವೆ. ಅವು ಹಾಗಿದ್ದರೇ ಚೆನ್ನ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗೆ ಖಾಸಗಿ ಬದುಕಿರಬಾರದೆ? ಗಂಡ-ಹೆಂಡತಿಯ ನಡುವೆ ಮುನಿಸಿನ ಕ್ಷಣಗಳು ಸಾವಿರ ಇರುತ್ತವೆ. ಅವು ಅವರವರ ನಡುವೆಯೇ ಬಗೆ ಹರಿಯಬೇಕು. ನಮ್ಮ ಮನೆಯಲ್ಲಿಯೂ ಸಂದರ್ಭ ಬಂದಾಗ ಅಪ್ಪ-ಅವ್ವ ಜಗಳ ಮಾಡುತ್ತಾರೆ. ಮುನಿಸಿಕೊಂಡು ದಿನಗಟ್ಟಲೇ ಮಾತು ಬಿಡುತ್ತಾರೆ. ಮತ್ತೆ ಅದೆಲ್ಲವನ್ನೂ ಮರೆತು ನಗುತ್ತಾರೆ. ಇದು ಎಲ್ಲ ಕುಟುಂಬಗಳಲ್ಲಿ ಇದ್ದದ್ದೇ. ಇದನ್ನು ಸಾರ್ವತ್ರಿಕ ಮಾಡುವ ಅನಿವಾರ್ಯತೆಯಾದರೂ ಏನಿದೆ?

ಮಾಧ್ಯಮ ಇಷ್ಟೊಂದು ನಿರ್ಭಾವುಕವಾಗಿದ್ದು ಏಕೆ? ಅಂಥ ಜರೂರತ್ತು ಏನಿದೆ? ಕೈಮುಗಿದು ಅಂಗಲಾಚುತ್ತಿದ್ದರೂ ಬಿಡದೇ ಅವರನ್ನು ಪ್ರಶ್ನಿಸುವ ಮೂಲಕ, ಅವರು ಆಗಲೇ ಅನುಭವಿಸುತ್ತಿರುವ ನೋವನ್ನು ಇನ್ನಷ್ಟು ಹೆಚ್ಚಿಸುವ ಹಕ್ಕು ಮಾಧ್ಯಮಕ್ಕೆ ಇಲ್ಲ. ಯಾರಿಗೂ ಆ ಹಕ್ಕಿಲ್ಲ. ಪ್ರತಿಯೊಬ್ಬರೂ ತಂತಮ್ಮ ವಿವೇಚನೆ ಬಳಸಿಕೊಂಡು ಸಂದರ್ಭವನ್ನು ನಿಭಾಯಿಸಬೇಕು. ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ಇನ್ನೊಬ್ಬರ ಬದುಕನ್ನು ಬೀದಿಗೆಳೆಯುವುದು ಬೇಡ.

ಹಾವೇರಿ ಘಟನೆಯಾಗಿರಬಹುದು, ಧಾರವಾಡದ ಹಿಂಸಾಚಾರ ಆಗಿರಬಹುದು, ಉಡುಪಿ ಶಾಸಕರ ಪತ್ನಿ ಪದ್ಮಪ್ರಿಯ ಪ್ಕಕರಣವಾಗಿರಬಹುದು. ಮಾಧ್ಯಮ ಸಂಯಮ ವಹಿಸಬೇಕು. ಅಂಥ ಸುದ್ದಿಗಳನ್ನು ನೋಡದಿರುವ, ಪ್ರತಿಕ್ರಿಯೆ ನೀಡದಿರುವ, ಬಾಯಿ ಚಪ್ಪರಿಸದಿರುವ ಮಾನವೀಯತೆಯನ್ನು ನಾವು ಕೂಡ ತೋರಬೇಕು.

ಇಲ್ಲದಿದ್ದರೆ ನಮಗೆ ಖಾಸಗಿ ಜೀವನ ಎಂಬುದೇ ಉಳಿಯುವುದಿಲ್ಲ.

- ಪಲ್ಲವಿ ಎಸ್‌.

Rating
No votes yet

Comments