ಸೀತೆಯ, ಭೂಮಿಜಾತೆಯ
ಮೊನ್ನೆ ತಾನೇ ಅನಿವಾಸಿ ಅವರು ದಾಸರ ಪದದಲ್ಲಿ ಹೆಣ್ಣಿನ ಚಿತ್ರಣ ಸರಿಯಾಗಿಲ್ಲ ಅನ್ನುವ ಬರಹವೊಂದನ್ನು ಹಾಕಿದ್ದರು. ಅದನ್ನು ಓದುತ್ತಾ ನನಗೂ ಸ್ವಲ್ಪ ಯೋಚನೆ ಹತ್ತಿತು. ಒಂದು ವಿಧದಲ್ಲಿ ನೋಡಿದರೆ, ಹಿಂದಿನ ಕಾವ್ಯನಾಟಕಗಳಲ್ಲಿ ಹೆಚ್ಚು ನಾಯಕ ಪಾತ್ರ ಪ್ರಧಾನವೇ. ಮೂಲದ ವ್ಯಾಸ ಭಾರತದಲ್ಲಿ ಹೇಗೋ ಗೊತ್ತಿಲ್ಲ, ಆದರೆ ಕುಮಾರವ್ಯಾಸನ ಕನ್ನಡ ಭಾರತದಲ್ಲಂತೂ ಅಂತಹ ಮುಖ್ಯವಾದ ದ್ರೌಪದಿಯ ಪಾತ್ರಕ್ಕೇ ಹೆಚ್ಚಿ ನ್ಯಾಯ ದೊರೆತಿಲ್ಲ ಎಂದು ನನ್ನ ಅಭಿಪ್ರಾಯ. ಸೀತೆ ದ್ರೌಪದಿಯರಂತಹ ಪಾತ್ರಗಳು ದು:ಖವನ್ನು ಅನುಭವಿಸಲೇ ಹುಟ್ಟಿದ ಹಾಗೆ ಕಾಣುತ್ತವೆ. ಈ ಇಬ್ಬರಿಗೂ ಉದ್ದನೆ ಕೂದಲಿತ್ತೆಂಬ ನಂಬಿಕೆ ಇರುವುದರಿಂದ, ಜಡೆಗೆ ಕತ್ತರಿ ಹಾಕದ ಹಿಂದಿನ ಕಾಲದವರು ಹೆಣ್ಣುಮಕ್ಕಳಿಗೆ ಉದ್ದ ಕೂದಲಿದ್ದರೆ ಸೀತೆಯಂತೆ, ದ್ರೌಪದಿಯಂತೆ ಕಷ್ಟ ಅನುಭವಿಸುವಳೋ ಎಂದು ಯೋಚನೆ ಮಾಡುತ್ತಿದ್ದರು.
ಅದಿರಲಿ. ಮೊನ್ನೆ ಸೀತೆಯ ಮೇಲೆ ವಿಜಯದಾಸರು ಬರೆದ ಒಂದು ರಚನೆಯನ್ನು ಮೊದಲಬಾರಿಗೆ ಕೇಳಿದೆ. ಹೆಚ್ಚಾಗಿ ಹರಿದಾಸರು ವಿಠಲನ ಮೇಲೆ, ಇಲ್ಲದಿದ್ದರೆ ರಾಮ ಕೃಷ್ಣನ ಮೇಲೆ ಬರೆದವರು. ಸೀತೆಯನ್ನು ಕೇಂದ್ರವಾಗಿಟ್ಟುಕೊಳ್ಳುವಂತಹ ಹಾಡುಗಳು ಕಡಿಮೆಯೇ. ಸರಳವಾಗಿದ್ದೂ ಸುಂದರವಾದ ಈ ಹಾಡು ನನಗೆ ಬಹಳ ಹಿಡಿಸಿತು. ಅದಕ್ಕೇ ಇಲ್ಲಿ ಬರೆಯುತ್ತಿದ್ದೇನೆ.
ಸೀತೆಯ ಭೂಮಿ ಜಾತೆಯ
ಜಗನ್ಮಾತೆಯ ಸ್ಮರಿಸಿ ವಿಖ್ಯಾತೆಯ ||ಸೀತೆಯ||
ಕ್ಷೀರವಾರಿಧಿಯ ಕುಮಾರಿಯ ತನ್ನ
ಸೇರಿದವರ ಭಯಹಾರೆಯ
ತೋರುವಳು ಮುಕ್ತಿದಾರಿಯ
ಸರ್ವಸಾರ ಸುಂದರ ಶ್ರೀ ನಾರಿಯ ||ಸೀತೆಯ||
ವಿಜಯ ವಿಠಲನ ರಾಣಿಯ
ಪಂಕಜ ಮಾಲೆ ಪಿಡಿದ ಪಾಣಿಯ
ವಿಜಯಲಕ್ಷ್ಮಿ ಗಜಗಮನೆಯ
ಸುಜನ ವಂದಿತೆ ಅಳಿವೇಣಿಯ ||ಸೀತೆಯ||
ಈ ಹಾಡಿನಲ್ಲೂ ಕೂಡ ಸೀತೆಯ ದುಂಬಿಗಳಂತೆ ಕಪ್ಪಾದ ಜಡೆಯುಳ್ಳವಳು (ಅಳಿವೇಣಿ) ಎಂದು ವಿಜಯದಾಸರು ಹೇಳುತ್ತಿರುವುದನ್ನು ಗಮನಿಸಬಹುದು. ಮತ್ತೆ ಎಲ್ಲೂ ರಾಮನ ಹೆಸರನ್ನೇ ತರದೇ, ಸೀತೆಯನ್ನು ಹೊಗಳಿರುವುದೂ ಒಂದು ಹೊಸತೇ ಎಂದು ನನ್ನ ಎಣಿಕೆ.
-ಹಂಸಾನಂದಿ
Comments
ಉ: ಸೀತೆಯ, ಭೂಮಿಜಾತೆಯ
ಉ: ಸೀತೆಯ, ಭೂಮಿಜಾತೆಯ
ಉ: ಸೀತೆಯ, ಭೂಮಿಜಾತೆಯ
ಉ: ಸೀತೆಯ, ಭೂಮಿಜಾತೆಯ
ಉ: ಸೀತೆಯ, ಭೂಮಿಜಾತೆಯ
In reply to ಉ: ಸೀತೆಯ, ಭೂಮಿಜಾತೆಯ by ಶ್ರೀನಿಧಿ
ಉ: ಸೀತೆಯ, ಭೂಮಿಜಾತೆಯ
In reply to ಉ: ಸೀತೆಯ, ಭೂಮಿಜಾತೆಯ by hamsanandi
ಉ: ಸೀತೆಯ, ಭೂಮಿಜಾತೆಯ
ಉ: ಸೀತೆಯ, ಭೂಮಿಜಾತೆಯ