ಬರಹ ಕ್ರಾಂತಿ!

ಬರಹ ಕ್ರಾಂತಿ!

ನಾನು ಕೆಲಸ ಮಾಡುವ ನನ್ನ ಬ್ಯಾಂಕಿನ ವಿಭಾಗದಲ್ಲಿ ಸಿಸ್ಟಂ ಅಡ್ಮಿನಿಸ್ಟ್ರೇಟರ್ ತುಂಬಾ ಶಿಸ್ತಿನ ಮನುಷ್ಯ. ನಮ್ಮಲ್ಲಿರುವುದು ಲ್ಯಾನ್ ಸಿಸ್ಟಂ. ಸುಮಾರು ೬೫ ಪಿಸಿ ಗಳಿದ್ದು ಎಲ್ಲವೂ ಸ್ತ್ಯಾಂಡ್ ಅಲೋನ್ ಮತ್ತು ನೋಡ್ ಗಳಾಗಿಯೂ ಕೆಲಸ ಮಾಡುವವು. ನಮ್ಮ ಮೇಲಧಿಕಾರಿಗಳು ಅವನಿಗೆ ತಿಳಿಸಿದಂತೆ ಯಾವ ಪಿಸಿ ಗಳಲ್ಲೂ ಆಟಗಳಿರುವಂತಿಲ್ಲ. ಕೆಲಸದ ವಿಷಯ ಬಿಟ್ಟು ಬೇರೆ ಏನನ್ನೂ ಮಾಡದಂತೆ ಮಾಡಿಹರು. ಇಂಗ್ಲೀಷ್ ಮತ್ತು ಹಿಂದಿಯ ತಂತ್ರಾಂಶಗಳನ್ನು ಮಾತ್ರವೇ ಏರಿಸಿರುವುದು. ನಾನು ಬಹಳ ದಿನಗಳಿಂದ ಬರಹ ವನ್ನು ಏರಿಸಲು ಕೇಳಿಕೊಳ್ಳುತ್ತಿದ್ದೆ. ಆದರೇಕೋ ಅವರುಗಳು ನನ್ನ ಕರೆಗೆ ಮಾನ್ಯತೆಯನ್ನೇ ಕೊಟ್ಟಿರಲಿಲ್ಲ. ನಮ್ಮಲ್ಲಿರುವ ಸರ್ವರ್ ನಲ್ಲಿನ ಓಎಸ್ ಲಿನಕ್ಸ್ ಮತ್ತು ಪಿಸಿ ಗಳಲ್ಲಿ ವಿಂಡೋಸ್ ಎಕ್ಸ್ ಪಿ. ಸರ್ವರ್ ನಲ್ಲಿ ಹಿಂದಿಗಾಗಿ ಆಕೃತಿ ಎಂಬ ತಂತ್ರಾಂಶವನ್ನು ಏರಿಸಿದ್ದಾರೆ. ಕನ್ನಡದಲ್ಲಿ ಕೆಲಸ ಮಾಡಲು ಏನಾದರು ಮಾಡಲೇಬೇಕೆಂದು ಪ್ರಯತ್ನ ಪಡುತ್ತಲೇ ಇದ್ದೆ. ಈ ಬಗ್ಗೆ ನಮ್ಮ ನಾಡಿಗರನ್ನೂ ಕೇಳಿದ್ದೆ. ಅವರು ಲಿನಕ್ಸ್ ನಲ್ಲಿ ಲೋಡಿಸಲು ಕೆಲವು ಮಾಹಿತಿಯನ್ನೂ ಕೊಟ್ಟಿದ್ದರು. ಅದನ್ನು ಸಿಸ್ಟಂ ಅಡ್ಮಿನಿಸ್ಟ್ರೇಟರ್ ಗೆ ತಿಳಿಸಿದ್ದೆ. ಆದರೂ ಅವನು ಅದರ ಬಗ್ಗೆ ಅಷ್ಟಾಗಿ ಮನ ತೊರಿರಲಿಲ್ಲ. ನಿನ್ನೆಯ ದಿನ ಆಕೃತಿಯಲ್ಲಿ ಏನೋ ತೊಂದರೆ ಬಂದಿತ್ತು. ವಿಷಯ ತಿಳಿದ ನಾನು ಅವನಿಗೆ ತಿಳಿಸಿದೆ, ಆಗ ನಾನು ನಮ್ಮ ಮೇಲಧಿಕಾರಿಗೆಳಿಗೆ 'ನೋಡಿ, ಈಗ ಯಾರೂ ಹಿಂದಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಬೇಕಿದ್ದರೆ ನಮ್ಮ ಬರಹವನ್ನು ಎಲ್ಲ ಪಿಸಿಗಳಲ್ಲೂ ಲೋಡಿಸಲಿ' ಎಂದೆ. ಹಾಗೇ ಆಗಲಿ ಎಂದು ಅವರು ಸಿಸ್ಟಂ ಅಡ್ಮಿನಿಸ್ಟ್ರೇಟರ್ ಗೆ ಎಲ್ಲ ಪಿಸಿಗಳಲ್ಲೂ ಬರಹವನ್ನು ಲೋಡಿಸಿವಂತೆ ತಿಳಿಸಿದರು. ಹಿಂದೆಯೇ ನಾನು ಎಲ್ಲರ ಬಳಿಯಲ್ಲೂ ಹೋಗಿ, 'ನೋಡಿ, ನಿಮಗೆ ನಿಮ್ಮ ವೈಯಕ್ರಿಕ ಕೆಲಸ ಮಾಡಲು ನಿಮ್ಮ ಭಾಷೆಗಳಾದ ಮರಾಠಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಬೇಕಾಗಿದೆ. ಅದಕ್ಕೆ ಬರಹವನ್ನು ಉಪಯೋಗಿಸಬಹುದು' ಎಂದು, ಅವರಿಗೆ ಬೇಕಾದ ಹಾಗೆ ಸರಿಪಡಿಸಿಕೊಟ್ಟೆ. ಇಂದು ಎಲ್ಲರೂ ಅವರವರುಗಳ ಬಂಧು ಮಿತ್ರರುಗಳಿಗೆ ಅವರವರ ಭಾಷೆಗಳಲ್ಲಿ ಪತ್ರಗಳನ್ನು ಟೈಪಿಸಿ ವಿ-ಅಂಚೆಯ ಮೂಲಕ ಕಳುಹಿಸಿದರು. ಎಲ್ಲರಿಗಿಂತ ಅನುಕೂಲವಾದದ್ದು ನನಗೆ. ಇನ್ನು ನಿರಂತರವಾಗಿ ಬ್ಯಾಂಕಿನಲ್ಲಿ ಕನ್ನಡದಲ್ಲಿ ನಾನು ನನ್ನ ವೈಯಕ್ತಿಕ ಕೆಲಸ ಮಾಡಿಕೊಳ್ಳಬಹುದು (ಹೆಚ್ಚಿನ ಸಮಯದಲ್ಲಿ ಅದನ್ನೇ ಮಾಡೋದು, ಎಷ್ಟಾದರೂ ಸರಕಾರೀ ಸ್ವಾಮ್ಯದ ಬ್ಯಾಂಕಲ್ಲವೇ). ಬರಹ ಕ್ರಾಂತಿಯನ್ನು ಮಾಡಿದ ಸಂತೋಷ ನನಗಾಗಿದೆ.
Rating
No votes yet

Comments