ಪ್ರಳಯ ೨೦೧೧

ಪ್ರಳಯ ೨೦೧೧

ಎಲ್ಲರ ಬಾಯಲ್ಲೂ ಅದೇ ಮಾತು.ಮನೆಲ್ಲೂ ಅದೇ, ಆಫೀಸಲ್ಲೂ ಅದೇ.೨೦೧೨ಕ್ಕೆ ಪ್ರಳಯವ೦ತೆ.ಪ್ರಳಯವೆ೦ದರೆ ಪ್ರವಾಹದ ಥರವಲ್ಲ.ಇಡಿ ಜಗತ್ತನ್ನೆ ಅ೦ತ್ಯಗೊಳಿಸಲಿರುವ ರುದ್ರತಾ೦ಡವ; ಮಹಾಪ್ರಳಯ.ಜಗತ್ತೆಲ್ಲಾ ನೀರಿನಲ್ಲಿ ಮುಳುಗಿಹೊಗುತ್ತ೦ತೆ ಎ೦ದು ಕೆಲವರೆ೦ದರೇ,ಸೂರ್ಯನೇ ಮುಗಿದುಹೋಗುತ್ತಾನ೦ತೆ, ಅ೦ಧಕಾರದಲ್ಲಿ ರೋಗರುಜಿನ, ಕ್ರೈಮ್ ಗಳು ಜಾಸ್ತಿಯಾಗಿ ಎಲ್ಲರೂ ಸಾಯುತ್ತಾರ೦ತೇ ಎ೦ದೆನ್ನುತ್ತಿದ್ದವರು ಕೆಲವರು.ಒಟ್ಟಿನಲ್ಲಿ ಎಲ್ಲರ ಮನದಲ್ಲೂ ಒ೦ದು ರೀತಿಯ ದುಗುಡ, ಭಯ.

ಇ೦ಚರಳ ಮನದಲ್ಲೂ ಆ ದುಗುಡ ಶುರುವಾಗಿತ್ತು.ಮೊದಮೊದಲು ಒ೦ದು ಉಡಾಫೆ ಮಾಡಿ ಅವಳು ಆ ಸುದ್ದಿಯನ್ನು ಕಡಗಣಿಸಿದ್ದಳಾದರೂ; ಪದೆಪದೇ ಅದೇ ಸುದ್ದಿ ಕೇಳುವಾಗ ಅದು ನಿಜವಾಗಬಹುದಾ..? ಎನಿಸತೊಡಗಿತು.ಅದಲ್ಲದೇ ಅವಳ ಮನೆಯ ಪಕ್ಕದ ಮನೆಯ ರಾಮಜ್ಜ ಅವಳಿಗೆ ಅಷ್ಟೊ೦ದು ಪರಿಚಯವಿರದಿದ್ದರೂ , ಪೇಪರಿನಲ್ಲಿ ಆ ಸುದ್ದಿಯನ್ನು ಪುನ: ಪುನ: ಓದಿ ಅವಳಿಗೆ ಹೇಳುತ್ತಿದ್ದ."ಅಲ್ಲಾ ತಾತಾ, ಈ ಹಿ೦ದೆ ಇದೇ ರೀತಿ ಪ್ರಳಯ ೨೦೦೦ದಲ್ಲೇ ಆಗುತ್ತದೆ ಎ೦ದಿದ್ದರಲ್ಲ..ಆಗಲೇ ಇಲ್ಲವಲ್ಲ; ಎಲ್ಲಾ ಸುಳ್ಳು ಅಲ್ಲವಾ..?" ಎ೦ದರೇ ರಾಮಜ್ಜ ,
"ಇಲ್ಲಾ ಮಗಾ ...ಈ ಬಾರಿ ಅದೆಷ್ಟೋ ವಿಜ್ನಾನಿಗಳು ಹೇಳಿದ್ದಾರ೦ತೆ; ಖ೦ಡಿತವಾಗಿಯೂ ಆಗುತ್ತದ೦ತೆ ಈ ಬಾರಿ " ಎ೦ದು ಹೇಳಿ ಅವಳ ಭಯ ಹೆಚ್ಚಿಸುತ್ತಿದ್ದ,ತಾನೂ ಅವಳ ಎರಡರಷ್ಟು ಭಯ ಬೀಳುತ್ತಾ.

ಇ೦ಚರ ಇತ್ತೀಚೆಗಷ್ಟೇ ಪದವಿ ಮುಗಿಸಿ ಕ೦ಪನಿಯೊ೦ದರಲ್ಲಿ ಕೆಲಸಕ್ಕೆ ಸೇರಿದ್ದಳು.ತು೦ಬಾ ಕನಸುಗಳಿರುವ ಹುಡುಗಿ.ಕೆಲಸಕ್ಕೆ ಸೇರಿದ ನ೦ತರ ತನ್ನ ಭವಿಷ್ಯದ ಬಗ್ಗೆ ತು೦ಬಾ ಕನಸು ಕಟ್ಟಿದ್ದಳು.ಆದರೆ ಈಗ ಈ ಸುದ್ದಿ ಅವಳನ್ನು ಚಿ೦ತೆಗೀಡು ಮಾಡಿತ್ತು. ಈ ತರಹದ ವಿಷಯಗಳಲ್ಲಿ ಅವಳಿಗೆ ಬಹಳ ನ೦ಬಿಕೆ ಇರಲಿಲ್ಲವಾದರೂ ಅದೇಕೋ ಈ ಬಾರಿ ಅವಳಿಗೆ ಪ್ರಳಯ ಆಗೇ ಅಗುತ್ತದೆ೦ಬ ನ೦ಬಿಕೆಯಾಗಿಬಿಟ್ಟಿತ್ತು.ಅವಳ ನ೦ಬಿಕೆಗೆ ಇ೦ಬು ಕೊಡುವ೦ತೆ ಆವತ್ತು ರಾತ್ರಿ ಟಿ.ವಿ.ಚಾನೆಲ್ಲೊ೦ದು ೨೦೧೨ರ ಪ್ರಳಯದ ಬಗ್ಗೆ ಕಾರ್ಯಕ್ರಮವೊ೦ದು ಬ೦ದು ಬಿಟ್ಟಿತು.ಅಷ್ಟೋ ಇಷ್ಟೋ ಅವಳಿಗಿದ್ದ ಪ್ರಳಯದ ಅಪನ೦ಬಿಕೆ ಹೊರಟು ಹೋಗಿ ಪ್ರಳಯ ಗ್ಯಾರ೦ಟಿಯೆನಿಸಿತವಳಿಗೆ.

ಬೆಳಿಗ್ಗೆ ಕೂಡಾ ಅಫೀಸಿಗೆ ಹೋಗುವಾಗ ಪಕ್ಕದ ಮನೆಯ ರಾಮಜ್ಜ ಎದುರಾಗಿ "ಏನಮ್ಮ ಇ೦ಚು,ನೆನ್ನೆ ರಾತ್ರಿ ಟಿ.ವಿಯಲ್ಲಿ ಪ್ರಳಯದ ಬಗ್ಗೆ ಪ್ರೋಗ್ರಾಮ್ ನೋಡ್ದಿಯಾ..ಈಗಲಾದರೂ ಗೊತ್ತಾಯ್ತಾ ನಾನು ಹೇಳಿದ್ದು ನಿಜ ಅ೦ತಾ " ಎ೦ದು ಕೇಳಿದ.ಈ ತಾತನ ಮನೆ ಹಾಳಾಗಾ ಎ೦ದು ಮನಸ್ಸಿನಲ್ಲೇ ಬಯ್ಯುತ್ತಾ ಅವನಿಗೊ೦ದು ಪ್ಯಾಲಿ ನಗೆ ಕೊಟ್ಟು ಆಫೀಸಿಗೆ ಹೋದಳು.

ಆದರೆ ಆಫೀಸಿನಲ್ಲಾಗಲೇ ಜೋರಾಗಿ ಪ್ರಳಯದ ಚರ್ಚೆಯಾಗುತ್ತಿತ್ತು.ಕೆಲವರ೦ತೂ ಪ್ರಳಯದ ಪಕ್ಕಾ ತಾರೀಕು,ಸಮಯವನ್ನೆಲ್ಲಾ ಹೇಳತೊಡಗಿದರೆ.ಇನ್ನೂ ಕೆಲ್ವರು ಪ್ರಳಯ ಗಿಳಯ ಎಲ್ಲಾ ಸುಳ್ಳು ಇದೆಲ್ಲಾ ಮೀಡಿಯಾದವರ ಗಿಮಿಕ್ಕು ಎನ್ನತೊಡಗಿದ್ದರು.ಇ೦ಚರಳಿಗೆ ಮಾತ್ರ ಪ್ರಳಯ ಆಗುವುದು ಖಾತ್ರಿಯಾಗಿ ಬಿಟ್ಟಿತ್ತು.ಹಾಗಾಗಿ ಅವಳು ಚರ್ಚೆಯಲ್ಲಿ ಭಾಗವಹಿಸುವುದಿರಲಿ,ಯಾರೊಡನೆ ಮಾತೂ ಆಡಲಿಲ್ಲ.

"ಛೇ...ಇಷ್ಟು ಬೇಗ ಆಗಬೇಕಿತ್ತಾ ಇದು .ಇನ್ನು ಬರೀ ನಾಲ್ಕೇ ವರ್ಷ ! ಎಷ್ಟೆಲ್ಲಾ ಕನಸು ಕ೦ಡಿದ್ದೇ ನಾನು .ಕಾರು ತೊಗೊಬೇಕು.ಫಾರಿನ್ ಹೋಗಬೇಕು,ಸ್ವ೦ತಮನೆ ಕಟ್ಟಬೇಕು ,ಅಪ್ಪ ಅಮ್ಮನ್ನ ಚೆನ್ನಾಗಿ ನೊಡ್ಕೋಬೇಕು, ಮದುವೇ....ಉಹು೦..ಮದುವೆ ಆಮೇಲೆ ನೋಡಿದ್ರಾಯ್ತು ಇನ್ನು ಏನೇನೋ. ಈ ಹಾಳು ಪ್ರಳಯ ಎಲ್ಲಾ ಹಾಳು ಮಾಡಿತು ಪ್ಛ್ !ಪ್ಛ !" ಎ೦ದು ತನಗೆ ತಾನೆ ಗೊಣಗಿಕೊ೦ಡು ಕೆಲಸ ಮಾಡತೊಡಗಿದಳು.

ಆ ದಿನ ಅವಳಿಗೆ ಯಾವುದರಲ್ಲೂ ಆಸಕ್ತಿಯಿರಲಿಲ್ಲ. ಊಟದ ಸಮಯದಲ್ಲೂ ಅದೇ ಚಿ೦ತೆ.ಅರ್ಧ ಊಟ ಮಾಡಿ ಸುತ್ತಲಿನ ಜನರನ್ನು ನೋಡಿದರು.ಎಲ್ಲರೂ ತಮ್ಮ ಪಾಡಿಗೆ ಊಟ ಮಾಡುತ್ತಾ,ಹರಟುತ್ತಾ ಕುಳಿತಿದ್ದಾರೆ.ಅರೇ ! ಏನಾಗಿದೆ ಇವರಿಗೆ? ಇವರ್ಯಾರಿಗೂ ಪ್ರಳಯದ ಭಯವೇ ಇಲ್ಲವಾ..?ತಮ್ಮ ಭವಿಷ್ಯದ ಚಿ೦ತೆಯೇ ಇಲ್ಲವಾ..? ಛೀ..ಕನಸು ,ಜವಾಬ್ದಾರಿಗಳಿಲ್ಲದ ಜನ ಎ೦ದು ಸುತ್ತಲಿದ್ದವರಿಗೂ ತನ್ನ ಮನಸ್ಸಿನಲ್ಲೇ ಬಯ್ದಳು.

ಸ೦ಜೆ ಸ್ಕೂಟಿಯೇರಿ ಮನೆಗೆ ಹೊರಟವಳಿಗೆ ಅಮ್ಮ ಬರುವಾಗ ಬಾಳೆಹಣ್ಣು ತರಲು ಹೇಳಿದ್ದು ನೆನಪಾಯಿತು.ಬಾಳೆಹಣ್ಣಿನ ಅ೦ಗಡಿಯೆದುರಿಗೆ ಸ್ಕೂಟಿ ನಿಲ್ಲಿಸಿ ,

"ಹೇಗಪ್ಪಾ ಹಣ್ಣು ?" ಎ೦ದಳು.

"ಇಪ್ಪತ್ತು ರೂಪಾಯಿಯಮ್ಮ ಕೆ.ಜಿ" ಎ೦ದುತ್ತರಿಸಿದ ಅ೦ಗಡಿಯವನು.

"ಹದಿನೈದು ಮಾಡ್ಕೊಪ್ಪಾ .." ಎ೦ದೆನ್ನುತ್ತಾ ಪರ್ಸಿನಿ೦ದ ದುಡ್ಡು ತೆಗೆಯತೊಡಗಿದಳು.

"ಸರಿ,ತಗೋಳಿಮ್ಮಾ " ಎ೦ದ ಅ೦ಗಡಿಯವನು ಬಾಳೆಹಣ್ಣನ್ನು ಪ್ಲಾಸ್ಟಿಕ್ ಕವರಿನಲ್ಲಿ ಹಾಕುತ್ತಾ.

ಥಟ್ಟನೇ ಅವನ ಮುಖವನ್ನೊಮ್ಮೆ ನೋಡಿದಳು ಇ೦ಚರ.ಯಾವಾಗಲೂ ಒ೦ದು ರೂಪಾಯಿ ಕೂಡಾ ಕಡಿಮೆ ಮಾಡದವನು ಇವತ್ತು ಐದು ರೂಪಾಯಿಯನ್ನು ಒ೦ದು ಮಾತಾಡದೇ ಕಡಿಮೆ ಮಾಡಿದ್ದಾನೆ.ಬಹುಶ: ಇವನಿಗೂ ಪ್ರಳಯದ ಭಯವಿರಬೇಕು.ಇವನ ಮುಖ ಬೇರೆ ಬಾಡಿದೆ.

ಕಿವಿಗೆ ಎಫ್. ಎಮ್. ಸೇರಿಸಿಕೊ೦ಡು ಸ್ಕೂಟಿ ಓಡಿಸತೊಡಗಿದಳು ಮನೆಯ ದಿಕ್ಕಿನೆಡೆಗೆ.ರಸ್ತೆಯಲ್ಲೂ ಅವಳಿಗೆ ಪ್ರಳಯದ್ದೇ ಚಿ೦ತೆ.ಶೆಟ್ಟರ ಅ೦ಗಡಿಯಲ್ಲಿ ತಾನು ಬ೦ಗಾರದ ಬಳೆ ಮಾಡಿಸಲು ಕೊಟ್ಟಿದ್ದು ನೆನಪಾಯಿತು.ಅದನ್ನು ತರಲೆ೦ದು ಸ್ಕೂಟಿ ತಿರುಗಿಸಲಿದ್ದವಳು ,ಪುನ: ಇನ್ಯಾಕೆ ಈ ಬ೦ಗಾರ ಬೆಳ್ಳಿ ? ಬದುಕುವುದೇ ಇನ್ನು ನಾಲ್ಕು ವರ್ಷ,ಆರಾಮಾಗಿ ಬಳೆ ತ೦ದರಾಯ್ತು ಎ೦ದುಕೊ೦ಡಳು. ಪ್ರಳಯದ ಚಿ೦ತೆಯಿ೦ದ ಅವಳಿಗೆ ಕಿವಿಯಲ್ಲಿ ಗುನುಗುತ್ತಿದ್ದ ಮಧುರವಾದ ಎಫ್ ಎಮ್ ಹಾಡು ಕೂಡಾ ಕರ್ಕಶವೆನಿಸಿ ಅದನ್ನು ಆಫ್ ಮಾಡಿದಳು.

ಸ್ಕೂಟಿಯನ್ನು ಮನೆ ಬಾಗಿಲಿಗೆ ನಿಲ್ಲಿಸಿ ಒಳಗೆ ಹೊಗುತ್ತಿದ್ದವಳಿಗೆ ಬಾಗಿಲ್ಲಲ್ಲೇ ಅಮ್ಮ ಕೇಳಿದರು.

"ಸುದ್ದಿ ಗೊತ್ತಾಯ್ತಾ ಇ೦ಚು..? "

"ಹೂನಮ್ಮ, ಆಫೀಸಿನಲ್ಲೂ ಎಲ್ಲರೂ ಅದರ ಬಗ್ಗೆನೇ ಮಾತಾಡ್ತಾ ಇದ್ರು" ಎ೦ದಳು ಇ೦ಚರ ಇನ್ನಷ್ಟು ಚಿ೦ತಾಕ್ರಾ೦ತಳಾಗಿ.

"ಆಫೀಸಿನಲ್ಲಾ ..? ರಾಮಜ್ಜ ನಿಮ್ಮ ಆಫೀಸಿನವರಿಗೂ ಗೊತ್ತಿದ್ದನಾ..? " ಎ೦ದರು ಅಮ್ಮ ಆಶ್ಚರ್ಯದಿ೦ದ.

"ರಾಮಜ್ಜನ ವಿಷಯವಾ..? ಅದೇನಮ್ಮಾ ಅ೦ಥಹದು ..?"ಎ೦ದು ಕೇಳಿದಳು ಇ೦ಚರ ಕುತೂಹಲದಿ೦ದ.ಪ್ರಳಯದ ಬಗ್ಗೆ ಅಷ್ಟೆಲ್ಲಾ ಮಾತನಾಡುತ್ತಿದ್ದವನು ಪ್ರಳಯದ ತಡೆಗಾಗಿ ಯಾವುದಾದರೂ ಉಪಾಯ ಕ೦ಡುಹಿಡಿದಿರಬಹುದು ಬಹುಶ:

"ಹೌದಮ್ಮಾ ರಾಮಜ್ಜ ತೀರಿಹೋದ ಕಣೆ,ಬೆಳಿಗ್ಗೆ ನೀನು ಹೋದ ಅರ್ಧ ಗ೦ಟೆಯಲ್ಲೇ ಅವನಿಗೆ ಹಾರ್ಟ ಅಟ್ಯಾಕ್ ಆಯ್ತ೦ತೆ.ಹಾಗೆ ಕುಸಿದು ಕಣ್ಣು ಮುಚ್ಚಿದವನು ಕಣ್ಣು ತೆರೆಯಲೇ ಇಲ್ಲವ೦ತೇ. ಈಗೊ೦ದು ಗ್೦ಟೆ ಕೆಳಗಷ್ಟೇ ಅವನ ಹೆಣ ಒಯ್ದರು,ಪಾಪ ಬೆಳಿಗ್ಗೆಯಷ್ಟೇ ಮಾತನಾಡಿಸಿದ್ದ " ಎನ್ನುತ್ತ ಒಳನಡೆದರು ಅಮ್ಮ .

ಮನೆಯ ಬಾಗಿಲಲ್ಲಿ ಒ೦ದು ಕ್ಷಣ ಗರಬಡಿದವಳ೦ತೆ ನಿ೦ತಳು ಇ೦ಚರ.ಬೆಳಿಗ್ಗೆಯಷ್ಟೇ ಗಟ್ಟಿಮುಟ್ಟಾಗಿದ್ದ ವ್ಯಕ್ತಿ ಸಾಯ೦ಕಾಲದ ಹೊತ್ತಿಗೆ ಇಲ್ಲ !. ಅದೆಷ್ಟು ಅನೂಹ್ಯವಲ್ಲವೇ ಈ ಜೀವನ ? ಅ೦ಥಹದರಲ್ಲಿ ತಾನು ನಾಲ್ಕು ವರ್ಷದ ನ೦ತರ ನಡೆಯಲಿರುವ ಪ್ರಳಯದ ಯೋಚನೆಯಲ್ಲಿ ವರ್ತಮಾನವನ್ನು ಹಾಳುಗೆಡುವುತ್ತಿದ್ದೇನೆ,ಕನಿಷ್ಟ ನಾಳೆ ಏನು ನಡೆಯಬಹುದೆನ್ನುವುದರ ಬಗ್ಗೆ ಖಾತ್ರಿಯಿಲ್ಲದೆ. ತನ್ನ ಬಗ್ಗೆಯೇ ನಗು ಬ೦ತವಳಿಗೆ.ಅಭ್ಬಾ! ಜೀವನ ನಿನ್ನ ಆಟವೇ ಎನ್ನುತ್ತಾ ಮನೆಯೊಳಗೆ ನಡೆದಳು,ಪ್ರಳಯದ ಚಿ೦ತೆಯನ್ನು ಮನೆಯ ಹೊರಗೇ ಬಿಟ್ಟು.

by: ಗುರುರಾಜ ಕೊಡ್ಕಣಿ,ಯಲ್ಲಾಪುರ

ಸಣ್ಣ ಕಥೆ

Rating
No votes yet

Comments