ಮತ್ತೆ ಮಳೆ ಹುಯ್ಯುತಿದೆ
ಮತ್ತೆ ಮಳೆ ಹುಯ್ಯುತಿದೆ.
ಯಾರೋ ಸಿಕ್ಕಾಪಟ್ಟೆ ಹೊಡೆದಿದ್ದಾರೇನೋ ಎಂಬಂತೆ ಮೋಡ ನಿರಂತರವಾಗಿ ಅಳುತ್ತಿದೆ. ಹೊಡೆದಾಗಿನ ಕ್ಷಣದ ನೋವು ಮರೆಯಾಗಿದೆಯೇನೋ. ಗುಡುಗು-ಸಿಡಿಲುಗಳ ಆರ್ಭಟವಿಲ್ಲ. ಸುಮ್ಮನೇ ನೋವು ತಿಂದು ಅಳುವ ಗೃಹಿಣಿಯಂತೆ ನಿರಂತರವಾಗಿ ಅಳುತ್ತಲೇ ಇದೆ. ರಾತ್ರಿಯೇ ಶುರುವಾಗಿದ್ದು ಇನ್ನೂ ನಿಂತಿಲ್ಲ. ಅಳು ನಿಲ್ಲಿಸಲು ಸೋತ ಭಾವನೆಯಲ್ಲಿ ಮರಗಿಡಗಳು ಮೌನವಾಗಿ ನಿಂತಿವೆ. ಅವುಗಳ ಮೇಲೆ ಸಣ್ಣಗೇ ಸುರಿಯುತ್ತಿರುವ ಮಳೆ. ಅದನ್ನೇ ಮಂಜುಕಣ್ಣುಗಳಿಂದ ನೋಡುತ್ತಿರುವ ದೂರದ ವಿದ್ಯುತ್ ದೀಪ.
ಹಗಲು ಯಾವಾಗ ಬರುತ್ತದೋ ಗೊತ್ತಿಲ್ಲ. ಸೂರ್ಯ ಬಂದು ಅಳು ನಿಲ್ಲಿಸುವ ಗ್ಯಾರಂಟಿಯೂ ಇಲ್ಲ. ಬಂದರೂ ಅವನಿಗೆ ಮೋಡಕ್ಕೆ ಸಮಾಧಾನ ಹೇಳಲು ಭಯ. ಎಲ್ಲೋ ಬಚ್ಚಿಟ್ಟುಕೊಂಡಿರುತ್ತಾನೆ. ಒಡಲ ದುಃಖ ಕರಗಿ ಕೊನೆಯ ಹನಿಯಾಗಿ ಬೀಳುವವರೆಗೆ ಮಳೆ ಬರುತ್ತಲೇ ಇರುತ್ತದೆಯೇನೋ.
ರಾತ್ರಿ ಶುರುವಾದ ಮಳೆ ಇದ್ದಕ್ಕಿದ್ದಂತೆ ಬೀದಿಗಳನ್ನು ನಿರ್ಜನವಾಗಿಸಿತು. ಸಂಜೆಯ ಸೊಗಸು ಸವಿಯಲು ರಸ್ತೆಗಿಳಿದಿದ್ದ ಹುಡುಗ-ಹುಡುಗಿಯರು ’ಹೋ’ ಎಂದು ಖುಷಿಯಿಂದ ಕೂಗುತ್ತಾ ಮರೆ ಹುಡುಕಿಕೊಂಡು ಓಡಿಹೋದರು. ಬೀದಿ ಬದಿಯಲ್ಲಿ ನಿಂತಿದ್ದ ತಳ್ಳುಗಾಡಿಯವರು, ಆಸರೆ ಹುಡುಕಿಕೊಳ್ಳಲು ಒದ್ದಾಡಿದರು. ಸಂಜೆ ವ್ಯಾಪಾರಕ್ಕೆ ಬಂದಿದ್ದ ಪಾನಿಪುರಿ ಅಂಗಡಿಯವರಿಗೆ ಭರ್ತಿ ನಷ್ಟ. ದೂರದ ಊರುಗಳಿಗೆ ಹೋಗಬೇಕಾದವರು, ದೂರದ ಊರುಗಳಿಂದ ಬಂದವರನ್ನು ಮಳೆ ಇಕ್ಕಟ್ಟಿಗೆ ಸಿಲುಕಿಸಿತು. ಗೆಳತಿಯೊಬ್ಬಳನ್ನು ಭೇಟಿಯಾಗಲು ಹಾಸ್ಟೆಲ್ಗೆ ಹೋಗಿದ್ದ ನನಗೆ, ಬೇಗ ಮನೆ ಸೇರಿಕೊಳ್ಳುವ ಧಾವಂತ. ಮಳೆಯನ್ನು ಎದುರಿಸಿ ಸ್ಕೂಟಿ ಓಡೀತೆ?
ನೋಡನೋಡುತ್ತಲೇ ಇನ್ನಷ್ಟು ಕಪ್ಪು ಮೋಡಗಳು ಸೇರಿಕೊಂಡವು. ಮಳೆಯ ರಭಸ ಜೋರಾಯಿತು. ಗಾಳಿಯಿಲ್ಲದೆ ಕೇವಲ ತನಗೆ ತಾನೆ ಎಂಬಂತೆ ಬೀಳುತ್ತಿರುವ ಶುದ್ಧ ಜೋರು ಮಳೆ ಅದು. ಹಾಸ್ಟೆಲ್ ಹುಡುಗಿಯರು ಕಾರಿಡಾರ್ಗೆ ಬಂದು ನಿಂತರು. ಇನ್ನು ಸ್ವಲ್ಪ ಹೊತ್ತಿಗೆ ಕರೆಂಟ್ ಹೋಗುತ್ತದೆ. ಓದಲು ಆಗುವುದಿಲ್ಲ ಎಂಬ ಕಳವಳ ಕಂಡಿದ್ದು ಕೆಲವೇ ಕೆಲವು ಹುಡುಗಿಯರಲ್ಲಿ. ಉಳಿದವರಲ್ಲಿ ಎಂಥದೋ ಖುಷಿ.
ಮಳೆ ನಿಲ್ಲುವವರೆಗೆ ಅಂಗಡಿಕಾರರ ವ್ಯಾಪಾರ ಖೋತಾ. ಮಾವಿನಹಣ್ಣು ಮಾರುವ ಹೆಣ್ಣುಮಗಳ ಹತ್ತಿರ ಹಣ್ಣು ಕೊಳ್ಳುವ ಗಿರಾಕಿಗಳಿಲ್ಲ. ಅಷ್ಟು ದೊಡ್ಡ ಬುಟ್ಟಿ ಹೊತ್ತುಕೊಂಡು, ಮಗುವನ್ನೂ ಎತ್ತಿಕೊಂಡು ಮನೆ ಸೇರುವುದು ಹೇಗೆಂಬ ದಿಗಿಲು ಆಕೆಯ ಮುಖದಲ್ಲಿ. ಮಡಿಲ ಮಗುವಿಗೆ ಅಮ್ಮನ ಸೆರಗಿನಿಂದ ಹೊರಗಿಣುಕಿ ನೋಡುವ ಕುತೂಹಲ. ಮಳೆಗೆ ಇವ್ಯಾವ ಭಾವನೆಗಳೂ ಅರ್ಥವಾಗುವುದಿಲ್ಲ. ಅಬ್ಬರಿಸಿ ನೆಲಕ್ಕೆ ಅಪ್ಪಳಿಸುವುದೊಂದೇ ಅದಕ್ಕೆ ಗೊತ್ತು.
ನಿರೀಕ್ಷಿಸಿದಂತೆ ವಿದ್ಯುತ್ ಸರಬರಾಜು ನಿಂತು ಹೋಯಿತು. ಯುದ್ಧಕಾಲದಲ್ಲಿ ಹೇಗೋ ಉಳಿದುಕೊಂಡ ಪಳೆಯುಳಿಕೆಯಂತೆ ಹಾಸ್ಟೆಲ್ ಕಟ್ಟಡ ಘೋರವಾಗಿ ಕಾಣತೊಡಗಿತು. ಕಂಪೌಂಡ್ನಲ್ಲಿದ್ದ ಮರಗಳ ಮುಖದಲ್ಲಿ ಎಂಥದೋ ಹರುಷ. ಅದರಡಿ ನಿಲ್ಲಿಸಿದ ನನ್ನ ಸ್ಕೂಟಿಯಲ್ಲಿ ಎಂಥದೋ ಪುಳಕ.
ಏನೇನೋ ವಿಷಯಗಳನ್ನು ಮಾತಾಡುತ್ತಿದ್ದವರ ಮಾತು ಈಗ ಮಳೆಯತ್ತಲೇ. ಸ್ವಲ್ಪ ಹೊತ್ತಿಗೆ ಅದೂ ನಿಂತು ಹೋಯಿತು. ಎಲ್ಲರೂ ಮೌನವಾಗಿ ಮಳೆಯನ್ನು ನೋಡತೊಡಗಿದ್ದರು. ಮನಸ್ಸಿನೊಳಗೂ ಮಳೆ ಸುರಿಯುತ್ತಿದೆಯೇನೋ ಎಂಬಂತೆ ಮೂಕವಾಗಿ ನಿಂತರು.
’ಎಲ್ಲಿದ್ದೀಯೇ ಪಲ್ಲು?’ ಎಂದು ಅವ್ವ ಫೋನ್ ಮಾಡಿದಳು. ’ನಿನ್ನ ಸ್ಕೂಟಿ ಅಲ್ಲೇ ಇರಲಿ ಬಿಡು, ನಿನ್ನ ಅಪ್ಪನ್ನ ಕಳಿಸಿ ಪಿಕಪ್ ಮಾಡುವಂತೆ ಹೇಳುತ್ತೇನೆ’ ಎಂದು ಧಾವಂತ ತೋರಿದಳು. ಬೆಳೆದ ಮಗಳನ್ನು ಮಗುವಿನಂತೆ ನೋಡಿದರೆ ಸಿಟ್ಟು ಬಾರದಿರುತ್ತದೆಯೆ? ’ಯಾವ ಸೀಮೆಯಿಂದ ಬಂದಿದ್ದೀಯಾ ತಾಯಿ? ಧಾರವಾಡದ ಮಳೆಗೆ ಹೆದರುತ್ತೀಯಲ್ಲ! ಈಗ ಬಂತು, ಈಗ ಹೋಯ್ತು ಎಂಬಂಥ ಮಳೆ ಇದು. ನಿಂತ ಕೂಡಲೇ ಬರ್ತೀನಿ, ಸುಮ್ಮನಿರು’ ಎಂದು ಅಸಮಾಧಾನದಿಂದಲೇ ಹೇಳಿದೆ. ಅತಿ ಮುದ್ದು ತೋರಿದರೆ ನಾನು ಸಿಡುಕುತ್ತೇನೆ ಎಂಬುದು ಆಕೆಗಿಂತ ಚೆನ್ನಾಗಿ ಯಾರಿಗೆ ಗೊತ್ತಿದೆ? ಹೀಗಾಗಿ ಸುಮ್ಮನಾದಳು.
ನಾನು ಮತ್ತೆ ಮಳೆಯಲ್ಲಿ ಮಗ್ನಳಾದೆ. ಹೊರಗೆ ನಿಧಾನವಾಗಿ ಕತ್ತಲಾಗುತ್ತಿತ್ತು. ಆಗೊಂದು ಈಗೊಂದು ವಾಹನಗಳು ಲೈಟು ಬೆಳಗಿಸಿಕೊಂಡು ಹೋಗುತ್ತಿದ್ದುದು ಬಿಟ್ಟರೆ ಹಿತವಾದ ಮಂಕು ಮಂಕು ಕತ್ತಲು. ಮರದಡಿ ನಿಲ್ಲಿಸಿದ್ದ ಸ್ಕೂಟಿ ಈಗ ಕಾಣುತ್ತಿರಲಿಲ್ಲ. ಕಂಪೌಂಡ್ನ ಕಬ್ಬಿಣದ ಗೇಟು ಕೂಡ ಮಸುಕು ಮಸುಕಾಗಿತ್ತು. ಮರಗಳು ಕಪ್ಪಗೇ ರಾಕ್ಷಸನಂತೆ ಕಾಣುತ್ತಿದ್ದವು. ರಸ್ತೆ ಪೂರ್ತಿ ಕಪ್ಪಾಗಿ, ಅದರಾಚೆ ಇದ್ದ ಕಟ್ಟಡಗಳು ಪಾಳು ಬಿದ್ದಂತೆ ಉದ್ದಕ್ಕೆ ನಿಂತಿದ್ದವು. ರಿಚಾರ್ಜೆಬಲ್ ದೀಪಗಳು ತಮ್ಮ ಅಸ್ತಿತ್ವ ಸಾರುತ್ತಿದ್ದವೇ ವಿನಾ ಕತ್ತಲನ್ನು ಹೊಡೆದೋಡಿಸುವಷ್ಟು ಶಕ್ತವಾಗಿದ್ದಿಲ್ಲ.
ಎಲ್ಲ ರೀತಿಯ ಧ್ವನಿಗಳು ಮರೆಯಾಗಿದ್ದವು. ಕೇಳಿ ಬರುತ್ತಿದ್ದುದು ಮಳೆ ಬೀಳುತ್ತಿರುವ ಸದ್ದೊಂದೇ. ಮನಸ್ಸಿಗೆ ಎಂಥದೋ ಹಾಯ್. ಎಂಥದೋ ಕಸಿವಿಸಿ. ಏನೋ ಧಾವಂತ. ಇದು ಯಾವಾಗ ನಿಲ್ಲುತ್ತದೋ, ಯಾವಾಗ ಕರೆಂಟ್ ಬರುತ್ತದೋ, ಯಾವಾಗ ಮನೆಗೆ ಹೋದೇನೋ ಎಂಬ ಚಿಂತೆ. ಮಳೆ ಬೀಳುತ್ತಲೇ ಹೋದಾಗ, ಕಾರು ತರುವಂತೆ ಅಪ್ಪನಿಗೆ ಫೋನ್ ಮಾಡಲಾ? ಎಂಬ ವಿಚಾರ ಬಂದಿತು. ಆದರೆ ಅಹಂ ಅದಕ್ಕೆ ಒಪ್ಪಲಿಲ್ಲ. ಈಗ ತಾನೆ ಅವ್ವನನ್ನು ಗದರಿಕೊಂಡಿದ್ದೇನೆ. ಅಪ್ಪನಿಗೆ ಹೇಗೆ ಫೋನ್ ಮಾಡಲಿ?
ಮಳೆಯಲ್ಲೇ ಕೊಡೆ ಹಿಡಿದು ಮೆಸ್ಗೆ ಹೋಗಲು ಒಂದಿಷ್ಟು ಹುಡುಗಿಯರು ಸಿದ್ಧವಾದರು. ’ಇವತ್ತು ಇಲ್ಲೇ ಊಟ ಮಾಡಿ, ಇಲ್ಲೇ ಇದ್ದು ಬೆಳಿಗ್ಗೆ ಬರುತ್ತೇನೆ’ ಎಂದು ಮನೆಗೆ ಫೋನ್ ಮಾಡಿ ಹೇಳೇ ಎಂದು ಗೆಳತಿ ಸಲಹೆ ಮಾಡಿದಳು. ನಾನು ಒಪ್ಪಲಿಲ್ಲ. ಹೀಗಾಗಿ ಆಕೆಯೂ ಸುಮ್ಮನೇ ನಿಂತಳು. ನಿಂತು ನಿಂತು ಬೇಸರವಾಗಿ ಹಾಡೊಂದನ್ನು ಗುನುಗಿಕೊಳ್ಳಲು ಶುರು ಮಾಡಿದಳು.
ಸುಮ್ಮನೇ ನಿಂತಿದ್ದ ಹುಡುಗಿಯರಲ್ಲಿ ಈಗ ಕೊಂಚ ಸಂಚಲನ. ಜೋರಾಗಿ ಹಾಡೇ ಎಂಬ ವಿನಂತಿ ಭರಿತ ಪ್ರೋತ್ಸಾಹ. ಗೆಳತಿ ದನಿ ದೊಡ್ಡದು ಮಾಡಿದಳು. ’ಎಲ್ಲಿ ಜಾರಿತೋ ಮನವು, ಎಲ್ಲೆ ಮೀರಿತೋ’.
ಕ್ಷಣ ಕಾಲ ಮಳೆಯನ್ನು ಮರೆತು ಹಾಡಿನತ್ತ ಮನಸ್ಸು ತಿರುಗಿತು. ಹಾಡುಗಳ ಮೇಲೆ ಹಾಡುಗಳು ಹೊರಬಂದವು. ಕಂಠ ಚೆನ್ನಾಗಿದ್ದ ಇನ್ನೊಂದಿಬ್ಬರು ಹುಡುಗಿಯರು ಗೆಳತಿಯ ಜೊತೆ ಸೇರಿಕೊಂಡರು. ಭಾವಗೀತೆ, ಸಿನಿಮಾ ಹಾಡುಗಳು ಧಾರಾಳವಾಗಿ ಹೊರಬಂದವು. ನೆನಪಿಲ್ಲ ಎಂಬ ಕಾರಣಕ್ಕೆ ಒಂದೇ ನುಡಿ ಹಾಡಿದರೂ ಕೆಲ ಹಾಡುಗಳು ಮನಸ್ಸಿನಲ್ಲಿ ಗುಂಗು ಹಿಡಿಸಿದವು. ಹಾಡುತ್ತ, ಕೇಳುತ್ತ ನಾವೆಲ್ಲ ಮಳೆಯನ್ನು ಮರೆತೇಬಿಟ್ಟೆವು.
ಕೊನೆಗೂ ಮಳೆ ನಿಂತಾಗ ರಾತ್ರಿ ಎಂಟು ಗಂಟೆ. ಕರೆಂಟ್ ಬಂದಿದ್ದು ಅರ್ಧ ಗಂಟೆ ನಂತರ. ಗೆಳತಿಯರ ಸಹಾಯದಿಂದ ಮರದಡಿ ಹುದುಗಿದಂತಿದ್ದ ಸ್ಕೂಟಿ ಹೊರಗೆಳೆದು, ನೀರು ಬಿದ್ದು ನಯವಾಗಿದ್ದ ಗೇಟು ತೆರೆದು ರಸ್ತೆಗಿಳಿದಾಗ ಸ್ಟಾರ್ಟ್ ಆಗಲು ಸ್ಕೂಟಿ ಮೊಂಡು ಹಿಡಿಯಿತು. ಸರದಿಯ ಮೇಲೆ ಗೆಳತಿಯರು ಅದನ್ನು ಒದ್ದು ಒದ್ದು ಶುರು ಮಾಡಲು ಯತ್ನಿಸಿದರು. ಹುಡುಗಿಯರ ಒದೆ ತಿಂದು ನಾಚಿಕೆಯಾಯಿತೇನೋ ಎಂಬಂತೆ ಸ್ಕೂಟಿ ಕೊನೆಗೂ ಶುರುವಾಯಿತು.
ಮನೆಗೆ ಬಂದರೆ ಬಾಗಿಲಲ್ಲೇ ನಿಂತಿದ್ದಾಳೆ ಅವ್ವ. ಸೇಫಾಗಿ ಬಂದವಳನ್ನು ನೋಡಿ ಸಮಧಾನಪಟ್ಟಳು. ನಾನು ಸೀದಾ ರೂಮಿಗೆ ಹೋಗಿ ಭಾವಗೀತೆ ಹಾಡಿನ ಸಿಡಿ ಹಾಕಿದೆ. ಭಾವಸಂಗಮದ ’ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ...’ ಹಾಡು ಸಣ್ಣಗೆ ಮಳೆಯಂತೆ, ಗುಂಗಿನಂತೆ, ಕನಸಿನಂತೆ, ಕನವರಿಕೆಯಂತೆ ರೂಮನ್ನು ತುಂಬಿಕೊಂಡಿತು. ಮನಸ್ಸು ನಿಧಾನವಾಗಿ ಮಳೆಯ ಜಾಡಿನಲ್ಲಿ ಜಾರಿಕೊಂಡು ಕಾಣದ ಲೋಕಕ್ಕೆ ತೇಲಿ ಹೋಯಿತು.
- ಪಲ್ಲವಿ ಎಸ್.
Comments
ಉ: ಮತ್ತೆ ಮಳೆ ಹುಯ್ಯುತಿದೆ
In reply to ಉ: ಮತ್ತೆ ಮಳೆ ಹುಯ್ಯುತಿದೆ by shashikannada
ಉ: ಮತ್ತೆ ಮಳೆ ಹುಯ್ಯುತಿದೆ
In reply to ಉ: ಮತ್ತೆ ಮಳೆ ಹುಯ್ಯುತಿದೆ by pallavi.dharwad
ಉ: ಮತ್ತೆ ಮಳೆ ಹುಯ್ಯುತಿದೆ
In reply to ಉ: ಮತ್ತೆ ಮಳೆ ಹುಯ್ಯುತಿದೆ by shashikannada
ಉ: ಮತ್ತೆ ಮಳೆ ಹುಯ್ಯುತಿದೆ
In reply to ಉ: ಮತ್ತೆ ಮಳೆ ಹುಯ್ಯುತಿದೆ by pallavi.dharwad
ಉ: ಮತ್ತೆ ಮಳೆ ಹುಯ್ಯುತಿದೆ
In reply to ಉ: ಮತ್ತೆ ಮಳೆ ಹುಯ್ಯುತಿದೆ by shashikannada
ಉ: ಮತ್ತೆ ಮಳೆ ಹುಯ್ಯುತಿದೆ
ಉ: ಮತ್ತೆ ಮಳೆ ಹುಯ್ಯುತಿದೆ
In reply to ಉ: ಮತ್ತೆ ಮಳೆ ಹುಯ್ಯುತಿದೆ by maaruthi
ಉ: ಮತ್ತೆ ಮಳೆ ಹುಯ್ಯುತಿದೆ
ಉ: ಮತ್ತೆ ಮಳೆ ಹುಯ್ಯುತಿದೆ
In reply to ಉ: ಮತ್ತೆ ಮಳೆ ಹುಯ್ಯುತಿದೆ by shashikannada
ಉ: ಮತ್ತೆ ಮಳೆ ಹುಯ್ಯುತಿದೆ