ಮಳೆಯ ಹನಿಗಳು

ಮಳೆಯ ಹನಿಗಳು

ನೆನ್ನ ರಾತ್ರಿ ಮಳೆರಾಯ ತನ್ನೆಲ್ಲಾ ದು:ಖವನ್ನೂ ಭೂಮಿಯೊಂದಿಗೆ ಹಂಚಿ ಕೊಂಡವನಂತೆ ಯಾಕೋ ಧೋ ಎಂದು ಸುರಿದಿದ್ದ, ಪಾಪ ಅವನು ನನ್ನಂತೆ ಅದೆಷ್ಟು ನೊಂದಿದ್ದನೋ, ಇನ್ನೂ ಮುಂಜಾವು ನಸುಗತ್ತಲು ಕವಿದಿತ್ತು. ನಿದ್ದೆ ಬಂದಿರಲಿಲ್ಲ, ಎದ್ದು, ಕಿಟಕಿಯ ಪರದೆ ಸರಿಸಿದಳು, ಅದಾಗಲೆ ತೋಟದಲ್ಲಿನ ಹೂಗಳು ಅರಳಿನಿಂತು ಸೂರ್ಯನ ಕಿರಣಗಳಿಗಾಗಿ ಕಾಯುತ್ತಿದ್ದವು, ಸೂರ್ಯ ಇನ್ನೂ ಚಾದರ ಹೊದ್ದು ಮಲಗಿದ್ದ, ನನಗೆ ನಿದ್ದೆ ಬರಲಿಲ್ಲ ವೆಂದರೆ ಸೂರ್ಯನಿಗೂ ನಿದ್ದೆ ಬರೊಲ್ಲವಾ, ಎಂದು ತನ್ನನ್ನ ತಾನೂ ಪ್ರಶ್ನಿಸಿ ಕೊಂಡು ಸುಮ್ಮನಾದಳು ಶಾಲ್ಮಲ,

ಯಾಕೋ ಇಂದು ತುಂಬಾ ಬೇಸರವಾಗುತ್ತಿದೆ ಎನ್ನುತ್ತಾ, " ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ , ಎಲ್ಲಿ ಅಲೆಯುತಿಹುದೋ ಕಾಣೆ" ಎಂದು ಗುನುಗುತ್ತಾ, ಪುಸ್ತಕ ತಿರುವಿ ಹಾಕಿದಳು , ಎನನ್ನೂ ಓದಲು ಮನಸ್ಸಿಲ್ಲದೆ, ಡೈರಿ ತೆಗೆದುಕೊಂಡು ಏನನ್ನೋ ಗೀಚಿ ಪೆನ್ನನ್ನೂ ಕಚ್ಚುತಾ ಎನನ್ನೋ ಯೋಚಿಸ ತೊಡಗಿದಳು, ಮನಸ್ಸಿನ ಮಾತಿಗೆ ಬರಹ ರೂಪ ಡೈರಿ, ಡೈರಿ ಬರೆಯುವುದು ಷೋಕಿಗಲ್ಲ ಎಂದು ತನ್ನ ಗೆಳತಿಗೆ ಹೇಳಿದ ಮಾತು ನೆನಪಾಯ್ತು. ಯಾಕೋ ಖಿನ್ನತೆ ಮೈಗೂಡಿದೆ ಅನ್ನಿಸಿತು, ಕಾಫಿ ಕುಡಿದು ರಿಲಾಕ್ಸ್ ಆಗೋಣ ಅಂತ, ರೂಮಿನಿಂದ ಹೊರಗೆ ನೋಡಿದಳು , ಅಮ್ಮ ಆಗಲೇ ಅಡುಗೆ ಮನೆ ಸೇರಿದ್ದಳು. ಅಪ್ಪ ವಾಕಿಂಗ್ ಹೊರಟಿದ್ದರು. ಕಿಟಕಿಯ ಪರದೆ ಸರಿಸಿದಾಗ ಆಗಲೇ ಸೂರ್ಯ ಹಲೋ ಹೇಳುತ್ತಿದ್ದ. ಹೊರಗೆ ಹೋಗಲು ಹೊರಟಳು ಅಮ್ಮ ಅಲ್ಲಿಗೆ ಕಾಫಿ ತಂದಳು, ಯಾಕೆ ಪುಟ್ಟಿ ಇಷ್ಟು ಬೇಗ ಎದ್ದೆ, ಇನ್ನೂ ಸ್ವಲ್ಪ ಹೊತ್ತು ಮಲಗಿದ್ದು ಆಮೇಲೆ ಏಳ ಬಹುದಿತ್ತು. ಎಂದಳು . ಮಾತಾಡಲು ಮನಸಿಲ್ಲದೆ, ಅಮ್ಮನಿಗೊಂದು ನಗು ಕೊಟ್ಟು ಸುಮ್ಮನಾದಳು. ಅಮ್ಮ ನಿನ್ನ ಮುಖದಲ್ಲಿ ಈ ಸುಂದರ ನಗು ಸದಾ ಹೀಗೆ ಇರಲಿ ಮಗಳೆ ಎಂದು ಹರಸಿ, ಹೋದಳು.

ಸ್ವಲ್ಪ ಹೊತ್ತು ಕಂಪ್ಯೂಟರ್ ನಲ್ಲಿ ಕೆಲವೊಂದು ಲೇಖನಗಳನ್ನು ಓದಿದಳು, ಮನಸ್ಸೇಕೊ ಮುದಗೊಳ್ಳಲಿಲ್ಲ, ಪೇಪರ್ ತಿರುವುದಳು , ದಿನಾ ಇದ್ದದ್ದೇ ಎಂದು ಎದ್ದು ಹಾಲ್ ಗೆ ನಡೆದಳು , ಅಷ್ಟರಲ್ಲಿ ಅಮ್ಮ ಶಾಲಿ ದೋಸೆ ರೆಡಿ ಇದೆ. ಎಣ್ಣೆ ಸ್ನಾನ ಮಾಡಿಸುತ್ತೇನೆ , ಈಗಲೇ ಮಾಡುತ್ತೇಯೋ ಇಲ್ಲ ತಿಂಡಿ ತಿಂದು ಮಾಡುತ್ತೇಯೋ ಅಂದರು, ರಾತ್ರಿ ಎಲ್ಲಾ ಬಿಡದೇ ಸುರಿದ ಮಳೆ ನೂರೆಂಟು ಗೊಂದಲಗಳು ಹಸಿವನ್ನು ಹೆಚ್ಚಿಸಿತು, ಸೋ ಮೊದಲು ತಿಂಡಿ ಮುಗಿಸಿದಳು, ಆಮೇಲೆ ಅಮ್ಮ ತಲೆ ತುಂಬಾ ಎಣ್ಣೆ ತಟ್ಟಿದರು, ಪುಂಗಿನಾದಕ್ಕೆ ತಲೆಯಾಡಿಸುವ ಹಾವಿನಂತೆ ಮೈ ಮರೆತಂತಾಯಿತು, ಅಮ್ಮ ಯಾವುದೋ ರಾಗ ಗುನುಗುತ್ತಿದ್ದಳು, ಕೈಯಲ್ಲಿನ ಉಂಗುರ ತಿರುವುತ್ತಾ ತಲೆಯಾಡಿಸುವಾಗ ಉಂಗುರ ಕೆಳಗೆ ಬಿತ್ತು. ಅಮ್ಮ ಉಂಗುರ ನೋಡೆ ಎಂದರು ಎತ್ತಿಟ್ಟಿರು ಯಾವಾಗಾದರೂ ಹಾಕೊತ್ತೀನಿ ಎಂದು ಎದ್ದು. ಹೋದಳು, ಅವನ ನೆನಪು ಭಾರವಾದ ದಿನ ಶಕುಂತಲೆ ಉಂಗುರ ಕಳೆದು ಕೊಂಡದ್ದು ಸಾರ್ಥಕ ಅನ್ನಿಸಿತು.

ತನ್ನ ನೀಳ ಕೂದಲಿನ ಸಿಕ್ಕು ಬಿಡಿಸುತ್ತಾ ಒಂದೊಂದೇ ಎಳೆಗಳಾಗಿ ಮಾಡಿ ಕಿಟಕಿ ಹೊರಗೆ ನೋಡುವುದು ಅವಳ ಮೆಚ್ಚಿನ ವಿಷಯ, ಹೊರಗಿನ ತೋಟದ ಮಲ್ಲಿಗೆಯ ಘಮ ಹುಚ್ಚಿಡಿಸುವಂತಿತ್ತು, " ಎಲ್ಲ ಮರೆತಿರುವಾಗ ಎಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೇ " ಎಂದು ಹಾಡುತ್ತಿರುವಾಗ ಅವನಂದ ಮಾತುಗಳು ನೆನಪಾದವು " ಮೈಸೂರ ಮಲ್ಲಿಗೆಯದು ಅರಳಿಹುದು ನಿನಗಾಗಿ, ಅದರ ಘಮದಲ್ಲೆಲ್ಲಾ ನಿನ್ನ ಹೆಸರು ಎಂದದ್ದೂ ನೆನಪಾಯ್ತು". ಯಾಕೋ ತುಂಬಾ ಕಾಡುತ್ತಿದ್ದಾನೇ, ಅವನನ್ನಗಲಿ ಇನ್ನೂ ೧ ದಿನವೂ ಕಳೆದಿಲ್ಲ ಹೀಗಾದರೇ ಅವನನ್ನೂ ಜೀವನ ಪೂರ್ತಿ ಬಿಟ್ಟಿರುವ ನಿರ್ಧಾರ ಅದೆಷ್ಟು ದೃಡವಾದದ್ದು, ಅಂದುಕೊಳ್ಳುತ್ತಿದ್ದಂತೆ ಮೊಬೈಲ್ ಕೈಗೆತ್ತಿ ಕೊಂಡಳು, ಇವಳ ಕರೆಗಾಗಿ ಕಾದಿರುವವನಂತೆ ನಿಲ್ಲಸದೆ ಮಾತಾಡ ತೊಡಗಿದ, " ಸಾರಿಕಣೆ ಪುಟ್ಟಿ , ನಿನ್ನ ಒಂದು ದಿನ ಅಗಲಿದ್ದೇ ಒಂದು ವರ್ಷದಂತೆ ಆಗಿದೆ. ಸಾರಿಮಾ ಬೈದಿದಕ್ಕೆ ಇನ್ನೊಮ್ಮೆ ಹಾಗನ್ನೊಲ್ಲಾ, ಆಫೀಸಿಗೆ ಹೋಗಿಲ್ಲ, ಬರುತ್ತೇನೆ, ಕೋಪದ ಕೈಗೆ ಬುದ್ದಿ ಕೊಟ್ಟು ತಪ್ಪು ಮಾಡಿದೆ ಮಾ ಸಾರಿ ಎಂದ". ಏನು ಮಾತನಾಡಬೇಕೊ ತಿಳಿಯಲಿಲ್ಲ, ಸುಮ್ಮನಾದಳೂ, ಹೊರಗೆ ಮತ್ತೆ ಧೋ ಎಂದು ಮಳೆ ಸುರಿಯ ತೊಡಗಿತು, ಮಳೆ ಬರುತ್ತಿದೆ ಸಂಜೆ ಬರಬಹುದು, ಎಂದು ಒಂದು ಭಾವಗೀತೆ ಸಿ.ಡಿ ಹಾಕಿದಳು, ಕರೆಂಟ್ ರಾಯ ಮಲಗ ಬೇಕಿತ್ತೇನೋ ಕರೆಂಟ್ ಹೋಯಿತು, ಆಮೇಲೆ ಯೋಚಿಸೋಣ ಎಂದು ಹಾಗೆ ಉರುಳಿದಳು, ೧೦ ನಿಮಿಷದಲ್ಲೇ ಹೊರಗೆ ಶಬ್ದವಾಯಿತು, ಪರದೆ ಸರಿಸಿ ಹೊರಗೆ ನೋಡಿದರೆ ಸುರಿವ ಮಳೆಯಲ್ಲೇ ಹಾಗೆ ಬಂದಿದ್ದ, ಓಡಿ ಹೋಗಿ ಬಾಗಿಲು ತೆರದಳು, ಮಳೆಯ ಹನಿಗಳು ಒಂದೊಂದಾಗಿ ಇಳಿಯ ತೊಡಗಿದವು.
ಕರೆಂಟು ಬಂತು ಜೊತೆಯಲ್ಲೇ ಡಾ. ಎನ್.ಎಸ್. ಲಷ್ಮೀನಾರಾಯಣ ಭಟ್ಟರ " ಯಾರು ಜೀವವೆ ಯಾರು ಬಂದವರು, ಭಾವನೆಗಳನೇರಿ ಯಾರು ಬಂದವರು ಓಣಗಿದೆನ್ನೆದೆಗೆ ಮಳೆಯತಂದವರು, ಯಾರು ಜೀವವೆ " ಎಂದು ಹಾಡತೊಡಗಿತು.

ಇಬ್ಬರು ನಗತೊಡಗಿದರು ಹಿಂದೊಮ್ಮೆ ಅವನಿಗಾಗಿ ಕಾಯುತ್ತಾ ಕುಳಿತಿದ್ದ ಶಾಲ್ಮಿ ಮೆಸೇಜ್ ಮಾಡಿದ್ದಳು ಅದನ್ನು ಓದಿದೊಡನೆಯೇ ಹೀಗೆ ಓಡಿಬಂದದ್ದು ನೆನಪಾಯಿತು ಇಬ್ಬರಿಗೂ , ಮೆಸೇಜ್ ಹೀಗಿತ್ತು " ಒಲವಿನರಸ ತಮಗಾಗಿಯೇ ಕಾಯುತ್ತಾ ಕುಳಿತಿಹಳು ತಮ್ಮ ಅಭಿಸಾರಿಕೆ, ಮಳೆ ನಿಂತಾಗ ಛತ್ರಿ ಮುಚ್ಚಿ, ಮಳೆ ಬಂದಾಗ ಛತ್ರಿ ಬಿಚ್ಚಿ" ಎಂದು. ಅಂದು ಆ ಸಮಕ್ಕೆ ಅವರ ಮೊಬೈಲ್ ನಲ್ಲೂ ಇದೇ ಹಾಡು ಬರುತ್ತಿತ್ತು.

Rating
No votes yet

Comments