ಜಿ ಟಿ ಎನ್ ಹಾಗೂ ನೆನಪುಗಳು

ಜಿ ಟಿ ಎನ್ ಹಾಗೂ ನೆನಪುಗಳು

ನೆನ್ನೆ ಸಂಜೆ ಸಂಪದ ನೋಡಿದಾಗ ಕಂಡದ್ದು ಇದು.

ಇಸ್ಮಾಯಿಲ್ ಬರೆದ ಅತೀ ದುಃಖದ ಸಮಾಚಾರ.

ಜಿಟಿಎನ್ ಇನ್ನಿಲ್ಲ.

ಅವರ ಆತ್ಮಕ್ಕೆ ಶಾಂತಿ ಸಿಗಲಿ ಅನ್ನಲೇ? ಅದು ಕೇವಲ ಔಪಚಾರಿಕವಾಗುತ್ತೆ. ಅಷ್ಟೇ.

ಕನ್ನಡದಲ್ಲಿ ವೈಜ್ಞಾನಿಕ ಬರಹಗಳು ಎಂದಾಗ ಮೊತ್ತಮೊದಲು ಮನಸ್ಸಿಗೆ ಬರುವ ಹೆಸರೇ ಜಿಟಿನಾರಾಯಣರಾಯರದ್ದು.  ಸುಧಾ ಮೊದಲಾದ ಪತ್ರಿಕೆಗಳಲ್ಲಿ ಅವರ ಹಲವು ಬರಹಗಳು ಬೆಳಕು ಕಾಣುತ್ತಿದ್ದವು.

ಆಗ ಪ್ರಕಟವಾಗುತ್ತಿದ್ದ ಕನ್ನಡ ವಿಶ್ವಕೋಶ ಸ್ವಂತಕ್ಕೆ ಕೊಳ್ಳಲು ಬೆಲೆ ಕೈಗೆಟುಕುವಂತಿರಲಿಲ್ಲ.  ಲೈಬ್ರರಿಯಲ್ಲಿ ಸಿಗುವುದರ ಮಾತಂತೂ ಸ್ವಲ್ಪ ಕಷ್ಟವೇ! ಮತ್ತೆ ಐದನೇ ತರಗತಿಯವರೆಗೆ ಇಂಗ್ಲಿಷ್ ಕಲಿತಿಲ್ಲದ ಕಾರಣ ಎನ್ಸೈಕ್ಲೋಪಿಡಿಯಾ ಬ್ರಿಟಾನಿಕಾ ಅಂತಾಹವಂತೂ ನನಗೆ ಸ್ವಲ್ಪ ದೂರವೇ. ಇದೆಲ್ಲಾ ಸೇರಿ, ನಾನು  ಜಿಟಿಎನ್ ಅವರ ಬರಹಗಳು ಎಲ್ಲಿ ಕಂಡರೂ ತುಂಬ ಆಸಕ್ತಿಯಿಂದ ಓದುತ್ತಿದ್ದೆ.

ಸ್ವಲ್ಪ "ಅಧಿಕವಾಗಿಯೇ ಸಂಸ್ಕೃತಭೂಯಿಷ್ಟವಾದ" ಶೈಲಿ ಅವರದ್ದು. ಆಕಾಶವೀಕ್ಷಣೆಯ ಬಗ್ಗೆ ಅವರು ಬರೆದ ಕೆಲವು ಪುಸ್ತಕಗಳು, ಕಿರುಬರಹಗಳೇ ನನಗೆ ಆಕಾಶ-ಗ್ರಹ-ನಕ್ಷತ್ರಗಳ ಹುಚ್ಚು ಹಿಡಿಸಿದ್ದು. ಹಾಗಾಗಿ, ಅವರು ಯಾರು ಎಂದು ನೋಡದೇ, ನಾನು ಅವರ ಕಟ್ಟಾ ಅಭಿಮಾನಿ ಆಗಿದ್ದರಲ್ಲಿ ಆಶ್ಚರ್ಯವೇ ಇಲ್ಲ.

ಅವತ್ತು ೧೯೮೩ ಅಕ್ಟೋಬರ್ ೩೦. ನಟ್ಟನಡು ಮಧ್ಯಾಹ್ನ.

ಮನೆಗೊಂದು ಟೆಲಿಗ್ರಾಮ್ ಬಂತು. 

ಲೇಖಕ್-ವರ್ಷದ ವಿದ್ಯಾರ್ಥಿ ಸ್ಪರ್ಧೆಯ ಮೊದಲ ಹಂತದಲ್ಲಿ ನನ್ನನ್ನು ಆಯ್ದು, ಎರಡನೇ ಹಂತಕ್ಕಾಗಿ ವಲಯ ಮಟ್ಟದ ಸ್ಪರ್ಧೆಗಾಗಿ ಮಡಿಕೇರಿಗೆ ಕರೆಯಲಾಗಿತ್ತು.

ಆ ಕಾಲಕ್ಕೆ ಆ ಸ್ಪರ್ಧೆ ಬಹಳ ಹೆಸರು ಗಳಿಸಿತ್ತು. ಸ್ವಲ್ಪ ಕಷ್ಟವೇ ಅನ್ನಿಸುತ್ತಿದ್ದ ಆ ಸ್ಪರ್ಧೆಯಲ್ಲಿ, ವಿಜ್ಞಾನ, ಸಾಹಿತ್ಯ, ಯೋಚಿಸುವ ಶಕ್ತಿ, ಮೊದಲಾಗಿ ತಲೆ ತಿಣುಕುವ ಹಲವು ರೀತಿಯ ಪ್ರಶ್ನೆಗಳಿರುತ್ತಿದ್ದವು. ಅಲ್ಲದೇ, ಪ್ರತಿ ಶಾಲೆಯಿಂದಲೂ ಕಿರಿಯರು- ಹಿರಿಯರು ಎಂದು ಎರಡು ವಿಭಾಗಗಳಲ್ಲಿ ಇಬ್ಬರು ಮಕ್ಕಳಿಗೆ ಮಾತ್ರ ಭಾಗವಹಿಸುವ ಅವಕಾಶ. ಅಲ್ಲಿದ್ದ ಎಷ್ಟೋ ಪ್ರಶ್ನೆಗಳನ್ನು ಉತ್ತರಿಸಲು ನನಗೆ ಸಾಧ್ಯವಾದದ್ದು, ಜಿಟಿಎನ್ ಅವರ  ಬರಹಗಳನ್ನು  ಓದಿದ್ದರಿಂದ ಎಂದು ಧಾರಾಳವಾಗಿ ಹೇಳಬಲ್ಲೆ. 

ನನಗಂತೂ ಬಹಳ ಸಂತೋಷವಾಗಿತ್ತು. ಕೆಲವೇ ದಿನಗಳಲ್ಲಿ ಮಡಿಕೇರಿಯಲ್ಲಿ ನಾಲ್ಕು ದಿನದ ಕ್ಯಾಂಪ್. ವಲಯದಿಂದ ಆಯ್ಕೆಯಾದ ಇಪ್ಪತ್ತು  ವಿದ್ಯಾರ್ಥಿಗಳು ಅಲ್ಲಿಗೆ ಬರುವವರಿದ್ದರು. ಬಗೆ ಬಗೆಯ ಚಟುವಟಿಕೆಗಳು ಅಲ್ಲಿರುತ್ತವೆ ಎಂದಷ್ಟೇ  ವಿಷಯ ಗೊತ್ತಿತ್ತು.

ಮಡಿಕೇರಿಯ ಮಯೂರ ವ್ಯಾಲಿ ವ್ಯೂ ಗೆ ಅವರು ತಿಳಿಸಿದ ದಿನ ಹೋಗಿ ನೋಡಿದರೆ ನಮ್ಮೊಡನೆ ಒಡನಾಡಲು, ನಮ್ಮನ್ನು ಒರೆಗೆ ಹಚ್ಚಲು ಒಂದು ಪರಿಣತರ ತಂಡವೇ ತಯಾರಾಗಿತ್ತು.

ಅದರ ಮುಖ್ಯಸ್ಥರು ಸಾಕ್ಷಾತ್ ಜಿ.ಟಿ.ನಾರಾಯಣ ರಾವ್ ಅವರೇ!

ಅಲ್ಲಿ ಕಳೆದ ನಾಲ್ಕು ದಿನಗಳನ್ನು ಇಷ್ಟು ವರ್ಷಗಳ ನಂತರವೂ ನಾನು ಮರೆಯಲಾರೆ. ಸಮಯ ಸಿಕ್ಕಾಗಲೆಲ್ಲ, ಆಕಾಶದ, ನಕ್ಷತ್ರಗಳ ವಿಷಯ ನಾನು ಅವರಿಂದ ಕೇಳಿದ್ದೆ. ಅಲ್ಲದೇ ಅವರ ಇನ್ನೊಂದು ಸಂಗೀತ ಪ್ರೇಮಿಯ ಮುಖ ನನಗೆ ತೋರಿದ್ದೂ ಆಗಲೇ ಮೊದಲು.

ಕೊನೆಯದಿನ ಭಾಗಮಂಡಲ, ತಲಕಾವೇರಿಗಳಿಗೆ ನಮ್ಮನ್ನು ಕರೆದುಕೊಂಡು ಹೋಗಿದ್ದೂ ಜಿಟಿಎನ್ ಅವರೇ. ಭಾಗಮಂಡಲದಲ್ಲಿ ಕಾವೇರಿ ಕನ್ನಿಕೆಯರ ಸಂಗಮದಲ್ಲಿ ಕುಳಿತು ತಮ್ಮ ಬಾಲ್ಯದ ಕೆಲವು ಘಟನೆಗಳನ್ನು ಹೇಳುತ್ತ, ಬ್ರಹ್ಮಗಿರಿ ಬೆಟ್ಟದ ತುದಿಯನ್ನು ನಮ್ಮೊಡನೇ ಏರುತ್ತ, ನಮ್ಮೊಡನೆ ತಾವೂ  ಚಿಕ್ಕ ಹುಡುಗರಾಗಿದ್ದ

ಜಿಟಿಎನ್ ಇನ್ನಿಲ್ಲ.

ಆದರೇನಂತೆ?  ನನ್ನಂತಹ ಎಷ್ಟೋ ಸಾವಿರಾರು ಜನ ನಮ್ಮ ಕೊನೆಯ ಉಸಿರಿರುವವರೆಗೆ ಅವರನ್ನು ಮರೆಯಲಾರೆವು.

-ಹಂಸಾನಂದಿ

 ( ಈ ಬರಹದ ಇಂಗ್ಲಿಷ್ ರೂಪಾಂತರ ಇಲ್ಲಿದೆ)

Rating
No votes yet

Comments