ಗ್ರಾಹಕರೇ, ನಿಮಗಿದು ಗೊತ್ತೇ..?

ಗ್ರಾಹಕರೇ, ನಿಮಗಿದು ಗೊತ್ತೇ..?

ಒಂದಂತೂ ಸತ್ಯ. ಪ್ರತಿಯೊಬ್ಬ ಮನುಷ್ಯನೂ ಗ್ರಾಹಕನೇ. ದೇಶದ ರಾಷ್ಟ್ರಪತಿಯೇ ಇರಲಿ... ಸಾಮಾನ್ಯ ಪ್ರಜೆ ಇರಲಿ.. ಮಕ್ಕಳಿರಲಿ ಮುದುಕರಿರಲಿ... ಎಲ್ಲರೂ ತಮಗೆ ಬೇಕಾದ ವಸ್ತುಗಳನ್ನು ಹಣ ಕೊಟ್ಟು ಕರೀದಿಸಲೇಬೇಕು. ಈಗಂತೂ ಮಾರುಕಟ್ಟೆಯಲ್ಲಿ ಸಿಗುವ ಬ್ರಾಂಡ್ ಗಳು ಅನೇಕ.. ವಿಧವಿಧದ ಜಾಹಿರಾತುಗಳು ಪ್ರತಿದಿನ ನಮ್ಮ ಕಣ್ಣು ಸೆಳೆಯುತ್ತಲೇ ಇರುತ್ತದೆ. ಆದರೆ ಯಾವುದನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು..? ಯಾವುದನ್ನು ನಾವು ತೆಗೆದುಕೊಳ್ಳಬಾರದು ಎಂದು ನಮಗೆ ಗೊತ್ತಾಗುವುದಾದರೂ ಹೇಗೆ..? ಗ್ರಾಹಕರಿಗೆ ಇದನ್ನು ತಿಳುಸುವವರಾದರೂ ಯಾರು..?

ಇಂತಹ ಒಂದು ನಿಟ್ಟಿನಲ್ಲಿ ಹುಟ್ಟಿದ ಸಂಸ್ಥೆ CERC (ಕನ್ಸ್ಯೂಮರ್ ಎಜುಕೇಶನ್ ಎಂಡ್ ರಿಸರ್ಚ್ ಸೆಂಟರ್) . ೧೯೭೮ ರಲ್ಲಿ ಈ ವಿಭಿನ್ನ ಆಲೋಚನೆ ಬಂದಿದ್ದು ಐ ಐ ಎಂ ನ ಪ್ರೊಫೆಸರ್ ಆಗಿದ್ದ ಮನುಭಾಯಿ ಶಾ ಅವರಿಗೆ. ಬರಿ ನಾಲ್ಕು ಜನರಿಂದ ೨೫೦ ರೂ ಒಂದಿಗೆ ಒಂದು ರಿಜಿಸ್ಟರ್ ಮಾಡಿಸಿದ್ದ ಈ ಕಂಪನಿಯ ಆದಾಯ ಈಗ ೧೫ ಕೋಟಿ ರೂಗಳು. ಮನುಭಾಯಿ ಶಾ ಅವರ ಮೇಲಿನ ನಂತರದ ವಿವಾದ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಒಟ್ಟಾರೆ ಸಂಸ್ಥೆಯ ಸಾಧನೆ ನಿಜಕ್ಕೂ ಪ್ರಶಂಸನೀಯ. ಪ್ರತಿಷ್ಟಿತ ಕಾರು ಕಂಪನಿಯಾದ ಜನೆರಲ್ ಮೋಟರ್ಸ್ ಗೆ ಕಾರುಗಳಲ್ಲಿನ ಪ್ಯಾಸೆಂಜರ್ ಸೇಫ್ಟಿಯ ಬಗ್ಗೆ ಪ್ರಶ್ನಿಸಿ ಅದಕ್ಕೆ ಸೂಕ್ತ ಸಲಹೆ ನೀಡಿದ ಹೆಮ್ಮೆ ಈ ಗುಜರಾತ್ ನ ಪುಟ್ಟ ಸಂಸ್ಥೆಯದು. ಇಡಿ ಏಷ್ಯಾದಲ್ಲೇ ಈ ಬಗೆಯ ಪ್ರಯತ್ನ ಮೊದಲನೆಯದು ಎಂದು ಹೇಳಲಾಗಿದೆ.

ಈ ಸಂಸ್ಥೆಯಿಂದ ಪ್ರಕಟವಾಗುವ ದ್ವೈ ಮಾಸಿಕ ಪತ್ರಿಕೆ ' ಇನ್ಸೈಟ್ '. ಮಾರುಕಟ್ಟೆಯಲ್ಲಿ ಬರುವ ಯಾವ ವಸ್ತುಗಳೇ ಇರಲಿ ಅದನ್ನು ಸಂಪೂರ್ಣವಾಗಿ ಪರೀಕ್ಷಿಸಿ, ಸಂಶೋಧನೆ ನಡೆಸಿ ಅದರ ಬಗ್ಗೆ ಪೂರ್ತಿ ವಿವರಗಳನ್ನು, ಪರೀಕ್ಷೆಯ ಪೂರ್ಣ ಫಲಿತಾಂಶಗಳನ್ನು, ಗ್ರಾಹಕರಿಗೆ ತಿಳಿಸಲಾಗುತ್ತದೆ. ಬಗೆಬಗೆಯ ಶ್ಯಾಂಪು , ಸೋಪುಗಳಾಗಲಿ , ಯಾವುದೇ ಇಲೆಕ್ಟ್ರಾನಿಕ್ ಸಲಕರಣೆಗಳಾದ ಕುಕ್ಕರ್, ಮಿಕ್ಸರ್, ತಂಗಳು ಪೆಟ್ಟಿಗೆ, ಬಟ್ಟೆ ತೊಳೆಯುವ ಮೆಶಿನ್ ಆಗಿರಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ.

ಅಷ್ಟೆ ಅಲ್ಲ.. ಯಾವ ಇನ್ಸೂರೆನ್ಸ್ , ಮ್ಯುಚುಅಲ್ ಫಂಡ್ಸ್, ಟ್ರಸ್ಟ್ ಏಜನ್ಸಿ ಗಳ ಬಗ್ಗೆ ಆಗಲೀ ಅದರ ಬಗ್ಗೆ ಎಲ್ಲ ವಿವರಗಳನ್ನು ಕಲೆ ಹಾಕಿ ಜನರಿಗೆ ತಿಳಿಸಲಾಗುತ್ತದೆ. ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವವರಿಗೆ ಹೆಚ್ಚಾಗಿ ಕೊಡುವ ಇಂಜೆಕ್ಷನ್ ಆದ IV ಯಲ್ಲಿರುವ ಲಿಕ್ವಿಡ್ ನಲ್ಲಿ ಕೂಡ ಕಂಟ್ಯಾಮಿನೇಶನ್ ಇರುವುದು ತಿಳಿದುಬಂದಿದ್ದು ಅದಕ್ಕೆ ಸೂಕ್ತ ಮಾಹಿತಿ ಮತ್ತೆ ತಯಾರಕರ ಮೇಲೆ ದೂರು ಕೊಡಲಾಗಿದೆ.

ನಮ್ಮ ಕರ್ನಾಟಕದಲ್ಲೂ ಈ ರೀತಿಯ ಪ್ರಯತ್ನ ಸ್ವಲ್ಪ ಅಲ್ಲಿ ಇಲ್ಲಿ ನಡೆದಿದ್ದರೂ ಅಷ್ಟಾಗಿ ಬೆಳಕಿಗೆ ಬಂದಿಲ್ಲ ಎಂದೇ ಹೇಳಬಹುದು. ಆದರೂ ವಸ್ತುವನ್ನು ತೆಗೆದುಕೊಂಡು ಆಮೇಲೆ, ಅಯ್ಯೋ ಎಂದು ಪೇಚಾಡುವುದಕ್ಕಿಂತ, ಅನೇಕ ಜಾಹಿರಾತುಗಳಿಗೆ ಮಾರುಹೋಗಿ ಮೋಸಹೋಗುವುದಕ್ಕಿಂತ ಈ ರೀತಿ ತಿಳಿಸುವವರಿದ್ದರೆ ಚನ್ನಾಗಿರುತ್ತೆ ಅಲ್ಲ್ವೇ ?

Rating
No votes yet

Comments