ಕಣ್ಣು ನೋಡೇ ಗೌರಿ

ಕಣ್ಣು ನೋಡೇ ಗೌರಿ

ನಮ್ಮ ಮಕ್ಕಳು ನಮ್ಮಿಂದ ಏನನ್ನು ನಿರೀಕ್ಷಿಸುತ್ತವೆ? ಈ ಪ್ರಶ್ನೆ ಎದುರಾಗಿದ್ದು, ನನಗೆ ಮೊದಲ ಮಗು ಗೌರಿ ಹುಟ್ಟಿದಾಗ. ಆಗ ನಾನಿನ್ನೂ ಇಪ್ಪತ್ತೆರಡು ವರ್ಷದ ಹುಡುಗಿ. ಮಗುವನ್ನು ಎತ್ತಿಕೊಳ್ಳಲು ಸಹ ಬರುತ್ತಿದ್ದಿಲ್ಲ. ಆದರೆ ಮಗು ಮುದ್ದಾಗಿತ್ತು. ಕೆಂಪಗಿತ್ತು. ದಪ್ಪವಾಗಿತ್ತು. ಇಂಥ ಮಗುವನ್ನು ಸಂಭಾಳಿಸಲು ಸಾಧ್ಯವೆ ಎಂದು ಎಷ್ಟೋ ಸಾರಿ ಅಳುಕಾಗುತ್ತಿತ್ತು.

ಆದರೆ ಪ್ರೀತಿ ಎಲ್ಲವನ್ನೂ ಕಲಿಸುತ್ತದೆ. ನನ್ನ ಮಗು ಎಂಬ ಮಮತೆಯೇ ಸಾಕು, ಗೊತ್ತಿರದ ಎಷ್ಟೋ ವಿಷಯಗಳನ್ನು ಗೊತ್ತು ಮಾಡಿಸಿಬಿಡುತ್ತದೆ. ಕ್ರಮೇಣ ನಾನು ಮಗುವನ್ನು ನಾಜೂಕಾಗಿ ಎತ್ತಿಕೊಳ್ಳುವುದನ್ನು, ಹಾಲೂಡಿಸುವುದನ್ನು, ಅದರ ಅವಶ್ಯಕತೆಯನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯುತ್ತಾ ಹೋದೆ. ಹಾಸಿಗೆ ಒದ್ದೆಯಾದರೆ ಮಗುವಿಗೆ ಕಿರಿಕಿರಿಯಾಗುತ್ತದೆ ಎಂಬುದನ್ನು ಗಮನಿಸಿದೆ. ಬೆಚ್ಚಗಿನ ಉಡುಪು, ಹಾಸಿಗೆ ಇದ್ದರೆ, ಹೊಟ್ಟೆ ತುಂಬಿದ್ದರೆ ಮಗು ಕಿರಿಕಿರಿ ಮಾಡದೇ ಆಟವಾಡುತ್ತದೆ ಅಥವಾ ನಿದ್ದೆ ಮಾಡುತ್ತದೆ ಎಂಬುದು ಗೊತ್ತಾಯಿತು. ಗೊತ್ತಿರದ್ದನ್ನು ನನ್ನ ತಾಯಿಯಿಂದ ಕೇಳಿ ತಿಳಿದುಕೊಂಡೆ.

ಆದರೆ ಮಗು ಎಲ್ಲಕ್ಕಿಂತ ಇಷ್ಟಪಡುವುದು ತಾಯಿಯ ಪ್ರೀತಿಯನ್ನು ಎಂಬುದು ಕ್ರಮೇಣ ಅರ್ಥವಾಯಿತು. ಎತ್ತಿಕೊಂಡು ಮುದ್ದುಮಾಡುವುದು, ಲಲ್ಲೆ ದನಿಯಲ್ಲಿ ಮಾತನಾಡುವುದನ್ನು ಮಗು ಇಷ್ಟಪಡುತ್ತದೆ ಎಂಬುದು ತಿಳಿಯಿತು. ಗೌರಿ ಹುಟ್ಟಿದ ನಂತರ ನಿರಂತರವಾಗಿ ನಾಲ್ಕೈದು ತಾಸು ನಿದ್ದೆ ಮಾಡುವುದೂ ಸಾಧ್ಯವಾಗಲಿಲ್ಲ. ಪ್ರತಿ ಎರಡು ಗಂಟೆಗೆ ಹಾಲೂಡಿಸಲೇಬೇಕಿತ್ತು. ಮೊದಮೊದಲು ಇದು ನನಗೆ ಕಿರಿಕಿರಿ ಮಾಡಿದರೂ, ಕ್ರಮೇಣ ಅದೂ ಅಭ್ಯಾಸವಾಯಿತು.

ಇದೇ ಸಮಯದಲ್ಲಿ, ಅಂದರೆ, ಗೌರಿ ಹುಟ್ಟಿದ ಒಂದೆರಡು ತಿಂಗಳಲ್ಲಿ ನನ್ನ ಅಕ್ಕ ಕೂಡ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಆದರೆ, ನಮ್ಮ ಗೌರಿ ಐದಾರು ತಿಂಗಳಾದರೂ ನಮ್ಮ ಕಣ್ಣುಗಳನ್ನು ದಿಟ್ಟಿಸಿ ನೋಡುತ್ತಿರಲಿಲ್ಲ. ಆಕೆಯ ಕತ್ತು ನಿಲ್ಲಲಿಲ್ಲ. ಕುಡಿಸಿದ ಹಾಲಿನ ಸ್ವಲ್ಪ ಭಾಗ ಅನಾಯಾಸವಾಗಿ ಹೊರಬಂದುಬಿಡುತ್ತಿತ್ತು. ಆದರೆ, ಅಕ್ಕನ ಮಗಳಲ್ಲಿ ಇದ್ಯಾವ ಸಮಸ್ಯೆಯೂ ಇರಲಿಲ್ಲ. ಆ ಮಗು ಹುಟ್ಟಿದ ಎರಡೇ ತಿಂಗಳಿಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿ ನಗುತ್ತಿತ್ತು. ಕೈಯಲ್ಲಿ ಆಟಿಕೆ ಕೊಟ್ಟರೆ ಹಿಡಿದುಕೊಳ್ಳುತ್ತಿತ್ತು. ಆದರೆ, ಗೌರಿ ಅದ್ಯಾವುದನ್ನೂ ಮಾಡಲಿಲ್ಲ.

ಎಷ್ಟೊಂದು ಸಾರಿ ಗೌರಿಯೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ. ನೀನು ಯಾಕೆ ನಮ್ಮ ಕಣ್ಣುಗಳನ್ನು ನೋಡುವುದಿಲ್ಲ ಎಂದು ಆಕೆ ನಾಲ್ಕೈದು ತಿಂಗಳದವಳಾಗಿದ್ದಾಗಿಂದಲೇ ಕೇಳುತ್ತ ಬಂದಿದ್ದೇನೆ. ಮೊದಲ ಬಾರಿ ಈ ರೀತಿ ಕೇಳಿದಾಗ, ಅದು ತನ್ನ ಗಮನಕ್ಕೆ ಬಂದಿಲ್ಲ ಎನ್ನುವಂತೆ ಗೌರಿ ಸುಮ್ಮನಿದ್ದಳು. ಈ ಆರು ವರ್ಷಗಳಲ್ಲಿ ಸಾವಿರಾರು ಸಲ ಈ ಪ್ರಶ್ನೆ ಕೇಳಿದ್ದೇನೆ. ಪ್ರೀತಿಯಿಂದ, ಬೇಸರದಿಂದ, ನೋವಿನಿಂದ, ತಮಾಷೆಯಿಂದ ಕೇಳಿದ್ದೇನೆ.

ನನ್ನ ಬದುಕಿನ ಬಲು ದೊಡ್ಡ ಪಾಠ ಈ ಪ್ರಶ್ನೆಯಿಂದ ಶುರುವಾಯಿತು. ಇವತ್ತಿಗೂ ಉತ್ತರ ಹುಡುಕುತ್ತಲೇ ಇದ್ದೇನೆ. ಒಂದಿಷ್ಟು ಗೊತ್ತಾಗಿದೆ. ಆದರೆ, ಬಹಳಷ್ಟು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿದೆ.

- ರೇಖಾ ಚಾಮರಾಜ

Rating
No votes yet

Comments