ಎಳನೀರು ಮಾರುವವರ ಸಾಮಾಜಿಕ ಕಳಕಳಿ

ಎಳನೀರು ಮಾರುವವರ ಸಾಮಾಜಿಕ ಕಳಕಳಿ

ಎಳನೀರು ಮಾರುವವರ ಸಾಮಾಜಿಕ ಕಳಕಳಿ
ಟೈಮ್ಸ್ ಆಫ್ ಇಂಡಿಯಾ ಕನ್ನಡ ದಿನಪತ್ರಿಕೆಯಲ್ಲಿ ಪ್ರತಿ ಭಾನುವಾರ ಶ್ರೀಯುತ ರವಿಶಂಕರ್ (Aim High consultantsನ C.E.O.) ಅವರ ’ಒಳನೋಟ’ ಎಂಬ ಅಂಕಣಬರಹ ಬರುತ್ತದೆ. ಅವರ ವಿಚಾರಗಳು ವೈವಿಧ್ಯಮಯ ಹಾಗೂ ಅರ್ಥಪೂರ್ಣವಾಗಿರುತ್ತವೆ. ಎಲ್ಲವನ್ನು regularಆಗಿ ಓದುವ ಓದುಗರಲ್ಲಿ ನಾನೂ ಒಬ್ಬಳು. ಅವುಗಳಲ್ಲಿ ಅವರು ಇತ್ತೀಚೆಗೆ ಬರೆದ “ಸಾಮಾಜಿಕ ಜವಾಬ್ದಾರಿ” ಎಂಬ ತಲೆಬರಹದ ಅಂಕಣ ನನಗೆ ಅತ್ಯಂತ ಸಂತಸ ನೀಡಿತು. ಅದನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಆಸೆ ನನಗೆ.
ಕೇರಳದ ಚಿರಾಯ್ ಬೀಚ್ ಕೊಚಿನ್ ಸಮೀಪದಲ್ಲಿದೆ. ಅತಿ ಸುಂದರವಾದ ಆ ತಾಣಕ್ಕೆ ಸಹಜವಾಗಿಯೇ ಅತಿ ಹೆಚ್ಚು ಪ್ರವಾಸಿಗರು ಬರುತ್ತಿರುತ್ತಾರೆ. ಆ ಬೀಚಿನ ಮೂಲೆಯಲ್ಲಿ ಒಬ್ಬ ವಯಸ್ಸಾದ ಮುದುಕರು ಎಳನೀರು ಮಾರುತ್ತಿದ್ದರು. ಅವರ ಬಳಿ ರವಿಶಂಕರ್ ಮತ್ತು ಅವರ ಗೆಳೆಯರು ಎಳನೀರು ಕುಡಿಯಲು ಹೋದಾಗ ಅವರನ್ನು ಮೂಕ ವಿಸ್ಮಿತರನ್ನಾಗಿ ಮಾಡಿದ ಒಂದು ವಿಷಯದ ವಿವರಣೆ ಇಲ್ಲಿದೆ.
ಪ್ರವಾಸಿಗರು ಕುಡಿದು ಎಸೆದ ಎಳನೀರಿನ ಚಿಪ್ಪುಗಳನ್ನು ಆತ ಚೆನ್ನಾಗಿ ಕೊಡವಿ ಒಂದರ ಮೇಲೊಂದು ಬೋರಲು ಹಾಕುತ್ತಿದ್ದ. ಅ ಬೋರಲು ಹಾಕಿದ ಚಿಪ್ಪುಗಳ ಗುಡ್ಡದ ಆಕಾರ ಮತ್ತು ವಿನ್ಯಾಸ ಅದರೊಳಗೆ ಒಂದು ಹನಿ ನೀರು ಇಳಿಯಲೂ ಸಾಧ್ಯವಾಗದಂತಿತ್ತು. ರವಿಶಂಕರ್ ಅವರು ಕುತೂಹಲ ತಡೆಯಲಾರದೇ ಕಾರಣ ಕೇಳಿದಾಗ ಆ ವ್ಯಕ್ತಿಯ ಉತ್ತರ ನಿಜಕ್ಕೂ ಆನಂದ ಮತ್ತು ಆಶ್ಚರ್ಯ ತರಿಸುವಂತಿತ್ತು.
ಅವರ ಉತ್ತರ, “ ಸೊಳ್ಳೆ ಹರಡದಿರಲಿ ಎಂದು ಹೀಗೆ ಜೋಡಿಸುತ್ತೇನೆ. ಚಿಪ್ಪನ್ನು ಅಂಗಾತ ಬಿಟ್ಟರೆ ಅದರಲ್ಲಿ ನೀರು ನಿಲ್ಲುತ್ತದೆ. ಸೊಳ್ಳೆಗಳ ವಾಸಕ್ಕೆ ಅಣಿ ಮಾಡಿಕೊಟ್ಟಂತಾಗುತ್ತದೆ. ಕೆಲವು ದಿನಗಳ ಹಿಂದೆ ಇಲ್ಲಿನ ಜನರನ್ನು ಮಲೇರಿಯಾ ಬೇರೆ ಕಾಡಿದೆ. ಮತ್ತೆ ನಾವೇ ಅದಕ್ಕೆ ದಾರಿ ಮಾಡಿಕೊಡಬಾರದಲ್ಲವೇ?” ಎಂಬುದು.
ಇವರ ಬಳಗಕ್ಕೆ ಆಶ್ಚರ್ಯ! ಮತ್ತೆ ಕೇಳಿದರು, “ಹೀಗೆ ಮಾಡಬೇಕೆಂದು ಸರ್ಕಾರ ಅಥವಾ ಯಾವುದಾದರೂ ಸಂಘ ಸಂಸ್ಥೆಗಳು ನಿಮಗೆ ತಿಳಿ ಹೇಳಿದವೇ?”
ಆ ವ್ಯಕ್ತಿ ನಕ್ಕು ಕೊಟ್ಟ ಉತ್ತರ, “ನಾವು ಹಾಕುವ ಕಸ ತೆಗೆಯಲು ಯಾರು ಯಾಕೆ ಹೇಳೀಕೊಡಬೇಕು?” ಹೀಗಿತ್ತು.
ಅವರು ಇದನ್ನು ಸ್ವಯಂಪ್ರೇರಣೆಯಿಂದ ಮಾಡುತ್ತಿದ್ದರು. ಅವರಿಗೆ ಇದರಿಂದ ಯಾವ ಲಾಭವೂ ಇಲ್ಲ. ಆದರೆ ಅವರಲ್ಲಿದ್ದ ಸಾಮಾಜಿಕ ಕಳಕಳಿ, ಸದುದ್ಧೇಶ ರವಿಶಂಕರ್ ಬಳಗವನ್ನು ಮೂಕ ವಿಸ್ಮಿತರನ್ನಾಗಿ ಮಾಡಿತಂತೆ. ನಾನೂ ಸಹಾ ಇದನ್ನು ಓದಿದಾಗ ಆ ಎಳನೀರು ಮಾರುವವರ ಬಗ್ಗೆ ಗೌರವ ತುಂಬಿದ ಚಿಂತನೆಯೊಂದಿಗೆ ಎಷ್ಟೋ ಹೊತ್ತು ದಂಗು ಬಡಿದವಳಂತೆ ಕುಳಿತಿದ್ದೆ.
ದೊಡ್ಡ ದೊಡ್ಡ ಉದ್ಯಮದವರು, “ನಮ್ಮ ಕಂಪೆನಿಗಳ ಸಾಮಾಜಿಕ ಜವಾಬ್ದಾರಿ ಹೆಚ್ಚು” ಎಂದು ಅತಿಯಾದ ಪರಿಸರ ಕಾಳಜಿ ಇರುವವರಂತೆ ಸೋಗು ಹಾಕಿಕೊಂಡು ಗಿಮಿಕ್ ಮಾಡುತ್ತಾರೆ. ಅವರೊಂದಿಗೆ ಎಳನೀರು ಮಾರುವ ಇವರನ್ನು ಹೋಲಿಸಿದಾಗ ಇವರು ಅದೆಷ್ಟು ಎತ್ತರದಲ್ಲಿ ನಿಲ್ಲುತ್ತಾರೆ ಅಲ್ಲವೇ?

Rating
No votes yet

Comments