ಶ್ಯಾಮಲಾ

ಶ್ಯಾಮಲಾ

ಇವತ್ತು ಸ್ವಲ್ಪ ತಂಪಾಗಿದೆ . ಇಲ್ದೆ ಇದ್ರೆ ಸುಡೋ ಉರಿಬಿಸ್ಲು ! ಅದೂ ಕಾರವಾರದ ಬಿಸಿಲು ಅಂದ್ರೆ ಕೇಳ್ಬೇಕಾ ? ಕಲ್ಲೂ ಕರ್ಗೋಗೋಷ್ಟು . ತಂಪಾದ ಗಾಳಿ ಬೇರೆ ಬೀಸ್ತಾ ಇದೆ. ಎಲ್ಲೋ ಮಳೆ ಆಗಿರ್ಬೇಕು . ಸಮುದ್ರ ಮಾತ್ರ , ಯಾರನ್ನೋ ಕಾಯ್ತಾ ಇರೊವ್ರ ತರ ಮೊರಿತಾ ಇದ್ದಿದ್ದು ಈಗ ಒಮ್ಮೆಗೆ ಭೋರ್ಗರೀತಾ ಇದೆ . ಅದ್ರ ಮೂಡ್ ನೊಡಿ ನಂಗೂ ಖುಶಿ ಆಯ್ತು.
ಬಿಸಿಲು ಬಿಡುವು ಕೊಟ್ಟಿದ್ದೇ ಕೊಟ್ಟಿದ್ದು , ಜನ ’ ಬೀಚಾ ವಚ್ಯಾ ರೇ !’ ಅಂತ ಮನೆಯಿಂದ ಹೊರಗೆ ಬಿದ್ರು . ಅವ್ರು ಬರ್ತಾರೆ ಅಂತಾನೇ ಅಂದಾಜು ಹಾಕಿ ಸರಿ ಹೊತ್ತಿಗೆ ತಮ್ಮ ಗಾಡಿ ಎಳ್ಕೊಂಡು ಪಾನಿಪೂರಿವಾಲಾಗಳು ಸಾಲಾಗಿ ಬಂದ್ರು . ನಾನು ಸುಮಾರು ಚಿಕ್ಕವ್ನಾಗಿದ್ದಾಗ್ಲೇ ಈ ಪಾನಿಪೂರಿಯವ್ರ ಪೂರ್ವಜರು ಉತ್ತರ ಭಾರತದಿಂದ , ಮುಂಬಯಿಯಿಂದ ಈ ಕಡೆ ವಲಸೆ ಬಂದ್ರು . ಅವ್ರು ಮಾಡೋ ಪಾವ್ ಭಾಜಿ , ಮಸಾಲಾ ಪೂರಿ, ಭೇಲ್ ಪೂರಿಗೆ ಸಿಕ್ಕಾಪಟ್ಟೆ ಡಿಮಾಂಡು , ನಮ್ ಕಾರವಾರದಲ್ಲಿ .
ನಾನು ನಿಂತಿರೋ ಜಾಗದಿಂದ ನನ್ ಬಲಗಡೆಗೆ ಯಾರೋ ಪರಿಚಯದವ್ರು ಮಹಿಳೆ ನಡ್ಕೊಂಡ್ ಹೊಗ್ತಾ ಇದ್ದಾರೆ. ಎಲ್ಲೋ ನೋಡಿದ ನೆನಪು! ಸ್ವಲ್ಪ ವಯಸ್ಸಾಗಿದೆ ಅದಿಕ್ಕೇ ಗುರುತು ಸಿಗ್ತಾ ಇಲ್ಲ. ಅವ್ರ ಜೊತೆ ಸುಮಾರು ೨೫ ರ ಒಬ್ಬ ಯುವಕ . ಅವ್ನ ಮುಖ ನೋಡಿದ್ ತಕ್ಷಣ ಆ ಮಹಿಳೆ ಯಾರು ಅಂತ ಗೊತ್ತಾಗೋಯ್ತು ! ಜೊತೆಗೆ ಎನೇನೋ ಹಳೇ ನೆನಪುಗಳು ! ಗಾಳಿ ತಂಪಾಗಿ ಬೀಸ್ತಾ ಇದ್ರೂ , ಒಂದ್ ತರಾ ಬಿಸಿ ಬೇಗೆ ಮೈಯಲ್ಲಿ . ಹೌದು! ಅವಳು ಶ್ಯಾಮಲಾ ! .. ಅದೇ ಚೂಪು ಮೂಗು, ಬೊಗಸೆ ಕಂಗಳು , ಕೂದಲು ನೆರೆದಿದ್ರೂ ಅದೇ ನುಣುಪು , ಹೊಳಪು. ಗಲ್ಲ ಸ್ವಲ್ಪ ಜೋತು ಬಿದ್ದಿದೆ. ಆದ್ರೂ ಅವ್ಳು ಅಷ್ಟೇ ಆಕರ್ಷಕವಾಗಿ ಕಾಣ್ಸ್ತಾಳೆ . ಪ್ರೀತಿ ಮಾಡೊವ್ರ ಕಣ್ಣೇ ಹಾಗೇನೋ ಬಹುಶಃ .!
ಈ ಶ್ಯಾಮಲಾ ಅಥವಾ ಶ್ಯಾಮಿ , ಒಂದ್ ಕಾಲದಲ್ಲಿ , ಅಂದ್ರೆ ನಾನು ಹಾಯ್ ಸ್ಕೂಲ್ ಒದ್ತಾ ಇರ್ ಬೇಕಿದ್ರೆ , ನನ್ ಕನಸಿನ ರಾಣಿ !. ನನ್ನ ತರಗತಿನೇ. ಆದ್ರೆ ಹುಡ್ಗೀರ ಸೆಕ್ಷನ್ ಬೇರೆ ಇತ್ತು . ನಾನು ನನ್ ಕ್ಲಾಸಲ್ಲಿ ಜಾಣ ಆದ್ರೆ , ಅವ್ಳು ಅವ್ಳ್ ಕ್ಲಾಸಲ್ಲಿ . ಅವ್ಳಿಗೆ ಸಂಗೀತ ಬೇರೆ ಬರ್ತಿತ್ತು . ನಾನು ಅವ್ಳನ್ನ ಎಷ್ಟು ಇಷ್ಟ ಪಡ್ತಿದ್ದೆ ಅಂತ ನನ್ ಕ್ಲಾಸ್ ಮೇಟ್ಸ್ ಗೆಲ್ಲಾ ಗೊತ್ತಿತ್ತು . ಅವ್ಳಿಗೂ ಗೊತ್ತಿಲ್ದೆ ಎನೂ ಇರ್ಲಿಲ್ಲ . ಕದ್ದು ಕದ್ದು ನೋಡೋದು , ನಗೋದು , ಹೀಗೆ ಬೇರೆ ಬೇರೆ ಸನ್ನೆ ಮಾಡೋದು ಎಲ್ಲಾ ನಡೀತಿತ್ತು. ಆದ್ರೆ ನಮ್ ಕಾಲ್ ದಲ್ಲಿ ಈಗ ಇರೋಷ್ಟು ಸ್ವಾತಂತ್ರ್ಯ ಇರ್ಲಿಲ್ಲ , ಹುಡ್ಗೀರಿಗಾಗ್ಲಿ , ಹುಡುಗ್ರಿಗಾಗ್ಲಿ . ನಮ್ ತರಾನೇ ಎಷ್ಟೊಂದ್ ಹುಡುಗ್ರು, ಹುಡ್ಗೀರು ಹೀಗೆ ಮನಸ್ಸಲ್ಲೇ ಮಂಡಿಗೆ ತಿಂತಿದ್ರು. ಹಾಯ್ ಸ್ಕೂಲಲ್ಲಿ ಎನೂ ಆಗಿಲ್ಲ , ಮುಂದೆ ಕಾಲೇಜು .
ಕಾಲೇಜು ಅಂದ್ರೆ ಸ್ವಲ್ಪ ಪರ್ವಾಗಿಲ್ಲ . ಆದ್ರೆ ಹುಡ್ಗೀರನ್ನ ಕಾಲೇಜಿಗೆ ಕಳ್ಸೊದೇ ಅಪರೂಪ ಆ ಕಾಲದಲ್ಲಿ . ಶ್ಯಾಮಲ ತಂದೆ ಲಾಯರ್ರು . ತಾಯಿ ಬೇರೆ ಓದಿದ್ರು . ಅದಿಕ್ಕೆ ಅವ್ಳ್ಗೂ ಕಾಲೇಜು ಮೆಟ್ಟಿಲು ಹತ್ತೋ ಅವಕಾಶ ಸಿಕ್ತು . ನಾನೂ ಸಿಕ್ಕಿದ್ದ ಅವಕಾಶ ಬಿಟ್ಟುಕೊಡಬಾರ್ದು ಅಂತ ಅವ್ಳನ್ನ ಮಾತಾಡ್ಸೋಕೆ ಪ್ರಯತ್ನ ಮಾಡ್ದೆ . ನಿಮ್ಗೇ ಗೊತ್ತಲ್ಲ ! ಪ್ರೀತ್ಸೋರ್ ಕಷ್ಟ !. ಪ್ರತಿ ಸಲ ಯೇನಾದ್ರೂ ಮಾತಾಡ್ಸ್ ಬೇಕು ಅಂತ ಹೋದಾಗ್ಲೆಲ್ಲಾ ಹೊಟ್ಟೆ ಉಡುಗಿಹೋಗಿ ಮಾತೇ ಹೊರಗೆ ಬರದೇ ಸುಮ್ನೆ ಪೆಕ್ರನ ತರಾ ನಿಂತ್ ಬಿಡ್ತಾ ಇದ್ದೆ. ಅವ್ಳು ಪಾಪ ಎರಡು ನಿಮಿಷ ಅಲ್ಲೇ ಸುಳಿದಾಡಿ , ಆಮೇಲೆ ನನ್ನ ಅಸಹಾಯಕತೆ ನೊಡಿ ಹೋಗಿಬಿಡೋವ್ಳು . ಒಳಗೊಳಗೇ ನಗ್ತಿದ್ಲೋ , ಅಥವಾ ತನ್ನ ಪುಕ್ಕಲು ಹೀರೋನ ನೊಡಿ ಕೋಪ ಮಾಡ್ಕೊತಿದ್ಲೋ ಗೊತ್ತಿಲ್ಲ. ಆದ್ರೆ ಅವ್ಳಿಗೂ ನನ್ನ ಬಗ್ಗೆ ಒಂದು ಭಾವನೆ ಇದ್ದಿದ್ದಂತೂ ನಿಜ. ಒಂದು ದಿನ ಅವ್ಳು ಲೈಬ್ರರಿ ಮೆಟ್ಟಿಲು ಇಳಿದು ಬರ್ತಾ ಇದ್ಲು . ಅದೇನೋ ಇದ್ದಕ್ಕಿದ್ದ ಹಾಗೆ ನನ್ನ ನೋಡಿ , ಒಂದು ಮುಗುಳ್ನಗೆ ನಕ್ಕಳು . ನನ್ನನ್ನೇ ಹಾಗೆ ದಿಟ್ಟಿಸಿ ನೋಡಿ ಏನೋ ಹೇಳ್ಬೇಕು ಅಂತ ಇದ್ದವ್ಳು , ಅಷ್ಟರಲ್ಲಿ ನಾನು ಮಹಾಪುರುಷ , ನಾಚಿಕೆಯಿಂದಾನೋ ಏನೋ ತಲೆ ತಗ್ಸಿಬಿಟ್ಟೆ. ಒಂದು ಕ್ಷಣ ಬಿಟ್ಟು ತಲೆ ಎತ್ತಿ ನೊಡಿದ್ರೆ , ಅವ್ಳು ಗಂಟು ಮೋರೆ ಹಾಕ್ಕೊಂಡು ಬೇರೆ ಕಡೆ ನೋಟ ಬೀರಿ ಧುಡು ಧುಡುನೆ ಹೋಗಿಬಿಟ್ಲು. ಛೀ ! ಈಗ್ಲೂ ಛೀಮಾರಿ ಹಾಕ್ಕೋತೀನಿ ನಂಗೆ ನಾನೇ.
ಇದಾದ ಒಂದು ವಾರ ಅವ್ಳು ನಂಗೆ ಕಾಣಿಸ್ಲೇ ಇಲ್ಲ ಕಾಲೇಜಲ್ಲಿ . ಆಮೇಲೆ ಗೊತ್ತಾಯ್ತು , ಅವ್ಳ ಮದುವೆ ನಿಶ್ಚಯ ಆಗಿದೆ ಅಂತ !...
ಒಂದು ದಿನ ಕೂತು ಅತ್ತೆ ! .

ನಾನೂ ಓದೊದ್ರಲ್ಲಿ ಸುಮಾರು ಚೆನ್ನಾಗೇ ಇದ್ದೆ . ಕಷ್ಟ ಪಟ್ಟು ಓದಿ , MA ಮಾಡ್ದೆ . ಆಮೇಲೆ IAS ; ನಂದೇ ಜಿಲ್ಲೆಗೆ ಕಮೀಷನರ್ ಆಗಿ ಬಂದೆ . ಅಪ್ಪ ಅಮ್ಮ ಮದುವೆ ಕೂಡ ಮಾಡಿದ್ರು. ಆದ್ರೂ ನನ್ನ್ ಮನಸ್ಸಿಂದ ’ಶ್ಯಾಮಿ’ ನ ಅಳ್ಸಿ ಹಾಕೋಕೆ ಆಗ್ಲೇ ಇಲ್ಲ . ಆಗಾಗೆ ಕಾಣಿಸ್ತಿದ್ಲು ಕಾರವಾರ ಪೇಟೇಲಿ, ದೀಪಾವಳಿ ಲಕ್ಷ್ಮಿ ಪೂಜೆ ಸಮಾರಂಭಗಳಲ್ಲಿ, ಗಣೇಶ ಚತುರ್ಥಿ ವಿಗ್ರಹ ಮುಳುಗಿಸೋ ಮೆರವಣಿಗೇಲಿ. ಅವ್ಳ ಗಂಡ ದೊಡ್ದ ವ್ಯಾಪಾರಿ . ಮನೇಲಿ ಪ್ರತೀ ವರ್ಷ ಗಣಪತಿ ವಿಗ್ರಹ ಕೂಡಿಸ್ತಿದ್ರು . ನನಗೆ ಆಹ್ವಾನನೂ ಬರ್ತಿತ್ತು . ಹೋಗೋಕೆ ಮನಸ್ಸು ಎಳೀತಿತ್ತು. ಆದ್ರೆ ಹೇಗೋ ಅದನ್ನ ತಡೀತಿದ್ದೆ . ಒಂದು ಸಲ ಹೋಗಿದ್ದೆ ಕೂಡ . ನಾನು ಅಲ್ಲಿ ಇರೋವಷ್ಟು ಹೊತ್ತೂ , ಶ್ಯಾಮಿ ದೇವರ ವಿಗ್ರಹದ ಹತ್ರದಿಂದ ಕದಲಲಿಲ್ಲ . ಅದೇ ಕೊನೇ ಸಲ ಅಲ್ಲಿಗೆ ಹೋಗಿದ್ದು . ಇನ್ನೂ ಆ ಲೈಬ್ರರಿ ಮೆಟ್ಟಿಲ ಮೇಲೆ ನಾನು ತೋರಿಸಿದ ಪೌರುಷ ನೆನಪಿಸ್ಕೊಂಡ್ರೆ ಕೋಪ ಬರುತ್ತೆ , ಅಳು ಬರುತ್ತೆ . ಆದರೆ ನನ್ನ ಈ ಭಾವ , ನಿಮ್ಮ ಕಣ್ಣಿಗೆ ಬೀಳ್ದೆ ಇರೋವಷ್ಟು , ಕಿವಿಗೆ ಕೇಳ್ದೆ ಇರೋವಷ್ಟು , ಕ್ಷೀಣ , ..... ನಿರ್ಜೀವ . ನಾನೊಂದು ಪ್ರತಿಮೆ !.. ಕಗ್ಗಲ್ಲ ಕೆತ್ತಿ ಮಾಡಿರೋ ಗೊಂಬೆ ! ಕಾರವಾರದ ಪ್ರಜೆ ತಮ್ಮದೇ ಊರಿನ ಒಬ್ಬ ಗಣ್ಯ ವ್ಯಕ್ತಿ ಯನ್ನು ನೆನಪಿಸಿಕೊಳ್ಳೋಕೆ ಮಾಡಿರೋ ಸಂಕೇತ ..
" ದಿವಂಗತ ಮಹಾಪೌರ ವಿನಾಯಕ ರಾಯ್ಕರ್ , ಮಾಜಿ ಕಮೀಷನರ್ , ಉತ್ತರ ಕನ್ನಡ ಜಿಲ್ಲೆ , ೧೯೮೦ - ೯೫ ಇವರ ಸ್ಮರಣಾರ್ಥದಲ್ಲಿ "
ಶ್ಯಾಮಿ ಹೊರಟು ನಿಂತ್ಲು . ಸೀರೆಗೆ ಅಂಟಿದ್ದ ಉಸುಕು ಕೊಡವಿ ಮಗನ ಕೈ ಹಿಡಿದು ಎದ್ದು ನಿಂತಳು . ನಿಧಾನವಾಗಿ ನಡೀತಾ ನನ್ನ ಬಲಗಣ್ಣಿಗೆ ಸ್ಫುಟವಾಗಿ ಕಾಣಿಸಿದ್ಲು . ಅದೇ ಕಣ್ಣುಗಳು , ೨೫ ವರ್ಷದ ಕೆಳಗೆ ಆ ಲೈಬ್ರರಿ ಮೆಟ್ಟಿಲು ಇಳೀಬೇಕಿದ್ರೆ ಹೇಗೆ ನೋಡಿದ್ಲೋ ಹಾಗೇ ಒಂದಸರ್ತಿ ನನ್ನ ನೋಡಿದ್ಲು.
’ ನಾಚ್ಕೆ ಆದ್ರೂ ತಲೆ ತಗ್ಸೋಕೆ ಆಗೊಲ್ಲ ಶ್ಯಾಮೀ ’ ..

Rating
No votes yet

Comments