ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?

ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?

"ಇಲ್ಲೇ ಸ್ವರ್ಗ, ಇಲ್ಲೇ ನರಕ, ಬೇರೇನಿಲ್ಲಾ ಸುಳ್ಳು, ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು" ಅಂಥ 80ರ ದಶಕದ ಒಂದು ಫಿಲಾಸಫಿಕಲ್ ಕನ್ನಡ ಹಾಡೊಂದಿದೆ. ಕೇಳಿದ್ದೀರಾ?

ಸ್ವರ್ಗ ನರಕಗಳು, ದೇವರು ದೆವ್ವಗಳು ಎಲ್ಲವೂ ಮನುಷ್ಯನ ಕಲ್ಪನೆಗಳು ಎಂಬುದು ಸತ್ಯವೇ ಆದರೂ, ಇಲ್ಲ ಅದೆಲ್ಲವೂ ನಿಜವಾಗಿಯೂ ಇದೆ ಎಂದು ನಂಬುವ ಮಾನವರ ಸಂಖ್ಯೆಯೇ ಹೆಚ್ಚು. ಆದರೆ, ನೋಡಿರುವವರು ಯಾರಾದರನ್ನು ನೀವು ಬಲ್ಲಿರಾ?

ಅಂತಹ ಒಬ್ಬನು ಇಲ್ಲಿದ್ದಾನೆ, ಓದಿ ತಿಳಿದುಕೊಳ್ಳಿ.

ಇದೇನೂ ಒಂದಾನೊಂದು ಕಾಲದಲ್ಲಿ ನಡೆದ ಕತೆಯಲ್ಲ. ತುಂಬಾ ಲೇಟೆಸ್ಟು.

ಆ ಮನುಷ್ಯ ತಾನು ಸತ್ತು ನರಕಕ್ಕೆ ಹೋಗಿದ್ದನ್ನ ಹೇಗೆ ವಿವರಿಸ್ತಾನೆ ಅಂತ ಕೇಳೋಣ ಬನ್ನಿ. 'ಅವನು' ಯಾರಾದರೂ ಆಗಿರಬಹುದು.

ನನಗೊಮ್ಮೆ ಸಾವಿನ ಬಯಕೆಯುಂಟಾಯಿತು. ಸರಿ ನೋಡೇ ಬಿಡುವಾ ಎಂದುಕೊಂಡು ಧೈರ್ಯದಿಂದ ಪ್ರಾಣ ತ್ಯಜಿಸಿದೆ. ಬದುಕಿದ್ದಾಗ ಸಾಕಷ್ಟು ಎಲ್ಲಾ ಮನುಷ್ಯರ ಹಾಗೆ ಸಾಕಷ್ಟು 'ಪುಣ್ಯ'ದ ಕೆಲಸ ಮಾಡಿದ್ದೆ ಅದನ್ನು ಕೇಳಿದರೆ, ನೀವು ಕೂಡ ನನ್ನಷ್ಟೇ ಪುಣ್ಯವನ್ನು ಗಳಿಸಿಕೊಂಡುಬಿಡುತ್ತೀರಿ. ಆ ಕಾರಣಕ್ಕಾಗಿ ಅದನ್ನೆಲ್ಲಾ ವಿವರಿಸಹೋಗದೆ, ನೇರವಾಗಿ ವಿಷಯಕ್ಕೆ ಬರುತ್ತೇನೆ.

ಸತ್ತವನೇ ಸೀದಾ "ಯಮಲೋಕ"ಕ್ಕೆ ತೆರಳಿದೆ. ಏನಾಶ್ಚರ್ಯ ನಾನು ಭೂಲೋಕದಲ್ಲಿದ್ದಾಗಲೂ ಸಹ ನನ್ನ ದೇಶ ಭಾರತ ಬಿಟ್ಟು ಯಾವ ದೇಶಕ್ಕೂ ಹೋದವನಲ್ಲ. ಅಂತಹಾ ದೇಶಪ್ರೇಮ ನನ್ನದು ಅಂತಹದರಲ್ಲಿ ಇಲ್ಲಿ ಒಂದೊಂದು ದೇಶದವರಿಗೆ ಒಂದೊಂದು "ನರಕ" ಇದೆಯಂತೆ. ಇಲ್ಲೂ ಕೂಡ ಗಡಿವಿವಾದಗಳು ಉಂಟಾಗ್ತವೋ ಏನೋ ವಿಚಾರಿಸಬೇಕು. ಅಂದಹಾಗೆ ಈ "ನರಕ" ಎಂದರೆ ಏನು ಎಂಬುದು ತಮಗೆ ತಿಳಿದಿದೆಯೇ? ಅದು ಇಂಗ್ಲೀಶ್ ನಲ್ಲಿ ಎರಡು ಪದ ಸೇರಿಸಿ ಒಂದು ಪದ ಮಾಡ್ತಾರಲ್ಲಾ ಅಂಥದ್ದು. ನನಗೆ ಗೊತ್ತಿರೋ ಕನ್ನಡ ವ್ಯಾಕರಣದ ಪ್ರಕಾರ 'ಸಂಧಿ'. ಹೇಗೆ ಅಂತೀರಾ? ನರ ಲೋಕ ಸಂಧಿಯಾಗಲು ಸೇರಿದಾಗ, 'ಲೋ' ಅನ್ನೋದು ಲೋಪ ಆಗಿ 'ನರಕ' ಅನ್ನೋ ಸಂಧಿಯಾಗಿದೆ ಗೊತ್ತಾ? ಯಾಕೋ ನಮ್ಮ ದೇಶದ ರಾಜಕಾರಣಿಗಳ ಹಾಗೆ, ಭಾಷಣ ಕೊಡೋದಕ್ಕೆ ಶುರು ಮಾಡ್ಬಿಟ್ನಾ? ಏನು ಮಾಡೋಕಾಗುತ್ತೆ, ನಾನು ರಾಜಕಾರಣಿಯಾಗ್ಬೇಕು ಅಂತಾನೆ ಇದ್ದೆ ಅಷ್ಟರಲ್ಲಿ...

ಹುಂ, ಈಗ ವಿಷಯಕ್ಕೆ ಬರ್ತೀನಿ. ಇಲ್ಲಿ ಮೊದಲು ನಾನು ಹೋಗಿದ್ದು, ಹಿಟ್ಲರ್ ಆಳಿದ್ನಲ್ಲಾ, ಆ ದೇಶವಾದ ಜರ್ಮನಿ ಅನ್ನೋ ನರಕಕ್ಕೆ. ಅಲ್ಲಿಗೆ ಹೋದವನೆ ಕೇಳಿದೆ, ಇಲ್ಲಿ ಏನ್ ಮಾಡ್ತಾರೆ?

ಇಲ್ಲಿ ಮೊದಲು, ಮೊದಲು ಅವರು ಮನುಷ್ಯರನ್ನ ಎಲೆಕ್ಟ್ರಿಕ್ ಕುರ್ಚಿಗೆ ಒಂದು ಗಂಟೆ ಕಟ್ಟಿ ಹಾಕ್ತಾರೆ. ಆನಂತರ, ಮತ್ತೊಂದು ಗಂಟೆ ಮೊಳೆಗಳ ಮಂಚದ ಮೇಲೆ ಮಲಗಿಸ್ತಾರೆ ಅಂದ್ರು. ಆಗಂದಿದ್ದೆ, ನನಗೆ 'ಮಹಾಭಾರತ'ದ ಭೀಷ್ಮನ ಶರಶಯ್ಯೆಯೂ, ನನ್ನ ನೆಚ್ಚಿನ ಕವಿಗಳಾದ ಶ್ರೀ ಗೋಪಾಲಕೃಷ್ಣ ಅಡಿಗರ ಪ್ರಸಿದ್ಧ "ಯಾವ ಮೋಹನ ಮುರಳಿ ಕರೆಯಿತು..."ಪದ್ಯದ "ಮೊಳೆಯ ಧರೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ" ನೆನಪಾಗಿ ಕಣ್ಣೀರ ಕೋಡಿ ಹರಿಯಿತು. ಅವರು ಮುಂದುವರಿದು ಹೇಳಿದ್ರು, ಆನಂತರ ಜರ್ಮನ್ ದೆವ್ವ ಬಂದು ಇನ್ನುಳಿದ ದಿನವಿಡೀ ಹೊಡೆಯುತ್ತೆ ಅಂದ್ರು. ಆಗ ಅದು ಹಿಟ್ಲರ್ ಇರಬೇಕು ಅನ್ಸಿ ಭಯವಾಯ್ತು.

ಅದಕ್ಕೆ ನಾನು ಮುಂದಕ್ಕೆ ಹೋದೆ, ಅಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ, ರಷ್ಯಾ ಮುಂತಾದ ದೇಶಗಳ ನರಕ ಸಿಕ್ತು....ಆದರೆ, ಅವೆಲ್ಲವೂ ಜರ್ಮನ್ ನರಕದ ಪ್ರತಿರೂಪದಂತೆ ಇದ್ದವು.

ಆಗ ಬೇಜಾರಾಗಿ, ಏನೇ ಆಗಲಿ, ನಮ್ಮ ದೇಶಾನೆ ಸರಿ. ಅಲ್ಲಿ ಇನ್ನೂ ಕರುಣೆ, ಅನುಕಂಪ ಉಳಿದುಕೊಂಡಿದೆ ಅಂದುಕೊಂಡು ಅಲ್ಲಿಗೇ ಹೋದೆ. ಆದರೆ, ಅಲ್ಲಿ ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಕಾಣಸಿಗುವಂತೆ ಒಂದು ದೊಡ್ಡ ಸಾಲು ನಿಂತಿತ್ತು. ಇದೇನಪ್ಪಾ, ನರಕದಲ್ಲೂ ಸಾಲೇ..ಅಂತ ನಂಗೆ ಬೇಜಾರಾಯಿತು. ಏನೂ ಮಾಡೋಕಾಗೊಲ್ಲ, ನಮ್ಮ ದೇಶದಲ್ಲಿ ಜನಸಂಖ್ಯೆ ಜಾಸ್ತಿ ಅಂತ ಸಮಾಧಾನ ಪಟ್ಟುಕೊಂಡು, ಅಲ್ಲಿ ಹೋಗಿ ಒಬ್ಬರನ್ನು ಕೇಳಿದೆ.

ಆತ ಹೇಳಿದ, ಮೊದಲು ಅವರು ಮನುಷ್ಯರನ್ನ ಎಲೆಕ್ಟ್ರಿಕ್ ಕುರ್ಚಿಗೆ ಒಂದು ಗಂಟೆ ಕಟ್ಟಿ ಹಾಕ್ತಾರೆ. ಆನಂತರ, ಮತ್ತೊಂದು ಗಂಟೆ ಮೊಳೆಗಳ ಮಂಚದ ಮೇಲೆ ಮಲಗಿಸ್ತಾರೆ ಅಂದ್ರು. ಆನಂತರ ಭಾರತೀಯ ದೆವ್ವ ಬಂದು ಇನ್ನುಳಿದ ದಿನವಿಡೀ ಹೊಡೆಯುತ್ತೆ ಅಂದ್ರು. ಆಗ ನಮ್ಮ ದೇಶದಲ್ಲಿ ಯಾರೂ ಹಿಟ್ಲರ್ ತರ ಸರ್ವಾಧಿಕಾರಿಗಳು ಇಲ್ವಲ್ಲ ಎಂದುಕೊಂಡು, ಇಲ್ಲಿಯೂ ಯಾಕೆ ಅದೇ ತರ ಶಿಕ್ಷೆ, ಆದರೆ ಅಂತಹ ಶಿಕ್ಷೆ ಅನುಭವಿಸೋದಕ್ಕೆ ಯಾಕೆ ಇಷ್ಟು ದೊಡ್ಡ ಸಾಲು ಅಂತ ಅನುಮಾನ ಸುರುವಾಗಿ, ಕೇಳೇಬಿಟ್ಟೇ.

ಅದಕ್ಕೆ ಅವರು, ಇಲ್ಲಿಯ ನಿರ್ವಹಣೆ ಹೇಗಿದೆ ಅಂದರೆ, ಎಲೆಕ್ಟ್ರಿಕ್ ಕುರ್ಚಿ ಕೆಲಸ ಮಾಡೋದಿಲ್ಲ, ಯಾರೋ ರಾತ್ರೋ ರಾತ್ರಿ ಹಾಸಿಗೆಯಿಂದ ಮೊಳೆಗಳನ್ನು ಬಿಚ್ಚಿಕೊಂಡು ಹೋಗಿದ್ದಾರೆ. ಆ ಮೇಲೆ ಇಲ್ಲಿ ಕರ್ತವ್ಯ ನಿರ್ವಹಿಸೋ ಅಧಿಕಾರಿ ಮಾಜಿ ಸರಕಾರಿ ಸೇವಕ, ಅದಕ್ಕೆ ಆತ ದಿನಾಲೂ ಬರ್ತಾನೆ, ರಿಜಿಸ್ಟರ್ ಗೆ ಸೈನ್ ಹಾಕ್ತಾನೆ, ಆ ಮೇಲೆ ಯಥಾಪ್ರಕಾರ ಕ್ಯಾಂಟೀನ್ ಗೆ ಹೋಗಿಬಿಡ್ತಾನೆ, ಅದಕ್ಕೆ ಇಲ್ಲಿ ಇಷ್ಟು ದೊಡ್ಡ ಸಾಲು ಅಂತ ಹೇಳಿದ್ರು. ಇದನ್ನು ಕೇಳಿ ನಂಗಂತೂ ಹೋದ ಜೀವ ಮರಳಿ ಬಂದ ಹಾಗೆ ಆಯ್ತು. ಶಿಕ್ಷೆಯಿಂದ ಹೇಗಾದ್ರೂ ಪಾರಾಗ್ಬೇಕು ಅಂದುಬಿಟ್ಟು, ಆತನನ್ನು ಕಂಡು ಜೇಬಿಗೆಒಂದಷ್ಟು ಸೇರಿಸಿದ್ರೆ, ಇಲ್ಲಿಂದ ಪಾರಾಗ್ಬೋದು! ಯಾಕಂದ್ರೆ, ನಾನು ಯಾವಾಗ್ಲೋ ಇಲ್ಲಿಗೆ ಬರಬೇಕಿತ್ತು. ಅಲ್ಲಿ ಭೂಲೋಕದಲ್ಲಿ ಲಂಚ ಕೊಟ್ಟಿದ್ದಕ್ಕೆ ಇಷ್ಟು ತಡವಾಯ್ತು,ಎಷ್ಟೇ ಆಗಲಿ ನಮ್ಮ ದೇಶದವರು ತಾನೇ? ಅಲ್ಲಿಯೇ ನಡೆಯುತ್ತೆ ಅಂದ್ಮೇಲೆ...

Rating
No votes yet

Comments