ಗೀತ ಗೋವಿಂದ
ನಾನು ಆಗ ಮೊದಲ ಪದವಿ ಪೂರ್ವ (೧೧ನೇ) ತರಗತಿ ಎಂದು ನೆನಪು. "ಹಂಸಗೀತೆ" ಚಿತ್ರದಲ್ಲಿ ಬಾಲಮುರಳಿಯ ಗೀತಗೋವಿಂದದ ಹಾಡುಗಳನ್ನು ಕೇಳಿ ಪುಳಕಿತನಾಗಿದ್ದೆ. ಸರಿ ಗೀತ ಗೀತ-ಗೋವಿಂದದ ಪುಸ್ತಕಕ್ಕೆ ಹುಡುಕತೊಡಗಿದೆ. ನನ್ನ ಅಜ್ಜಿಯ ಬಳಿ ಗೀತಗೋವಿಂದ ಓದಬೇಕು ಎಂದಾಗ ಅಷ್ಟು ದೊಡ್ಡವನಾಗಿದ್ದೀಯಾ ಎಂದು ನಕ್ಕಿದ್ದರು. ಪುಸ್ತಕವೇನೋ ಸಿಕ್ಕಿತು ಆದರೆ ನನ್ನ ಸೋಮಾರಿತನ ಪುಸ್ತಕವನ್ನು ಮೂಲೆಗೆ ಸರಿಸಿತು. ಮೊನ್ನೆ ಸಂಜಯ್ ಸುಬ್ರಹ್ಮಣ್ಯಂ ಅವರ ಕಛೇರಿ ಕೇಳಿದ ನಂತರ ಆಸಕ್ತಿ ಕೆರಳಿತು. ಅದನ್ನು ಸಂಪದದಲ್ಲಿ ಯಾವ ವರ್ಗಕ್ಕೆ ಸೇರಿಸಬೇಕು ಎಂದು ತೋರದೆ ನನ್ನ ಬ್ಲಾಗಿಗೆ ಹಾಕಲು ನಿರ್ಧರಿಸಿದೆ. ಯಾವ ವರ್ಗಕ್ಕೆ ಸೂಕ್ತ ಎಂದು ತಿಳಿಸಿದರೆ ಅಲ್ಲಿಗೆ ಸೇರಿಸಲು ಸಿದ್ಧ. (ಅಥವಾ ಇದು ಸಂಪದಕ್ಕೆ ಹಾಕಲು ಸೂಕ್ತವೇ ಅಲ್ಲವೇ ಎಂದೂ ತಿಳಿಸಿದರೆ ಒಳ್ಳೆಯದು)
ಗೀತ ಗೋವಿಂದ ಕೃಷ್ಣ-ರಾಧೆಯರ ಪ್ರಣಯ ಕಥನವೇ ಅಥವಾ ಜಯದೇವ-ಪದ್ಮಾವತಿಯರ(೧) ದಾಂಪತ್ಯಗಾನವೇ ಅಥವಾ ಆತ್ಮ ಪರಮಾತ್ಮನನ್ನು ಸೇರಲು ತವಕಿಸುವ ಕಾವ್ಯ ಸರಣಿಯೇ?? ಗೀತ ಗೋವಿಂದದ ಅಷ್ಟಪದಿಗಳನ್ನು ಕೇಳಿದವರಿಗೆ ಈ ಸಂದೇಹ ಬಂದೇ ಬರುತ್ತದೆ. ಉದ್ದೇಶ ಯಾವುದೇ ಇದ್ದರೂ ಗೀತಗೋವಿಂದ ಕವಿಯ ದೃಷ್ಟಿಯಿಂದ ಮನಸ್ಸನ್ನು ಯಮುನೆಯ ತೀರಗಳಿಗೆ ಕರೆದೊಯ್ದು ಮುರಳೀಲೋಲನ ಮುರಳಿಗಾನ ಕೇಳಬೇಕೆನಿಸುವಂತೆ ಮಾಡುವ ಕಾವ್ಯ.
ಈ ಕೃತಿ ೧೨ ಅಧ್ಯಾಯಗಳಲ್ಲಿದೆ. ಒಟ್ಟು ಗೀತಗೋವಿಂದದಲ್ಲಿ ೨೪ ಅಷ್ಟಪದಿಗಳಿವೆ. ಮೊದಲ ಶ್ಲೋಕ ಗೀತಗೋವಿಂದದ ಒಟ್ಟು ಒಕ್ಕಣೆ ಕೊಡುತ್ತದೆ.
ಮೇಘೈರ್ಮೆಧುರಾಂಬರಂ ವನಭುವಃ ಶ್ಯಾಮಾಸ್ತಮಾಲಾದ್ರುಮೈಃ
ನಕ್ತಂ ಭೀರುರಯಂ ತ್ವಮೇವ ತದಿಮಂ ರಾಧೇ ಗೃಹಂ ಪ್ರಾಪಯ|
ಇತ್ಥಂ ನಂದನಿದೇಶಿತಶ್ಚಲಿತಯೋಃ ಪ್ರತ್ಯದ್ವಕುಂಜಮದ್ರುಮಂ
ರಾಧಾಮಾಧವಯೋರ್ಜಯಂತಿ ಯಮುನಾಕೂಲೆ ರಃಕೇಳಯಃ ||
ಸ್ಥೂಲಾರ್ಥ : ಹೇ ರಾಧೇ, ಆಗಸವು ಮೋಡಗಳಿಂದ ದಟ್ಟವಾಗುತ್ತಿದ್ದು ತಮಾಲ ವೃಕ್ಷಗಳು ಕಾನನವನ್ನು ಕಪ್ಪಾಗಿಸುತ್ತಿವೆ, ರಾತ್ರಿ ಬೇಗನೆ ಕವಿಯುತ್ತಿದೆ. ಈ ನಾಚಿಕೆ ಸ್ವಭಾವದವನಾದ ಇವನನ್ನು (ಕೃಷ್ಣನನ್ನು) ನೀನೇ ಮನೆಗೆ ಕರೆದೊಯ್ಯಬೇಕು. ಹೀಗೆ ನಂದನಿಂದ ಕೇಳಿಕೊಳ್ಳಲ್ಪಟ್ಟ ರಾಧೆಯು ಮಾಧವನನ್ನು ಕರೆದೊಯ್ಯುವಾಗ ಯಮುನಾ ತೀರದ ಪ್ರತಿಯೊಂದು ಘಟ್ಟದಲ್ಲೂ ಪ್ರತಿ ಮರಬಳ್ಳಿಗಳಲ್ಲೂ ಪ್ರಣಯಕೇಳಿಯು ವಿಜ್ರಂಭಿಸುತ್ತದೆ.
ಇದು ಜಯದೇವ ತನ್ನ ಕೃತಿಗೆ ಕೊಡುವ ಪ್ರಾರಂಭ,ಒಕ್ಕಣೆ!!!!!!!!!. ಸ್ಥೂಲಾರ್ಥ ಹೀಗಾದರೆ ಈ ಪದ್ಯಕ್ಕೆ ಅನೇಕ ಅರ್ಥಗಳನ್ನು ಕೊಡಬಹುದು!!!. ಈ ಮೊದಲನೆ ಪದ್ಯ ಕೇಳಿ ಜಯದೇವನ ಸೋದರಮಾವ ದೈವದ್ರೋಹಿ ಎಂದು ಜಯದೇವನನ್ನು ಖಂಡಿಸಿದನಂತೆ.ಜಯದೇವನಿಗೆ ಕೃಷ್ಣ ರಾಧೆಯರ (ಪ್ರಕೃತಿ-ಪರಮಾತ್ಮ??) ಪ್ರಣಯವೇ ಪ್ರಾರ್ಥನೆ ಆಗಿತ್ತು ಎಂಬುದು ಗಮನಿಸಬೇಕಾದ ಅಂಶ. ಸೋದರಮಾವನಿಂದ ಖಂಡನೆಗೊಳಗಾದ ಮೇಲೆ ಜಯದೇವನು ತನ್ನ ಎರಡನೇ ಶ್ಲೋಕದಲ್ಲಿ ಸರಸ್ವತಿಯ ಪ್ರಾರ್ಥನೆಯಿಂದ ತನ್ನ ಗೀತ-ಗೋವಿಂದ ಅಧಿಕೃತವಾಗಿ ಆರಂಭಿಸುತ್ತಾನೆ.
೧ - ಪದ್ಮಾವತಿ ಜಯದೇನ ಪತ್ನಿ.. ಪುರಿ ಜಗನ್ನಾಥ ದೇಗುಲದಲ್ಲಿ ನರ್ತಕಿ
Comments
ಉ:ಗೀತ ಗೋವಿಂದ