ನನ್ನಿ

ನನ್ನಿ

Comments

ಬರಹ

ನನ್ನಿ (ನಾಮಪದ) [ತಮಿಳು: ನನ್ಱಿ, ನನ್ಱು ಮಲಯಾಳ, ತೆಲುಗು: ನನ್ನಿ]

೧. ಸಹಜವಾದುದು; ವಾಸ್ತವವಾದುದು; ಸತ್ಯ; ದಿಟ; ನಿಜ; ನಿಶ್ಚಯ.
(ನನ್ನಿಯನೀ ಪಲ್ಲವಮೆನೆ ಸನ್ನುತುಫೊಂ ವಿಪರ್ಯಯೋಪಮಮಕ್ಕುಂ-ಕವಿರಾಜಮಾರ್ಗ; ಚಲದೊಳ್ ದುರ್ಯೋಧನಂ ನನ್ನಿಯೊಳ್ ಇನತನಯಂ-ಪಂಪಭಾರತ; ಅನೃತಂ ಲೋಭಂ ಭಯಮೆಂಬಿನಿತುಂ ನೀನಿರ್ದ ನಾಡೊಳಿರ್ಕುಮೇ ರವಿನಂದನ ನನ್ನಿ ಚಾಗಮಂಬೆಣ್ಮಿನಿತರ್ಕಂ ನೀನೇ ಮೊತ್ತಮೊದಲಿನಾದೈ-ಗದಾಯುದ್ದ; ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ)

೨. ಸತ್ಯವಂತಿಕೆ; ಸತ್ಯಸಂಧತೆ
(ನೆನೆಯದಿರಣ್ಣ ಭಾರತದೊಳಿಂ ಪೆಱರಾರುಮನೊಂದೆ ಚಿತ್ತದಿ ನೆನೆವೊಡೆ ಕರ್ಣನಂ ನೆನೆಯ . . . ಕರ್ಣನ ಕಡುನನ್ನಿ-ಪಂಪಭಾರತ; ನನ್ನಿ ವಿನಯಂ ನಯಂ ಜಯಮುನ್ನತಧೃತಿ ಸತ್ವಮೆಂಬ ರಾಜಗುಣಂಗಳ್-ಲೀಲಾವತೀಪುರಾಣ)

೩. ಅಕ್ಕರೆ; ಪ್ರೀತಿ; ವಿಶ್ವಾಸ
(ಎಂತು ಸೈರಿಪರೋ ಕಾಂತನೊಳ್ನನ್ನಿಯುಳ್ಳರಸಿಯರ್‍-ಜೈಮಿನಿಭಾರತ)

೪. ಕೊಟ್ಟಮಾತು; ಭಾಷೆ; ವಚನ; ಪ್ರತಿಜ್ಞೆ
(ಮುಸುರುವ ನನ್ನಿಗಳ ನಾಯಕರ್‍ ಪೆಱರೊಳರೇ-ರಾಜಶೇಖರವಿಳಾಸ)

೫. ಒಳ್ಳೆಯದು; ಸರಿಯಾದುದು; ಸಮಂಜಸವಾದುದು
(ಇದಿರನಱಿಯದೆ ಹೋರುವುದು ನನ್ನಿಯೇ-ಜಯಕಾ)

೬. ಚೆಲುವು; ಅಂದ; ಸೌಂದರ್ಯ

(ನನ್ನಿ ಕಂದರ್ಪ=ನಿಜ ಮನ್ಮಥ; ನನ್ನಿಗಾಶ್ರಯಂ=ಸತ್ಯಕ್ಕೆ ಆಶ್ರಯ; ನನ್ನಿಚಳುಕಿ=ಸತ್ಯವಂತನಾದ ಚಾಲುಕ್ಯ; ನನ್ನಿ ನಾರಾಯಣ; ನನ್ನಿ ಮಹಾರ್ಣವ; ನನ್ನಿ ಮಾರ್ತಂಡ; ನನ್ನಿಯ ಮೇರು; ನನ್ನಿಕಾಱ=ಸತ್ಯವಂತ; ನನ್ನಿಗೆಡು=ಮಾತಿಗೆ ತಪ್ಪು; ನನ್ನಿಗೆಯ್=ಸಾಬೀತುಪಡಿಸು; ನನ್ನಿಗೊಡು=ಭಾಷೆಕೊಡು; ನನ್ನಿಗೊಳ್=ಪ್ರತಿಜ್ಞೆಯನ್ನು ಪಡೆ; ನನ್ನಿದಪ್ಪು=ಮಾತು ತಪ್ಪು; ನನ್ನಿ ನುಡಿ=ದಿಟವನ್ನು ನುಡಿ; ನನ್ನಿವಂತ=ಧರ್ಮಿಷ್ಟ; ನನ್ನಿವಾತು=ಪ್ರತಿಜ್ಞೆಯ ನುಡಿ; ನನ್ನಿವೇೞ್=ಸತ್ಯವನ್ನು ನುಡಿ)

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet