ವಿಶ್ವಾಸಮತ: ಆನೆಗೆ ಅನ್ಯಾಯ!
(ನಗೆ ನಗಾರಿ ರಾಜಕೀಯ ಬ್ಯೂರೋ)
ಕೇಂದ್ರದಲ್ಲಿ ಅಣುಮಾನ, ಅಣುನಯನ, ಅಣುರಾಗಗಳಿಂದಾಗಿ ಯು.ಪಿ.ಎ ಸರ್ಕಾರದ ಬುಡ ಅಲ್ಲಾಡಿ ಹೋಗಿ ಜಂಗಲ್ ರಾಜ್‌ನಲ್ಲಿನ ಕುರ್ಚಿಯಿಂದ ಸಿಂಗರ್ರು ಕೆಳಕ್ಕೆ ಜಿಗಿಯಬೇಕಾದ ಸಂದರ್ಭ ಬಂದದ್ದೂ, ಅನಂತರ ಅಂಬಾನಿಗಳ ಅಂಬಾರಿಯೂ, ಅಮರ ಸಿಂಗನ ಸಂಗವೂ ಮಾಡಿದ ಮ್ಯಾಜಿಕ್ಕಿನಿಂದ ಕಾಂಗ್ರೆಸ್ ಪಕ್ಷ ಕಾಸು, ಮಂತ್ರಿ ಸ್ಥಾನಗಳು, ಮಾನ - ಮರ್ಯಾದೆ ಎಲ್ಲವನ್ನೂ ಕಳೆದುಕೊಂಡು ಕಡೆಯ ಪಕ್ಷ ಅಧಿಕಾರವೊಂದನ್ನು ಉಳಿಸಿಕೊಂಡು ಬೀಗುತ್ತಿದ್ದು ಸಾಮ್ರಾಟರು ಅಭಿನಂದಿಸಲು ತೆರಳಿದ್ದಾಗ ಸ್ಯಾಂಪಲ್ಲಿಗೆ ಸ್ವೀಟು ಕೊಡಲು ಕಾಂಗ್ರೆಸ್ಸಿನ ಪಾರ್ಟಿಯಲ್ಲಿ ಫಂಡಿನ ಕೊರತೆ ಉದ್ಭವಿಸಿದ್ದು ಸಾಮ್ರಾಟರಿಗೆ ತೀವ್ರ ನಿರಾಶೆಯನ್ನು ಉಂಟು ಮಾಡಿತು. ಸರಕಾರದ ಡೋಲಾಯಮಾನ ಸ್ಥಿತಿ, ಬೀಳುವುದರಿಂದ ತಪ್ಪಿಸಿಕೊಳ್ಳುವಲ್ಲಿ ಅದು ಮಾಡಿದ ಮಹಾಪಲಾಯನದ ವೃತ್ತಾಂತವನ್ನು ಸಮಸ್ತ ಜನರು ಇತರ ಮಾಧ್ಯಮಗಳಲ್ಲಿ ತಲೆ ಕೊರೆಯುವವರೆಗೂ ಪಡೆದುಕೊಂಡಿರುವುದರಿಂದ ಸಾಮ್ರಾಟರು ಯಾರಿಗೂ ಸಿಕ್ಕದ, ದಕ್ಕದ ಸ್ಕೂಪ್ ಹೊತ್ತು ಬಂದಿದ್ದಾರೆ.
ಭಾರತದ ಕಂಠಭಾಗದ ನವ ದೆಹಲಿಯಲ್ಲಿ ಮನಮೋಹನ ಸಿಂಗರ್‌ನ ಕುರ್ಚಿ ಭದ್ರವಾಗುತ್ತಿದ್ದ ಹಾಗೆಯೇ ಇತ್ತ ಭಾರತದ ಸೊಂಟದ ಭಾಗದಲ್ಲಿ ಕೋಲಾಹಲ ಉಂಟಾದದ್ದು ಯಾರ ಗಮನಕ್ಕೂ ಬರಲಿಲ್ಲ. ಮಾಯಾ ಜಾಲ ಪ್ರವೀಣೆ, ಕೆಳ ವರ್ಗದ ಮೇಲ್ಮಟ್ಟದ ಮಹಿಳೆ ಪ್ರಧಾನಿಯಾಗುವ ಕನಸನ್ನು ಕಂಡು, ಕನಸು ಕಂಡ ಮೇಲೆ ಸುಮ್ಮನೆ ಕಣ್ಣು ಮುಚ್ಚಿಕೊಂಡು ಮಲಗುವುದನ್ನು ಬಿಟ್ಟು ಕಣ್ಣು ತೆರೆದು ದೊಡ್ಡ ತಪ್ಪನ್ನು ಮಾಡಿದ್ದಾರೆ. ಕಣ್ಣು ತೆರೆದ ನಂತರ ತಮ್ಮದು ತಿರುಕನ ಕನಸು ಎಂಬುದು ಅರಿವಾಗಿ ವಿಪರೀತ ಮನೋವ್ಯಾಕುಲತೆ ಆವರಿಸಿಕೊಂಡಿದೆ. ಅವರನ್ನು ಭೇಟಿ ಮಾಡಿದ ನಗೆ ಸಾಮ್ರಾಟರಿಗೆ ದೇಶದ ಬೇರಾವ ಪತ್ರಕರ್ತನಿಗೂ ಸಿಗದ ಸುಳುಹುಗಳು ಸಿಕ್ಕಿದವು, ಸರಕಾರ ಉಳಿದುಕೊಂಡ ಸಂಗತಿಯ ಬಗ್ಗೆ.
ಸರಕಾರದ ವಿಶ್ವಾಸಮತದ ವಿಷಯದಲ್ಲಿ ಹೀಗೇ ಆಗುತ್ತದೆ ಎಂದು ಮೊದಲೇ ಗೊತ್ತಿತ್ತು. ಹಾಗಂತ ಅದನ್ನು ಹೇಳಿದ ಜೋತಿಷಿಯನ್ನು ಹುಡುಕಿಕೊಂಡು ಹೋಗಿಬಿಟ್ಟೀರಿ, ಈ ಭವಿಷ್ಯವನ್ನು ಸೂಚಿಸಿದ್ದು ಜೋತಿಷಿಗಳಲ್ಲ. ಪ್ರಕೃತಿ! ಹೌದು, ಗಾಬರಿಯಾಗಬೇಡಿ. ನಮ್ಮ ಕಾಡು-ಮೇಡಿನ ಪ್ರಕೃತಿಯೇ ಈ ಫಲಿತಾಂಶವನ್ನು ಸೂಚಿಸಿತ್ತು ಎಂದು ಸಾಮ್ರಾಟರು ಪತ್ತೆ ಹಚ್ಚಿದ್ದಾರೆ.
ಒಂದೂರಲ್ಲಿ ಒಂದು ಕಾಡಿತ್ತು. ಇಡೀ ಕಾಡಿನಲ್ಲಿ ಯಾವ ಪ್ರಾಣಿಯಾದರೂ ಎಲ್ಲಿಂದ ಎಲ್ಲಿಗೆ ಬೇಕಾದರೂ ಓಡಾಡಬಹುದು. ಸ್ವಲ್ಪ ‘ಕೌಶಲ್ಯ’ ಇರುವಂಥವು ಹಾರಾಡಬಹುದು, ಮರದಿಂದ ಮರಕ್ಕೆ. ಆದರೆ ಯಾವುದಕ್ಕೂ ವೀಸಾ, ಪಾಸ್ ಪೋರ್ಟ್ ಬೇಕಿಲ್ಲ. ಡ್ರೈವಿಂಗ್ ಲೈಸೆನ್ಸ್ ಬೇಕಿಲ್ಲ. ಗಾಡಿ ಇನ್‌ಶೂರೆನ್ಸ್ ಬೇಕಿಲ್ಲ. ಆರ್.ಸಿ ಬುಕ್ಕಿನ ಆವಶ್ಯಕತೆಯಿಲ್ಲ. ಇಷ್ಟೆಲ್ಲಾ ಇಲ್ಲದಿರುವಾಗ ಟ್ರಾಫಿಕ್ ಪೋಲೀಸಿನವರ ಉಪಸ್ಥಿತಿಯು ಬೇಕಿಲ್ಲ. ಅವರಿಲ್ಲ ಎಂದ ಮೇಲೆ ರಸ್ತೆಯ ಮೇಲೆ ‘ಎ.ಟಿ.ಎಂ’ಗಳ ಅನಿವಾರ್ಯತೆ ಹುಟ್ಟುವುದಿಲ್ಲ! ಇನ್ನು ರೋಡ್ ಟ್ಯಾಕ್ಸೂ ಇಲ್ಲ. ಇನ್ ಕಮ್ ಟ್ಯಾಕ್ಸೂ ಇಲ್ಲ, ಹೀಗಾಗಿ ಐ.ಟಿ ಡಿಪಾರ್ಟ್ ಮೆಂಟೂ ಬೇಕಿಲ್ಲ. ಆದರೂ ಕಾಡಿಗೆ ಒಬ್ಬ ಪ್ರಧಾನಿ ಅಥವಾ ರಾಜ ಬೇಕೇ ಬೇಕು. ಜವಾಬ್ದಾರಿಯಿಲ್ಲದ ಅಧಿಕಾರವದು ಎನ್ನುವುದು ಅದನ್ನು ಅಲಂಕರಿಸಲು ಸಾಧ್ಯವಾಗದವರ ಕುಹಕದ ನುಡಿ.
ಸರಿ, ಜಂಗಲಿನ ಪ್ರಧಾನಿಯಾಗಲು ಭಾರಿ ಪೈಪೋಟಿ ಇತ್ತು. ಎಲ್ಲಾ ಕಡೆಯೂ ಚುನಾವಣೆ ನಡೆಯಿತು. ಯಥಾಶಕ್ತಿ ಅಕ್ರಮಗಳು ಯಾವ ಅಡತಡೆಯೂ ಇಲ್ಲದೆ ಬಹುತೇಕ ಶಾಂತಿಯುತವಾಗಿ ನಡೆಯಿತು. ಕೆಲವು ಕಡೆ ಮಾರಣಹೋಮಗಳು ನಡೆದದ್ದು ಬಿಟ್ಟರೆ ಉಳಿದಂತೆ ಚುನಾವಣೆ ಶಾಂತಿಯುತವಾಗಿಯೇ ಇತ್ತು. ಎಲ್ಲಾ ಹಂತದ ಚುನಾವಣೆ ಮುಗಿದು ಕಡೆಯ ಹಂತಕ್ಕೆ ‘ಬಂಗಾಳ’ದ ಹುಲಿ, ‘ಕೇಸರಿ’ಯನ್ನು ಹೊತ್ತ ಸಿಂಹ ಹಾಗೂ ‘ಮದಿಸಿದ’ ಆನೆ ತಲುಪಿದವು. ಆನೆಗೆ ಹುಲಿ ಹಾಗೂ ಸಿಂಹದ ನೆರವು ಪಡೆದು ಪ್ರಧಾನಿಯಾಗುವ ಆಸೆ. ಬಂಗಾಳ ಹಾಗೂ ಕೇಸರಿ ಸೇರಿಕೊಂಡು ಮಾತಾಡಿ ಆನೆಯನ್ನು ಮುಂದಕ್ಕೆ ಕಳುಹಿಸಿದವು. ಆನೆ ತಾನು ನಡೆದದ್ದೇ ದಾರಿ ಎಂದು ಕೊಂಡು ಮುಂದಕ್ಕೆ ನುಗ್ಗಿತು. ಕಡೆಗೆ ಖೆಡ್ಡಾದಲ್ಲಿ ಬಿತ್ತು. ಈಗ ಸದ್ಯಕ್ಕೆ ಘೀಳಿಡುತ್ತಿದೆ.
ಮಾಂಸಾಹಾರಿಗಳಾದ ಕೇಸರಿ ಸಿಂಹ ಹಾಗೂ ಬಂಗಾಳ ಹುಲಿಗಳಿಗೆ ಅಪ್ಪಟ ಸಸ್ಯಾಹಾರಿ ಹಾಗೂ ಡಯಟ್‌ಗೆ ಯಾವ ಗೌರವವನ್ನು ಕೊಡದ ಆನೆಯನ್ನು ಪ್ರಧಾನಿಯ ಪಟ್ಟಕ್ಕೆ ಕೂರಿಸುವುದಕ್ಕೆ ಸುತಾರಾಂ ಇಷ್ಟವಿರಲಿಲ್ಲ. ಆದರೆ ಪ್ರಧಾನಿ ಪಟ್ಟದ ಆಸೆಗೆ ಬಂಗಾಳದ ಹುಲಿ ಹಾಗೂ ಕೇಸರಿ ಸಿಂಹ ಭಾರಿ ಕಾಳಗದಲ್ಲಿ ತೊಡಗಿದವು. ವೀರಾವೇಷದಿಂದ ಹೋರಾಡಿ ದಣಿದು, ಗಾಯಗೊಂಡು, ಬಸವಳಿದು ಮೂಲೆಯಲ್ಲಿ ಕೂತವು. ಪ್ರಧಾನಿ ಯಾರಾಗುವುದು ಎಂದು ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿರುವಾಗ ನೂರಾರು ಕುದುರೆಗಳ ಸೈನ್ಯವನ್ನು ಮುನ್ನಡೆಸಿಕೊಂಡು ಬಂದ ‘ಸಿಂಗ್’ಳೀಕ ಪ್ರಧಾನಿಯ ಪಟ್ಟದ ಮೇಲೆ ಸರ ಸರನೇ ಏರಿತು. ಕುದುರೆಗಳು ಹಿಂಡಿ ಮೇಯುತ್ತಾ ಪಟ್ಟದ ಪಕ್ಕ ಪವಡಿಸಿದವು.
ಈ ಈಸೋಪನ ಕಥೆಯನ್ನು ಈಸೋಪನೇ ಮರೆತು ಹೋಗಿದ್ದ ಎನ್ನಲಾಗಿದೆ. ಅದನ್ನು ಸಾಮ್ರಾಟರು ಪುನಃ ನೆನಪಿಸಿ ಅಷ್ಟು ಹಿಂದೇ ವಿಶ್ವಾಸಮತದ ಫಲಿತಾಂಶವನ್ನು ಬಹಳ ನಿಖರವಾಗಿ ವಿವರಿಸಲಾಗಿತ್ತು ಎಂದು ಸಂಶೋಧನೆ ಮಾಡಿದ್ದಾರೆ. ನಾಸ್ಟ್ರಡಮಸ್‌ಗಿಂತ ಈ ‘ಸೋಪ್’ನೇ ಶ್ರೇಷ್ಠ ಜೋತಿಷಿ ಎಂದು ಷರಾ ಬರೆದು ವರದಿ ಮುಗಿಸಿದ್ದಾರೆ.
Comments
ಉ: ವಿಶ್ವಾಸಮತ: ಆನೆಗೆ ಅನ್ಯಾಯ!
In reply to ಉ: ವಿಶ್ವಾಸಮತ: ಆನೆಗೆ ಅನ್ಯಾಯ! by varunbhatbm
ಉ: ವಿಶ್ವಾಸಮತ: ಆನೆಗೆ ಅನ್ಯಾಯ!
In reply to ಉ: ವಿಶ್ವಾಸಮತ: ಆನೆಗೆ ಅನ್ಯಾಯ! by ASHOKKUMAR
ಉ: ವಿಶ್ವಾಸಮತ: ಆನೆಗೆ ಅನ್ಯಾಯ!