ಕನ್ನಡದ ಸತ್ವ ಬೆಳೆಯುವುದು ಹೇಗೆ

ಕನ್ನಡದ ಸತ್ವ ಬೆಳೆಯುವುದು ಹೇಗೆ

ಕನ್ನಡತನದ ಸತ್ವ ಬೆಳೆಯುವುದು ಹೇಗೆ?
(ಕೈಕಟ್ಟಿ ಕುಳಿತರೆ ಕನ್ನಡ ಬೆಳೆಯದು...ಪ್ರತಿಕ್ರಿಯೆ.)

ಒಂದು ಕಾಲಕ್ಕೆ ಪ್ರಭಾವಿ ಸಂಸ್ಕೃತದ ನೆರಳಲ್ಲಿ ಇಂತಹದೆ ಸಮಸ್ಯೆಯನ್ನು ಕನ್ನಡ ಎದುರಿಸಿದೆ. ಇಂತಹ ಸಂಸ್ಕೃತಮಯ ಪರಿಸರದಲ್ಲಿ ದೇಸಿತನದ ಕನ್ನಡವನ್ನು ಸಮೃದ್ಧಗೊಳಿಸಿದವರು, ವಚನಕಾರರು. ಇಂಗ್ಲಿಷ್‌ಮಯ ಪರಿಸರಕ್ಕೆ ತಕ್ಕ ಉತ್ತರ ಕೊಡಬೇಕಾದಲ್ಲಿ ಇಂದಿಗೂ ನಾವು ಆ ವಚನಕಾರರ
ನಿಲುವನ್ನೇ ತಾಳಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಸಂಸ್ಕೃತಮಯ ಸ್ಥಿತಿಗೂ ಇಂಗ್ಲಿಷ್‌ಮಯ ಸ್ಥಿತಿಗೂ ಬಾಹ್ಯ ಮಾತ್ತು ಆಂತರಿಕ ಸ್ವರೂಪದಲ್ಲಿ
ಹೆಚ್ಚಿನ ವ್ಯತ್ಯಾಸವಿಲ್ಲ.
ಹೊಸ ಚಿಂತನೆಗಳನ್ನು (ಅದು ಯಾವುದೆ ಕ್ಷೇತ್ರಕ್ಕೆ ಸಂಬಧಿಸಿದ್ದಿರಲಿ) ದೇಸಿಮಟ್ಟದಲ್ಲಿ ಕನ್ನಡದಲ್ಲಿಯೇ ಪ್ರಾರಂಭಿಸಬೇಕು. ಆಗ ತನ್ನಿಂದ ತಾನೆ ಎಲ್ಲ
ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.
ವಿವಿಧ ಜ್ಞಾನ ಕ್ಷೇತ್ರದ ಸಂಗತಿಗಳನ್ನು (ಅವು ಐಟಿ ಇರಲಿ ಬಿಟಿ ಇರಲಿ ) ಮೊದಲು ದೇಶಿತನಕ್ಕೆ ಅನ್ವಯಿಸಬೇಕು. ನಮ್ಮ ನೆಲಕ್ಕೆ ಒಗ್ಗಿಸಬೇಕು. ಕೇವಲ
ಗಿಳಿಪಾಠದ ರೀತಿಯಲ್ಲಿ ಅರ್ಥಗ್ರಹಿಸದೇ ಹೇಳುತ್ತಾ ಹೋದರೆ ಆ ಜ್ಞಾನ ಆಳಕ್ಕಿಳಿಯದು, ಫಲ ನೀಡದು.
ಹೊಸ ಜ್ಞಾನ ಇಂಗ್ಲಿಷ್ ಕಿಟಕಿಯಿಂದ ಬಂದ ತಕ್ಷಣ ಅದನ್ನು ಕನ್ನಡ ಜವಾರಿತನಕ್ಕೆ ಒಗ್ಗಿಸಿಕೊಳ್ಳುವ ಜವಾಬ್ದಾರಿ ಆ ಕ್ಷೇತ್ರದ ಪರಿಣತನಿಗಿರಬೇಕು. ಪರಿಣತಿ
ಇದ್ದವರು ಮನಸ್ಸು ಮಾಡಬೇಕು. ಅದನ್ನು ಶರಣರು ಹೇಗೆ ಒಂದು ಚಳುವಳಿಯನ್ನಾಗಿ ರೂಪಿಸಿ ಹೊಸ ಪ್ರಜ್ಞೆಯ ಹರಿಕಾರರಾದರೋ ಹಾಗೆ ಅಂತಹ ಪ್ರಜ್ಞೆ
ರೂಪಿಸುವತ್ತ ಗಮನಹರಿಸಬೇಕು.
ಜಾಗತೀಕರಣ ಮತ್ತು ವಿಜ್ಞಾನ ತಂತ್ರಜ್ಞಾನಗಳ ಹಿನ್ನೆಲೆಯಲ್ಲಿ ಇಂದು ಇಂಗ್ಲಿಷ್ ಜ್ಞಾನ ಅಗತ್ಯ- ಅನಿವಾರ್ಯ. ಅಂದು ಧರ್ಮ,ತತ್ತ್ವಜ್ಞಾನ,ಸಾಹಿತ್ಯದ
ಹಿನ್ನೆಲೆಯಲ್ಲಿ ಸಂಸ್ಕೃತ ಜ್ಞಾನ ಅಗತ್ಯ- ಅನಿವಾರ್ಯವಾಗಿತ್ತು. ವಚನಕಾರರು ಮಡಿವಂತಿಕೆ ಕೀಳರಿಮೆಗಳೆರಡನ್ನೂ ಮೀರಿ ಮುಕ್ತ ರೀತಿಯಲ್ಲಿ ಚಿಂತಿಸಿ ಕನ್ನಡದ ಹೊಸ ಸಾಮರ್ಥ್ಯವನ್ನು ಬಳಸಿಕೊಂಡಂತೆ ನಾವೂ ಇಂದು ಮಡಿವಂತಿಕೆ ಮತ್ತು ಕೀಳರಿಮೆ ಎರಡನ್ನೂ ತೊರೆದು ಕನ್ನಡದ ಹೊಸ ಸಾಮರ್ಥ್ಯ-ಆಯಾಮಗಳನ್ನು
ಬಳಸಿಕೊಳ್ಳಬೇಕಾಗಿದೆ.
ಕನ್ನಡದ ಶೋಚನೀಯ ಸ್ಥಿತಿಗೆ ಇಂಗ್ಲಿಷ್ ಕಲಿತ ಸುಸಂಸ್ಕೃತರೇ ಕಾರಣ. ಸುಸಂಸ್ಕೃತರನ್ನೇ ಅನುಸರಿಸುವ ಜನಸಾಮಾನ್ಯರು ನಮ್ಮಂತೆಯೇ ಕನ್ನಡದ ಬಗೆಗೆ
ಅಸಡ್ಡೆ ತಾಳುತ್ತ ಬಂದಿದ್ದಾರೆ. ನಾವು ಕಲಿತ ಇಂಗ್ಲಿಷ್ ಕನ್ನಡದ ವಿಸ್ತರಣೆಗೆ ಕಾರಣವಾಗಬೇಕೇ ಹೊರತು ಕನ್ನಡವನ್ನು ಕುಗ್ಗಿಸುವುದಕ್ಕಲ್ಲ. ಜನಸಾಮಾನ್ಯರಿಗೆ
ಈ ಸಂಗತಿಯನ್ನು ಮನದಟ್ಟು ಮಾಡಿಕೊಡುವ ರೀತಿಯಲ್ಲಿ ನಮ್ಮ ವರ್ತನೆ, ಭಾಷಾ ಬಳಕೆ ಇರಬೇಕು. ಅಂದಾಗ ಜನಸಾಮಾನ್ಯರು , ಮಕ್ಕಳು ಸಹಜವಾಗಿ
ಕನ್ನಡತನವನ್ನು ಮೈಗೂಡಿಸಿಕೊಳ್ಳುತ್ತಾರೆ. ಆಗ ಕನ್ನಡತನ ತನ್ನಿಂದ ತಾನೆ ವಿಸ್ತರಣೆಯಾಗುತ್ತ ಸಾಗುತ್ತದೆ ; ಆನುವಂಶೀಯ ಗುಣಹೊತ್ತು ತಲೆಮಾರಿನಿಂದ ತಲೆಮಾರಿಗೆ ಸಾಗುತ್ತದೆ. ಇಂಗ್ಲಿಷ್ ಏಕೆ ಜಗತ್ತಿನ ಎಲ್ಲ ಭಾಷೆಗಳೂ ಪ್ರಭಾವಿ ಮಾದ್ಯಮಗಳ ಮೂಲಕ ಕನ್ನಡದ ಮೇಲೆ ದಾಳಿ ಮಾಡಿದರೂ ಕನ್ನಡತನವನ್ನು
ಜಪ್ಪೆನ್ನಿಸಲಾಗುವುದಿಲ್ಲ.
ಎಲ್ಲಿ ಸೂಕ್ತ ಕನ್ನಡ ಶಬ್ದಗಳು ದೊರಕುವದಿಲ್ಲವೋ ಅಲ್ಲಿ ಮುಕ್ತವಾಗಿ ಬೇರೆ ಭಾಷೆಯ ಶಬ್ದವನ್ನೇ ಸಹಜ ಸಂವಹನಕ್ಕೆ ಬಳಸಿಕೊಳ್ಳಬೇಕು. ಬಳಸಿಕೊಳ್ಳುವದಿಲ್ಲವೆಂದು'ನಾವು ಮಡಿವಂತಿಕೆ ಮಾಡಿದರೂ ಆ ಶಬ್ದಗಳು ತನ್ನಿಂದ ತಾನೆ ಬಳಕೆಗೊಳ್ಳುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಇದು ಭಾಷೆಯ
ಸಹಜ ಗುಣ. (ಉದಾ : ಸಂಸ್ಕೃತ,ಅರಬ್ಬಿ,ಪಾರ್ಸಿ,ಮರಾಠಿ,ಇಂಗ್ಲಿಷ್ ಶಬ್ದಗಳು ಕನ್ನಡದವುಗಳೇ ಆಗಿವೆ. ಧರ್ಮ..ಸವಾಲು ಜವಾಬು...ಜಮೀನು..ಬಸ್ಸು ಕಾರು..)

ಭಾಷೆಯ ಕೀಳರಿಮೆ ತೊರೆಯುವದು ಮಾತ್ರ ಒಂದು ಪ್ರಜ್ಞಾಪೂರ್ಣ ಕ್ರಿಯೆ. ಈಗ ಸದ್ಯಕ್ಕೆ ತುರ್ತಾಗಿ ಕನ್ನಡಿಗರಿಗೆ ಬೇಕಾದುದು ಇದೇ. ಇಂಗ್ಲಿಷ್ ಮತ್ತು ಇಂಗ್ಲಿಷ್
ನಿಂದ ಬಂದ ಹೊಸ ಜ್ಞಾನಕ್ಷೇತ್ರಗಳ ಪರಿಣತರು ಮೊದಲು ಮೇಲರಿಮೆಯ ಭ್ರಮೆಯಿಂದ ಹೊರಬರಬೇಕು. ಈ ಮೇಲರಿಮೆಯ ಜನರ ಭ್ರಮೆ ನಾಶವಾದರೆ
ತನ್ನಿಂದ ತಾನೆ ಜನಸಾಮಾನ್ಯರ ಕೀಳರಿಮೆ ಹರಿದು ಹೋಗುತ್ತದೆ. ಇವೆರಡು ಒಂದಕ್ಕೊಂದು ತಳುಕುಹಾಕಿಕೊಂಡ ಸಂಗತಿಗಳು.
ಯುಗಧರ್ಮದ ಪ್ರಭಾವಿ ಪ್ರಜ್ಞೆ (ಇಂದು ವಿಜ್ಞಾನ,ತಂತ್ರಜ್ಞಾನ ಮತ್ತು ಮಾಹಿತಿ ವಿಜ್ಞಾನ) ಮತ್ತು ಅದನ್ನು ಮೈಗೂಡಿಸಿಕೊಂಡ ಭಾಷೆ (ಇಂಗ್ಲಿಷ್) ಯೊಂದಿಗೆ
ಪ್ರಾದೇಶಿಕ ಭಾಷೆಯೊಂದು ಮುಖಾಮುಖಿಯಾದಾಗ ಘಟಿಸುವ ಸಹಜ ಪ್ರಕ್ರಿಯೆಗಳಿವು.

ಸಣ್ಣ ಸಣ್ಣ ಸಂಗತಿಗಳನ್ನು ಹೇಗೆ ಪಾಲಿಸಬೇಕೆಂಬುದಕ್ಕೆ ಒಂದೆರಡು ಉದಾ : ನಮ್ಮ ವ್ಯಕ್ತಿತ್ವದ ಹೆಗ್ಗುರುತಾದ ಸಹಿಯನ್ನು ಕನ್ನಡದಲ್ಲಿಯೇ ಮಾಡುವುದು.
ನಮ್ಮ ದೂರವಾಣಿ ಸಂಖ್ಯೆಯನ್ನು ಕನ್ನಡದಲ್ಲಿಯೇ ಹೇಳುವುದು ಇತ್ಯಾದಿ.

ಒಟ್ಟು ನಾವೀಗ ಮರಾಠಿ-ತಮಿಳಿಗರ ಉಗ್ರವೆನ್ನಬಹುದಾದ ಭಾಷಾಭಿಮಾನವನ್ನೂ ಮೀರಿದ ಸಹಜ ಮತ್ತು ಪ್ರಜ್ಞಾಪೂರ್ಣ ಸ್ವಾಭಿಮಾನದ ಬೆಂಗಾಲಿಗರ
ಸ್ವಭಾವವನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎನಿಸುತ್ತದೆ. ನೀವೇನಂತಿರಿ ?

ಚಂದ್ರಗೌಡ ಕುಲಕರ್ಣಿ (ಕಡದಳ್ಳಿ)
ಚಿಲಿಪಿಲಿ, ತಾಳಿಕೋಟಿ.
ಛಿhಚಿಟಿಜಡಿಚಿgouಜಚಿಞ@ಥಿಚಿhoo.ಛಿom

Rating
No votes yet

Comments