ಮೊದಲು
ಮೊದಲ್, ಮುದಲ್, ಮುದ್ದಲು, ಮೊದಲು (ನಾ)
೧.ಆರಂಭ; ಆದಿ; ಪ್ರಥಮ
ಮೊದಲಿನನಿತ್ತೋರಾನಿತ್ತನ್ತೆ ಬಿಟ್ಟ (ಎಪಿಗ್ರಾಫಿಯಾ ಕರ್ನಾಟಿಕಾ VI ಕೊಪ್ಪಳ ೩೮.೭ ಸುಮಾರು 675); ಇನಿಯವು ಮೊದಲೊಳ್ ನಂಜಿನ ಪನಿವೊಲ್ ಬೞಿಕೆಯ್ದೆ ಮುಳಿದು ಕೊಂದಿಕ್ಕುವುವು (ಆದಿಪುರಾಣ ೧೯.೧೨೩); ಅಭಿಮಾನದ ಜನ್ಮಭೂಮಿ ಮಾನ್ತನದ ಮೊದಲ್ (ಸೌತ್ ಇಂಡಿಯನ್ ಇನ್ಸ್ಕ್ರಿಪ್ಷನ್ಸ್XI.i ೬೫.೩೯ 1028)
೨.ಪಕ್ಕ; ಬದಿ; ಪಾರ್ಶ್ವ
ರಾಮೇಶ್ವರ ಎಮ್ಬ ತೀರ್ತ್ಥದಾ ಮೊದಲೊಳ್ ಮೆಪ್ಪಿಕ್ಕಿ ಪೊರದ ಪನ್ದಿಗಳನಿಱಿಯಲ್ ಬನ್ದಲ್ಲೀ (ಎಪಿಗ್ರಾಫಿಯಾ ಇಂಡಿಕಾ XXX.III, ೩೩೦.೯ 804)
೩.ಬೇರು; ಬುಡ; ಮೂಲ
ಮೊದಲಿಂ ತಗುಳ್ದು ತುದಿವರಂ . . . ಇದಱ ವಿಧಿಯಿಂತುಟು ಮಂತ್ರಪೂರ್ವಕಂ ನೆಗೞ್ವುದು (ಆದಿಪುರಾಣ ೧೫.೧೬) ಮಣಿದೀಪದ ಸರಮೊಪ್ಪಿದುದಂದು ಪಾದಪೀಠದ ಮೊದಲೊಳ್ (ಅಜಿತಪುರಾಣ ೬.೫) ಎಕ್ಕೆಯ ಮಾದಲಂಗಳ ಮೊದಲ್ಗಳನೊಂದೊಂದಱೊಳ್ . . . ಪಲ್ಲಟಿಸಿ (ಶಬ್ದಮಣಿದರ್ಪಣ ೧೬.೬೦)
೪.ಆಧಾರ; ಆಶ್ರಯ
೫.ತುದಿ; ಅಗ್ರಭಾಗ
ಕಱಿಯಲರಾದ ಸಂಪಗೆಯ ಬಣ್ಣದವೋಲೆ ಬೆಳರ್ತ ಬಣ್ಣದೊಳ್ ಗಱಿಯಿಸೆ ಕೆಂಪು ಕಣ್ಗಳ ಮೊದಲ್ಗಳೊಳೊಯ್ಯನೆ ತೋ[ಱೆ] ಬಾಡಿ ಪಾಡೞಿದು ಬೞಲ್ದು . . . ತಾಮೆ ಕನ್ನಡಿಸಿದಪ್ಪುವು ಕನ್ನೆಯ ಕನ್ನೆವೇಟಮಂ (ಪಂಪಭಾರತ ೪.೬೦); ಮನಮಿರೆ ಪುರ್ವಿನ ಮೊದಲೊಳ್ . . . ಯೋಗೀಂದ್ರನಾತ್ಮಚಿಂತೆಯೊಳಿರ್ದಂ (ಅನಂತಪುರಾಣ ೯.೧೦೪)
೬.ಮುಖ್ಯವಾದುದು; ಪ್ರಧಾನವಾದುದು; ಶ್ರೇಷ್ಠವಾದುದು
ಅದೆ ಕಂದರ್ಪಂಗೆ ದೋರ್ದರ್ಪದ ಮೊದಲ್ (ಅಜಿತಪುರಾಣ ೨.೪೬); ಬಳೆಯೇ ಸರ್ವವಿಭೂಷಣಕ್ಕೆ ಮೊದಲೈ (ಸೋಮೇಶ್ವರಶತಕ ೧೪)
೭.ಮೂಲಧನ; ಬಂಡವಾಳ; ಅಸಲು
ಇನ್ತಿನಿತುಮಂ ಮೊದಲೊಳ್ ಕಿಡಲೀಯದೆ ವೃದ್ಧಿಯೊಳೆ ಧರ್ಮ್ಮಮಂ ತಮ್ಮ ಸನ್ತತಿಯವರ್ನ್ನಡೆಯಿಸುವರ್ ( ಸೌತ್ ಇಂಡಿಯನ್ ಇನ್ಸ್ಕ್ರಿಪ್ಷನ್ಸ್XI.i ೬೪.೩೦ 1028); ಒಂದು ಪಣವಿನ ಮೊದಲ್ಗೊಂಡಂದಿನ ದಿನದೊಳೆ ಸಹಸ್ರಪಣಮಂ ಪಡೆದಂ (ಜೀವಸಂ ೨೦೫.೯೮); ಆಚಂದ್ರಾರ್ಕತಾರಂಬರಂ ಸಲುವನ್ತಾಗಿ ಹಣವೊಂದಱ ಮೊದಲಿಂಗೆ ಎಂಟು ಹಣವಂ ತೆತ್ತು (ಎಪಿಗ್ರಾಫಿಯಾ ಕರ್ನಾಟಿಕಾ II ೩೩೩.೦೬; 1206/)
ಮಡಕೆಯ ಮಾಡುವರೆ ಮಣ್ಣೇ ಮೊದಲು (ಬಸವ ೭೦); ಮೊದಲಲಿದ್ದುದು ಜೀವಕಳೆ ಹೃದಯದಲಿ (ಕುವ್ಯಾಕ ೧.೯); ಮೊದಲ ಬೊಬ್ಬೆಗೆ ಬಿಸಜಸಂಭವ ಬೆರಱಿಬಿದ್ದನು (ತೊರವೆರಾಮಾಯಣ ೪.೧೨.೨೮); ತುದಿಮೊದಲಿಲ್ಲದೆ ಪರದಿಂದ ನೊಂದೆ (ಪುರಂದರದಾಸ ೨.೩೫.೧); ಮೊದಲಿಗೆ ಮೋಸವಾದಲ್ಲಿ ಲಾಭವನಱಸಿದರುಂಟೆ (ಮೋಳಿಗೆಯ ಮಾರಯ್ಯ ೪೫.೧೮೭)
ಮೊದಲು ಎಂಬ ಪದವು ಇನ್ನೂ ಹಲವು ರೂಪಗಳಲ್ಲಿ ಕಾಣಬಹುದು.
=೧.ಪ್ರಾರಂಭ ಮಾಡಿ; ಮೊದಲ್ಗೊಂಡು ೨. ಮುಂಚೆ; ಹಿಂದೆ; ಪೂರ್ವದಲ್ಲಿ ಎಂಬ ರೀತಿಯಲ್ಲಿಯೂ ಬಳಕೆಯಾಗಿದೆ.
[ತಮಿಳು, ಮಲಯಾಳಂ: ಮುದಲ್; ತುಳು: ಮುದೆಲು; ತೆಲುಗು: ಮೊದಲು]
(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)
ಕಿಟೆಲ್ ನಿಘಂಟಿನಲ್ಲಿ ಈ ಪ್ರಯೋಗಗಳಿವೆ.
೧. ಮೊದಲು ಬಿತ್ತಿ ಬಳಿಕ ಗೆಯ್ದ ಕ್ಷೇತ್ರ.
೨. ಈ ಕೆಲಸಕ್ಕೆ ಇದೇ ಮೊದಲೆನ್ದು ಹೇಳಿಕೆ.
೩. ಅವರು ಒಂದು ವೇಳೆ ಮೊದಲು ನಮ್ಬದಿದ್ದರೂ.
೪. ಪೃಥ್ವಿಯ ಮೇಲೆ ಮೊದಲಿನಷ್ಟು ಸಿಂಹಗಳು ಈಗ ಇಲ್ಲ.
೫. ಮೊದಲಿನಂತೆ
೬. ಏೞು ಮಾತೃಕೆಯರಲ್ಲಿ ಮೊದಲಿನವಳು.
೭. ಮೊದಲುದೇವರು (ಮೂಲದೇವರು) ಮೂಲೇಲಿದ್ದರೂ ಹನುಮನ್ತರಾಯಗೆ ದೀಪೋತ್ಸವವು.
೮. ಮೊದಲು ಕೂಡಬಾರದು, ಕೂಡಿ ಕಾಡಬಾರದು.
೯. ಮಾತಿಗೆ ಮೊದಲು ಗಾದೆ, ಊಟಕ್ಕೆ ಮೊದಲು ಉಪ್ಪಿನಕಾಯಿ.
೧೦. ಮೊದಲಿಗೆ ಮೋಸ, ಲಾಭಕ್ಕೆ ಗುದ್ಯಾಟ.
೧೧. ಅನ್ದಿನ ದಿವಸ ಮೊದಲ್ಗೊಂಡು ಅವನು ದಿನಾಲೂ ನಿಯಮದಿನ್ದ ವ್ಯಾಯಾಮ ಮಾಡಹತ್ತಿದನು.
೧೨. ಕೆಲಸಕ್ಕೆ ಮೊದಲು ಮಾಡು.
೧೩. ಈ ರಾಜನು ಕೃಷ್ಣರಾಜನಿಗಿನ್ತ ಮೊದಲೇ ತೀರಿದನು.
೧೪. ಈ ಹೊಟ್ಟೆಯಿನ್ದ ನಮಗೆ ಲಾಭವನ್ತು ಮೊದಲೇ ಇಲ್ಲ.
Comments
ಉ: ಮೊದಲು
In reply to ಉ: ಮೊದಲು by kannadakanda
ಉ: ಮೊದಲು