ಸ್ವಾತಂತ್ರ್ಯವೆಂದರೆ ಭಯ ಮತ್ತು ನಮಗೆ ಸ್ವಾತಂತ್ರ್ಯವೇ ಇಲ್ಲ

Submitted by olnswamy on Sat, 08/13/2005 - 21:16

ಫಿಯರ್ ಆಫ್ ಫ್ರೀಡಂ ಎಂಬುದು ಎರಿಕ್ ಫ್ರಾಂ ಎಂಬ ಲೇಖಕನ ಒಂದು ಪುಸ್ತಕದ ಹೆಸರು. ನಿಜವಾಗಿ ನಮಗೆಲ್ಲ ಸ್ವಾತಂತ್ರ್ಯವೆಂದರೆ ಭಯ. ಸ್ವಂತವಾಗಿ ಆಲೋಚಿಸುವ, ಕ್ರಿಯೆಯಲ್ಲಿ ತೊಡಗುವ, ನಮ್ಮ ಕ್ರಿಯೆಗಳಿಗೆ, ಬದುಕಿಗೆ ನಾವೇ ಜವಾಬ್ದಾರರಾಗುವ ಸ್ವಾತಂತ್ರ್ಯವನ್ನು ಹೊಂದುವುದಕ್ಕೆ ನಮಗೆಲ್ಲ ಭಯ. ಹಿರಿಯರು ಹೇಳಿದಂತೆ, ನಮ್ಮ ಸಂಸ್ಕೃತಿ ಹೇಳಿದಂತೆ, ಶಿಕ್ಷಣ ಕಲಿಸಿದಂತೆ, ನಮ್ಮ ಸುತ್ತಲ ಹತ್ತು ಜನ ಇರುವಂತೆ ಬದುಕುವುದು ನಮಗೆಲ್ಲ ಸುಲಭ ಮತ್ತು ಇಷ್ಟ. ಸ್ವತಂತ್ರವಾಗಬೇಕೆಂಬ ಆಸೆ, ಕಲ್ಪನೆಗಳು ಮಾತ್ರ ನಮ್ಮಲ್ಲಿವೆ. ನಮ್ಮ ಪ್ರತಿಯೊಂದು ಕೆಲಸಕ್ಕೂ ನಮ್ಮ ಮನಸ್ಸು ಸಮರ್ಥನೆಯನ್ನು ಹುಡುಕುತ್ತಲೇ ಇರುವಾಗ, ಬೇರೆಯವರ ಒಪ್ಪಿಗೆಯನ್ನು ಅಪೇಕ್ಷಿಸುತ್ತ ನಿರೀಕ್ಷಿಸುತ್ತ ಇರುವಾಗ ಸ್ವತಂತ್ರವಾಗುವುದು ಹೇಗೆ ಸಾಧ್ಯ? ಸ್ವತಂತ್ರವಾಗಿರುವಂತೆ ತೋರಿಸಿಕೊಳ್ಳುವವರನ್ನು ಒಪ್ಪುತ್ತೇವೆ, ನಿಜವಾಗಿ ಸ್ವತಂತ್ರವಾಗಿರುವವರನ್ನು ದ್ವೇಷಿಸುತ್ತೇವೆ, ಅಲ್ಲವೆ?
ನಮಗೆ ಸ್ವಾತಂತ್ರ್ಯವೇ ಇಲ್ಲ ಎಂಬುದು ಕಂಬಾರರ ಕನ್ನಡ ಕವಿತೆಯೊಂದರ ಸಾಲು. ನಮ್ಮ ಆಲೋಚನೆಗಳು ನಮ್ಮವಲ್ಲ, ನಮ್ಮ ವಿಚಾರಗಳು ನಮ್ಮವಲ್ಲ, ನಮ್ಮ ಕನಸುಗಳು ನಮ್ಮವೇ ಅಲ್ಲ, ನಮ್ಮ ಆತಂಕಗಳು ನಮ್ಮವೇ ಅಲ್ಲ, ನಮ್ಮ ದೇಹ ನಮ್ಮ ಇಷ್ಟದಂತೆ ಇರುವುದಿಲ್ಲ, ನಮ್ಮ ಮನಸ್ಸು ನಮ್ಮ ಬುದ್ಧಿಯಮಾತು ಕೇಳುವುದಿಲ್ಲ. ನಮ್ಮೊಳಗೆ ತುಂಬಿಕೊಂಡಿರುವುದೆಲ್ಲ, ನಮ್ಮ ವ್ಯಕ್ತಿತ್ವಕ್ಕೆ ಕಾರಣವಾಗಿರುವುದೆಲ್ಲ ಬೇರೆಯವರು, ಅಪ್ಪ, ಅಮ್ಮ, ಸಮಾಜ, ಶಿಕ್ಷಣ, ಭಾಷೆ, ನಮಗೆ ಇಷ್ಟವಾದ ರಾಜಕೀಯ ಪಕ್ಷ, ಸಂಸ್ಕೃತಿ ಇತ್ಯಾದಿಗಳು ನಮ್ಮೊಳಗೆ ತಿದ್ದಿರುವುದಲ್ಲದೆ ಬೇರೇನೂ ಅಲ್ಲ. ನಾವು ನಿಜವಾಗಿ ಸ್ವತಂತ್ರರಾಗಬೇಕೆಂದರೆ ಯಾವುಯಾವುದನ್ನೆಲ್ಲ ಮುಖ್ಯ, ನಮ್ಮದು ಎಂದುಕೊಂಡಿದ್ದೇವೆಯೋ ಅವನ್ನೆಲ್ಲ ನೀಗಿಕೊಳ್ಳಬೇಕಲ್ಲವೆ? ವಚನಕಾರರು ಹೇಳುವಂತೆ "ನಿರಾವಲಂಬಿ"ಗಳು ಆಗಬೇಕಲ್ಲವೆ? ಹಾಗೆ ಯಾವ ಮಾನಸಿಕ ಅವಲಂಬನೆಯೂ ಇಲ್ಲದೆ, ಸ್ವತಂತ್ರರಾಗುವುದಕ್ಕೆ ನಮಗೆ ನಿಜವಾಗಿಯೂ ಸಾಧ್ಯವಿದೆಯೋ ಅಥವ ಸ್ವಾತಂತ್ರ್ಯವೆಂಬುದು ಕೇವಲ ಸಾಧಿಸಲಾಗದ ಆದರ್ಶವೋ? ಸ್ವಾತಂತ್ರ್ಯದಿನದ ಸಮಯದಲ್ಲಿ ಈ ಯೋಚನೆಗಳು ಕಳವಳ ಹುಟ್ಟಿಸುತ್ತವೆ. ಮತ್ತೆ ಇಲ್ಲಿ ಹೇಳಿರುವ ಮಾತುಗಳು ಕೂಡ ಎಲ್ಲೆಲ್ಲೋ ನಾನು ಓದಿ ತಿಳಿದದ್ದೇ ಅನ್ನುವ ಸಂಗತಿ ಸ್ವಾತಂತ್ರ್ಯ ಎಷ್ಟು ಕಷ್ಟ ಅನ್ನುವುದನ್ನೇ ಹೇಳುವಂತಿದೆ!

Comments