ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌

ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌

ಅಲ್ಲಿ ಮೈದಳೆದಿತ್ತು ಐದು ಸಾವಿರ ವರ್ಷಗಳ ಪರಂಪರೆ. ಜಗತ್ತಿಗೆ ಹಲವಾರು ಪ್ರಥಮ ಶೋಧಗಳನ್ನು ನೀಡಿದ ಸ್ಮರಣೆ. ಕಳೆದೊಂದು ದಶಕದಿಂದ ತಾನು ಮೈಗೂಡಿಸಿಕೊಂಡಿರುವ ಆರ್ಥಿಕ ತಾಕತ್ತು, ವಿಜೃಂಭಿಸುತ್ತಿರುವ ಕ್ರೀಡಾ ಸಾಮರ್ಥ್ಯ- ಇವೆಲ್ಲವನ್ನೂ ಚಿತ್ರ-ಚಿತ್ತಾರದ ಮೂಲಕ ಅನಾವರಣಗೊಳಿಸಿತು ಬೀಜಿಂಗ್ ಒಲಂಪಿಕ್ಸ್. ಸಂಜೆಯಾಗುತ್ತಿದ್ದಂತೆ, ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಹಕ್ಕಿ ಗೂಡೊಂದು ಬೆಳಕಿನ ಕಣ್ತೆರೆಯಿತು. ೨೯ನೇ ಒಲಂಪಿಕ್ ಉದ್ಘಾಟನೆಗೊಂಡಿತು.

ಇಡೀ ಜಗತ್ತೇ ಅಲ್ಲಿ ನೆರೆದಿತ್ತು. ಜಗದ ಎಲ್ಲ ಸೊಗಸನ್ನೂ ತನ್ನೊಳಗೆ ಹೊಂದಿದ ಸಂಭ್ರಮದೊಂದಿಗೆ ಬೀಜಿಂಗ್‌ನ ’ಹಕ್ಕಿ ಗೂಡು’ ಹೆಸರಿನ ರಾಷ್ಟ್ರೀಯ ಕ್ರೀಡಾಂಗಣ ಕಂಗೊಳಿಸಿತು. ಬಾನಂಗಳದಲ್ಲಿ ಥೇಟ್ ಹಕ್ಕಿ ಗೂಡು ಮಾದರಿಯ ಬಾಣಬಿರುಸುಗಳು ಬೆಳಗುತ್ತಿದ್ದಂತೆ, ಚೀನೀ ಪ್ರಧಾನಿ ಹೂ ಜಿಂಟಾವೊ ೨೯ನೇ ಒಲಂಪಿಕ್ ಉದ್ಘಾಟನೆ ಘೋಷಿಸಿದರು.

ಮುಂದೆ ಮೊಳಗಿದ್ದು ಬಾಣ ಬಿರುಸು, ಕೇಳಿದ್ದು ಹರ್ಷೋದ್ಗಾರ, ಬೆಳಗಿದ್ದು ಚೀನಾದ ೫೦೦೦ ವರ್ಷಗಳ ಅದ್ಭುತ ಪರಂಪರೆ. ಮನುಷ್ಯ ಈ ಪರಿಯ ಪರಿಪೂರ್ಣತೆಯನ್ನು ಮೈಗೂಡಿಸಿಕೊಳ್ಳಬಲ್ಲನೆ? ಎಂಬ ಅಚ್ಚರಿ ಹುಟ್ಟಿಸುವಂತೆ ಮೂರೂವರೆ ಸಾವಿರ ಕಲಾವಿದರು ಅದ್ಭುತ ಕಲಾ ನೈಪುಣ್ಯತೆ ಮೆರೆದರು. ಒಂದಕ್ಕಿಂತ ಒಂದು ಅಚ್ಚರಿ. ಒಂದಕ್ಕಿಂತ ಒಂದು ಅಪೂರ್ವ. ನೆರಳು, ಬಣ್ಣ, ಬೆಳಕಿನಾಟದಲ್ಲಿ ಬೆಳಗಿದ ಕ್ರೀಡಾಂಗಣದಲ್ಲಿ ನಡೆದ ಚಮತ್ಕಾರಿ ಪ್ರದರ್ಶನವನ್ನು ಜಗತ್ತು ಎವೆಯಿಕ್ಕದೇ ವೀಕ್ಷಿಸಿತು. ಚಕಿತಗೊಂಡಿತು. ಮುದಗೊಂಡಿತು. ಮೆಚ್ಚಿ ಹರ್ಷೋದ್ಗಾರ ಮಾಡಿತು.

ಜಗತ್ತಿನ ನೂರು ದೇಶಗಳ ಪ್ರಧಾನಿ, ಅಧ್ಯಕ್ಷರುಗಳು ಅಲ್ಲಿ ನೆರೆದಿದ್ದರು. ರಾಜಕೀಯ ಮರೆತು, ಸಣ್ಣತನವನ್ನು ತಾತ್ಕಾಲಿಕವಾಗಿ ತೊರೆದು, ಥೇಟ್ ಬೆರಗುಗಣ್ಣಿನ ಪ್ರೇಕ್ಷಕರಂತೆ ಉದ್ಘಾಟನಾ ಸಮಾರಂಭ ವೀಕ್ಷಿಸಿದರು. ಮೈಮರೆತರು. ಮೆಚ್ಚಿ ಚಪ್ಪಾಳೆ ತಟ್ಟಿದರು. ಸುಮಾರು ೨೦೫ ರಾಷ್ಟ್ರಗಳ ೧೦,೭೦೮ ಕ್ರೀಡಾಪಟುಗಳು ಸೇರಿದಂತೆ ಸುಮಾರು ೯೦ ಸಾವಿರ ಜನರು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ನೇರ ಸಾಕ್ಷಿಯಾದರು. ಇನ್ನು ಟಿವಿ ಮೂಲಕ ಭೂಮಂಡಲದ ಈ ಅದ್ಭುತ ಕಾರ್ಯಕ್ರಮವನ್ನು ವೀಕ್ಷಿಸಿದವರು ಅದೆಷ್ಟು ನೂರು ಕೋಟಿಯೋ.

ಸುಮಾರು ಮೂರೂವರೆ ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮ ಹಳೆ ಮತ್ತು ಚೀನಾವನ್ನು ಜಗದೆದುರು ತೆರೆದಿಟ್ಟಿತು. ಮಹಿಳೆಯರು, ಮಕ್ಕಳೂ ಸೇರಿದಂತೆ ೧೫ ಸಾವಿರ ಕಲಾವಿದರು ಕರಾರುವಾಕ್ಕಾಗಿ, ಚ್ಯುತಿ ತಪ್ಪದಂತೆ ತಮ್ಮ ಕೌಶಲ್ಯ ಪ್ರದರ್ಶಿಸಿದರು. ಒಲಂಪಿಕ್ ಅರ್ಥ ಸಾರುವ ವರ್ತುಲಗಳಿಗೆ ವಿದ್ಯುತ್ ದೀಪಗಳು ಜೀವ ತುಂಬಿದವು. ಆಗಸಕ್ಕೆ ಚಿಮ್ಮಿದ ಬಾಣ ಬಿರುಸುಗಳು ರಾತ್ರಿಯನ್ನು ಹಗಲು ಮಾಡಿದವು.

ಇನ್ನು ಹದಿನಾರು ದಿನಗಳ ಕಾಲ ಇಡೀ ಜಗತ್ತು ತನ್ನ ಜಂಜಡವನ್ನು ಮರೆಯುವುದು. ಕ್ರೀಡಾಭಿಮಾನ ಮೆರೆಯುವುದು. ಹೆಸರೇ ಕೇಳಿರದ ದೇಶಗಳ ಕ್ರೀಡಾಪಟುಗಳ ಸಾಧನೆ ಕಂಡು ನಿಬ್ಬೆರಗಾಗುವುದು. ಕುಣಿದು ಕುಪ್ಪಳಿಸುವುದು. ಮನುಕುಲದ ಶ್ರೇಷ್ಠ ಸಾಧನೆಯನ್ನು ಮೆರೆದು ಹೊರ ಭರವಸೆ, ವಿಶ್ವಾಸ ಹಾಗೂ ಸೋದರತ್ವ ಮೆರೆಯುವುದು.

ಬೀಜಿಂಗ್ ಒಲಂಪಿಕ್ಸ್ ಉದ್ಘಾಟನಾ ಸಮಾರಂಭ ಈ ಎಲ್ಲ ಆಶಯಗಳಿಗೆ ಬರೆದ ಮುನ್ನುಡಿ.

- ಚಾಮರಾಜ ಸವಡಿ

Rating
No votes yet

Comments