ಹದಿವಯಸ್ಸಿನ ನೆನಪಿನ ಕೆಲವು ಪುಟಗಳು

ಹದಿವಯಸ್ಸಿನ ನೆನಪಿನ ಕೆಲವು ಪುಟಗಳು

ಯಾಕೆ ಇದ್ದಕಿದ್ದಂತೆ ಮನಸು ಚಂಚಲವಾಗಿದೆ. ಯಾರನ್ನು ನೋಡಿದರೂ ಎನೋ ಕಲ್ಪನೆ ಕನಸು ಓರಗೆಯ ಹುಡುಗರಲ್ಲಿ ಇಷ್ಟು ದಿನ ಇದ್ದ ಆ ಆತ್ಮೀಯತೆಯ ಸೆಳಕು ಎಲ್ಲಿಗೆ ಹೋಯಿತು . ಯಾಕೋ ಏನೋ ದೊಡ್ಡ ಕಂದರ ಏರ್ಪಟ್ಟಿದೆ ಅಂತ ಅನಿಸುತ್ತಿದೆ
-----------------------------------------------------------------------------------------

ಕನ್ನಡಿ ಏಕೋ ನನ್ನನ್ನು ಬಹಳ ಸೆಳೆಯುತ್ತಿದೆ. ಬಿಟ್ಟು ಬರೋಕೆ ಮನಸಾಗಲ್ಲ . ಎಲ್ಲಾ ತುಂಬಾ ಸುಂದರವಾಗಿದೆ . ನನ್ನ ಎಲ್ಲರೂ ಮೆಚ್ಚುಗೆಯಿಂದ ನೋಡ್ತಿದಾರೆ ನಿಮ್ಮ ಮಗಳು ಬರ್ತಾ ಬರ್ತಾ ಶ್ರೀದೇವಿ ಆಗ್ತಾ ಇದಾಳೆ ಅಂತ ಅಂದ್ರಂತೆ ಅನುಪಮ ಆಂಟಿ .
------------------------------------------------------------------------------------------------

ಇವತ್ತು ನಡೆದ ಪ್ರತಿಭಾ ಶೋಧ ಕಾರ್ಯಕ್ರಮದಲ್ಲಿ ಗಿಲ್ ಗಿಲ್ ಗಿಲಕಿ ಹಾಡಿಗೆ ಡ್ಯಾಂಸ್ ಮಾಡಿದಕ್ಕೆ ನಮ್ಮ ಜಿ.ಪಿ.ಆರ್ ಸಾರ್ ತುಂಬಾ ಹೊಗಳಿದರು .ಲಂಗ ದಾವಣಿಯಲ್ಲಿ ತುಂಬಾ ಚೆನ್ನಾಗಿ ಕಾಣ್ತಿದೀಯಾ ಅಂದಿದ್ದಕ್ಕೆ ಅದ್ಯಾಕೆ ನನ್ನ ಮುಖ ಕೆಂಪಾಗ್ಬೆಕು?
ಅದೆಲ್ಲಾ ಇರಲಿ
ಸಂಜೆ ಬಸ್ ಸ್ಟಾಂಡ್‍ನಲ್ಲಿ ಆ ಹುಡುಗ ನನ್ನ ಪಕ್ಕ ಬಂದು ನಿಂತು ತುಂಬಾ ಚೆನ್ನಾಗಿದೀರಾ ಅಂತ ಅಂದಾಗ ಕೋಪ ಮಾಡಿಕೊಂಡಂತೆ ಮಾಡಿ ಅತ್ತ ಕಡೆ ಎದ್ದು ಹೋದರೂ ಅವನು ಮುಂದೆ ಏನ್ ಹೇಳ್ತಾನೋ ಎನ್ನುವ ಕಾತುರ ಕಿವಿಗಿತ್ತಲ್ಲ ಯಾಕೆ.
--------------------------------------------------------------------------------------------
ಪ್ರಪಂಚ ತುಂಬಾ ಸುಂದರವಾಗಿದೆ ಅಂತ ಅನ್ನಿಸ್ತಿದೆ . ಯಾಕೆ ಮೊದಲಿಗಿಂತ ಈಗೀಗ ಡ್ರೆಸ್ ಮೇಲೆ ತುಂಬಾ ಅಸ್ತೆ ಬಂದಿದೆ. ಯಾವ ಬಟ್ಟೆ ಹಾಕಿಕೊಂಡರೆ ನಾನು ಎದ್ದು ಕಾಣಿಸ್ತೀನಿ ಅನ್ನೋದರ ಮೇಲೆ ಡ್ರೆಸ್ ತಗೋತಿದೀನಲ್ಲ .
----------------------------------------------------------------------------------------
ಅಬ್ಬಾ ಇವತ್ತು ಪೇಪರ್‍ನಲ್ಲಿ ಇವನ್ನ ನೋಡಿದ ಮೇಲೆ ನಂಗೆ ಯಾವುದೂ ಬೇಕಾಗಿಲ್ಲ ಅಂತ ಅನ್ನಿಸ್ತಿದೆ . ಇವನ ಗೆಜ್ಜೆ ನಾದ ಫಿಲ್ಮ್ ರಿಲೀಸ್ ಆದ ತಕ್ಷಣ ನೋಡ್ಬೇಕು. ಅದು ಹ್ಯಾಗೆ ಇಷ್ಟು ಸುಂದರವಾಗಿದ್ದಾನೆ
ಇವನು .
ಥೂ ಅವನ ಹೀರೋಯಿನ್ ಒಂಚೂರು ಚೆನ್ನಾಗಿಲ್ಲ ಶ್ವೇತಾ ಅಂತೆ ದಪ್ಪಕ್ಕೆ ಇದಾಳೆ . ಓ ಅವಳಿಗೆ ಎಷ್ಟು ಧೈರ್ಯ ಅವನ ಮೇಲೆ ಕಾಲಿಟ್ಟು ಗೆಜ್ಜೆ ಹಾಕಿಸಿಕೊಳ್ಳೊ ಫೋಟೊನಲ್ಲಿದಾಳೆ. ಹೊಟ್ಟೆ ಉರೀತಿದೆ.
------------------------------------------------------------------------------------------------
ಇವತ್ತು ಅಮ್ಮನ್ನ ಹೇಗಾದರೂ ಮಾಡಿ ಆ ಫಿಲ್ಮಗೆ ಕಳಿಸು ಅಂತ ಹೇಳ್ಬೇಕು. ಅಂತ ನನ್ನ ಮನದ ನೋವನು ಹೇಗೆ ನಿನಗೆ ಹೇಳಲಿ ಅಂತ ಹಾಡಿದ್ದಕ್ಕೆ ಅಮ್ಮನ ಹತ್ತಿರ ಬೈಸಿಕೊಂಡದ್ದಾಯ್ತು.
------------------------------------------------------------------------------------------------
ಅಯ್ಯೊ ರಾಮಕುಮಾರ್ ರಾಜ್‍ಕುಮಾರ್ ಅಳಿಯ ಅಂತೆ ನಂಗೊತ್ತಿರಲಿಲ್ಲ. ಅವನಿಗೆ ಮದುವೆ ಆಗಿದೆಯಂತೆ ಪೂರ್ಣಿಮಾ ಗಂಡ ಅಂತೆ . ಇಷ್ಟು ದಿನ ಸುಮ್ಮನೆ ಅವನ್ನ ಆರಾಧಿಸುತಿದ್ದೆ . ಬೇಡಪ್ಪ ಸುಮ್ಮನೆ ಟೈಮ್ ವೇಸ್ಟ್
-----------------------------------------------------------------------------------------------
ಇಷ್ಟು ದಿನ ಇದ್ದ ಎಲ್ಲ ಖುಶಿ ಹಾಳಾಗಿ ಹೋಯಿತು
ನಮ್ಮ ಗುಂಪಿನಲ್ಲಿ ನಾನೆ ಚೆಲುವೆ ಅಂತ ಇದ್ದೆ ಈ ರತ್ನ ಬೇರೆ ಬಂದಳಲ್ಲ
ಎಲ್ಲ್ರೂ ಅವಳನ್ನ ಮಾಧುರಿ ದಿಕ್ಷಿತ್, ನರ್ಗೀಸ್ ಅಂತಾ ಇದಾರೆ.
ಅದಿರಲಿ ನನ್ನ ಮೇಲಿದ್ದ ಕಣ್ಣುಗಳೆಲ್ಲಾ ಅವಳತ್ತ ಹರೀತಿದೆ.
ಏನಪ್ಪ ಇದು ಜನ ಬಹಳ ಬೇಗ ಚೇಂಜ್ ಆಗ್ತಾರೆ
---------------------------------------------------------------------------------------------------
( ಮುಂದುವರೆಯುವುದು)
(ನನಗೆ ದಿನಚರಿ ಬರೆಯುವ ಅಭ್ಯಾಸವಿರಲಿಲ್ಲವಾದರೂ ಆಗಾಗ ಮನಸಿಗೆ ಅನಿಸಿದ್ದನ್ನು ಯಾವದಾದರೂ ಹಾಳೆಯಲ್ಲಿ ಮೂಡಿಸುತ್ತಿದ್ದೆ . ಮೊನ್ನೆ ನನ್ನ ಹಳೆಯ ಟ್ರ್ಕಂಕ್ ಕ್ಲೀನ್ ಮಾಡುವಾಗ ಈ ಪುಟಗಳು ಕಂಡವು ಅವನ್ನು ಈಗ ಓದುವಾಗ ಒಂದು ಥರಹ ಖುಶಿ ಜೊತೆಗೆ ನಗು ಎಲ್ಲಾ ಬಂದಿತು. ಎಷ್ಟು ಬಾಲಿಶ ಅಲ್ಲವೇ ಆ ವಯಸ್ಸು ಅ ಮನಸ್ಸು, ಈಗ ಬೇಕೆಂದರೂ ಬಾರದಲ್ಲ ಆ ಕನಸುಗಳು )

Rating
No votes yet

Comments