ಕಣ್ಣೇ ಮುಚ್ಚೇ, ಕಾಡಬೇಡ್ವೇ...

ಕಣ್ಣೇ ಮುಚ್ಚೇ, ಕಾಡಬೇಡ್ವೇ...

’ಎಂಥಾ ಹದವಿತ್ತೇ ಹರಯಕೆ ಏನು ಮುದವಿತ್ತೆ...’

ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರ ಭಾವಗೀತೆ ತೂರಿ ಬರುತ್ತಿದೆ.

ಎಷ್ಟು ಸಾರಿ ಕೇಳಿದ್ದೇನೋ ಗೊತ್ತಿಲ್ಲ. ಆದರೂ ಮನಸ್ಸು ಮತ್ತೆ ಮತ್ತೆ ಅತ್ತಲೇ ಹೊರಳುತ್ತದೆ.

ಕರೆಂಟ್‌ ಹೋದ ಮೇಲೆಯೇ ಸಿಡಿ ಬಂದಾಗಿದ್ದು. ಆದರೆ, ಮನಸ್ಸು ಗುನುಗಲು ಶುರು ಮಾಡಿತು. ಮತ್ತದೇ ಸಾಲುಗಳು ’ಎಂಥಾ ಹದವಿತ್ತೇ, ಹರಯಕೆ ಏನು ಮುದವಿತ್ತೇ...’.

ಈ ಗುಂಗು ಬಿಡುವುದಿಲ್ಲ ಎಂದು ಕಂಪ್ಯೂಟರ್‌ ಆನ್‌ ಮಾಡಲು ಮುಂದಾದಾಗ ಕರೆಂಟ್‌ ಇಲ್ಲದ್ದು ನೆನಪಾಯಿತು. ಆದರೆ ಗುಂಗು ಕಳೆದುಕೊಳ್ಳಲು ಏನಾದರೂ ಮಾಡಲೇಬೇಕಿತ್ತು. ಕೈಲಿ ಬರೆಯೋಣ ತುಂಬ ದಿನವಾಯ್ತು ಎಂದು ಪೆನ್ನು ಹಿಡಿದು ಕೂತೆ. ಮನಸ್ಸಿನ ತುಂಬ ಅಲೆಗಳು.

ಎಲ್ಲಿ ಹೋದವು ಮನ ಸೆಳೆಯುವ, ಗುಂಗು ಹಿಡಿಸುವ ಭಾವಗೀತೆಗಳು? ಅರ್ಜೆಂಟ್‌ ಹಾಡುಗಳು ಹಾಗೂ ಬರಹಗಳ ನಡುವೆ ಭಾವಗೀತೆಗಳು ಕಳೆದು ಹೋದವೆ? ಆ ನವಿರು ಭಾವನೆಗಳು ಆವಿಯಾದವೆ? ಏಕೋ ದಿಗಿಲಾಗುತ್ತದೆ. ಈಗಂತೂ ಮನಸ್ಸಿನಲ್ಲಿ ಮಾತು ನಿಲ್ಲುವುದಿಲ್ಲ. ಮನಸ್ಸಿನ ಮಾತನ್ನು, ಅದು ಹುಟ್ಟುತ್ತಿರುವಂತೆ ಹೊರಹಾಕಲು ಮೊಬೈಲ್‌ ಬಂದಿದೆ. ಮಾತನಾಡುವುದು ಬೇಡವೆನ್ನಿಸಿದರೆ ಕುಟ್ಟಲು ಎಸ್ಸೆಮ್ಮೆಸ್‌ ಇದೆ. ಚಾಟಿಂಗ್‌, ಈ ಮೇಲ್‌ ಇವೆ. ಟಿವಿ ಬಂದು ಕೂತಿದೆ. ನಾವು ಮಾತನಾಡದಿದ್ದರೂ ತಾನೇ ಮಾತಾಡುತ್ತ ಹೋಗುತ್ತದೆ.

ಇಂಥ ಪರಿಸ್ಥಿತಿಯಲ್ಲಿ ಭಾವನೆ ಮಾಗುವುದಾದರೂ ಹೇಗೆ? ವಾಚಾಳಿ ಮನಸ್ಸಿನಲ್ಲಿ ಮಾತುಗಳು ನಿಂತಾವಾದರೂ ಹೇಗೆ? ಮನಸ್ಸಿನಲ್ಲಿ ನಿಲ್ಲದ ಮಾತು, ಮೊಳೆತು ಬೆಳೆಯದ ಮಾತು, ಬೆಳೆದು ಮಾಗದ ಮಾತು ಅರ್ಥ ಹೊರಡಿಸುವುದಾದರೂ ಹೇಗೆ? ಕಳಿಯದ ಮಾತಿನಿಂದ ಗೀತೆ ಹುಟ್ಟೀತಾದರೂ ಹೇಗೆ? ಭಾವ ಬೆಳೆದೀತಾದರೂ ಹೇಗೆ? ಮಿಡಿಯಾಗಿದ್ದಾಗಲೇ ಉದುರುತ್ತಿರುವ ಮಾತಿನಿಂದಾಗಿ ಮಾತಿನ ಸೊಗಸಿನ, ಗೀತೆಯ ಸೆಳೆತದ ಮಾವು ಹುಟ್ಟುತ್ತಿಲ್ಲ. ಭಾವ ಬೆಳೆಯುತ್ತಿಲ್ಲ.

ಒಂದಿಷ್ಟು ದಿನ ಸುಮ್ಮನಿದ್ದು ಬಿಡಲು ಕಷ್ಟವಾಗುತ್ತಿರುವುದು ಇದಕ್ಕೇ ಇರಬೇಕು. ಸುಮ್ಮನಿರಬೇಕು. ಮಾತನ್ನು ಮನಸ್ಸಿನಲ್ಲೇ ಗುನುಗಬೇಕು. ಅದು ಅಲ್ಲೇ ಕಳಿತು, ರುಚಿಕಟ್ಟಾಗುವವರೆಗೆ ಹೊರಹಾಕಬಾರದು ಎಂದು ಎಷ್ಟು ಪ್ರಯತ್ನಿಸುತ್ತಿದ್ದೇನೋ. ’ಯಾಕೆ ಸುಮ್ನೆ ಕೂತೆ ಪಲ್ಲು?’ ಎನ್ನುತ್ತಾಳೆ ಅವ್ವ. ಗೆಳತಿಯರು ಫೋನ್‌ ಮಾಡಿ ಯಾವ್ಯಾವುದೋ ವಿಷಯಗಳನ್ನು ಎತ್ತಿ ಮಾತಿನ ಮೌನಕ್ಕೆ ಕನ್ನ ಹಾಕಲು ನೋಡುತ್ತಾರೆ. ಬೇಡ ಬೇಡ ಎಂದರೂ ಟಿವಿ ಕರೆಯುತ್ತದೆ. ಸುದ್ದಿಯನ್ನಾದರೂ ನೋಡೋಣ ಎಂದು ಕೂತರೆ ಏನೇನೋ ಕಾರ್ಯಕ್ರಮಗಳು ಸೆಳೆದು, ಎಲ್ಲವಕ್ಕೂ ಪ್ರೇಕ್ಷಕಳಾಗಿ ಚಪ್ಪಾಳೆ ಹೊಡೆಯುವಲ್ಲಿ ಹೊಡೆದು, ಉಗಿಯುವಲ್ಲಿ ಉಗಿದು, ಟಿವಿ ಆಫ್‌ ಮಾಡಿದರೆ ಮನಸ್ಸಿನ ಮಾತು ಎಲ್ಲೋ ಜಾರಿಹೋಗಿರುತ್ತದೆ.

ಇಲ್ಲ, ಒಂದಿಷ್ಟು ದಿನ ಮಾತಾಡಬಾರದು. ಸುಮ್ಮನಿರಬೇಕು. ಭಾವನೆಯೊಂದು ಮನಸ್ಸಿನಲ್ಲಿ ಹುಟ್ಟಿ ಪಲ್ಲವಿಸಿ ಬೆಳೆಯುವುದನ್ನು ನೋಡಬೇಕು. ಬಸಿರಿ ಹೆಣ್ಣುಮಗಳು ಮಗುವಿನೊಂದಿಗೆ ಮಾತನಾಡುವಂತೆ ಮಾತನಾಡಿ ಅದನ್ನು ಬೆಳೆಸಬೇಕು. ಅದಕ್ಕೆ ಕಣ್ಣು, ಕಿವಿ, ಮೂಗು, ಬಾಯಿ ಮೂಡುವುದನ್ನು ಕಾಣಬೇಕು. ಎಲ್ಲ ಬೆಳೆದು ಅದೊಂದು ಜೀವಿಯಾಗುವವರೆಗೆ ಅದನ್ನು ಹೊರತರಬಾರದು ಅಂತ ಅಂದುಕೊಳ್ಳುತ್ತೇನೆ.

ಎಷ್ಟೋ ಸಾರಿ ಹೀಗೆ ಕೂತಿದ್ದೇನೆ. ಮೌನವಾಗಿದ್ದೇನೆ. ಮನಸ್ಸಿನ ಮಾತು ಬೆಳೆಸುವ ಕೆಲಸ ಬಿಟ್ಟು ಬೇರೆ ಏನೂ ಮಾಡಲು ಹೋಗಿಲ್ಲ. ನನ್ನ ಕಂಪ್ಯೂಟರ್‌ ದಿನಗಟ್ಟಲೇ ಆಫ್‌ ಆಗಿದೆ. ಮೊಬೈಲನ್ನು ಅವ್ವನೇ ಉತ್ತರಿಸಿದ್ದಾಳೆ. ಪೇಪರ್‌ನಲ್ಲಿ ಮನ ಕಲಕುವುದನ್ನು ವಿವರವಾಗಿ ಓದದೆ, ಟಿವಿಯಲ್ಲಿ ಕೇವಲ ಸುದ್ದಿ ಮಾತ್ರ ನೋಡಿ, ಹೊರಗೆ ಸುತ್ತದೇ ಮನಸ್ಸಿನ ಮಾತಿಗೆ ಜೀವ ತುಂಬಲು ಯತ್ನಿಸಿದ್ದೇನೆ.

ಹಾಗೆ ಕೂತಾಗೆಲ್ಲ ಭಾವ ಹುಟ್ಟಿದೆ. ಬೆಳೆದಿದೆ. ಒಂದು ಒಳ್ಳೆಯ ಬರಹವಾಗಿ ಮೂಡಲು ಸಾಧ್ಯವಾಗಿದೆ. ಆದರೆ ಭಾವಗೀತೆಯೊಂದನ್ನು ಬೆಳೆಸಲು ಆಗಿಲ್ಲ. ಚೆಂದದ ಕವಿತೆ ಬರೆಯಲು ಆಗಿಲ್ಲ. ಬರೆದಿದ್ದು ಚೆನ್ನಾಗಿದೆ ಎಂದು ಇತರರು ಹೊಗಳಿದರೂ ಸತ್ವ ಅಷ್ಟಿಲ್ಲ ಎಂಬುದು ಅದರ ತಾಯಾದ ನನಗೆ ಗೊತ್ತು.

ಆಗೆಲ್ಲ ಹಳೆಯ ಹಾಡುಗಳ ಸಿಡಿ ಎತ್ತಿಕೊಳ್ಳುತ್ತೇನೆ. ಅದರ ಪಾಡಿಗೆ ಅದು ಹಾಡುತ್ತದೆ. ನನ್ನ ಪಾಡಿಗೆ ನಾನು ಹಾಡಿಗೆ ಕಿವಿಯಾಗಿ, ಎದೆಯೊಳಗೆ ಮೊಳಕೆಯೊಡೆದ ಭಾವಕ್ಕೆ ತಾಯಾಗಿ ಕೂತುಕೊಳ್ಳುತ್ತೇನೆ. ಇಷ್ಟಿಷ್ಟೇ ಬೆಳೆಸುತ್ತ, ಬೆಳೆಯುತ್ತ, ಅದನ್ನು ಅನುಭವಿಸಿ ಖುಷಿಪಡುತ್ತ ದಿನಗಟ್ಟಲೇ ಇದ್ದುಬಿಡುತ್ತೇನೆ.

ಇಂಥದೊಂದು ತಾಯ್ತನದ ಭಾವದಲ್ಲಿ ದಿನಗಟ್ಟಲೇ ಕೂತಾಗ ಮನಸ್ಸು ಶಾಂತವಾಗುತ್ತದೆ. ಬರಹದ ಸೆಳಕೊಂದು ಸ್ಪಷ್ಟವಾಗುತ್ತದೆ. ಕಂಪ್ಯೂಟರ್‌ ಆನ್‌ ಮಾಡುತ್ತೇನೆ. ಸಂಪದಕ್ಕೆ ಲಾಗಿನ್‌ ಆಗುತ್ತೇನೆ. ಮುಂಬೈ ನೆನಪುಗಳಂತಹ ಬರಹಗಳನ್ನು ಓದಿ ಖುಷಿಪಡುತ್ತ ನನ್ನದೊಂದು ಬರಹ ಸೇರಿಸುತ್ತೇನೆ.

ಎಷ್ಟೊಂದು ಜನ ಭಾವನೆಯ ತಾಯ್ತನ ಸವಿಯುತ್ತಿದ್ದಾರಲ್ಲ ಎಂದು ಅಚ್ಚರಿಪಡುತ್ತೇನೆ.

- ಪಲ್ಲವಿ ಎಸ್‌.

Rating
No votes yet

Comments