ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!

ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!

ಅಬ್ಬಾ ಆಲನಹಳ್ಳಿಯೇ. ಏಕೆ ಸತ್ತೆ ಕವಿಯೇ... ಎನ್ನುತ್ತಿದೆ ಮನಸ್ಸು. ಕೈಲಿ ಆಲನಹಳ್ಳಿ ಕೃಷ್ಣ ಅವರ ಕವಿತೆಗಳು, ಕತೆಗಳ ಪುಸ್ತಕವಿದೆ. ತುಂಬು ಗುಂಗುರುಗೂದಲಿನ ಚೆಲುವ ಕೃಷ್ಣ ತುಂಟ ಕಣ್ಣು ಬೀರುತ್ತಿದ್ದಾನೆ.

ತುಂಬ ಚೆಲುವನಾಗಿದ್ದ ಕೃಷ್ಣ ಸೊಗಸಾಗಿ ಕತೆ-ಕವಿತೆ ಬರೆಯುತ್ತಿದ್ದ. ತನ್ನ ಕಾಲದ ಲೇಖಕರ ಬದುಕನ್ನು ಅನುಕರಿಸಲಿಲ್ಲ. ಆಗಿನ ಕಾಲದ ಅಕ್ಷರ ಶಿಸ್ತನ್ನು ವಿರೋಧಿಸಿ ಬರೆದ. ಬದುಕಿದಂತೆ ಬರೆಯುತ್ತ, ಬರೆದಂತೆ ಬದುಕುತ್ತ ಅಕಾಲಿಕವಾಗಿ ಸತ್ತು ಹೋದ.

ಆದರೆ, ಅವನ ಸಾಹಿತ್ಯ ಇವತ್ತೂ ಜೀವಂತವಾಗಿದೆ. ಚೇತೋಹಾರಿಯಾಗಿದೆ. ಸಾಮಾಜಿಕ ನಿಯಮಗಳು ಇಷ್ಟೊಂದು ಸಡಿಲವಾಗಿದ್ದರೂ, ಕೃಷ್ಣ ಆಲನಹಳ್ಳಿಯ ಸಾಹಿತ್ಯ ಬೆಚ್ಚಿಸುತ್ತದೆ. ಮತ್ತೆ ಮತ್ತೆ ಓದಲು ಹಚ್ಚುತ್ತದೆ.
ಯಾವುದನ್ನು ಪುರೋಹಿತಶಾಹಿ ಎಂದು ಕರೆಯುತ್ತಾರೋ, ಅದನ್ನು ವಿರೋಧಿಸಿದ್ದ ಕೃಷ್ಣ. ಅಷ್ಟೇ ಅಲ್ಲ, ಅದನ್ನು ವಿರೋಧಿಸುವವರ ಬೂಟಾಟಿಕೆಯನ್ನೂ ಗೇಲಿ ಮಾಡಿದ್ದ ಈ ಮಹಾನುಭಾವ. ಲಂಕೇಶ್‌ರಂಥ ಲಂಕೇಶರಿಗೇ ಗೇಲಿ ಮಾಡುತ್ತಿದ್ದ, ಸವಾಲು ಒಡ್ಡುತ್ತಿದ್ದ ಕೃಷ್ಣ, ನಿಯಮಗಳಾಚೆ ಬದುಕಿದ. ನಿಯಮಗಳನ್ನು ಮೀರಿ ಬರೆದ. ಹಾಗೆ ಬದುಕುತ್ತ, ಬರೆಯುತ್ತಲೇ ಸತ್ತು ಹೋಗಿ, ತನ್ನ ಬರಹಗಳ ಮೂಲಕ ಅಮರನಾದ.

ಇದೆಲ್ಲ ಏಕೆ ನೆನಪಾಯಿತೆಂದರೆ, ಸಾಹಿತ್ಯದಲ್ಲಿ ಹಿಂದೆ ಇದ್ದಂತೆ ಈಗಲೂ ಗುಂಪುಗಳಿವೆ. ಪಂಥಗಳಿವೆ. ಒಂದು ಗುಂಪಿಗೆ ಇನ್ನೊಂದು ಗುಂಪಿನ ಬಗ್ಗೆ ತಿರಸ್ಕಾರ, ಮತ್ಸರ ಇದೆ. ಗುಂಪುಗಳೊಳಗೆ ಉಪಗುಂಪುಗಳಿವೆ. ಅವುಗಳ ನಡುವೆ ತಿಕ್ಕಾಟ, ಕಾಲೆಳೆಯುವಿಕೆ, ತಮ್ಮದೇ ಚೆನ್ನೆಂಬ ಗತ್ತು ಇದೆ. ಅವರ ಬೆನ್ನು ಇವರು, ಇವರ ಬೆನ್ನು ಅವರು ತುರಿಸುತ್ತ ಮಹದಾನಂದ ಪಡುವುದು ಸುತ್ತಲೂ ಕಾಣುತ್ತದೆ. ಇಂಟರ್‌ನೆಟ್‌ ತೆರೆದರೆ ಕಾಣುವುದು ಈ ಥರದ ಆನಂದಾವಳಿಗಳೇ.

ಇಂಥವು ಆಲನಹಳ್ಳಿ ಶ್ರೀಕೃಷ್ಣ ಬದುಕಿದ್ದಾಗಲೂ ಇದ್ದವು. ಆದರೆ, ಕೃಷ್ಣ ಯಾವುದೇ ಪಂಥ ಸೇರಲಿಲ್ಲ. ಯಾವ ಪಂಥವನ್ನೂ ಹುಟ್ಟುಹಾಕಲಿಲ್ಲ. ಯಾರಿಗೂ ಪಂಥಾಹ್ವಾನ ಒಡ್ಡಲಿಲ್ಲ. ತನಗೆ ತಿಳಿದಂತೆ ಬದುಕಿದ. ತಿಳಿದಂತೆ ಬರೆದ. ವಿಮರ್ಶಕ ಎಂಬ ಪರಾವಲಂಬಿ ಜೀವಿಯನ್ನು ಯಾವತ್ತೂ ಲಕ್ಷ್ಯಕ್ಕೆ ತೆಗೆದುಕೊಳ್ಳದ ಅಪ್ಪಟ ಸ್ವಾತಂತ್ರವಾದಿ ಲೇಖಕ ಕೃಷ್ಣ.

ಅವರ ’ಬೆಳಗು’ ಹೆಸರಿನ ಕವಿತೆಯ ಒಂದೆರಡು ನುಡಿಗಳನ್ನು ಇಲ್ಲಿ ಕೊಡುತ್ತಿದ್ದೇನೆ. ಇದನ್ನು ಓದಿದರೆ ಕೃಷ್ಣನ ಗಟ್ಟಿತನ, ಭಾಷೆಯನ್ನು ಬಳಸುವ ಚಾತುರ್ಯ ಗೊತ್ತಾಗುತ್ತದೆ. ಒಂದು ವೇಳೆ ಗೊತ್ತಾಗದಿದ್ದರೆ, ಮೇಲೆ ಹೇಳಿದ್ದನ್ನೆಲ್ಲ ಮರೆತು ಹಾಯಾಗಿರಬಹುದು.


ಬೆಳಗು
ಇರುಳು ಬೆತ್ತಲೆ ತೆಕ್ಕೆ ಬಿಡಿಸಿಕೊಂಡೆದ್ದ
ಸೂರ್ಯ: ಜಿಬರೆಗಣ್ಣೊರಸುತ್ತಾಕಳಿಸಿ
ಕೊಬ್ಬಿದಾಡು, ಕುರಿ, ಕೋಳಿ ಸಿಗಿದು ಸೀಳಿ
ಕಂದು, ನೀಲಿ, ಬಿಳಿ, ಕೆಂಪು ಖಂಡಗಳ ತೂಗಿಬಿಟ್ಟು
ಬಣ್ಣ ಬಣ್ಣದ ಮೂಡಣದ ಮಾಂಸದಂಗಡಿ ತೆರೆದಾಗ
ನನ್ನೂರಿನಲ್ಲಿ ಬೆಳಗಾಯಿತು.
ಮೈನೆರೆದೇಳು ವರುಷವಾದರಿನ್ನೂ ಒಬ್ಬಂಟಿ
ಕತ್ತಲ ಸೆರೆಯೊಳಗೆ ಕೀಲು ನೋವಿಗತ್ತು ನರಳುವ,
ನಮ್ಮೂರ ವೈದಿಕರ ಮಗಳ
ಬಿಡುಗಡೆಗೆಂದು ಕಾದಿದ್ದ ಗಾಳಿ
ಹಿತ್ತಲ ಕದ ತಟ್ಟಿ, ಪಿಸುಪಿಸುಗುಟ್ಟಿ ಕದ್ದು ನಡೆದಾಗ
ನನ್ನೂರಿನಲ್ಲಿ ಬೆಳಗಾಯಿತು.
ಧಗಧಗನುರಿವ ಹದಿನೆಂಟರ ಕೆನ್ನಾಲಿಗೆ ಚಾಚಿ
ಸೀಳುನಾಯಾಗಿ ನಿಂತ ಗೌಡರ ಹುಡುಗ;
ಮುಗಿಲಾಚೆ ಬಾನೆತ್ತರಕೆ
ಬಯಕೆಯೆದೆ ತಿದಿಯೊತ್ತಿ
ಹತ್ತಿ ಹೊರಟಾಗ ಬೆಂಕಿ- ಹೂವಿನ ಹಡಗ
ನನ್ನೂರಿನಲ್ಲಿ ಬೆಳಗಾಯಿತು.
....................................................
....................................................
ಹೊಳೆಯ ನಡುನೀರೊಳಗೆ
ಬುಳಬುಳನೆ ಮುಳುಗುತ್ತ ಒಣಮಂತ್ರ ವಟಗುಡುವ
ಅರವತ್ತರ ಗಡಿ ಮುಟ್ಟಿದ ಕಚ್ಚೆಹರುಕ ಶಾನುಭೋಗ;
ಕರೆಗೆ ಬಂದೂರ ಗರತಿಯರು ಮೊಣಕಾಲಮಟ
ನೀರೊಳಗೆ ಸೀರೆ ಮೇಲೆತ್ತಿ ನೀರ ಮೊಗೆವಾಗವರ
ಗದಗುಡುವ ತುಂಬು ತೊಡೆಗಳ ಕಂಡು ಹಾದರದ
ನಗೆ ನಕ್ಕಾಗ
ನನ್ನೂರಿನಲಿ ಬೆಳಗಾಯಿತು.
- ಶ್ರೀಕೃಷ್ಣ ಆಲನಹಳ್ಳಿ

ಸ್ಫೂರ್ತಿ ಉಕ್ಕಲು ವಿದೇಶಿ ಬರಹಗಾರರೇ ಬೇಕಿಲ್ಲ. ನಮ್ಮಲ್ಲೂ ಶಕ್ತ ಲೇಖಕರಿದ್ದಾರೆ. ಸಾಹಿತಿಗಳಿದ್ದಾರೆ. ವಿದೇಶದ ಜೊತೆಜೊತೆಗೆ ಸ್ವದೇಶಿಯನ್ನೂ ನೋಡುವ, ಗುರುತಿಸುವ, ಬೆಳೆಸುವ ಮನಸ್ಸು ಕನ್ನಡ ಅಕ್ಷರಲೋಕಕ್ಕೆ ಬೇಕಿದೆ ಎಂಬ ಅನಿಸಿಕೆಯ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಆಲನಹಳ್ಳಿಯವರ ಬಗ್ಗೆ ಬರೆದೆ. ಬೆಳಗು ಎಂಬ ಸುಂದರ ಅನಿಸಿಕೆಯನ್ನು ಹೀಗೂ ನೋಡಲು ಸಾಧ್ಯವೆ? ಎಂದು ಎಷ್ಟೋ ಸಾರಿ ಅಚ್ಚರಿಪಟ್ಟಿದ್ದೇನೆ. ಮೊದಲ ಸಾರಿ ಈ ಕವಿತೆ ಓದಿದಾಗ ನನಗೆ ಆಘಾತವಾಗಿತ್ತು.

ಶ್ರೀಕೃಷ್ಣ ಆಲನಹಳ್ಳಿಯವರೇ ಹಾಗೆ. ಓದಿದಾಗೆಲ್ಲ ಆಘಾತವಾಗುತ್ತದೆ. ಅಚ್ಚರಿಯಾಗುತ್ತದೆ. ಕೊನೆಗೆ ಮೆಚ್ಚುಗೆ ಮೂಡುತ್ತದೆ.

ಕನ್ನಡದಲ್ಲಿ ಎಂಥೆಂಥ ಶಕ್ತ ಬರವಣಿಗೆಗಳಿವೆ ಎಂಬ ಹೆಮ್ಮೆ ಮೂಡಿಸುತ್ತದೆ.

- ಪಲ್ಲವಿ ಎಸ್‌.
http://dharwadpallavi.blogspot.com

Rating
No votes yet

Comments