ಕನ್ನಡ ಭಾಷೆಯ ಉಳಿಸಲು, ಬೆಳೆಸಲು ಐ. ಟಿ. ಕನ್ನಡಿಗರ ಪಾತ್ರವೇನು?

ಕನ್ನಡ ಭಾಷೆಯ ಉಳಿಸಲು, ಬೆಳೆಸಲು ಐ. ಟಿ. ಕನ್ನಡಿಗರ ಪಾತ್ರವೇನು?

ಮೊನ್ನೆ ನಮ್ಮ ಆಫೀಸ್ ಅಲ್ಲಿ ಒಂದು ಕನ್ನಡ ಪ್ರಬಂಧ ಸ್ಪರ್ಧೆ ಇತ್ತು, ವಿಷಯ : ಕನ್ನಡ ಭಾಷೆಯ ಉಳಿಸಲು, ಬೆಳೆಸಲು ಐ. ಟಿ. ಕನ್ನಡಿಗರ ಪಾತ್ರವೇನು? ಅದಕ್ಕೆ ಒಂದು ಬರಹ ಹಾಕಿದ್ದೆ, ಏನೋ ತಿಳಿದೇ ಒಂದು ಪ್ರೈಜ್ ಬೇರೆ ಕೊಟ್ಟ ಬಿಟ್ರು :)

ಹೇಗಿದೆ ಅಂತ ಅಕ್ಷರ ಮಿತ್ರರಾದ ನೀವು ಹೇಳಿ..

ಕನ್ನಡ ಭಾಷೆ ಉಳಿಸಬೇಕು, ಬೆಳೆಸಬೇಕು ಅನ್ನುವ ಮಾತು ಕೇಳಿದಾಗ ಅನ್ನಿಸೋದು ಕನ್ನಡ ಭಾಷೆ ಅಳಿವಿನ ಅಂಚಿಗೆ ಬಂದಿದೆಯೇ? ಯಾವುದೇ ಭಾಷೆ ಉಳಿಯಲು, ಬೆಳೆಯಲು ಇರುವ ಒಂದೇ ಹಾದಿ ಅಂದರೆ ಅದರ ಬಳಕೆ. ಬಳಕೆಯಲ್ಲಿಲ್ಲದ ಯಾವುದೇ ಭಾಷೆಯಾದರೂ, ಅದು ಎಷ್ಟೇ ಸಮರ್ಥವಾಗಿದ್ದರೂ ಇತಿಹಾಸದ ಪುಟ ಸೇರುವುದರಲ್ಲಿ ಸಂಶಯವಿಲ್ಲ. ಹಾಗಿದ್ದಲ್ಲಿ, ಎಲ್ಲರನ್ನೂ ಕಾಡುವ ಒಂದೇ ಪ್ರಶ್ನೆ ಅಂದರೆ ಕನ್ನಡ ಭಾಷೆ ಬಳಕೆಯಲ್ಲಿ ಇಲ್ಲವೇ? ಕನ್ನಡ ಖಂಡಿತವಾಗಿಯು ಬಳಕೆಯಲ್ಲಿ ಇದೆ. ಬೀದರನಿಂದ ಬೆಂಗಳೂರಿನವರೆಗಿನ ಲಕ್ಷಾಂತರ ಮನೆಗಳಲ್ಲಿ ಕನ್ನಡ ಖಂಡಿತವಾಗಿಯು ಬಳಕೆಯಲ್ಲಿದೆ. ಆದರೆ ಕೇವಲ ಒಂದು ಮನೆ ಭಾಷೆಯಾಗಿ ಬಳಸುವ ಅರ್ಹತೆ ಮಾತ್ರ ನಮ್ಮ ಭಾಷೆಗಿರುವುದೋ?

ಇಂದಿನ ಜಾಗತೀಕರಣದ ಕಾಲಮಾನದಲ್ಲಿ ಎದುರಾಗುವ ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಜಾಗತೀಕರಣ ನೀಡುವ ಹಲವು ಅವಕಾಶಗಳಿಗೆ ತನ್ನನ್ನು ತಾನು ತೆರೆದುಕೊಳ್ಳುವ ಭಾಷೆ ಉಳಿದು, ಬೆಳೆಯುವುದರಲ್ಲಿ ಯಾವುದೇ ಅನುಮಾನ ಬೇಡ. ಮುಂದುವರಿದ ದೇಶಗಳಾದ ಫ್ರಾನ್ಸ್, ಜರ್ಮನಿ, ಇಸ್ರೇಲ್, ಜಪಾನ್, ಚೀನಾ ಹೀಗೆ ಹಲವು ಪ್ರಮುಖ ದೇಶಗಳು ತಮ್ಮ ಭಾಷೆಯನ್ನೇ ತಮ್ಮ ಪ್ರಗತಿಗೆ ಸಾಧನವಾಗಿರಿಸಿಕೊಂಡಿವೆ. ನೆನಪಿರಲಿ, ಈ ಎಲ್ಲ ದೇಶಗಳು ಜಾಗತೀಕರಣವನ್ನು ಅಪ್ಪಿಕೊಂಡಿವೆ, ಆದರೆ ತಮ್ಮ ಭಾಷೆಯನ್ನು ಕಡೆಗಣಿಸದೆ, ಜಾಗತೀಕರಣದಿಂದ ಆಗುತ್ತಿರುವ ಹೊಸ ಹೊಸ ಸಂಶೋಧನೆಗಳು, ಹೊಸ ಹೊಸ ತಂತ್ರಜ್ಞಾನ, ಹೀಗೆ ದೊರಕಿರುವ ಪ್ರತಿ ಅವಕಾಶವನ್ನು ತಮ್ಮ ಭಾಷೆಯಲ್ಲೇ ಅನುಷ್ಟಾನಕ್ಕೆ ತರುವ ಮುಲಕ ತಮ್ಮ ಭಾಷೆಯನ್ನು ಜ್ಞಾನ ಸ್ರಷ್ಟಿಸುವ ಭಾಷೆಯಾಗಿಸಿಕೊಂಡಿದ್ದಾರೆ ಹಾಗೂ ಭಾಷೆಯ ಜೊತೆ ಜೊತೆಗೆ ತಾವು ಅಭಿವ್ರುದ್ಧಿ ಹೊಂದುತ್ತಿದ್ದಾರೆ.

ಇವತ್ತು ಕನ್ನಡದಲ್ಲಿ ಜ್ಞಾನ ಸ್ರಷ್ಟಿಯಾಗದೇ ಇರಲು ಎರಡು ಕಾರಣಗಳಿವೆ. ಒಂದು ರಾಜಕೀಯ, ಇನ್ನೊಂದು ಆರ್ಥಿಕ. ಕನ್ನಡ ವಿದ್ಯಾಭ್ಯಾಸ/ಬರವಣಿಗೆಯಿಂದ ನಾಲ್ಕಂಕಿ ಸಂಬಳ ಸಿಗೋಲ್ಲ ಎನ್ನುವುದು ಆರ್ಥಿಕ ಕಾರಣ. ರಾಜಕೀಯ ಕಾರಣ ಎಂದರೆ ಕನ್ನಡವನ್ನು ಒಂದು ಜ್ಞಾನ ಸ್ರಷ್ಟಿಸುವ ಭಾಷೆಯಾಗಿಸುವ ನಿಟ್ಟಿನಲ್ಲಿ, ಅನ್ನ ಕೊಡುವ ಭಾಷೆಯಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರಕ್ಕೆ ಯಾವುದೇ ಚಿಂತನೆ ಇಲ್ಲದೇ ಇರೋದು. ಈ ಸದ್ಯಕ್ಕೆ "ಕನ್ನಡ ಹೊಟ್ಟೆಯ ಹಿಟ್ಟಿನ ಭಾಷೆಯಾಗದೇ, ಕೇವಲ ಜುಟ್ಟಿನ ಮಲ್ಲಿಗೆ ಭಾಷೆಯಾಗಿದೆ". ಕನ್ನಡ ಅಂದರೆ ಬರಿ ಕಥೆ, ಕವನ, ಸಾಹಿತ್ಯ, ನಾಟಕ, ಸಿನೆಮಾಗಳಿಗೆ ಸೀಮಿತವಾಗಿರಿಸಿದ್ದೇವೆ, ಅಂತಹ ಒಂದು ಸೀಮಿತ ಚಿಂತನೆಯಿಂದ ಹೊರ ಬಂದು ಆಡಳಿತ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಹೀಗೆ, ಜೀವನದ ಪ್ರತಿ ಹೆಜ್ಜೆಯಲ್ಲೂ ಕನ್ನಡದ ಬಳಕೆ ಬಂದು ಕನ್ನಡ ಒಂದು ಜ್ಞಾನ ಸ್ರಷ್ಟಿಯ, ಅನ್ನ ಕೊಡುವ ಭಾಷೆಯಾದಾಗ ಅದು ಉಳಿದು ಬೆಳೆದು ಅಭಿವ್ರುದ್ಧಿ ಹೊಂದುವುದರಲ್ಲಿ ಯಾವ ಸಂದೇಹವೂ ಇಲ್ಲ.

ಇನ್ನು ಇ ದಿಕ್ಕಲ್ಲಿ ಒಬ್ಬ ಐ.ಟಿ. ಕನ್ನಡಿಗನ ಪಾತ್ರ:
ಶಿಕ್ಷಣ, ಉದ್ಯಮಶೀಲತೆ ಹೀಗೆ ಬೆಟ್ಟದಷ್ಟು ಸಮಸ್ಯೆಗಳಿರುವಾಗ ನಮ್ಮ ಒಬ್ಬರ ಕೈಲಿ ಏನ್ ಆಗುತ್ತೆ ಅಂತ ನಾವ್ಯಾರು ಕೈ ಚೆಲ್ಲಬಾರದು. ನೆನಪಿರಲಿ, ಸಮಾಜ ಐ.ಟಿ. ಕನ್ನಡಿಗರಿಗೆ ವಿಶೇಷ ಆದರ, ಗೌರವ ನೀಡಿದೆ. ಚೆನ್ನಾಗಿ ಓದಿದ್ದಾರೆ, ಅಮೇರಿಕಾ-ಯುರೋಪನ ಕಾಲಾಸಿಪಾಳ್ಯ-ಮೆಜಸ್ಟಿಕ್ ತರ ಸುತ್ತಿದ್ದಾರೆ, ಚೆನ್ನಾಗಿ ಸಂಪಾದನೆ ಮಾಡ್ತಾರೆ, ಕೈ ಹಾಕಿದ ಕೆಲ್ಸ ಸಖತ್ ಆಗಿ ಮಾಡ್ತಾರೆ ಅಂತ ಮರ್ಯಾದೆ ನೀಡಿದೆ. ನಮಗೆ ಬೇಕೊ, ಬೇಡ್ವೊ ಜನ ನಮ್ಮ ಅನುಕರಣೆ ಮಾಡ್ತಾರೆ. ನಾವು  ಕನ್ನಡದ ಬಗ್ಗೆ ಕಾಳಜಿ ಮಾಡಿದ್ರೆ ಅವ್ರೂ ಮಾಡ್ತಾರೆ, ನಾವು ಮಾಡಲಿಲ್ಲ ಅಂದ್ರೆ ಅವ್ರೂ ಮಾಡಲಿಕ್ಕಿಲ್ಲ. ರಾಜಕೀಯ, ಸಾಮಾಜಿಕ ಬದಲಾವಣೆ ತರೋದು ನಮ್ಮ ಕೈಯಲ್ಲಿ ಇರದಿರಬಹುದು, ಆದ್ರೆ ನಮ್ಮ ನಮ್ಮ ಮಿತಿಯಲ್ಲಿ ಕೊನೆ ಪಕ್ಷ ಇಷ್ಟಾದ್ರೂ ಮಾಡಬಹುದು:

  • ನಮ್ಮನಮ್ಮ ಪರಿಣಿತಿಯ ಕ್ಷೇತ್ರದಲ್ಲಿ ವಿಷ್ಯಗಳನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡೋದು ಹಾಗೂ ಅಂತಹ ಪ್ರಯತ್ನ ಮಾಡ್ತಿರೊರಿಗೆ ಎಲ್ಲ ರೀತಿಯ ಬೆಂಬಲ ನೀಡೊದು.
  • ಐ.ಟಿ ಕಂಪನೀನೇ ಇರಲಿ, ಮತ್ತೊಂದು ಕಂಪನಿಯಿರಲಿ, ಕಾಲೇಜೇ ಇರಲಿ ನಮ್ಮ ಸ್ನೇಹಿತರೋಡನೆ ವಿಜ್ಞಾನ-ತಂತ್ರಜ್ಞಾನದ ವಿಷಯಗಳನ್ನ ಕನ್ನಡದಲ್ಲೇ ಚರ್ಚಿಸಿ, ಆ ಮೂಲಕ ಕನ್ನಡದಲ್ಲಿ ತಾಂತ್ರಿಕ ಚರ್ಚೆ ಸಾಧ್ಯವಾಗಿಸೋದು
  • ನಮ್ಮ ಘನ ಸರಕಾರ ಇದೆಲ್ಲ ಆಗದಿರೋ ಮಾತು ಅನ್ನೊ ಕೀಳರಿಮೆ ಬಿಟ್ಟು ಸರಿಯಾದ ಶಿಕ್ಷಕರ ನೇಮಕ, ಸರಿಯಾದ ಪಠ್ಯಕ್ರಮದ ಯೋಜನೆ ಹಾಗೂ ಅತಿ ಮುಖ್ಯವಾಗಿ ಕನ್ನಡದಲ್ಲಿ ಉನ್ನತ ಶಿಕ್ಷಣ ಜಾರಿಗೆ ತರಲು ತಜ್ಞರ ಮುಂದಾಳುತನದಲ್ಲಿ ಸಾಗಬೇಕಾದ ದಾರಿಯ ಬಗ್ಗೆ ಚಿಂತಿಸೋ ಹಾಗೆ ಮಾಡೋದು.
  • ಅದು ಮಾಲ್ ಇರಲಿ, ಮಲ್ಟಿಪ್ಲೆಕ್ಸ್ ಇರಲಿ, ಎಲ್ಲೆ ಹೋದರೂ ಕನ್ನಡದಲ್ಲಿ ಗ್ರಾಹಕ ಸೇವೆಗೆ ಆಗ್ರಹಿಸುವುದು, ಆ ಮೂಲಕ ಕನ್ನಡಮಯ ವಾತವರಣ ಸ್ರಷ್ಟಿಸಲು ಪ್ರಯತ್ನಿಸುವುದು.
  • ನಮ್ಮ ನಮ್ಮ ಸಂಸ್ಠೆಯಲ್ಲಿ ಉದ್ಯೋಗದಲ್ಲಿ ಪ್ರತಿಭಾವಂತ ಕನ್ನಡಿಗರಿಗೆ ಅವಕಾಶ ಮಾಡಿ ಕೊಡುವುದು.
  • ಎಲ್ಲ ಸಂದರ್ಭದಲ್ಲೂ ನಾನು ಕನ್ನಡಿಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳಿ, ಆ ಮೂಲಕ ನಿಮ್ಮನ್ನು ಅನುಕರಿಸುವ ಕಿರಿಯರಲ್ಲಿ ಆ ಭಾವನೆ ಬರುವಂತೆ ಮಾಡಿ.

Rating
Average: 5 (1 vote)

Comments