ಕಚೇರಿ ಎಂಬ ನರಕ-೧

ಕಚೇರಿ ಎಂಬ ನರಕ-೧

ನನ್ನ ಬರಹಕ್ಕೆ ಪ್ರತಿಕ್ರಿಯೆ ಹಾಕುತ್ತಾ ಶ್ರೀದೇವಿ ಕಳಸದ ಅವರು ಒಂದು ಸವಾಲು ಒಡ್ಡಿದ್ದಾರೆ. ಅದು ಸವಾಲೆಂದರೇ ಸರಿ. ಏಕೆಂದರೆ, ಅವರ ಪ್ರಕಾರ ನಾನು, ಜಿಟಿಜಿಟಿ ಮಳೆಯಲ್ಲಿ ಬೆಚ್ಚಗೇ ಕೂತು, ಭಾವನಾತ್ಮಕ ಪ್ರಪಂಚದಲ್ಲಿ ವಿಹರಿಸುತ್ತಿದ್ದೇನಂತೆ. ಲೋಕದ ಕಷ್ಟಗಳ ಬಗ್ಗೆ ನನಗೆ ಗೊತ್ತಿಲ್ಲವಂತೆ. ’ನಾವಾದರೆ, ಕಚೇರಿಯಲ್ಲಿ ಕೆಲಸ ಮಾಡಿ, ಹೈರಾಣಾಗಿ ಮನೆಗೆ ಬರುತ್ತೇವೆ. ಹೀಗಾಗಿ, ಬರವಣಿಗೆಯಲ್ಲಿ ಪೂರ್ತಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ’ ಎಂಬುದು ಅವರ ದೂರು.

ಈ ದೂರಿಗೆ ಅಥವಾ ಅಸಮಾಧಾನಕ್ಕೆ ನಾನೊಬ್ಬಳೇ ಉತ್ತರ ಬರೆಯುವುದು ಸೂಕ್ತವಲ್ಲ ಅಂದುಕೊಂಡಿದ್ದೇನೆ. ಸಂಪದದ ನಿಯಮಿತ ಬರಹಗಾರ್ತಿಯರಾದ ಕಲ್ಪನಾ, ರೂಪಾ, ಜಯಲಕ್ಷ್ಮೀ ಕೂಡಾ ಈ ಪ್ರಶ್ನೆಯನ್ನು ತಮಗೇ ಸಂಬಂಧಿಸಿದ್ದು ಎಂಬಂತೆ ತೆಗೆದುಕೊಂಡು ಉತ್ತರ ನೀಡಬೇಕೆಂದು ನನ್ನ ವಿನಂತಿ.

ಕಚೇರಿಯಲ್ಲಿ ನಾನು ಕೆಲಸ ಮಾಡಿಲ್ಲ. ಅಲ್ಲಿಯ ಸಮಸ್ಯೆಗಳ ಬಗ್ಗೆ ನನಗೆ ನೇರ ಅನುಭವವಿಲ್ಲ. ಆದರೆ, ಕಚೇರಿಯ ವಾತಾವರಣ ಗೊತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ, ಕಾಲೇಜಿನ ದಿನಗಳಲ್ಲಿ ಆಗಷ್ಟು, ಈಗಷ್ಟು ಕಚೇರಿಯ ರಗಳೆಯನ್ನು ಅನುಭವಿಸಿದ್ದಾಗಿದೆ. ಅಡ್ಮಿಶನ್‌ ಸಮಯದಲ್ಲಂತೂ ಗುಮಾಸ್ತರು ಜೀವ ಹಿಂಡುತ್ತಿದ್ದರು. ನಮ್ಮವೇ ಮಾರ್ಕ್ಸ್‌‌ಕಾರ್ಡ್‌‌ಗಳ ಮೇಲೆ ಮುಖ ಗೊತ್ತಿಲ್ಲದ ಗೆಜೆಟೆಡ್‌ ಆಫೀಸರ್‌ನ ಅಟೆಸ್ಟೇಶನ್‌ ಮಾಡಿಸಿ ತರಬೇಕಿತ್ತು. ಸರಕಾರಿ ಕಚೇರಿಗಳ ಕ್ರೂರತೆ ಮತ್ತು ಕೆಟ್ಟ ವೃತ್ತಿಪರತೆ ಹೇಗಿರುತ್ತದೆ ಎಂಬುದು ನನ್ನ ಅನುಭವಕ್ಕೆ ಬಂದಿದ್ದು ಆಗ.

’ಸರ್‌’ ಎಂದು ನಾವು ಆಫೀಸರ್‌ನ ಕೋಣೆಯ ಹೊರನಿಂತು, ಅಂಜುತ್ತ ಅಂಜುತ್ತ ಕೂಗುತ್ತಿದ್ದೆವು. ಆತ ಮುಖ ಎತ್ತಿ ನೋಡುತ್ತಿರಲಿಲ್ಲ. ಮತ್ತೆ ಸರ್‌ ಎಂದು ಕೂಗು. ಏನ್ರೀ? ಎಂಬ ದರ್ಪದ ಉತ್ತರ. ನಿಮ್ಮನ್ಯಾರು ಒಳಗೆ ಬಿಟ್ಟಿದ್ದು ಎಂದು ಕೆಂಡವಾಗುತ್ತಿದ್ದ. ಹೊರಗೆ ನಿಂತಿದ್ದ ಜವಾನನಿಗೆ ಒಂದು ಮುಗುಳ್ನಗೆ ಬೀರಿ, ಅವನ ಆಕ್ಷೇಪಣೆಯನ್ನು ಹುಟ್ಟುವುದಕ್ಕೆ ಮುಂಚೆಯೇ ಇಲ್ಲವಾಗಿಸಿ ನಾವು ಒಳಗೆ ಬಂದಿರುವುದು ಪಾಪ, ಆ ಅಧಿಕಾರಿಗೆ ಹೇಗೆ ಗೊತ್ತಾಗಬೇಕು?

ಸರ್‌, ಅಟೆಸ್ಟ್‌ ಮಾಡಿಸಬೇಕಿತ್ತು ಎಂದು ಅಂಜುತ್ತ ವಿನಂತಿಸುತ್ತಿದ್ದೆವು. ’ನನಗೆ ಸರ್ಕಾರ ಸಂಬಳ ಕೊಟ್ಟು ಇಟ್ಟಿರುವುದು ನಿಮ್ಮ ಸರ್ಟಿಫಿಕೇಟ್‌ಗಳಿಗೆ ಅಟೆಸ್ಟ್‌ ಮಾಡಿಸಲು ಅಲ್ಲ’ ಎಂದು ಕ್ರೂರವಾಗಿ ಉತ್ತರಿಸಿ ಆತ ನಮ್ಮನ್ನು ಹೊರಗೆ ಅಟ್ಟುತ್ತಿದ್ದ. ಪ್ರತಿಯೊಂದು ಕಚೇರಿಯಲ್ಲಿಯೂ ಇದೇ ಅನುಭವ.

ಆಗ ತುಂಬ ಕೋಪ ಬರುತ್ತಿತ್ತು. ನಮ್ಮವೇ ಸರ್ಟಿಫಿಕೇಟ್‌ಗಳಿಗೆ ಅಟೆಸ್ಟ್‌ ಮಾಡಿಸಲು ಇವನ್ಯಾರು ದೊಣ್ಣೆನಾಯಕ? ಎಂದು ಗೊಣಗುತ್ತಿದ್ದೆವು. ಅರ್ಜಿಯಲ್ಲಿ, ’ಮೇಲೆ ಹೇಳಿದ ಎಲ್ಲ ಸಂಗತಿಗಳೂ ಸತ್ಯ ಎಂದು ಈ ಮೂಲಕ ಪ್ರಮಾಣೀಕರಿಸುತ್ತಿದ್ದೇನೆ’ ಎಂದು ಸಹಿ ಮಾಡಿದ ಮೇಲೆ, ನಾವು ಲಗತ್ತಿಸುವ ಎಲ್ಲ ಸರ್ಟಿಫಿಕೇಟ್‌ಗಳ ಸತ್ಯಾಸತ್ಯತೆ ನಮ್ಮ ಜವಾಬ್ದಾರಿ ತಾನೆ? ಹಾಗಿರುವಾಗ, ಇವನ್ಯಾರು ನಮ್ಮ ಸರ್ಟಿಫಿಕೇಟ್‌ಗಳನ್ನು ದೃಢೀಕರಿಸಲು?

ಆದರೆ, ಸರ್ಕಾರಕ್ಕೆ ವಾದ ಅರ್ಥವಾಗುವುದಿಲ್ಲ. ವಿವೇಕ ಮೊದಲೇ ಇರುವುದಿಲ್ಲ. ಹೀಗಾಗಿ ನಮ್ಮ ಪ್ರಶ್ನೆಗಳು ಬರೀ ಅಸಹಾಯಕ ಗೊಣಗಾಟವಾಗಿ ಬಿಡುತ್ತಿತ್ತು.

ಕೊನೆಗೆ, ಕಚೇರಿಯಿಂದ ಕಚೇರಿಗೆ ಅಡ್ಡಾಡಿ, ಯಾರಾದರೂ ಸಹೃದಯಿಯೋ ಅಥವಾ ’ಹೆಂಗರುಳಿನ’ ಅಧಿಕಾರಿಯ ಹತ್ತಿರ ಅಟೆಸ್ಟ್‌ ಶ್ರಾದ್ಧ ಮುಗಿಸಿ ಅಡ್ಮಿಶನ್‌ಗೆ ಹೋಗುತ್ತಿದ್ದೆವು. ಅಲ್ಲಿ ಗುಮಾಸ್ತರ ಸುದೀರ್ಘ ಪರಿಶೀಲನೆ. ಒಂದೇ ಒಂದು ಅಕ್ಷರವನ್ನು ಓವರ್‌ರೈಟ್‌ ಮಾಡಿದ್ದರೆ, ಅಥವಾ ಕಾಟು ಹಾಕಿದ್ದರೆ ಮುಗೀತು. ’ಈ ರೀತಿ ಅಪ್ಲಿಕೇಶನ್‌ ಕೊಟ್ಟರೆ ನಡೆಯೋಲ್ಲ. ವೈಟನರ್‌ ಹಾಕಿ ಸರಿಯಾಗಿ ಬರೆದುಕೊಂಡು ಬನ್ನಿ’ ಎಂದು ಅಟ್ಟುತ್ತಿದ್ದ. ಆಗೆಲ್ಲ ಅಳುವೇ ಬಂದುಬಿಡುತ್ತಿತ್ತು. ನಮ್ಮ ಓದಿಗೂ, ಈ ಅರ್ಜಿ ತುಂಬುವ ಕರ್ಮಕ್ಕೂ ಅದೆಂಥ ಸಂಬಂಧವಿದ್ದೀತು ದೇವರೇ’ ಎಂಬ ಅಸಹಾಯಕತೆ ಆವರಿಸುತ್ತಿತ್ತು. ಆದರೇನು? ಅದು ಮಾಡಲೇಬೇಕಾದ ಕರ್ಮ.

ಹೀಗಾಗಿ, ಕಾಲೇಜಿನ ದಿನಗಳಲ್ಲೇ ಸರ್ಕಾರಿ ಕಚೇರಿಗಳ ಬಗ್ಗೆ ಅನಾದರ, ಅಸಡ್ಡೆ ಹಾಗೂ ಕೆಟ್ಟ ಅಭಿಪ್ರಾಯ ಬೆಳೆದುಬಿಟ್ಟಿತು. ಮುಂದೆ ಡ್ರೈವಿಂಗ್‌ ಲೈಸೆನ್ಸ್‌ಗಾಗಿ ಹೋದಾಗ ಅಂಥದೇ ಅನುಭವ. ನನ್ನ ಗೊಣಗಾಟ ನೋಡಲಾರದೇ ಅಪ್ಪ, ಯಾರೋ ಏಜೆಂಟ್‌ಗೆ ಹೇಳಿ ಕೆಲಸ ಹಗುರ ಮಾಡಿಕೊಟ್ಟ.

ಇವತ್ತಿಗೂ ಸರ್ಕಾರಿ ಕಚೇರಿಯಲ್ಲಿ ಏನಾದರೂ ಕೆಲಸ ಇದೆ ಎಂದರೆ ತಳಮಳ ಶುರುವಾಗುತ್ತದೆ. ಅಲ್ಲಿಯ ಬೇಜವಾಬ್ದಾರಿತನ, ಸಣ್ಣತನ, ಕೆಲಸ ಕದಿಯುವ, ಕೆಡಿಸುವ ಗುಣ ನೆನಪಾಗಿ ಮನಸ್ಸು ಮಂಕಾಗುತ್ತದೆ. ಚೆನ್ನಾಗಿ ಮಾರ್ಕ್ಸ್‌ ಪಡೆದರೂ ಸರ್ಕಾರಿ ಕೆಲಸಕ್ಕೆ ನಾನು ಅರ್ಜಿ ಕೂಡ ಹಾಕದೇ ಇರಲು ಈ ಅಭಿಪ್ರಾಯವೇ ಕಾರಣವಾಯಿತು.

ಆದರೆ, ಈ ರೀತಿಯ ವಾತಾವರಣ ಅಥವಾ ಮನಃಸ್ಥಿತಿ ಕೇವಲ ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಇರುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ, ಡಿಗ್ರಿ ಮುಗಿಯುತ್ತಲೇ ನನ್ನ ಹಲವಾರು ಗೆಳತಿಯರು ದೊಡ್ಡ ದೊಡ್ಡ ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿದರು. ಫೋನ್‌ನಲ್ಲಿ, ಈ ಮೇಲ್‌ನಲ್ಲಿ ಅಥವಾ ರಜೆಯಲ್ಲಿ ಬಂದಾಗ ಅವರು ಹೇಳುತ್ತಿದ್ದ ಅನುಭವ ಕೇಳಿದಾಗ, ಮೊದಮೊದಲು ನಂಬಲಿಕ್ಕೇ ಆಗಲಿಲ್ಲ.

ಆದರೆ, ಇಂತಹ ವಿಷಯಗಳಲ್ಲಿ ಗೆಳತಿಯರು ಸುಳ್ಳು ಹೇಳುವುದಿಲ್ಲ ಎಂಬುದು ನನಗೆ ಗೊತ್ತಿತ್ತು. ಹೀಗಾಗಿ, ಪರೀಕ್ಷೆ ಮಾಡೋಣ ಎಂದು ಹುಬ್ಬಳ್ಳಿಯಲ್ಲೇ ಇದ್ದ ಖಾಸಗಿ ಕಂಪನಿಯೊಂದಕ್ಕೆ ಒಂದು ದಿನದ ಮಟ್ಟಿಗೆ ಹೋಗಿ ಬಂದೆ. ಅಲ್ಲಿ ಕಂಡ ನರಕ ನನ್ನ ಅಭಿಪ್ರಾಯವನ್ನು ಬದಲಾಯಿಸಿಬಿಟ್ಟಿತು.

ಆ ಬಗ್ಗೆ ಮುಂದಿನ ಕಂತಿನಲ್ಲಿ ಬರೆಯುವೆ.

- ಪಲ್ಲವಿ ಎಸ್‌.

Rating
No votes yet

Comments