ಮಧ್ಯರಾತ್ರಿಯ ಬುದ್ಧ
ಮನೆಯ ಲೈಟುಗಳು ಒಂದೊಂದಾಗಿ ಆರುತ್ತಿವೆ. ರಾತ್ರಿ ಹನ್ನೊಂದಾದ ಮೇಲೆ ಲೈಟುಗಳಿಗೇನು ಕೆಲಸ?
ಊಟವಾಗಿದೆ. ಟಿವಿ ನ್ಯೂಸ್ ನೋಡಿದ್ದಾಯಿತು. ರಸ್ತೆಗಳು ಯಾವಾಗಲೋ ನಿರ್ಜನವಾಗಿವೆ. ರಾತ್ರಿ ಯಾವಾಗ ಬೇಕಾದರೂ ಮಳೆ ಬರಬಹುದು. ರಾತ್ರಿ ಬೀಟ್ನ ಪೋಲೀಸರು ಬೈಕ್ ಮೇಲೆ ಬೇಸತ್ತವರಂತೆ ಸುತ್ತುತ್ತಿದ್ದಾರೆ. ಇನ್ನೂ ಬಾಗಿಲು ತೆರೆದಿರುವ ಅಂಗಡಿಗಳ ಮುಂದೆ ಸುಮ್ಮನೇ ನಿಂತು, ಕೆಕ್ಕರಿಸಿ ನೋಡಿ ಮುಂದೆ ಹೊರಡುತ್ತಿದ್ದಾರೆ. ಅರ್ಥವಾದವರಂತೆ ಅಂಗಡಿಗಳವರು ಶಟರ್ ಅರ್ಧಕ್ಕೆ ಇಳಿಸಿದಂತೆ ನಟಿಸುತ್ತಿದ್ದಾರೆ. ಬೀಡಾ ಅಂಗಡಿ ಮುಂದೆ ಗುಂಪು ಹಾಗೇ ಇದೆ. ಅಲ್ಲಲ್ಲಿ ಕಟ್ಟೆಯ ಮೇಲೆ ಸಿಗರೇಟ್ ಸೇದುತ್ತ ಮಾತಾಡುವವರ ಮಾತುಗಳು ಇನ್ನೂ ಮುಗಿದಿಲ್ಲ.
ಆಗಲೇ ಹನ್ನೊಂದಾಯಿತು. ಇನ್ನೊಂದು ಗಂಟೆಗೆ ಹನ್ನೆರಡಾಗುತ್ತದೆ. ಮಧ್ಯರಾತ್ರಿಯವರೆಗೆ ಎದ್ದರೆ ಬೆಳಿಗ್ಗೆ ಬೇಗ ಎಚ್ಚರವಾಗುವುದಿಲ್ಲ. ’ಮಲಗೇ ಪಲ್ಲು’ ಎಂದು ಅವ್ವ ಗುಡ್ನೈಟ್ ಹೇಳಿದಂತೆ ಎಚ್ಚರಿಸುತ್ತಾಳೆ. ನಾನು ಸುಮ್ಮನಿರುತ್ತೇನೆ. ಆಕೆಯೂ ಸುಮ್ಮನೇ ತನ್ನ ಕೋಣೆಗೆ ಹೋಗಿಬಿಡುತ್ತಾಳೆ. ಅಪ್ಪ ಮಲಗಿ ಆಗಲೇ ಒಂದು ಗಂಟೆಯಾಗಿದೆ. ಎದ್ದವಳು ನಾನೊಬ್ಬಳೇ. ಜೊತೆಗೆ ನನ್ನ ಕಂಪ್ಯೂಟರು.
ಏನು ಬರೆಯಲಿ? ಷೆಲ್ಫ್ನಲ್ಲಿ ಕವಿಗಳಿದ್ದಾರೆ, ಕಾದಂಬರಿಕಾರರಿದ್ದಾರೆ, ಪತ್ರಕರ್ತರಿದ್ದಾರೆ. ಅವರಿಗೆ ರಾತ್ರಿ ಹನ್ನೊಂದಾಗಿರುವುದು ಗೊತ್ತೇ ಇಲ್ಲ. ಹಾಗೇ ಕಣ್ಣುಬಿಟ್ಟುಕೊಂಡು ನೋಡುತ್ತಿದ್ದಾರೆ. ನೋಡಲಿ, ನೋಡಲಿ, ಎಷ್ಟು ಜನರ ನಿದ್ದೆ ಕೆಡಿಸಿದ್ದಾರೋ. ಅವರ ನಿದ್ದೆಯೂ ಒಂದಿಷ್ಟು ಹಾಳಾಗಲಿ ಎಂಬಂತೆ ನಾನು ಲೈಟ್ ಆರಿಸದೇ ಸುಮ್ಮನೇ ಕೂಡುತ್ತೇನೆ.
ಗಡಿಯಾರ ನಿಧಾನವಾಗಿ ತಿರುಗುತ್ತಿದೆ. ಅದಕ್ಕೆ ಬೇಸರವಿಲ್ಲ. ಅದು ಬೇಸರ ಮಾಡಿಕೊಳ್ಳುವುದಿಲ್ಲ. ಈ ಯಂತ್ರದ ಗಡಿಯಾರ ನಿಂತರೇನು ಮಹಾ? ಬದುಕಿನ ಗಡಿಯಾರ ನಿಲ್ಲುವುದಿಲ್ಲ. ಅರೆ ಕ್ಷಣ ಗಡಿಯಾರವನ್ನೇ ದಿಟ್ಟಿಸುತ್ತೇನೆ. ಬೇಸರವಾಗುತ್ತದೆ.
ಗೆಳತಿಯೊಬ್ಬಳು ಖುಷಿಯಿಂದ ಕಳಿಸಿದ ಎಸ್ಸೆಮ್ಮೆಸ್ ಇನ್ನೊಮ್ಮೆ ಓದಿಕೊಳ್ಳುತ್ತೇನೆ: ಪ್ಯಾರ್ ಥೋ ಹೋನಾಯಿ ಥಾ. ಕಳ್ಳಿ. ಕಂಠಮಟ ಪ್ರೇಮದಲ್ಲಿ ಮುಳುಗಿರಬೇಕು. ಒಂದು ಪುಟ್ಟ ಸಾಲಿನಲ್ಲಿ ಮನದಾಳವನ್ನು ಬಿಡಿಸಿಟ್ಟಿದ್ದಾಳೆ. ನನಗೇಕೆ ಹೀಗೆ ಬರೆಯಲು ಬರುವುದಿಲ್ಲ? ಒಂದೇ ಸರಳ ಸಾಲಿನಲ್ಲಿ ಮನಸು ಬಿಚ್ಚಿಡುವುದು ಏಕೆ ಆಗುವುದಿಲ್ಲ? ಬೇಂದ್ರೆ ನೆನಪಾಗುತ್ತಾರೆ: ಆ ನಗಿ ಇತ್ತಿತ್ತ, ಹೋಗೇತಿ ಎತ್ತತ್ತ?
ಲಂಕೇಶ್ ಎದ್ದು ಬರುತ್ತಾರೆ ಕನ್ನಡಕ ಒರೆಸುತ್ತ: ಕೆಂಪಾದವೋ ಎಲ್ಲ ಕೆಂಪಾದವೋ ಎನ್ನುತ್ತಾರೆ. ಎಲ್ಲಿದ್ದೆ ಇಲ್ಲೀ ತಂಕ, ಎಲ್ಲಿಂದ ಬಂದ್ಯವ್ವ ಎಂದು ವಿಚಾರಿಸುತ್ತಾರೆ. ನಾನು ಸುಮ್ಮನಿರುತ್ತೇನೆ. ಲಕ್ಷ್ಮೀನಾರಾಯಣಭಟ್ಟರು ’ಎಲ್ಲಿ ಜಾರಿತೋ ಮನವು...’ ಎಂದು ಗುನುಗುತ್ತಾರೆ. ಆಗಲೂ ಸುಮ್ಮನಿರುತ್ತೇನೆ. ಅಡಿಗರು ಬೊಚ್ಚು ಬಾಯಲ್ಲಿ, ’ಸಪ್ತಸಾಗರದಾಚೆ ಎಲ್ಲೋ ಸುಪ್ತ ಸಾಗರ ಕಾದಿದೆ...’ ಎಂದು ಅಂತರ್ಮುಖರಾಗುತ್ತಾರೆ. ಅನಂತಮೂರ್ತಿಯವರು ತಮ್ಮ ತುಂಟ ಪ್ರಜ್ಞಾವಂತಿಕೆ ಕಂಗಳಲ್ಲಿ ’ಮತ್ತೆ ಮಳೆ ಹುಯ್ಯುವುದೆ, ಎಲ್ಲ ನೆನಪಾಗುವುದೆ...?’ ಎಂದು ಪ್ರಶ್ನಿಸುತ್ತಾರೆ.
ನೆನಪಾದಂತೆ ಎದ್ದು ಕಿಟಕಿಯಾಚೆ ದಿಟ್ಟಿಸುತ್ತೇನೆ. ಮಾವಿನ ಮರದ ಮೇಲೆ ದಟ್ಟ ಮೋಡಗಳ ಕುರುಹು. ಮಳೆ ಬರಬಹುದು. ಬೀಟ್ ಪೊಲೀಸಿನವರು ಯಾವುದೋ ಅಂಗಡಿಯ ಎದುರು ನಿಲ್ಲಬಹುದು. ಸಿಗರೇಟ್ ಸೇದುತ್ತಿರುವ ಹುಡುಗರು ಮಳೆಯಲ್ಲೇ ವೇಗವಾಗಿ ಹಾಸ್ಟೆಲ್ ಕಡೆ ಹೋಗಬಹುದು. ರಾತ್ರಿ ಆಗ ಪೂರ್ತಿಯಾಗುತ್ತದೆ. ರಸ್ತೆಗಳು ನಿರ್ಜನವಾಗುತ್ತವೆ. ಎಲ್ಲ ಕಡೆ ಸಣ್ಣಗೆ ಅಥವಾ ರಭಸದಿಂದ ಬೀಳುವ ಮಳೆಯೊಂದೇ. ರಸ್ತೆಯನ್ನು ವ್ಯಾಪಿಸಿ, ಮನೆ-ಮರಗಳನ್ನು ತೊಯ್ಯಿಸಿ, ಅದರಲ್ಲಿ ಗೂಡುಕಟ್ಟಿರುವ ಹಕ್ಕಿಗಳನ್ನು ಎಬ್ಬಿಸಿ, ಬೆಳಗಾಗುವವರೆಗೆ ಧೋ ಎಂದು ಬೀಳಬಹುದು.
ಏನು ಮಾಡಲಿ?
ಕಂಪ್ಯೂಟರ್ ಆನ್ ಮಾಡಿ ಹಾಗೇ ಬಿಟ್ಟಿದ್ದರಿಂದ ಸ್ಕ್ರೀನ್ ಸೇವರ್ ನಾಯಿ ಪರದೆ ನೆಕ್ಕುತ್ತಿದೆ. ಗಡಿಯಾರ ತನ್ನ ಗತಿಯಲ್ಲಿ ಮುಂದುವರೆದಿದೆ. ತಮಾಷೆ ಮಾಡಿದ್ದ ಕವಿಗಳು, ಲೇಖಕರು ಗೂಡಿನೊಳಗೆ ಸುಮ್ಮನೇ ಕೂತಿದ್ದಾರೆ. ಅವ್ವ ಮಲಗಿದ್ದಾಳೆ. ಅಪ್ಪ ಗೊರಕೆ ಹೊಡೆಯುತ್ತಿದ್ದಾನೆ. ನಾನೊಬ್ಬಳು ಎದ್ದು ಕೂತಿದ್ದೇನೆ.
’ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ...’ ನೆನಪಾಗುತ್ತದೆ. ಯಾರು ಬರೆದಿದ್ದು? ಬೇಂದ್ರೆಯವರಾ? ನೆನಪಾಗುವುದಿಲ್ಲ. ನಿಜ. ಎಲ್ಲರೂ ಮಲಗಿದ್ದಾಗ ಬುದ್ಧ ಏಳುತ್ತಾನೆ. ಹೀಗಾಗಿ ಆತ ಕಾಣುವುದಿಲ್ಲ. ಬೆಳಿಗ್ಗೆ ಎದ್ದಾಗ ಬುದ್ಧ ಹೋಗಿರುತ್ತಾನೆ. ಆಗಲೂ ಕಾಣುವುದಿಲ್ಲ. ಮಲಗಿ ಎದ್ದಂತಿರುವ ಧ್ಯಾನಸ್ಥ ಸ್ಥಿತಿಯಲ್ಲಿ ಕಂಡಾನೆಯೆ?
ಆ ಧ್ಯಾನಸ್ಥ ಸ್ಥಿತಿ ಎಂಥದಿರಬಹುದು? ಮೌನವಾಗಿ ಕೇಳಿಕೊಳ್ಳುತ್ತೇನೆ. ಉತ್ತರ ಗೊತ್ತಾಗುವುದಿಲ್ಲ. ನಾನು ಬುದ್ಧನಾಗಲಾರೆ. ಬೇಂದ್ರೆಯಾಗಲಾರೆ. ಲಂಕೇಶ್, ಅನಂತಮೂರ್ತಿ, ಅಡಿಗ, ಲಕ್ಷ್ಮೀನಾರಾಯಣ ಭಟ್ಟರಾಗಲಾರೆ. ನಾನೇನಿದ್ದರೂ ಪಲ್ಲವಿ ಮಾತ್ರ. ಪಲ್ಲವಿಯಾಗಿ ಉಳಿದುಕೊಂಡೇ ಇನ್ನೇನೇನೋ ಆಗಬಹುದೇನೋ.
ಏನೋ ಹೊಳೆದಂತಾಯಿತು. ಏನೋ ತಿಳಿಯಾದಂತಾಯಿತು. ನಾಯಿ ಮರಿ ನೆಕ್ಕಿ ನೆಕ್ಕಿ ಮಾನಿಟರ್ ಪರದೆ ಸ್ವಚ್ಛವಾದಂತಿದೆ. ಕೀಬೋರ್ಡ್ ಕರೆಯುತ್ತಿದೆ. ತಿಳಿಯಾದಾಗಲೇ ಇಳಿದುಬಿಡಬೇಕು ಎಂದುಕೊಳ್ಳುತ್ತ ಮೌಸ್ ಕದಲಿಸಿದೆ.
ನಾಯಿ ಮರಿ ಮಾಯವಾಯಿತು. ತಿಳಿವು ಸ್ಪಷ್ಟವಾಯಿತು. ನಾನೇನಿದ್ದರೂ ಪಲ್ಲವಿ ಮಾತ್ರ ಎಂದುಕೊಳ್ಳುತ್ತ ಅಕ್ಷರಗಳನ್ನು ಕುಟ್ಟತೊಡಗಿದೆ.
ಆಗ ಗಡಿಯಾರ ಹನ್ನೆರಡು ಬಾರಿಸಿತು.
- ಪಲ್ಲವಿ ಎಸ್.
Comments
ಉ: ಮಧ್ಯರಾತ್ರಿಯ ಬುದ್ಧ
In reply to ಉ: ಮಧ್ಯರಾತ್ರಿಯ ಬುದ್ಧ by kishoreyc
ಉ: ಮಧ್ಯರಾತ್ರಿಯ ಬುದ್ಧ
In reply to ಉ: ಮಧ್ಯರಾತ್ರಿಯ ಬುದ್ಧ by pallavi.dharwad
ಉ: ಮಧ್ಯರಾತ್ರಿಯ ಬುದ್ಧ
In reply to ಉ: ಮಧ್ಯರಾತ್ರಿಯ ಬುದ್ಧ by kishoreyc
ಉ: ಮಧ್ಯರಾತ್ರಿಯ ಬುದ್ಧ
ಉ: ಮಧ್ಯರಾತ್ರಿಯ ಬುದ್ಧ
In reply to ಉ: ಮಧ್ಯರಾತ್ರಿಯ ಬುದ್ಧ by kalpana
ಉ: ಮಧ್ಯರಾತ್ರಿಯ ಬುದ್ಧ
ಉ: ಮಧ್ಯರಾತ್ರಿಯ ಬುದ್ಧ
In reply to ಉ: ಮಧ್ಯರಾತ್ರಿಯ ಬುದ್ಧ by anamadheya
ಉ: ಮಧ್ಯರಾತ್ರಿಯ ಬುದ್ಧ
ಉ: ಮಧ್ಯರಾತ್ರಿಯ ಬುದ್ಧ
In reply to ಉ: ಮಧ್ಯರಾತ್ರಿಯ ಬುದ್ಧ by anil.ramesh
ಉ: ಮಧ್ಯರಾತ್ರಿಯ ಬುದ್ಧ
In reply to ಉ: ಮಧ್ಯರಾತ್ರಿಯ ಬುದ್ಧ by anil.ramesh
ಉ: ಮಧ್ಯರಾತ್ರಿಯ ಬುದ್ಧ
ಉ: ಮಧ್ಯರಾತ್ರಿಯ ಬುದ್ಧ
In reply to ಉ: ಮಧ್ಯರಾತ್ರಿಯ ಬುದ್ಧ by Jayalaxmi.Patil
ಉ: ಮಧ್ಯರಾತ್ರಿಯ ಬುದ್ಧ
ಉ: ಮಧ್ಯರಾತ್ರಿಯ ಬುದ್ಧ
In reply to ಉ: ಮಧ್ಯರಾತ್ರಿಯ ಬುದ್ಧ by shashikannada
ಉ: ಮಧ್ಯರಾತ್ರಿಯ ಬುದ್ಧ
ಉ: ಮಧ್ಯರಾತ್ರಿಯ ಬುದ್ಧ
In reply to ಉ: ಮಧ್ಯರಾತ್ರಿಯ ಬುದ್ಧ by ಹರೀಶ್
ಉ: ಮಧ್ಯರಾತ್ರಿಯ ಬುದ್ಧ
ಉ: ಮಧ್ಯರಾತ್ರಿಯ ಬುದ್ಧ
In reply to ಉ: ಮಧ್ಯರಾತ್ರಿಯ ಬುದ್ಧ by santoshinamdar
ಉ: ಮಧ್ಯರಾತ್ರಿಯ ಬುದ್ಧ