ವಾದ ಮತ್ತು ಚರ್ಚೆ - ಒಂದು ಚಂದಮಾಮಾ ಕತೆ.

ವಾದ ಮತ್ತು ಚರ್ಚೆ - ಒಂದು ಚಂದಮಾಮಾ ಕತೆ.

ಹಿಂದೊಮ್ಮೆ ವಿವೇಚನೆ (ಡಿಸ್ಕ್ರಿಶನ್) ಬಗ್ಗೆ ಚಂದಮಾಮಾದಲ್ಲಿ ಹಿಂದೆ ಎಂದೋ ಓದಿ ನಾನು ಮೆಚ್ಚಿ ನೆನಪಿನಲ್ಲುಳಿದ ಒಂದು ಕತೆ ಬರೆದಿದ್ದೆ .
ಈಗ ಇದನ್ನು ಓದಿ ..

ಯಾವನೋ ಒಬ್ಬ ಪಂಡಿತ ದೇಶದೇಶ ತಿರುಗ್ತಾ ತನ್ನ ಪಾಂಡಿತ್ಯದಿಂದ ನಾನಾ ದೇಶಗಳ ಆಸ್ಥಾನಪಂಡಿತರನ್ನ ಸೋಲಿಸ್ತಾ ಜಯಪತ್ರಗಳನ್ನು ’ಗೋಳೇ’ ಮಾಡ್ತಾ ಒಂದು ದೇಶಕ್ಕೆ ಬರ್ತಾನೆ . ಅಲ್ಲಿ ವಿಚಾರಿಸ್ತಾನೆ -ಇಲ್ಲಿ ಪ್ರಖ್ಯಾತ , ದೊಡ್ಡ ಪಂಡಿತರು ಯಾರಿದ್ದಾರೆ ಅಂತ . ಜನ ಕೇಳ್ತಾರೆ - ಯಾಕೆ ? ಏನು ? ಅಂತ . ಅವನು ’ಅವರನ್ನ ವಾದದಲ್ಲಿ ಸೋಲಿಸಬೇಕಾಗಿದೆ’ ಅಂತ ಹೇಳ್ತಾನೆ. ಆಗ ಜನ -ನೀವು ಸರಳಕನ ಹೆಸರು ಕೇಳಿಲ್ವೇ? ಅಂತ ಅಂತಾರೆ . ಹೀಗೆ ಎಲ್ಲಿ ಕೇಳಿದ್ರೂ ಸರಳಕನ ಹೆಸರೇ ಎಲ್ಲರ ಬಾಯಲ್ಲಿ . ಯಾರಪ್ಪಾ ಈ ಪಂಡಿತ ? ನಾನು ಈವರೆಗೂ ಹೆಸರೇ ಕೇಳಿಲ್ಲ . ಅಂತ ಅವನ್ನ ಹುಡುಕ್ಕೊಂಡು ಅವನಿದ್ದಲ್ಲಿಗೆ ಹೋಗ್ತಾನೆ. ಅಲ್ಲಿ ಹೋಗಿ ನೋಡಿದರೆ ...
ಜನರ ಒಂದು ಸಣ್ಣ ಗುಂಪು ಇದೆ . ಅವರು ತಮ್ಮ ತಮ್ಮಲ್ಲಿ ಮಾತಾಡ್ತಿದ್ದಾರೆ . ಹಿರಿಯತನ, ಪಾಂಡಿತ್ಯ ತೋರುವ ಯಾರೂ ಅಲ್ಲಿ ಇಲ್ಲ. ಅಲ್ಲಿ ಹೋಗಿ ನಿಮ್ಮಲ್ಲಿ ಸರಳಕ ಯಾರು ಅಂತ ಕೇಳಿದಾಗ ಅವರಲ್ಲೊಬ್ಬ ’ನಾನು .ಯಾಕೆ?’ ಅಂತ ಕೇಳಿದಾಗ , ನಾನು ಇಂಥಿಂಥ ಪಂಡಿತ, ಇಂಥಿಂಥ ಪಂಡಿತ ನಿಮ್ಮನ್ನ ವಾದದಲ್ಲಿ ಸೋಲಿಸೋಕೆ ಬಂದಿದೀನಿ ಅಂತಾನೆ.
-ವಾದಾನ ? ಏನದು ? ಅದು ಯಾಕೆ ಮಾಡಬೇಕು?
-ಅದೇ , ನಾನು ಒಂದು ವಿಷಯ ಹೀಗೆ ಅಂತ ವಾದಿಸ್ತೀನಿ. ನೀವು ಹಾಗೆ ಅಲ್ಲ ಅಂತ ವಾದಿಸಬೇಕು . ಹೀಗೆ ವಾದಿಸಿ ಯಾರು ಗೆಲ್ಲುತ್ತಾರೋ ನೋಡೋಣ
- ಹೌದು , ವಾದದಲ್ಲಿ ಗೆದ್ದರೆ , ಅದು ಸತ್ಯ ಅಂತ ಆಗುತ್ತದೆಯೇ ? ಸತ್ಯದ ಒಂದು ತುದೀನ ನಾನೂ ಇನ್ನೊಂದು ತುದೀನ ನೀವೂ ಹಿಡಕೊಂಡು ವಾದಿಸಿದರೆ ಏನು ಬಂತು ? ಸತ್ಯ ನಡುವೆ ಎಲ್ಲೋ ಇರುತ್ತದಲ್ವೇ ? ಅದನ್ನ ನಾವು ಚರ್ಚಿಸಿ ತಿಳಕೋಬೇಕಲ್ವೇ? ಬನ್ನಿ , ನಾವು ಮಾತಾಡೋಣ , ಇಲ್ಲಿ ನನ್ನ ಗೆಳೆಯರೂ ಇದ್ದಾರೆ.

ಹೆಚ್ಚು ಹೇಳುವ ಅಗತ್ಯ ಇಲ್ಲ . ಪಂಡಿತನು ಈ ಮಾತನ್ನು ಒಪ್ಪಿದ ಅಂತ ಹೇಳಿ ಕತೆ ಮುಗಿಸುವೆನು.

Rating
No votes yet

Comments