ಆರದ ದೀಪ
ಎಷ್ಟೋ ವರ್ಷಗಳ ಹಿಂದಿನ ಮಾತು.
ಅವತ್ತು ಮೇಜಿನ ಮೇಲಿಟ್ಟಿದ್ದ ಅವನ ಡೈರಿ ತೆಗೆದು ನೋಡುತ್ತಿದ್ದೆ.
ತೆಗೆದ ತಕ್ಷಣ ಯಾವುದೋ ಸಡುವಿನ ಪುಟದಲ್ಲಿ ಕಂಡದ್ದು ಒಂದು ಕವಿತೆ.
ಪದ್ಯದ ಹೆಸರಲ್ಲೇ ಒಂದು ಹುಡುಗಿ ಕಂಡಳು! ಆಸಕ್ತಿಯಿಂದ ಓದತೊಡಗಿದೆನೆಂಬ ನೆನಪು.
ಇಷ್ಟು ವರ್ಷಗಳ ನಂತರ, ಒಂದೇ ಒಂದು ಸಲ ಓದಿದ ಕವಿತೆ ಪೂರ್ತಿ ನೆನಪಿರುವುದು ಸಾಧ್ಯವೇ ಇಲ್ಲ. ಆದರೂ, ಅದರ ಮೊದಲು - ಕೊನೆ ಸುಮಾರಾಗಿ ಹೀಗಿತ್ತೇನೋ ಎನ್ನಿಸುತ್ತಿದೆ.
---------
ನಿನ್ನನಗಲಿ
ನಾನು ನಾನಾಗಿಲ್ಲ ಈಗ!
..
..
..
..
..
..
ನನ್ನ ಮುದ್ದು ಸುಲೋಚನಾ
ತಾಳೆನು ಈ ಬೇಸರ!
ನನ್ನ ಮುದ್ದು ಸು-ಲೋಚನಾ
ಬರುವೆಯಾ ಬೇಗ?
ನಿನ್ನನಗಲಿ
ನಾನು ನಾನಾಗಿಲ್ಲ ಈಗ!
(*: ನನ್ನ ಸು-ಲೋಚನ (=ಕನ್ನಡಕ) ಮುರಿದು ಹೊಸ ಕನ್ನಡಕಕ್ಕೆ ಕಾಯುತ್ತಿದ್ದಾಗ ಬರೆದದ್ದು) :) !
ಹೀಗೆ ಆ ಡೈರಿಯಲ್ಲಿ ಕಣ್ಣಿನ ಸಂಗಾತಿ ಸುಲೋಚನೆಯ ನೆನಪಿನ ಜೊತೆಗೆ, ಇನ್ನೂ ಹಲವಾರು ಕವಿತೆಗಳು, ಕಥೆಗಳು ಕೂಡ ಇದ್ದವು. ಅವನ ಮುತ್ತಿನಂತಹ ಅಕ್ಷರಗಳಲ್ಲಿ ಬರೆದದ್ದನ್ನು ನೋಡುವುದೇ ಒಂದು ಸೊಗಸಾಗಿತ್ತು. ನನ್ನ ಅಕ್ಷರವೂ ಅಷ್ಟು ಚೆನ್ನಾಗಿ ಇರಬಾರದೇ ಎಂಬ ಆಸೆಯಾಗುತ್ತಿತ್ತು ನನಗೆ.
ಅವನ ಬರವಣಿಗೆಗೆ ಮನಸ್ಸನ್ನು ಗೆಲ್ಲುವ ಶಕ್ತಿ ಇತ್ತು. ಎಷ್ಟೆಂದರೂ ಅವನ ಹೆಸರೇ ಅದಾಗಿತ್ತಲ್ಲ! ಅವನು ಯಾವತ್ತಾದರೂ ಪತ್ರಿಕೆಗಳಿಗೆ ಅವನ ಕವನ ಕಥೆಗಳನ್ನು ಕಳಿಸಿದ್ದನೇ? ನಂತರದ ದಿನಗಳಲ್ಲಿನ ಧಾವಂತದ ಜೀವನದ ನಾಗಾಲೋಟದಲ್ಲಿ ಅವನು ಏನಾದರೂ ಬರೆದನೋ ಬರೆಯಲಿಲ್ಲವೋ? ಆಗ ಕೇಳಲು ನನಗೆ ಗೊತ್ತೇ ಆಗಲಿಲ್ಲ.
ನಾನು ಕೇಳಲೇ ಇಲ್ಲ. ಅವನು ತಾನಾಗೇ ಯಾವತ್ತೂ ಹೇಳಲೇ ಇಲ್ಲ.
ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ.
ಈಗ ಕೇಳಬೇಕೆಂದರೆ ಅವನೇ ಇಲ್ಲ.
ಆದರೇನಂತೆ?
ಸ್ಥಾವರಕ್ಕಳಿವುಂಟು. ಜಂಗಮಕ್ಕಳಿವಿಲ್ಲ.
ದೀಪಕ್ಕಳಿವಿರಬಹುದು, ಬೆಳಕಿಗೆ ಅಳಿವಿಲ್ಲ.
ಜೀವಕ್ಕಳಿವಿರಬಹುದು. ನೆನಹಿಗೆ ಅಳಿವಿಲ್ಲ.
-ಹಂಸಾನಂದಿ
Comments
ಉ: ಆರದ ದೀಪ