ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್

ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್

ಇವ ಮುಂದೆ ಮುಂದೆ ಸಾಗಿ ಒಂದೊಂದು ತುಣುಕುಗಳನ್ನ ಜೋಡಿಸಿಡಲು ಪ್ರಯತ್ನಿಸುತ್ತಿದ್ದ. ಅಂದರೆ ಆ ಎಲ್ಲ ಒಟ್ಟಾಗಿಸಿ ಒಂದು ಆಕಾರ ಕೊಡುವುದು ಇವನ ಇರಾದೆ. ಹೀಗೆ ಮಾಡುತ್ತಿರುವುದು ಮೊದಲ ಸಲವೇನಲ್ಲ. ನೆನಪಾದಾಗಲೆಲ್ಲ ಅನ್ನುವುದಕ್ಕಿಂತ ಇವನದು ಇದೇ ಖಯಾಲಿ. ಆಕಾಶಕ್ಕೆ ಮುಖ ಮಾಡಿ ಏರಲಾಗದ ಏಣಿಗಾಗಿ ಹಂಬಲಿಸುವುದು. ಅಚ್ಚಾಗದ ಚಿತ್ರವನ್ನು ಮತ್ತೆ ಮತ್ತೆ ಬಿಡಿಸುವುದು. ಸುರುಳಿ-ಸುರುಳಿಯಾಗಿ ಗಂಟುಹೊಸೆದುಕೊಳ್ಳುವ ಬಣ್ಣಗಳ ಮೊಂಡಾಟ ಬಿಡಿಸುವುದು.

ಒಂದು-ಒಂದೇ ಬಾರಿ ಇವನಂದುಕೊಂಡಂತೆ ಅದೊಂದು ಅದ್ಭುತ ಕಲಾಕೃತಿಯಾಗಿಬಿಟ್ಟರೆ, ಅದಕ್ಕೊಂದು ಚೌಕಟ್ಟು ಕಟ್ಟುವುದು ಹೆಚ್ಚು ಹೊತ್ತಿನ ಕೆಲಸವಲ್ಲ. ಯಾಕೆಂದರೆ ಚೌಕಟ್ಟು ಕಟ್ಟುವುದು, ಕಟ್ಟಿಕೊಳ್ಳುವುದು ಎರಡೂ ಇವನಿಗಿಷ್ಟ. ಇಷ್ಟಪಟ್ಟದ್ದು ಎಂದೂ ಕಷ್ಟದ ಕೆಲಸವಲ್ಲವಲ್ಲ?

***

ಹತ್ತಿಯಂತೆ ಹಗುರ ತುಣುಕುಗಳ ಮುಗ್ಧ ನೋಟವನ್ನ, ನಡೆಯನ್ನ ಬೆಳ್ಳಂಬೆಳಗೆ ನೋಡುತ್ತಿದ್ದ ಅಷ್ಟೇ ಹಾಲು ಮನಸ್ಸಿನಿಂದ. ಹಿಂಬಾಲಿಸುತ್ತಿದ್ದ ನೂರಾಸೆ ತುಂಬಿದ ಮನಸು-ಕಣ್ಣುಗಳೊಂದಿಗೆ. ಹಾಗೆ ಇವ, ಅವುಗಳ ಬೆನ್ನು ಹತ್ತಿದರೆ ಅಸಂಖ್ಯ ಕಲ್ಪನೆಗಳ ಎಳೆಗಳು ಇವನ ಬೆನ್ನು ಹತ್ತುತ್ತಿದ್ದವು.

ಇನ್ನೇನು ಎಲ್ಲ ತುಣುಕುಗಳನ್ನೂ ಒಂದಾಗಿಸಬೇಕೆನ್ನುವಷ್ಟರಲ್ಲಿ ತಾರಸಿಯ ಗೋಡೆ ಇವನನ್ನು ಅಡ್ಡಗಟ್ಟಿತ್ತು. ಒಮ್ಮೆಲೆ ದಾರ ಕಳಚಿದ ಗಾಳಿಪಟದಂತೆ ಹಾರಿ-ಹಾರಿ ಹೋದವು ಎಲ್ಲ ತುಣುಕುಗಳೂ. ಆ ಎಲ್ಲ ಕಲ್ಪನೆಯ ಕೂಸುಗಳು ಇವನ ಮೊಣಕಾಲಿನ ಸಂದಿಯಲ್ಲಿ ಹಣೆ ಹಚ್ಚಿ ಕುಳಿತುಬಿಟ್ಟವು.

***

ಹೊಳೆ ಹೊಳೆವ ತುಣುಕಗಳ ಬುಟ್ಟಿ ಹೊತ್ತು ಅವ ಬಂದ. ಅವನ ಝಳಕ್ಕೇ ಇವನಿಗೆ ಜಳಕವೇ ಆಯಿತು. ತುಂಬಿದ ಬುಟ್ಟಿಯಲ್ಲಿ ಇನ್ನೆಂತೆಂಥ ತುಣುಕುಗಳಿವೆ ಎಂದು ಮುಂಗಾಲ ಮೇಲ್ ನಿಂತದ್ದಾಯಿತು. ಕಾಮನಬಿಲ್ಲಾಗಿಸಿಯೂ ಆಯಿತು ಬೆನ್ನು, ಕಣ್ಣು ಕಿವುಚಿ, ಹಣೆ ಮೇಲೆ ಗೆರೆ ಬರೆದುಕೊಂಡು, ಕತ್ತು ಕಸುವು ಕಳೆದುಕೊಂಡರೂ ಇವನ ಕುತೂಹಲ ಮಾತ್ರ ಒಡ್ಡು ಕಟ್ಟಿ ನಿಂತಿತು. ಕಪ್ಪು ಬಣ್ಣದ ಕ್ಯಾನ್ವಾಸ್ ಮೇಲೆ ಆ ಎಲ್ಲ ಹೊಳೆವ ತುಣುಕುಗಳು ನರ್ತಿಸುವುದ ಇವ ನೋಡುವ ಕನಸು ಕಾಣತೊಡಗಿದ. ಆ ತುಣುಕುಗಳಿಗೆ ಪುಟ್ಟ ಪುಟ್ಟ ಗೆಜ್ಜೆಗಳನ್ನೂ ಜೋಡಿಸಿಟ್ಟ ಕಟ್ಟಲು.

ಅದ್ಭುತ. . . ಆಶ್ಚರ್ಯ! ಅವನಂದುಕೊಂಡಂತೆ ಎಲ್ಲವೂ ನಡೆಯಿತು. ಖುಷಿಯಲ್ಲಿ ತೇಲುತ್ತ ತೇಲುತ್ತ ತಾನೂ ನರ್ತಿಸತೊಡಗಿದ ಮನಸ್ಸಿಗೆ ಗೆಜ್ಜೆ ಕಟ್ಟಿಕೊಂಡು. ಆದರೆ ಮತ್ತೆ ಆ ತಾರಸಿಯ ಗೋಡೆ ಅಡ್ಡಗಾಲಿಟ್ಟಿತ್ತು. ತುಣುಕುಗಳ ಕಾಲಿಗೆ ಕಟ್ಟಿದ ಕಿರುಗೆಜ್ಜೆ ನಿಚ್ಚಳವಾಗಿ ಅಚ್ಚೊತ್ತಿದ್ದರೂ ಅವುಗಳ ನಾದ ಇವನಿಗೆ ಕೇಳಿಸಲೇ ಇಲ್ಲ.

***

ಮಿಣುಕುಗಳೆಲ್ಲ ತುಣುಕುಗಳ ಮರೆಯಲ್ಲಿ ಕಣ್ಣಮುಚ್ಚಾಲೆ ಆಡತೊಡಗಿದವು. ನೀಲಿನೀಲಿಯಾಗಿ ಮೈಚೆಲ್ಲಿಕೊಂಡದ್ದೆಲ್ಲ ನಿಧಾನವಾಗಿ ಕೇಸರಿಯಾಗಿ, ಕೇಸರಿಯಾಗಿದ್ದೆಲ್ಲ ಕೆಂಪು-ಕೆಂಪಾಗಿ ಕರಗಿ ಹೋಗುತ್ತಿತ್ತು. ಹಾಗೆ ಕರಗುವ ಮುನ್ನವೇ ಆ ಕೆಂಪು ಕದ್ದುಬಿಡುತ್ತೇನೆ ; ಜೊತೆಗೆ ಆ ಎಲ್ಲ ತುಣುಕುಗಳೂ ಇಳೆಯ ಅಪ್ಪುವಂತೆ ಮಾಡುತ್ತೇನೆ. ಎಂದುಕೊಂಡು, ಕೆಂಪ ಹಿಡಿದಿಡಲು ಕ್ಯಾನ್ವಾಸನ್ನೇ ಬಲೆಯಂತೆ ಜೋರಾಗಿ ಬೀಸಿದ. ಆ ಬೀಸುವಿಕೆಯ ಶಬ್ದಕ್ಕೆ ತಾನೇ ತಲ್ಲಣಿಸಿದ. ಅತ್ತ ಇವನ ಬೆರಗಿಗೆ ಚುಂಚಿನ ಸಂಸಾರವೆಲ್ಲ ಮುದುರಿ ಗೂಡು ಸೇರಿತು. ಇತ್ತ ಗೂಡು ಸೇರಿಕೊಂಡವರೆಲ್ಲ ಅಗಳಿ ಹಾಕಿಕೊಂಡು ಬೆಚ್ಚಗೆ ಹೊದಿಕೆಯೊಳಗೆ ಗುಬ್ಬಚ್ಚಿಯಾಗಿದ್ದರು.

ಯಾಕೋ ಆ ಕೆಂಪು ಭಾರವಾಗಿ ಕ್ಯಾನ್ವಾಸ್ ಕೈ ಜಾರುತ್ತಿದೆ ಎಂಬ ಅರಿವಾಗತೊಡಗಿತಿವನಿಗೆ. ತನ್ನನ್ನೂ ಎಳೆದೊಯ್ಯತ್ತಿದೆ ಎಂಬ ಅನುಭವ ದಟ್ಟವಾಗುತ್ತಿದ್ದಂತೆ ಗಕ್ಕನೆ ನಿಂತುಬಿಟ್ಟ ಮತ್ತೆ ಅಡ್ಡ ಬಂದ ತಾರಸಿಯ ಗೋಡೆಗೆ. ಕ್ಯಾನ್ವಾಸ್ ಇವನ ಕೈಕೊಸರಿಕೊಂಡು ಆ ತಂಪು ಕೆಂಪಿನೆಡೆ ಹಾರಿಹೋಯಿತು ಗೋಡೆಯಿಲ್ಲದ ತಾರಸಿಯೆಡೆಗೆ. ದಿಕ್ಕಿಲ್ಲದ ಕನಸ ಪಯಣಕೆ. ಚೌಕಟ್ಟಿಲ್ಲದ ಮನಸ್ಸಿನೆಡೆ. ದೂರದಲ್ಲೆಲ್ಲೋ ತುಣುಕುಗಳು ನಗುತ್ತಿದ್ದುದು ಕೇಳಿಸುತ್ತಿತ್ತು ಆದರೆ ಕಾಣಿಸುತ್ತಿದ್ದಿಲ್ಲ.

-ಶ್ರೀದೇವಿ ಕಳಸದ

Rating
No votes yet

Comments