ದೇವಾಲಯಗಳ ಹಸ್ತಾಂತರ ಜಾತಿ ಸಂಘಷ೯ಕ್ಕೆ ಮೂಲವಾದೀತೇ ?

ದೇವಾಲಯಗಳ ಹಸ್ತಾಂತರ ಜಾತಿ ಸಂಘಷ೯ಕ್ಕೆ ಮೂಲವಾದೀತೇ ?

ವಿವೇಚನೆಯಿಲ್ಲದ ಒಂದೊಂದು ನಡೆಯೂ ದೊಡ್ಡ ದುರಂತಗಳನ್ನು ಸೃಷ್ಟಿಸಬಹುದು. ಅದರಲ್ಲೂ ಸರಕಾರ ತೆಗೆದುಕೊಳ್ಳುವ ನಿಧಾ೯ರಗಳು ಇಡೀ ಸಾಮಾಜಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಪ್ರಸಿದ್ಧ ಕ್ಷೇತ್ರ ಗೋಕಣ೯ವನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ಒಪ್ಪಿಸುವ ನಿಧಾ೯ರ ತೆಗೆದುಕೊಂಡಾಗಲೇ ವಿಭಜನೆಯ ಕರಾಳ ಛಾಯೆ ಮೂಡಿತ್ತು. ಯಾವುದೋ ಕಾಲಕ್ಕೆ, ಯಾರದ್ದೋ ವಶದಲ್ಲಿತ್ತು ಅನ್ನುವ ಕಾರಣಕ್ಕೆ, ಸವ೯ಜನರೂ ನಡೆದುಕೊಳ್ಳುವ ಒಂದು ಕ್ಷೇತ್ರವನ್ನು ಒಂದು ಜಾತಿ ಅಥವಾ ಪಂಗಡದ ಮಠಗಳಿಗೆ ಒಪ್ಪಿಸುವುದು ಎಷ್ಟು ಸರಿ ? ಎಲ್ಲಾ ವಾದಗಳನ್ನು ಮೀರಿ ಗೋಕಣ೯ವನ್ನು ಹವ್ಯಕ ಮಠಕ್ಕೆ ಒಪ್ಪಿಸಲಾಯಿತು. ಉತ್ತರ ಕನ್ನಡದ ವಿವಿಧ ಜಾತಿ ವಗ೯ಗಳ ಜನರು ಗೋಕಣ೯ಕ್ಕೆ ನಿಷ್ಟರಾಗಿದ್ದಾರೆ. ಅವರ ಜೊತೆ ಯಾವುದೇ ರೀತಿಯ ಮಾತುಕತೆಗಳನ್ನು ಸರಕಾರ ನಡೆಸಲಿಲ್ಲ. ಅಲ್ಲಿ ಈಗ ವೈಶಮ್ಯದ ಬೀಜ ಮೊಳಕೆಯೊಡೆದಿದೆ. ಈಗ ನಾಡಿನ ಮತ್ತೊಂದು ಕ್ಷೇತ್ರವನ್ನು ವೀರಶೈವ ಮಠಕ್ಕೆ ಒಪ್ಪಿಸುವ ಸಿದ್ದತೆಗಳು ನಡೆದಿವೆ.

ಮುಜರಾಯಿ ಕಾನೂನಿನಲ್ಲ, ದೇವಾಲಯಗಳನ್ನು ಮಠಗಳ ಸುಪದಿ೯ಗೆ ವಹಿಸಿವ ಅವಕಾಶವಿಲ್ಲ. ಆದರೆ, ಈಗ ದೇವಾಲಯಗಳನ್ನೇ ಮಠಗಳೆಂದು ದಾಖಲೆಗಳನ್ನು ಸೃಷ್ಟಿಸಿಕೊಳ್ಳುವ ಯತ್ನವೂ ತೆರೆಯ ಮರೆಯಲ್ಲಿ ಸಾಗುತ್ತಿದೆಯಂತೆ. ರಾಜ್ಯದ ಬಲಿಷ್ಟ ಜಾತಿ ವಗ೯ಗಳನ್ನು ಸೆಳೆಯಲು ಯಡಿಯೂರಪ್ಪ ಸರಕಾರ ಈ ನಿಧಾ೯ರಗಳನ್ನು ತೆಗೆದುಕೊಳ್ಳುತ್ತಿದೆ ಎನ್ನುವ ಆರೋಪಗಳಿವೆ. ಚುನಾವಣೆಯಲ್ಲಿ ಬೆಂಬಲಕ್ಕೆ ನಿಂತ ಮಠಗಳು, ರಾಜಕೀಯ ಸ್ಥಿತ್ಯಂತರದ ಸಂದಭ೯ದಲ್ಲಿ ಬೆಂಬಲಕ್ಕೆ ನಿಂತ ಪೀಠಾಧಿಪತಿಗಳಿಗೆ ಯಟಿಯೂರಪ್ಪ ಸರಕಾರ ಈ ಮೂಲಕ ಕಾಣಿಕೆ ಸಲ್ಲಿಸುತ್ತಿದೆ ಅನ್ನುವ ಅನುಮಾನವೂ ಇದೆ.

ಹಾಗೆ ನೋಡಿದರೆ, ದೇವಾಲಯಗಳು ಈಗ ಕೇವಲ ಭಕ್ತಿಯ ಕೇಂದ್ರಗಳಾಗಿ ಉಳಿದಿಲ್ಲ. ದೇವಾಲಯಗಳಲ್ಲಿ ಸಾಕಷ್ಟು ಹಣ ಹರಿಯುತ್ತಿದೆ. ದೇವಾಲಯಗಳ ವತಿಯಿಂದ ಶಿಕ್ಷಣ ಸಂಸ್ಥೆಗಳು, ಕಲ್ಯಾಣ ಮಂಟಪಗಳು ಮತ್ತಿತರ ಆದಾಯ ತರುವ ಕಾಯ೯ಗಳು ನಡೆಯುತ್ತಿವೆ. ಬಹುತೇಕ ಮಠಗಳೂ ಅಷ್ಟೇ, ಜ್ಞಾನ ತತ್ವಗಳನ್ನು, ಮನುಕುಲಕ್ಕೆ ಒಳಿತಾಗುವ ಕಾಯ೯ಕ್ರಮಗಳನ್ನು ಹಮ್ಮಿಕೊಳ್ಳದೆ, ಹಣ ಸಂಪಾದಿಸುವ ದಾರಿಯನ್ನು ಹುಡುಕಿಕೊಳ್ಳುತ್ತಿವೆ. ಇಂತಹ ಕೆಲವರಿಂದಾಗಿ, ನೈಜ ಸನ್ಯಾಸದಲ್ಲಿ ನಂಬಿಕೆ ಇಟ್ಟ ಸ್ವಾಮೀಜಿಗಳನ್ನೂ ಅನುಮಾನದಿಂದ ನೋಡುವಂತಾಗಿದೆ. ಅದಕ್ಕೆ, ಈಗ ಜಾತಿ ಸಮೀಕರಣಗಳೂ ಸೇರಿಕೊಂಡಿವೆ.

ಯಡಿಯೂರು ಮಠವನ್ನೂ ಹಸ್ತಾಂತರಿಸುವ ಮೂಲಕ ಯಡಿಯೂರಪ್ಪ ಸರಕಾರ ಮತ್ತೊಂದು ತಪ್ಪು ಮಾಡಿದ್ದೇ ಆದಲ್ಲಿ, ಅದು ಸಾಮಾಜಿಕ ಸೌಹಾದ೯ತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಏಕೆಂದರೆ ಕನಾ೯ಟಕದಲ್ಲಿ ಹಲವು ಜಾತಿಗಳಿವೆ. ನೂರಾರು ಮಠಗಳಿವೆ, ಸಾವಿರಾರು ದೇವಾಲಯ, ಮಂದಿರಗಳಿವೆ. ಪ್ರತಿ ಜಾತಿ, ಪ್ರತಿ ಪಂಗಡಗಳಿಂದಲೂ ನಾಳೆ ದೇವಾಲಯಗಳಿಗಾಗಿ ಹೋರಾಟ ಆರಂಭಗೊಳ್ಳಬಹುದು. ಸಂಘಷ೯ಗಳು ನಡೆಯಬಹುದು. ಆಗ ದೇವರೂಂತ ಒಬ್ಬ ಇದ್ರೆ, ಅವನೂ ಕೂಡಾ ಈ ಸಮಾಜವನ್ನು ಕಾಪಾಡಲಾರ.

Rating
No votes yet

Comments