ಗಣೇಶ ಬಂದಾ......

ಗಣೇಶ ಬಂದಾ......

ಅಗಜಾನನ ಪದ್ಮಾರ್ಕಂ ಗಜಾನನ ಅಹರ್ನಿಶಂ
ಅನೇಕದಂತಂ ಭಕ್ತಾನಾಂ ಏಕದಂತಂ ಉಪಾಸ್ಮಯೇ.

ಪೂಜಾರಂಭದಲ್ಲಿ, ಕಾರ್ಯಾರಂಭದಲ್ಲಿ, ಮೊದಲ ಪೂಜೆ ಸಲ್ಲುವುದು ಶ್ರೀ ವಿನಾಯಕನಿಗೆ. ಅವನ ಸ್ಮರಣೆ ಮಾತ್ರದಿಂದ ಎಲ್ಲ ಕೆಲಸ ಕಾರ್ಯಗಳೂ ನಿರ್ವಿಘ್ನವಾಗಿ
ಸಾಗುತ್ತವೆ ಎಂದು ನಂಬಿ ಪೂಜಿಸುವ ನಾವು ಈ ನಮ್ಮ ವಲ್ಲರಿ ಬಳಗದ ಬ್ಲಾಗ್ ಆರಂಭಿಸುವ ಮುನ್ನ ಅವನಲ್ಲಿ ನಮ್ಮೀ ಪುಟ್ಟ ಪ್ರಯತ್ನ ನಿರ್ವಿಘ್ನವಾಗಿ ನಿರಂತರವಾಗಿ
ಸಾಗುವಂತೆ ಪ್ರಾರ್ಥಿಸಿ ಆರಂಭಿಸುತ್ತಿದ್ದೇವೆ.

ಗಣೇಶ ಹಬ್ಬ ಬಂತೆಂದರೆ ನಾಡೆಲ್ಲಾ ಸಂಭ್ರಮದಿಂದ ತೇಲುತ್ತದೆ. ಬೆಂಗಳೂರಂತ ಸಿಟಿಗಳು ಮೈಕಾಸುರನ ಕೂಗಿನಿಂದ ತುಂಬಿಕೊಂಡರೆ ಹಬ್ಬದ ಮರುದಿನ
ಕೆರೆ ಕಟ್ಟೆಗಳು ಮಣ್ಣುಗಳಿಂದ ಬಣ್ಣಗಳಿಂದ ತುಂಬಿಕೊಳ್ಳುತ್ತವೆ.! ಮಾರ್ಕೆಟ್ಟಿನ ಬೆಲೆಗಳು ಗಗನಕ್ಕೇರಿದರೂ ಗಣಪನ ಸ್ವಾಗತಕ್ಕೆ ತರತರದ ಕಜ್ಜಾಯಗಳು, ವಿಧವಿಧದ
ಅಲಂಕಾರಗಳೂ ಚಾಚೂ ತಪ್ಪದೇ ನಡೆಯುತ್ತವೆ. ಈ ಸಂಭ್ರಮ ಅದು ನಮ್ಮ ಗಣಪನ ಮಹಿಮೆಯೇ.
ಡೊಳ್ಳುಹೊಟ್ಟೆಯ , ಸೊಂಡಿಲಿನಾಕಾರದ ದೊಡ್ಡ ಕಿವಿಯ, ಇಲಿಯನೇರಿಬರುವ ಮುದ್ದು ಗಣಪನೆಂದರೆ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರಿಗೂ ಇಷ್ಟವೇ. ಜಾತಿ ಮತದ ಬೇದವಿಲ್ಲದೇ ಭಾದ್ರಪದ ಶುದ್ಧ ಚೌತಿಯ ದಿನ ಕರೆದವರ ಮನೆಮನೆಗೆ ಬರುವ ಗಣಪನಿಗೆ ತಿಂಡಿಪೋತನೆಂಬಂತೆ ಪಂಚಕಜ್ಜಾಯ.ಕರಿಗಡಬು,
ಉಂಡೆ, ಹೀಗೆ ಎಲ್ಲವೂ ಬಗೆಬಗೆಯದೇ ಆಗಬೇಕು.ಸಿಟಿಗಳ ಗಣೇಶನ ಹಬ್ಬದ ಕುರಿತು ನಾವೆಲ್ಲ ನೋಡುತ್ತಲೇ ಇರುತ್ತೇವೆ. ಆದರೆ ನಮ್ಮ ಹಳ್ಳಿಗಳಲ್ಲಿ ಗಣೇಶನ ಹಬ್ಬದ
ಸಂಭ್ರಮದ ಕುರಿತು ನಾನಿಲ್ಲಿ ಹಂಚಿಕೊಳ್ಳಬಯಸುತ್ತೇನೆ.

ನಮ್ಮೂರಕಡೆಗಂತೂ ಚೌತಿಗೆ ಇನ್ನೆಂಟುದಿನವಿರುವಾಗಲೇ ಹಬ್ಬದ ತಯಾರಿ ಆರಭವಾಗಿರುತ್ತದೆ. ಈ ಹಬ್ಬಕ್ಕೆಂದೇ ವಿಶೇಷವಾಗಿ ತಯಾರಿಸುವ ಗಟ್ಟಿವಡೆ ಯ ತಯಾರಿ ನಡೆಯುತ್ತದೆ. ಇದರ ತಯಾರಿಕೆಗಾಗಿ ಒಬ್ಬೊಬ್ಬರ ಮನೆಯವರು ಸಾಕಾಗದಿರುವುದರಿಂದ ನಾಲ್ಕಾರು ಮನೆಯ ಹೆಂಗಸರು ಸೇರಿ ಈ ಅಕ್ಕಿಯಿಂದ
ತಯಾರಿಸುವ ವಡೆ , ಚಕ್ಕಲಿ ಇತ್ಯಾದಿ ಮಾಡಿಟ್ಟುಕೊಳ್ಳುತ್ತಾರೆ. ಊರಿನ ಕೆಲವೇ ಮನೆಗಳಲ್ಲಿ ಮಣ್ಣಿನಿಂದ ಗಣಪತಿಯ ಮೂರ್ತಿ ತಯಾರಿಸಲು ತಿಂಗಳಮೊದಲೇ
ಆರಂಭಿಸುತ್ತಾರೆ. ಎಲ್ಲರ ಮನೆಯ ಹುಡುಗರಿಗೂ ಈ ಗಣಪತಿಯ ತಯಾರಿಯಲ್ಲೇ ನೋಡಲು ಬಲು ಖುಶಿ.ದಿನ ದಿನವೂ ಬಗೆಬಗೆಯ ಗಣಪತಿಯ ನೋಡಲು ಓಡುತ್ತಾರೆ.
ಸ್ಕೂಲುಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿಯ ಸ್ಥಾಪನೆ ಮಾಡುವವರು ಸಾಂಸ್ಖತಿಕ ಕಾರ್ಯಕ್ರಮಗಳ ಆಯೋಜಿಸುತ್ತಾರೆ. ಭಜನೆ,
ಯಕ್ಷಗಾನ, ಭರತನಾಟ್ಯ ಮುಂತಾಗಿ ದಿನಕ್ಕೊಂದು ಕಾರ್ಯಕ್ರಮಗಳು ನಡೆಯುತ್ತವೆ.ಚೌತಿಯ ಮೊದಲ ದಿನವೇ ದೂರ್ವೆ, ಬಿಲ್ವಪತ್ರೆಗಳ ಕೊಯ್ದು ಸಂಗ್ರಹ ಮಾಡಿಡುತ್ತಾರೆ.ಫಲಾವಳೀ ಗಾಗಿ ಬಗೆ ಬಗೆಯ ಹಣ್ಣು ತರಕಾರಿಗಳನ್ನು ಸಂಗ್ರಹಿಸುತ್ತಾರೆ. ಗಣಪನಿಗೆ ಪ್ರಿಯವೆನಿಸುವ ಹಾಗಲಕಾಯಿ, ಸೌತೆಕಾಯಿ, ಅಲ್ಲದೇ
ಗಂಗಮ್ಮನ ಕಾಳು, ಕೋಡನಗೆಜ್ಜೆ.( ಕಾಡಲ್ಲಿ ದೊರೆಯುವ ಗೊಂಚಲಾದ ಒಂದುತರದ ಹಣ್ಣುಗಳು) ಬಣ್ಣದೆಲೆಗಳು ಎಲ್ಲವನ್ನೂ ಸಂಗ್ರಹಿಸಿ ಮಂಟಪದ ಎದುರು
ಕಟ್ಟಿ ಸಿಂಗರಿಸುತ್ತಾರೆ. ಇವೆಲ್ಲವೂ ಕೇವಲ ಗಣೇಶನ ಹಬ್ಬಕ್ಕಾಗಿ ಮಾತ್ರ ಮಾಡುವ ಆಚರಣೆಗಳು.ಹಬ್ಬದ ದಿನ, ಮನೆಯ ಹೆಂಗಳೆಯರು ಬೆಳಿಗ್ಗೆಯಿಂದಲೇ ಮಿಂದು
ಮಡಿಯುಟ್ಟು ನೈವೇದ್ಯದ ತಯಾರಿಯಲ್ಲಿ ತೊಡಗುತ್ತಾರೆ. ಕನಿಷ್ಟ ಹನ್ನೊಂದು ಇಲ್ಲವೇ ಇಪ್ಪತ್ತೊಂದು ಬಗೆಯ ಕಜ್ಜಾಯಗಳಾಗಬೇಕು ಗಣಪನ ನೈವೇದ್ಯಕ್ಕೆ.
ಪ್ರತೀ ಮನೆಯಲ್ಲೂ ಗಣಪನ ಪೂಜೆಯನ್ನು ಭಕ್ತಿ ಪೂರ್ವಕವಾಗಿ ಆಚರಿಸುತ್ತಾರೆ. ಹೆಚ್ಚು ಆಡಂಬರಗಳಿಲ್ಲದಿದ್ದರೂ ಸಂಪ್ರದಾಯ, ಭಕ್ತಿಗೆ ಕುಂದು ಬಾರದಂತೆ
ಹತ್ತಿರದ ಬಂಧು ಬಳಗದೊಂದಿಗೆ ಆಚರಿಸುವ ಗಣೇಶ ಬರುವುದಷ್ಟೇಅಲ್ಲ.ಸಂಭ್ರಮಗಳನ್ನು, ನೆಮ್ಮದಿಯನ್ನುತುಂಬಿ ತರುತ್ತಾನೆ. ಮನ ಮನಗಳಲ್ಲಿ, ಮನೆಮನೆಗಳಲ್ಲಿ
ಪ್ರೀತಿ, ಸಂತಸ ತರುವ ಗಣಪನ ಸನ್ನಿಧಿಗೆ ಎಲ್ಲರೂ ಭಕ್ತಿಯಿಂದ ನಮಿಸುತ್ತಾರೆ ಸ್ತುತಿಸುತ್ತಾರೆ.

ಹಳ್ಳಿ ಗಳಲ್ಲಿ ಮತ್ತೊಂದು ವಿಶೇಷವೆಂದರೆ ಅವರವರದೇ ಕೆರೆಗಳು ಅಥವಾ ಹೊಳೆ ಹಳ್ಳಗಳಿರುವುದರಿಂದ ಗಣಪನ ಮುಳುಗಿಸುವುದು ಅಂಥ ಸಮಸ್ಯೆ ಆಗುವುದಿಲ್ಲ.ಒಂದೇ ದಿನಕ್ಕೆ ಅಥವಾ ಎರಡು, ಐದು, ಏಳು, ಒಂಬತ್ತು ಹೀಗೆ ಗಣಪನಮುಳುಗಿಸಲು ಒಬ್ಬಬ್ಬರದು ಒಂದೊಂದು ದಿನ. ಹಾಗಾಗಿ ನಗರಗಳ ಹಾಗೆ
ನೀರಿನ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ. ವಾತಾವರಣದ ಕಲುಷತೆಯಿಲ್ಲದೇ, ಆಡಂಭರವಿಲ್ಲದೇ ಮೈಕಾಸುರನ ಹಾವಳಿಗಳಿಲ್ಲದೇ ಇಂತಹ ಸಂಭ್ರಮದ ಹಬ್ಬಗಳೇ
ನಮ್ಮಸಂಸ್ಖತಿಯ ಪ್ರತೀಕಗಳು. ಎಲ್ಲರೂ ಬಯಸುವುದು ನೆಮ್ಮದಿಯನ್ನೇ. ಹಾಗಿದ್ದಮೇಲೆ ಗಣಪತಿಯ ಹೆಸರಲ್ಲಿ ಜನರ ನೆಮ್ಮದಿ ಹಾಳು ಮಾಡುವ ಕೆಲಸ ಮಾಡದಿದ್ದರೆ ಒಳ್ಳೆಯದಲ್ಲವೇ?ಈ ಸದ್ಬುದ್ಧಿಯನ್ನು ಆಗಣಪ ಎಲ್ಲರಿಗೂ ದಯಪಾಲಿಸಿ ಕರುಣಿಸಲಿ ಎಂದು ಬೇಡಿಕೊಳ್ಳುತ್ತ
ಗೌರಿ ಗಣೇಶ ಹಬ್ಬದ ಶುಭಾಶಯಗಳೊಂದಿಗೆ.

Rating
No votes yet

Comments