ಹೀಗೆ ಹೋಗಿ ಹಾಗೇ ಬಂದೆ: "ಯು ಆರ್ ಸೇಯಿಂಗ್ ಬರೀ ಸುಳ್ಳೇ": ಜೈ ಕರ್ನಾಟಕ ಮಾತೆ

ಹೀಗೆ ಹೋಗಿ ಹಾಗೇ ಬಂದೆ: "ಯು ಆರ್ ಸೇಯಿಂಗ್ ಬರೀ ಸುಳ್ಳೇ": ಜೈ ಕರ್ನಾಟಕ ಮಾತೆ

ಹೀಗೆ ಹೋಗಿ ಹಾಗೇ ಬಂದೆ

ಇದೊಂದು ಥರಾ ಪ್ರವಾಸ ಕಥನ. ಆಗಷ್ಟು ಈಗಷ್ಟು ಬರೆಯುತ್ತೇನೆ.

 

ಮನಸ್ಸು ಆಮೆಯಾಗುತ್ತಿರುವಾಗ, ವಯಸ್ಸಾಯಿತು ಎಂಬ ಅರಿವು ಮೈಯ
ಒಂದೊಂದು ಭಾಗಕ್ಕೂ ಆಗುತ್ತಿರುವಾಗ, ಏನೋ ಸಾಧಿಸಬೇಕು, ಇನ್ನೂ ಇನ್ನೂ ಸಂಪಾದಿಸಬೇಕು, ಈ ದರಿದ್ರ
ಇಂಡಿಯಾದ ನೆಲದಿಂದ ಮುಕ್ತನಾಗಿ ಆ ಯಾವುದಾದರೂ ಒಂದು ದೇಶದ ಪ್ರಜೆಯಾಗಿ ಸ್ವರ್ಗಸ್ಥನಂತೆ ಇರಬೇಕು,
ಅಥವಾ ಮಗಳ ಬಾಣಂತನ, ಮಗ ಕೊಂಡ ಹೊಸ ಮನೆಯ ಗೃಹಪ್ರವೇಶಕ್ಕೆ ಹಾಜರಿದ್ದು ಜನ್ಮ ಸಾರ್ಥಕವಾಯಿತು
ಎಂದು ಸಂಭ್ರಮಿಸಬೇಕು ಎಂಬಿತ್ಯಾದಿ ಯಾವ ಕಾರಣಗಳೂ ಇಲ್ಲದೆ--

ಕಂಡದ್ದೆಲ್ಲ ಅರ್ಥವಾಗುವಮೊದಲೇ ಅರಿವಿನ ಭಾಗವಾಗುವ ಎಳೆಯ
ಮನಸ್ಸಲ್ಲ; ಅಪ್ಪ ಅಮ್ಮ ಹೆಂಡತಿ, ನನ್ನ ಸುತ್ತಲ ಜನ, ನಾನು ಓದಿದ ಸ್ಕೂಲುಗಳು, ಕೇಳಿದ ಓದಿದ
ಕಥೆಗಳು ಎಲ್ಲರೂ ಎಲ್ಲವೂ ನನ್ನ ಭಾಷೆಯಲ್ಲಿ ಕೆತ್ತಿ ನಿಲ್ಲಿಸಿರುವ ವಿಗ್ರಹಗಳೇ ಮನಸ್ಸಿನ ತುಂಬ
ಕಿಕ್ಕಿರಿದಿವೆ; ಕೆಲವು ಚೆಲುವಾಗಿವೆ, ಕೆಲವು ವಿಕಾರವಾಗಿವೆ, ಇನ್ನು ಕೆಲವು ವಿಕಾರವಾಗಿವೆ;
ಅವನ್ನು ಪೂಜಿಸಲಾರದೆ, ವಿಸರ್ಜಿಸಲಾರದೆ, ಯಾಕೆ ಅವನ್ನೆಲ್ಲ ಇಟ್ಟುಕೊಂಡಿದ್ದೇನೆ ಎಂದು ಚಡಪದಿಸುತ್ತಾ
ನನಗೇ ವಿವರಿಸಿಕೊಳ್ಳುತ್ತಾ ಇರುವಾಗ ಬೇರೆ ದೇಶದ, ಬೇರೆ ಭಾಷೆಗಳ, ಬೇರೆ ಸಮಾಜಗಳ, ಬೇರೆ ಜನಗಳ,
ಬೇರೆ ಮನೆಗಳ ಒಳಹೊಕ್ಕು ಬಂದರೇನು ಬಂದೀತು; ನನ್ನ ವೃತ್ತಿಯಲ್ಲಿ ದುಡಿದು ಉಳಿಸಿದ್ದರಲ್ಲಿ
ಮುಕ್ಕಾಲು ಹಣ ಖರ್ಚುಮಾಡಿಕೊಳ್ಳುವುದು ಅವಿವೇಕವೋ ಹೇಗೆ-- 

ಅಂದುಕೊಂಡರೂ ಅರ್ಧಶತಮಾನ ಕಳೆದಿರುವ ಮೈ ಮನಸ್ಸನ್ನು ಹೊತ್ತು
ಯೂರೋಪು ಇಂಗ್ಲೆಂಡುಗಳಲ್ಲಿ ಸುತ್ತಾಡಿ ಬಂದೆವು. ಯಾರು ಅಂದರೆ, ಇದನ್ನು ಓದುವವರಿಗೆ ಅಷ್ಟೊ
ಇಷ್ಟೊ ಗೊತ್ತಿರುವ ನಾನು, ನನ್ನ ಜೊತೆಗೆ ನನ್ನ ಹೆಂಡತಿ ಚಂದ್ರಾ, ಇಂಥ ಬರವಣಿಗೆಯನ್ನು
ಓದುವವರಿಗೆ, ಬರೆಯುವವರಿಗೆ ಚೆನ್ನಾಗಿಯೇ ಗೊತ್ತಿರುವ ಶ್ರೀನಿವಾಸರಾಜು ಮತ್ತು ಅವರ ಹೆಂಡತಿ
ಸರಸ್ವತಿ.

ಇಲ್ಲಿ ಯೂರೋಪಿನ ಎಂಟು ದೇಶಗಳಲ್ಲಿ ಮತ್ತು ಇಂಗ್ಲೆಂಡಿನಲ್ಲಿ
ಒಂದೇ ಸಮ ಓಡಾಡುತ್ತಾ ನನಗೆ ಏನನ್ನಿಸಿತು ಅನ್ನುವುದನ್ನು ಬರೆದಿದ್ದೇನೆ. ಕಂಡದ್ದರ ವಿವರಗಳು
ಇವೆ, ಅವಕ್ಕಿಂತ ಹೆಚ್ಚಾಗಿ ನನಗೆ ಹೇಗೆ ಕಂಡಿತು ಅನ್ನುವುದೇ ಮುಖ್ಯ.

"ಯು ಆರ್ ಸೇಯಿಂಗ್ ಬರೀ
ಸುಳ್ಳೇ": ಜೈ ಕರ್ನಾಟಕ ಮಾತೆ

"ಭುವನನ ಸ್ಕೂಲಿನಲ್ಲಿ ಮದರ್‌ಟಂಗ್ ಡೇ ಅಂತ
ಮಾಡಿದರು." ಕವಿತಾ ಹೇಳುತ್ತಿದ್ದರು. "ಒಟ್ಟು ಇಪ್ಪತ್ತನಾಲ್ಕು ಮದರ್‌ಟಂಗ್ ಇರೋ
ಮಕ್ಕಳು ಇದ್ದರು."

ಕವಿತಾ ಡಾ. ಮಹದೇವ್ ಅವರ ಹೆಂಡತಿ. ಭುವನ್ ಐದೂವರೆ ವರ್ಷ
ವಯಸ್ಸಿನ ಅವರ ಮಗು. ಡಾ. ಮಹದೇವ್ ಚಂದ್ರಾಳ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದವರು. ಅವಳನ್ನು
ಅಮ್ಮ ಅಂತಲೂ ನನ್ನ ಅಣ್ಣ ಅಂತಲೂ ಕರೆಯುವ ಪ್ರೀತಿ ಇರುವವರು. ಈಗ ಇಂಗ್ಲೆಂಡಿನ ಯಾರ್ಕ್‌ಗೆ ಸೇರಿದ
ಹ್ಯಾಲಿಫ್ಯಾಕ್ಸ್ ಅನ್ನುವ ಊರಿನಲ್ಲಿ ಡಾಕ್ಟರು. ಅವರ ಮನೆಯ ಮುಂದೆ ವಿಶಾಲವಾದ, ತುಂಬ ವಿಶಾಲವಾದ,
ದಾವಣಗೆರೆಯ ಹೈಸ್ಕೂಲು ಮುಂದಿನ ದೊಡ್ಡ ಮೈದಾನಕ್ಕಿಂತ ನಾಲ್ಕುಪಟ್ಟಾದರೂ ದೊಡ್ಡದಾದ, ಹಸಿರು
ಹುಲ್ಲಿನ ಮೈದಾನ. ಸಂಜೆ ಏಳೂವರೆಯ ಹಿತವಾದ ಬಿಸಿಲು. ಹಗಲೆಲ್ಲ ಆಗಾಗ ಸುರಿದ ಜಡಿ ಮಳೆಗೆ
ಒದ್ದೆಯಾಗಿದ್ದ ಹುಲ್ಲು. ಮೈದಾನದ ನಾಲ್ಕೂ ಬದಿ ಸುಮಾರಾಗಿ ಒಂದೇ ಎತ್ತರದ ಮರಗಳ ಅಂಚು. ಈಗ
ಶುಭ್ರವಾದ ಆಕಾಶದಲ್ಲಿ ಸಂಜೆ ನಗುವಿನ ಸೂರ್ಯ. ಅಕ್ಷರಶಃ ಬಂಗಾರದಿಳಿಬಿಸಿಲು. ಆ ದೊಡ್ಡ
ಮೈದಾನದಲ್ಲಿ ಅಲ್ಲೊಬ್ಬ ಇಲ್ಲೊಬ್ಬರು, ಮಕ್ಕಳೊಡನೆ ಬಂದಿದ್ದ ಹಿರಿಯರು. ಹುಲ್ಲಿನ ಮೇಲೆ
ನಮ್ಮೆದುರಿಗೆ ಉದ್ದವಾಗಿ ಬಿದ್ದಿದ್ದ ನಮ್ಮವೇ ನೆರಳು.

"ಎಲ್ಲಾ ಮಕ್ಕಳೂ ತಮ್ಮ ತಮ್ಮ ಮಾತೃಭಾಷೆಯಲ್ಲಿ ಕೆಲವು
ಪದಗಳನ್ನು ಬರೆದುಕೊಂಡು ಬರಬೇಕು ಅಂತ ಮೇಡಮ್ ಹೇಳಿದ್ದರು. ನಿಮ್ಮದು ಯಾವ ಭಾಷೆ ಅಂತ ನನ್ನ
ಕೇಳಿದರು. ಕನ್ನಡ ಅಂದೆ. ಅವರ ಕಂಪ್ಯೂಟರಿನಲ್ಲಿ ಚೆಕ್ ಮಾಡಿ, ಅದು ನಮ್ಮ ಲಿಸ್ಟಿನಲ್ಲಿ ಇಲ್ಲ,
ತಮಿಳು ಇದೆ, ಹಿಂದಿ ಇದೆ. ನಿಮಗೆ ತಮಿಳು ಬರುತ್ತಾ ಅಂದರು. ಇಲ್ಲ ಅಂದೆ. ಹಿಂದಿ? ಬರುತ್ತೆ
ಅಂದೆ. ಹಾಗಾದರೆ ಹಿಂದಿಯಲ್ಲಿ ನೀರು ಅನ್ನುವ ಪದ ಬರೆದುಕೊಡಿ ಅಂದರು. ಭುವನ್ ಅದನ್ನು
ಹಿಡಿದುಕೊಂಡು ನಿಂತಿದ್ದ ಫೋಟೋ ಬಂದಿತ್ತು" ಅಂದರು ಕವಿತಾ.

"ಕನ್ನಡದ ಬಗ್ಗೆ ಹೇಳಬೇಕಾಗಿತ್ತು" ಅಂದೆ. "ಹೇಳಿದೆ
ಮಾಮಾ. ಆದರೆ ಲಿಸ್ಟನ್ನ ಕೌನ್ಸಿಲ್ಲಿನವರು ಪ್ರಿಪೇರ್ ಮಾಡಿ ಡಾಟಾ ಬೇಸಿನಲ್ಲಿ ಹಾಕಿರುತ್ತಾರೆ,
ನಾವು ಸೇರಿಸುವುದಕ್ಕೆ ಬರುವುದಿಲ್ಲ ಅಂದರು" ಅಂದರು ಕವಿತಾ.

ಕನ್ನಡ ಅನ್ನುವ ಭಾಷೆ ಒಂದಿದೆ ಅನ್ನುವುದು ಇಂಗ್ಲೆಂಡಿನ ಶಾಲಾ
ವ್ಯವಸ್ಥೆಗೆ ಗೊತ್ತೇ ಇಲ್ಲವೇ! ಇಪ್ಪತ್ತ ನಾಲ್ಕು ಮಾತೃಭಾಷೆಗಳ ಮಕ್ಕಳು ಒಂದೇ ಶಾಲೆಯಲ್ಲಿ ಓದುವ
ಅದ್ಭುತವಿರಲಿ, ಇನ್ನೆಷ್ಟು ಭಾಷೆಗಳ ಬಗ್ಗೆ ಗೊತ್ತೇ ಇಲ್ಲವೋ? ಎರಡು ವರ್ಷದ ಹಿಂದೆ ಬೆಂಗಳೂರಿಗೆ
ಬಂದಿದ್ದ ಭುವನ ಅಚ್ಚುಕಟ್ಟಾಗಿ ಕನ್ನಡ ಮಾತಾಡುತ್ತಿದ್ದ. ಈಗ ಕೆಲವು ನಾಮಪದಗಳು, ಕೆಲವು
ಕ್ರಿಯಾಪದಗಳು. ತಾತ, ಅಜ್ಜಿ, ಅಮ್ಮ, ಬೇಕು, ಬೇಡ, "ಅಮ್ಮಾ ಯು ಆರ್ ಸೇಯಿಂಗ್ ಬರೀ
ಸುಳ್ಳೇ" ಅನ್ನುವಂಥ ವಾಕ್ಯಗಳು.

ಬರ್ಮಿಂಗ್ ಹ್ಯಾಮಿನ ಹತ್ತಿರ ಇರುವ ಊರಿನಲ್ಲಿ ಜಿ. ಎಸ್.
ಶಿವರುದ್ರಪ್ಪ ಅವರ ಮಗ ಡಾ. ಶಿವಪ್ರಸಾದರ ಮನೆಗೆ ಹೋಗಿದ್ದವು. ಕನ್ನಡದ ರಾಷ್ಟ್ರಕವಿಗಳನ್ನು
ಇಂಗ್ಲೆಂಡಿನಲ್ಲಿ ಭೇಟಿಮಾಡಲು ಕನ್ನಡಿಗರು ಹೋಗಿದ್ದೆವು. 
ಅವರಿಗೆ ಒಬ್ಬಳೇ ಮಗಳು. ಈಗ ಹನ್ನೊಂದನೆಯ ತರಗತಿ. ಭಾಷೆಗಳಲ್ಲಿ ಆಸಕ್ತಿಯಂತೆ. ರಷಿಯನ್
ಮತ್ತು ಸ್ಪಾನಿಶ್ ತರಗತಿಗಳಿಗೆ ಸೇರಿದ್ದಾರಂತೆ. ಕನ್ನಡ ಮಾತಾಡುವ, ಓದುವ, ಬರೆಯುವ, ಕಲಿಯುವ
ಅವಕಾಶ ಇಲ್ಲವಲ್ಲ.

ಮಹದೇವ ಅವರ ಮನೆಯ ಟಿವಿ ಕೆಟ್ಟಿತ್ತು. ಬರೀ ಬಿಬಿಸಿಯ ನಾಲ್ಕು
ಚಾನಲ್ಲುಗಳು ಬರುತ್ತಿದ್ದವು. ಕರ್ನಾಟಕದ ಸುದ್ದಿ ಇರಲಿ, ಭಾರತದ ಸುದ್ದಿಯೂ ತಿಳಿಯುತ್ತಿರಲಿಲ್ಲ.
ಭಾರತ ಅನ್ನುವುದು ಒಂದಿದೆ, ಅದರಲ್ಲಿ ಕರ್ನಾಟಕ ಇದೆ, ಅದರಲ್ಲಿ ಕನ್ನಡ ಮಾತಾಡುವವರು ಇದ್ದಾರೆ
ಅನ್ನುವುದು ಜಗತ್ತಿಗೆ ಬೇಡವೇ ಬೇಡವಾಗಿರುವ ಸಂಗತಿ. ಅಕಸ್ಮಾತ್ತಾಗಿ ನೆಟ್ಟಿನಲ್ಲಿ ಪ್ರಜಾವಾಣಿ
ನೋಡಿದಾಗ, ನಾವು ಭಾರತ ಬಿಟ್ಟು ಒಂದು ತಿಂಗಳು ಕಳೆದಿದ್ದರೂ ಇನ್ನೂ ಕರ್ನಾಟಕದಲ್ಲಿ ಆನು ದೇವಾ
ಹೊರಗಣವನು ಕುರಿತ ವಿವಾದ ನಡದೇ ಇದೆ, ಜನತಾದಳ ಬಿಜೆಪಿ ಕಿತ್ತಾಟ ಹಾಗೇ ಇದೆ, ಕನ್ನಡದ ಲೋಕ
ಎಂದಿನಂತೆಯೇ...

ಕನ್ನಡ ಶಾಸ್ತ್ರೀಯ ಭಾಷೆಯಾಗಲಿಲ್ಲವೆಂದು ಪ್ರಾಣತ್ಯಾಗಕ್ಕೆ
ಸಿದ್ದರಾದ ಹಿರಿಯರು; ಇಂಗ್ಲೆಂಡಿನಲ್ಲಿ ಪ್ರತಿಷ್ಠಿತ ಪ್ರತಿಷ್ಠಾನಗಳ ಅಧ್ಯಕ್ಷರಾದ ಅನೇಕ ಬಗೆಯ
ಪೀಠಸ್ಥ ಕನ್ನಡಿಗರು, ನಮ್ಮ ಸಾಹಿತ್ಯ ಜಗತ್ತಿನ ಯಾವುದೇ ಸಾಹಿತ್ಯಕ್ಕೆ ಸಮ ಎಂದು ಭಾಷಣ ಮಾಡುವ
ವೀರರು, ವಚನಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿದವರು...

ಕನ್ನಡದ್ದೇ ಒಂದು ಲೋಕ ಇದೆ. ಅದಕ್ಕೆ ಕನ್ನಡವೇ ಸೀಮೆ.
ಲೋಕವೆಂದರೆ ಕಣ್ಣಿಗೆ ಕಾಣುವಷ್ಟು ಮಾತ್ರವೇ ಅಲ್ಲವೇ! ಹೇಗೋ ನಮಗೆ ಇಂಗ್ಲಿಷಿನ ಲೋಕ ಒಂದಷ್ಟು
ಕಂಡಿತು. ಇಂಗ್ಲಿಷರು ಇಲ್ಲಿರುವಾಗ ಅವರು ಇಲ್ಲಿದ್ದರು ಅನ್ನುವ ಕಾರಣಕ್ಕೇ ಕನ್ನಡದಂಥ ಲೋಕಗಳೂ
ಅವರಿಗೆ ಕಂಡವು. ಶತಮಾನವೇ ಕಳೆಯಿತಲ್ಲವೇ. ಈಗಿನ ಇಂಗ್ಲಿಷರಿಗೆ ಕನ್ನಡ ಯಾಕೆ ಬೇಕು?
ಯೂರೋಪಿಯನ್ನರಿಗೆ ಯಾಕೆ ಬೇಕು? ಕನ್ನಡ ಭುವನೇಶ್ವರಿ ಕನ್ನಡದ ಭುವನಕ್ಕೆಷ್ಟೇ ಒಡತಿ. ಹಾಗೆ
ನೋಡಿದರೆ ನಮಗೆ ಗೊತ್ತಿಲ್ಲ ಅಂತ ಕೂಡ ಗೊತ್ತಿಲ್ಲದ ಎಷ್ಟೊಂದು ಲೋಕಗಳು ಭಾಷೆಗಳು ಇವೆಯಲ್ಲ! ನಮಗೆ
ಇನ್ಯಾವುದೋ ಭಾಷೆ, ಭಾರತದ್ದೇ ಇರಬಹುದು, ಗೊತ್ತಿಲ್ಲದ ಹಾಗೆಯೇ ಅವರಿಗೂ ಕನ್ನಡದ ಬಗ್ಗೆ
ತಿಳಿದಿಲ್ಲ. ತಪ್ಪೇನು? ಕನ್ನಡ ಶಾಸ್ತ್ರೀಯ ಭಾಷೆಯಾದರೂ ಆಗಲಿ, ಭಟ್ಟೀಯಭಾಷೆಯಾದರೂ ಅಗಲಿ,
ವಿಶಾಲವಾದ ಲೋಕಕ್ಕೆ ಕೊಡಬಹುದಾದದ್ದು ಏನಾದರೂ ಇದ್ದರೆ ಬೇರೆ ಬೇರೆ ಲೋಕಗಳಿಗೆ ಬೇಕಾಗುತ್ತದೆ.
ಇಲ್ಲವೋ ಲೋಕದ ಉಪ್ಪಿಟ್ಟಿನಲ್ಲಿ ಕಂಡೂ ಕಾಣದಂತಿರುವ ಸಾಸುವೆ ಕಾಳು. ಇದ್ದರೂ ಇರದಿದ್ದರೂ ಗೊತ್ತೇ
ಆಗುವುದಿಲ್ಲ.

Rating
No votes yet

Comments