ಚಂದಿರನ ನೋಡಿದವ

ಚಂದಿರನ ನೋಡಿದವ

ಡರ್ಶು ಸಹಜ ಜೀವನ ನಡೆಸುವ ಸಾಮಾನ್ಯ ಮನುಷ್ಯ. ಅವನನ್ನು ಕಳ್ಳನೆಂದೂ, ಕೆಟ್ಟವನೆಂದೂ ಓರೆಗಣ್ಣಿನಲ್ಲಿ ನೋಡುವವರೇ ಹೆಚ್ಚು. ಇವ ಕಾಡಿನಲ್ಲಿ ಬೇಟೆಯಾಡುತ್ತ, ಅಲೆಯುತ್ತ ಜೀವನ ಸಾಗಿಸುವವ. ಒಂದು ದಿನ ಇವನನ್ನು ಭೇಟಿ ಮಾಡುವವರಲ್ಲಿ ಸರ್ವೇ ತಂಡದ ಮುಖ್ಯಸ್ಥ ಸರಕಾರದ ಆಫೀಸರ್ ಕೂಡ ಇರುತ್ತಾನೆ. ಅವನು ಡರ್ಶುವಿನಲ್ಲೂ ವಿಶಿಷ್ಟವಾದ ಗುಣವೊಂದನ್ನು ಕಾಣುತ್ತಾನೆ. ಆದರೆ ಅದು ಉಳಿದವರಿಗೆ ಬಯಲಾಗುವುದು ಡರ್ಶು ಅವರೊಂದಿಗೆ ತನಗಿರುವ ಕಾಡಿನ ಮೂಲೆ ಮೂಲೆಯ ಪರಿಚಯವನ್ನು ಹಂಚಿಕೊಳ್ಳುತ್ತ ಕಷ್ಟ ಸುಖಗಳಲ್ಲಿ ಭಾಗಿಯಾದ ಮೇಲೇನೆ. ಡರ್ಶು ಏನೂ ಬಯಸದೆ, ಕೊನೆಗೆ ಬರಬಹುದು ಎಂದೂ ಆಲೋಚಿಸದ ಒಂದು ಕೋವಿಗಾಗಿ ಎಲ್ಲ ಕೆಲಸ ಮಾಡುವುದು ಈಗಿನ ನಮ್ಮ urban ಜಗತ್ತಿಗೆ ಪರಿಚಯವೇ ಇಲ್ಲದ ಗುಣ. ಅದೆಲ್ಲ ಇರಲಿ, ಸರ್ವೇ ಉದ್ದಕ್ಕೂ ಜೊತೆ ನೀಡಿದ ಡರ್ಶು ಹೊಸ ಕೋವಿ ಹಿಡಿದು ಒಮ್ಮೆ ಕಾಡಿನಲ್ಲಿ ಬೇರೇನೋ ಹೊಡೆಯಲು ಹೋಗಿ ಹುಲಿಯೊಂದನ್ನು ಹೊಡೆದುಬಿಡುತ್ತಾನೆ. ಹುಲಿ ಹೊಡೆದಿದ್ದೇನೆಂದು ತಿಳಿದ ಕೂಡಲೆ ಅವನಲ್ಲಿ ಖಿನ್ನತೆ ಆವರಿಸಿಬಿಡುತ್ತದೆ.

ಏನು ಬೇಟೆಯಾಡಿದರೂ ಹುಲಿಯನ್ನು ಹೊಡೆಯಬಾರದು, ಹುಲಿ ಹೊಡೆದರೆ ಅದು ಪಾಪ ಎನ್ನುವ ನಂಬಿಕೆ ಅವನದು. ಕೊನೆಗೆ ಪಾಪ ಮಾಡಿದೆನೆಂಬ ಅದೇ ಕೊರಗು ಜೀವನದಲ್ಲಿನ ಆಸೆ ಹೋಗಿಸಿಬಿಡುತ್ತದೆ. ಕಾಡಿಗೆ ಹೋದರೆ ಹುಲಿರಾಯ ಬಿಡನು, ಊರ ಮನೆಯ ಜೀವನ ಒಗ್ಗದು. ಕೊನೆಗೊಂದು ದಿನ ಹೊಸ ಕೋವಿ ಹಿಡಿದು ಕಾಡಿನೆಡೆಗೆ ಹೊರಟ ಇವನು ಮತ್ತೆ ಕಾಣಿಸುವುದಿಲ್ಲ, ಅವನು ತೆಗೆದುಕೊಂಡು ಹೋದ ಕೋವಿ ಮಾತ್ರ ಪೋಲಿಸರಿಗೆ ಸಿಗುತ್ತದೆ.

ಇದೆಲ್ಲ ಇವತ್ತು ನೆನಪಾಗಿದ್ದುದು ಒಂದು ತಮಾಷೆ. ಉಲ್ಲಾಸ್ ಕಾರಂತರೊಂದಿಗೆ ರೆಕಾರ್ಡ್ ಮಾಡಿದ ಸಂದರ್ಶನ ಬಹಳ ದಿನಗಳಾದರೂ ಎಡಿಟ್ ಮಾಡಿಲ್ಲವೆಂಬುದು ನೆನಪಾಗಿ ಆ ಕೆಲಸ ಹಿಡಿದು ಕುಳಿತಿದ್ದೆ. ಹುಲಿ ಹಾಗೂ ಸುತ್ತಲಿನ ಪರಿಸರದ ನಡುವೆ ಇರುವ ಅಪೂರ್ವ ಸಂಬಂಧದ ಬಗ್ಗೆ ಉಲ್ಲಾಸ್ ಕಾರಂತರು ಹೇಳುತ್ತಿರುವ ಮಾತು ಸ್ಪೀಕರಿನಲ್ಲಿ ಕೇಳಿಬರುತ್ತಿತ್ತು. ಅಷ್ಟಕ್ಕೆ ಸರಿಯಾಗಿ ಅಮ್ಮ ಕಾಫಿಗೆ ಕರೆದದ್ದು.

ಇವತ್ತು ಹಬ್ಬವಾದ್ದರಿಂದ ಸಾಯಂಕಾಲದ ಕಾಫಿ ತಡ. ಅರಿಶಿನ ಕುಂಕುಮ ತೆಗೆದುಕೊಂಡು ಬಂದ ಮೇಲೆ ಎಲ್ಲರಿಗೂ ಕಾಫಿ ಮಾಡುತ್ತೇನೆ ಎಂದು ಹೋದವರು ವಾಪಸ್ ಬಂದಾಗ ಸಾಯಂಕಾಲವಾಗಿತ್ತು. ಕರೆದ ಕೂಡಲೆ ಬರೋದಿಲ್ಲ ಎಂದು ನಿತ್ಯ ಬೈಸಿಕೊಳ್ಳುವವ ಇವತ್ತು ಹಾಗೆ ಮಾಡಬಾರದು ಎಂದು ತಡಮಾಡದೆ ಇದನ್ನು ಹಾಗೆಯೇ ಬಿಟ್ಟು ಮೆಟ್ಟಿಲಿಳಿಯುತ್ತಾ ಕೆಳಗೆ ಓಡಿದೆ. ಎದುರಿಗೆ ಆಕಾಶದಲ್ಲಿ ಜಗಮಗಿಸುವ ಉಂಗುರದಂತಿದ್ದ ಚಂದ್ರ ಕಣ್ಣಿಗೆ ಬಿದ್ದ. ಕೆಳ ಹೋದವನು ನಾನಿದನ್ನೇ ಕಾಫಿ ಕುಡಿಯುತ್ತ ಅಮ್ಮನಿಗೆ ತಿಳಿಸಿದೆ.

ಅಮ್ಮನ ಮುಖದಲ್ಲಿ ಆಗ ಕಂಡುಬಂದದ್ದು ನನಗೆ ಬಣ್ಣಿಸಲಾಗದು. ಬಹುಶಃ ಮಗ ಅಪವಾದಕ್ಕೆ ಸಿಕ್ಕಾನು ಎಂಬ ಭಯ, ಹಾಗಾಗದಿರಲಿ ಎಂಬ ಕಾಳಜಿ, ತಾನೂ ಚಂದ್ರನ ನೋಡಿಬಿಟ್ಟೆನೇನೊ ಇವನ ಮಾತಲ್ಲೆ ಎಂಬಂತಹ ಭಾವನೆಯೆಲ್ಲ ಇತ್ತೇನೊ, ಅವರು ಹೆಚ್ಚೇನೂ ಮುಖದಲ್ಲಿ ತೋರಿಸಿಕೊಳ್ಳದೆ - "ನಡಿ, ಬೇಗ ಕಾಲು ತೊಳೆದುಕೊಂಡು ಬಂದು ಶ್ಯಮಂತಕದ ಕಥೆ ಕೇಳು. ಚಂದ್ರ ನೋಡಬಾರದು ಇವತ್ತು" ಎಂದರು. ಇದರಲ್ಲೆಲ್ಲ ಅಷ್ಟು ವಿಶ್ವಾಸವಿಲ್ಲದ ನಾನು ಛೆ, ಅದೆಲ್ಲ ಏನೂ ಬೇಡ ಎಂದು ತಲೆಯಲ್ಲಾಡಿಸಿದೆ. ಅಮ್ಮನಿಗೆ ಬೇಸರವಾಗಿರಲಿಕ್ಕೂ ಸಾಕು. ಮೇಲೆ ಬಂದು ಏನೋ ನೆನಪಾಗಿ ಮತ್ತೆ ಓಡಿ ಹೋಗಿ ಅಮ್ಮನಿಗೆ ಕಥೆ ಓದುವೆ ಎಂದು ತಿಳಿಸಿ ಬಂದು ಅಮ್ಮನಿಗೆ ಕಾಣುವಂತೆ ಒಮ್ಮೆ ಕಥೆ ಓದಿ ಮುಗಿಸಿದೆ.

Rating
No votes yet

Comments