ಜೋಯೀಸರ ಮಗಳು

ಜೋಯೀಸರ ಮಗಳು

ಜೋಯೀಸರ ಮನೆಯ
ಹೊಲೆಯರ ಮಾದ ತನ್ನ
ಪೊಗದಸ್ತು ಎದೆಯ ಸುರಿಸಿಕೊಂಡು
ಸೌದೆಯ ಸಿಗಿಯುತ್ತಿದ್ದರೇ,
ಜೋಯೀಸರ ಮಗಳಿಗೆ
ಮಾದನ ಎದೆಯ ರೋಮದ
ಲೆಖ್ಖ ಸಿಗದೇ ತಡವರಿಸುತ್ತಿದ್ದಳಾ-
ಇಲ್ಲ ತನ್ನ ಮೇಲು ಜಾತಿಯ ಮೇಲೆ
ಶಪಿಸುತ್ತ ಕಂಪಿಸುತ್ತಿದ್ದಳಾ ಗೊತ್ತಿಲ್ಲ…

ಮಣ್ಣಿನ ಮಡಿಕೆಯಲ್ಲಿ ಮಾದನಿಗೆ
ಕುಡಿಯಲು ನೀರು ಸುರಿಯುವ ಬದಲು
ದೇವರ ಗುಡಿಯಲ್ಲಿದ್ದ ಬೆಳ್ಳಿ ಚೊಂಬಿನಲ್ಲಿ
ಹಾಲು ತುಂಬಿಸಿ ಕುಡಿಸುವಾಗಲಂತೂ
ತಾನು ಜೋಯೀಸರ ಮಗಳೆಂಬುದನ್ನು
ಮರೆತು ಮಾದನ ಕುಡಿಮೀಸೆಗೆ
ಬೆಳ್ಳಿಯ ಚೊಂಬು ತಾಕಿಸಿ ಚೊಂಬ ತನ್ನ
ಎದೆಗೊತ್ತಿಕೊಂಡು ರೋಮಾಂಚನಗೊಂಡಿದ್ದಳು…

ರಾತ್ರಿ ಮನೆಯ ಹೊರಗೆ ಮಲಗಿ
ಗೊರಕೆ ಹೊಡೆಯುತ್ತಿದ್ದವನ ಕಾಲ
ಬೇಕಂತಲೇ ತುಳಿದು ಕಣ್ಣುಗಳಲ್ಲಿ
ಎಲ್ಲ ತುಂಬಿಕೊಂಡು ಅವನನ್ನೇ
ನೋಡುತ್ತಿದ್ದವಳ ಕಾಲ ಮುಟ್ಟಿ
ಮೂರು ಸಲ ನಮಸ್ಕರಿಸಿದ
ಮಾದನ ಮುಗ್ಧತೆಯನ್ನ
ಕಂಡು ಒಳಗೊಳಗೇ ದುಃಖಿಸಿದ್ದಳು…

ತನ್ನ ಮದುವೆಯಾಗಿ ಇನ್ನೇನು
ಗಂಡನ ಮನೆಗೆ ಹೊರಡಬೇಕು
ಅನ್ನುವಷ್ಟರಲ್ಲಿಯೇ, ಮಾದ ತಾನೆ
ಹೊಲೆದುಕೊಂಡು ಬಂದಿದ್ದ
ಜೋಡುಗಳನ್ನ (ಚಪ್ಪಲಿ) ಮದುವೆಯ ಗಂಡಿನ
ಕಾಲಿಗೆ ತೊಡಿಸುವಾಗಲಂತೂ
ಒಳಗೊಳಗೆ ದುಃಖಿಸುತ್ತ ದೇವರಲ್ಲಿ
ನನಗೆ ಮತ್ತೊಂದು ಜನುಮ ಕೊಡು
ಅನ್ನುವ ಬೇಡಿಕೆಯನ್ನ ಸಲ್ಲಿಸಿದ್ದಳು…

Rating
No votes yet

Comments