ಬಿಗುಮಾನದ ಚಿತ್ರಗಳು

ಬಿಗುಮಾನದ ಚಿತ್ರಗಳು

ಸಿಡ್ನಿಗೆ ವಸಂತ ಕಾಲಿಟ್ಟಾಗ ಮನಸ್ಸು ಅರಳುತ್ತದೆ. ಇಲ್ಲಿಯ ಮಣ್ಣಿನದೇ ಆದ ವಾಟ್ಲ್ ಹೂಗಳ ಒಂದಷ್ಟು ಚಿತ್ರವನ್ನು ಉತ್ಸಾಹದಲ್ಲಿ ತೆಗೆದಿದ್ದೆ. ಆದರೆ ಯಾಕೋ ಅದನ್ನು ಇಲ್ಲಿ ಹಾಕಬೇಕೆಂದು ಒಂದು ವಾರದಿಂದ ಹೆಣಗುತ್ತಿದ್ದೇನೆ. ಮನಸ್ಸಾಗುತ್ತಿಲ್ಲ.

ಸುಡಾನಿನಿಂದ ಹಿಡಿದು ನಮ್ಮ ಬಿಹಾರದವರೆಗೆ ಭೀಕರ ಮಾನ್ಸೂನ್ ನೆರೆ ಜನರನ್ನು ಕಂಗಾಲಾಗಿಸಿದೆ. ಸಾವಿರಾರು ಜನರ ಸಾವು ಮತ್ತು ಲಕ್ಷಾಂತರ ಮಂದಿ ಮನೆಮಠ ಕಳಕೊಂಡು ನಿರಾಶ್ರಿತರಾಗಿದ್ದಾರೆ.

ವಸಂತದ ಹೂಗಳು - ಇನ್-ಸೆನ್ಸಿಟಿವ್ ಆಗುತ್ತದೆ ಎಂದು ಮನಸ್ಸು ಕೂಗುತ್ತದೆ.

ಪ್ರಕೃತಿಯ ವಿಕೋಪ, ನದಿಮಾತೆಯ ಸಿಟ್ಟು ಎಂಬ ಮಾತುಗಳು ಜಿಗುಪ್ಸೆ ಹುಟ್ಟಿಸುತ್ತದೆ. ನದಿಯನ್ನು ಮಾತೆಯೆಂದು ನೋಡುವ ಮನೋಭಾವದಲ್ಲಿ ಬಹಳಷ್ಟು ಒಳ್ಳೆಯದಿದೆ. ಆದರೆ, ಮುನ್ನೆಚ್ಚರಿಕೆ ವಹಿಸಬೇಕಾದವರು ಹೀಗಾಡಿದರೆ ಕಪಾಳಕ್ಕೆ ಬಿಗಿಯಬೇಕೆನಿಸುತ್ತದೆ. ಯಾಕೆಂದರೆ, ನುಗ್ಗಿದ ನೀರಿನಲ್ಲಿ ಮಕ್ಕಳನ್ನು ಹಿಡಿದುಕೊಳ್ಳಲಾಗದೆ ಕಳಕೊಂಡವರು ಕಣ್ಣಮುಂದೆ ಬರುತ್ತಾರೆ.

ಚಳಿಗಾಲದಲ್ಲಿ ಎಲೆ ಹುಲ್ಲು ಎಲ್ಲ ಇಬ್ಬನಿಯಿಂದ ತೊಯ್ದು ಕಣ್ಣೀರಿಡುವಂತೆ ಕಾಣುತ್ತದೆ. ದರಿದ್ರ ವಸಂತ ಕಾಲಿಟ್ಟೊಡನೆ ಆ ತೇವವೆಲ್ಲಾ ಹಾರಿ ಹೋಗಿ ಬಿಗುಮಾನವೊಂದೇ ಬಂಡವಾಳದಂತೆ ಕಾಣುತ್ತದೆ.

ವಾಟ್ಲ್ ಹೂಗಳ ಚಿತ್ರಗಳು ಕಂಪ್ಯೂಟರಿನ ಒಂದು-ಸೊನ್ನೆಗಳಲ್ಲಿ ಹಾಗೇ ಉಳಿದಿದೆ.

Rating
No votes yet

Comments