ಕುನ್ನಕುಡಿ ವೈದ್ಯನಾಥನ್ - ಒಂದು ನಮನ

ಕುನ್ನಕುಡಿ ವೈದ್ಯನಾಥನ್ - ಒಂದು ನಮನ

ಪಿಟೀಲು ಒಂದು ಪಾಶ್ಚಾತ್ಯ ವಾದ್ಯ. ಅದನ್ನು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಒಗ್ಗಿಸಿರುವ ಪರಿ ಅದ್ಭುತ! ಅದರಲ್ಲೂ ಇತ್ತೀಚೆಗೆ ನಮ್ಮನಗಲಿದ ಶ್ರೀಕುನ್ನಕುಡಿ ವೈದ್ಯನಾಥನ್ ಅವರು ಪಿಟೀಲಿನೊಡನೆ ಸಂಭಾಷಿಸುತ್ತಿದ್ದರು! ತಮಗನಿಸಿದ್ದನ್ನು ಮಾಡಲು ಹಿಂಜರಿಯದ ಕುನ್ನಕುಡಿ ವಿವಾದಗಳ ಕೇಂದ್ರವಾಗಿದ್ದರು.

ಮಾರ್ಚ್ ೨, ೧೯೩೫ರಲ್ಲಿ ಶ್ರೀರಾಮಸ್ವಾಮಿ ಶಾಸ್ಥ್ರಿ ಹಾಗೂ ಶ್ರೀಮತಿ ಮೀನಾಕ್ಷಿ ಅವರ ಮಗನಾದಿ ತಮಿಳುನಾಡಿನ ಕುನ್ನಕುಡಿ ಗ್ರಾಮದಲ್ಲಿ ಹುಟ್ಟಿದರು. ಸುಮಾರು ೧೨ ವರ್ಷ ವಯಸ್ಸನ್ನು ತಲುಪುವಷ್ಟರಲ್ಲಿಯೇ ಸಂಗೀತದ ಮೇಲೆ ಹಾಗೂ ಪಿಟೀಲಿನ ಮೇಲೆ ಅದ್ಭುತ ಹಿಡಿತವನ್ನು ಸಾಧಿಸಿದರು. ಅಂದಿನ ದಿಗ್ಗಜರಾದ ಶ್ರೀಗಳಾದ ಅರಿಯಾಕುಡಿ, ಶೆಮ್ಮಂಗುಡಿ, ಮಹಾರಾಜಪುರಂ ಮುಂತಾದವರ ಕಚೇರಿಗಳಲ್ಲಿ ಪಕ್ಕ ವಾದ್ಯಕರರಾಗಿ ಪಿಟೀಲನ್ನು ನುಡಿಸಿ ಸೈ ಎಂದು ಅನಿಸಿಕೊಂಡರು.

ಕುನ್ನಕುಡಿ ಅವರದ್ದು ಸಾಂಪ್ರದಾಯಿಕ ಚೌಕಟ್ಟಿನಿಂದ ಬಹುದೂರವಿದ್ದ ವಿಕ್ಷಿಪ್ತ ಮನೋಭಾವ.
-೧೯೭೬ರಲ್ಲಿ ಪಿಟೀಲನ್ನು ಪಕ್ಕ ವಾದ್ಯವಾಗಿ ನುಡಿಸುವುದನ್ನು ನಿಲ್ಲಿಸಿದರು. ಅದನ್ನು ಪ್ರಧಾನ ವಾದ್ಯವಾಗಿ ಕಚೇರಿಗಳನ್ನು ನೀಡಲಾರಂಬಿಸಿದರು.
-ಶಾಸ್ತ್ರೀಯ ಸಂಗೀತ ಪಾಮನ್ಯನಿಗೆ ಸಾಮಾನ್ಯವಾಗಿ ಬಲು ದೂರ. ಕುನ್ನಕುಡಿ ಅವರು ತಮ್ಮ ಪ್ರಯೋಗಗಳಿಂದ ಜನಸಾಮಾನ್ಯರಿಗೆ ಹತ್ತಿರವಾದರು.
-ತಮ್ಮ ಶಾಸ್ತ್ರೀಯ ಸಂಗೀತ ಕಚೇರಿಗಳಲ್ಲಿ ಚಲನಚಿತ್ರಗೀತೆಗಳನ್ನು ನುಡಿಸಲು ಆರಂಭಿಸಿದರು. ಅವರು ನುಡಿಸಿದ ‘ಶಿವಪ್ಪ ಕಾಯೋ ತಂದೆ, ಮೂರು ಲೋಕ ಸ್ವಾಮಿ ದೇವಾ, ಹಸಿವೆಯನ್ನು ತಾಳಲಾರೆ ಕಾಪಾಡೆಯ‘ ಗೀತೆ ಈಗಲೂ ನನ್ನ ಕಿವಿಯಲ್ಲಿ ಗುಂಯ್ ಗುಡುತ್ತಿದೆ.
-ಪಿಟೀಲನ್ನು ನುಡಿಸುವಾಗ ಅಸಂಖ್ಯ ‘ಗಿಮಿಕ್‘ ಮಾಡುತ್ತಿದ್ದರು. ಇವು ಸಂಪ್ರಧಾಯಸ್ಥರಿಗೆ ಕಿರಿಕಿರಿಯನ್ನು ಉಂಟು ಮಾಡುತ್ತಿದ್ದವು. ಆದರೆ ಜನಸಾಮಾನ್ಯರು ಇವನ್ನು ತುಂಬಾ ಇಷ್ತಪಡುತ್ತಿದ್ದರು.
-ಸಾಮಾನ್ಯವಾಗಿ ಶಾಸ್ತ್ಗ್ರೀಯ ಸಂಗೀತವನ್ನು ಕಲಿತವರು ಚಲನಚಿತ್ರ ರಂಗಕ್ಕೆ ಒಲಿಯುವುದು ಕಡಿಮೆ. ಕುನ್ನಕುಡಿ ಚಿತ್ರರಂಗಕ್ಕೆ ಹತ್ತಿರವಾಗಿದ್ದರು. ತೋಡಿ ರಾಗಂ ಎಂಬ ಶಾಸ್ತ್ರೀಯ ಸಂಗೀತ ಆಧಾರಿತ ಚಿತ್ರವನ್ನು ನಿರ್ಮಿಸಿ ಕೈ ಸುಟ್ಟುಕೊಂಡರು.
-ಹೊಸ ರಾಗವನ್ನು ಸೃಜಿಸಿ, ಅದನ್ನು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಶ್ರೀಮತಿ ಜಯಲಲಿತ ಅವರಿಗೆ ಅರ್ಪಿಸಿದರು.

ಶ್ರೀಕುನ್ನಕುಡಿ ಅವರನ್ನು ಭೇಟಿಯಾಗಿ ಮಾತನಾಡುವ ಅವಕಾಶ ನನಗೆ ಒಮ್ಮೆ ಒದಗಿ ಬಂದಿತು. ಅವರಿಗೆ ‘ವಿದ್ಯಾರತ್ನ‘ ಪ್ರಶಸ್ತಿಯನ್ನು ಬೆಂಗಳೂರಿನ ಶುಭಾರಾಂ ಟ್ರಸ್ಟ್ ನವರು ನೀಡಿದರು. ಕಾರ್ಯಕ್ರಮವು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಿತು. ಅಂದಿನ ಕಾರ್ಯಕ್ರಮದ ‘ಮಾಸ್ಟರ್ ಆಫ್ ಸೆರೆಮನಿ‘ ನಾನಾಗಿದ್ದೆ. ಅವರ ಪರಿಚಯವನ್ನು ಮಾಡಿಕೊಟ್ಟೆ. ನನ್ನ ಧ್ವನಿಯನ್ನು ತುಂಬಾ ಮೆಚ್ಚಿಕೊಂಡರು. ನನ್ನ ಭಾಷೆಯಲ್ಲಿದ್ದ ಲಯವನ್ನು ಗುರುತಿಸಿ ಶ್ಲಾಘಿಸಿದರು. ನನಗೆ ಆಗಲೇ ವೈದ್ಯಕೀಯಕ್ಕಾಗಿ ‘ವಿದ್ಯಾರತ್ನ‘ ಪ್ರಶಸ್ತಿ ಬಂದಿರುವುದನ್ನು ಕೇಳಿ ಅಭಿನಂದಿಸಿದರು. ನನ್ನ ಕೆಲಸವನ್ನು ಮುಂದುವರೆಸಲು ಆಶೀರ್ವಾದಿಸಿದರು. ಆಗ ಅವರು ನನ್ನೊಡನೆ ಒಂದು ಪ್ರಸಂಗವನ್ನು ಹಂಚಿಕೊಂಡರು. ಅವರ ತಂದೆ ರಾಮಸ್ವಾಮಿ ಶಾಸ್ತ್ರಿಯವರಿಗೆ ಲಕ್ವ ಹೊಡೆದು ಸ್ಮೃತಿ ಕಳೆದುಕೊಂಡಿದ್ದರು. ವೈದ್ಯರು ಮತ್ತೇನು ಮಾಡಲಾಗದೆಂದು ಕೈ ಚೆಲ್ಲಿದ್ದರು. ಆಗ ಕುನ್ನಕುಡಿ ಅವರು ನಿರಂತರವಾಗಿ ೨೪ ಗಂಟೆಗಳ ಕಾಲ ಪಿಟೀಲನ್ನು ನುಡಿಸಿದರು. ಆಗ ಹೋಗಿದ್ದ ಸ್ಮೃತಿ ಮತ್ತೆ ಬಂದಿತಂತೆ. ಸಂಗೀತಕ್ಕೆ ಅಪಾರ ಚಿಕಿತ್ಸಾ ಸಾಮರ್ಥ್ಯವಿರುವುದನ್ನು ಒತ್ತಿ ಹೇಳಿದರು. ಒಮ್ಮೆ ಚೆನ್ನೈಗೆ ಬನ್ನಿ. ಸಂಗೀತ ಹಾಗೂ ರೋಗಗುಣ ಸಾಮರ್ಥ್ಯದ ಬಗ್ಗೆ ಮಾತನಾಡೋಣ ಎಂದಿದ್ದರು. ಆದರೆ ಆ ದಿನ ನನ್ನ ಬದುಕಿನಲ್ಲಿ ಬರಲೇ ಇಲ್ಲ.

ಹೊಳಪು ಕಂಗಳ, ಚೂಪು ಮೂಗಿನ ಎತ್ತರದ ಧ್ವನಿಯ - ಹಣೆಯ ತುಂಬಾ ವಿಭೂತಿಯನ್ನು ಬಳಿದು, ಮಧ್ಯೆ ದೊಡ್ಡ ಕೆಂಪು ಕುಂಕುಮವಿಟ್ಟ ಕುನ್ನಕುಡಿ ಅವರ ಚಿತ್ರ ಈಗಲೂ ನನ್ನ ಕಣ್ಣು ಕಟ್ಟುವಂತಿದೆ. ಯಾರ ಮುಲಾಜಿಗೂ ಬಗ್ಗದ, ತನಗೆ ಸರಿ ಅನಿಸಿದ್ದನ್ನು ಧೈರ್ಯದಿಂದ ಮಾಡುತ್ತಿದ್ದ ಕುನ್ನಕುಡಿಯಂತಹವರು ನಿಜಕ್ಕೂ ಅಪರೂಪದ ಕಲಾವಿದರು. ಅವರ ಆತ್ಮಕ್ಕೆ ನೆಮ್ಮದಿ ದೊರೆಯಲಿ.

-ನಾಸೋ

Rating
No votes yet

Comments