ಪತ ಪತ ಗುಡ್ಡೆ ಮತ್ತು ಅದರ ಜತೆಗೆ ನೆನಪಾದದ್ದು.

ಪತ ಪತ ಗುಡ್ಡೆ ಮತ್ತು ಅದರ ಜತೆಗೆ ನೆನಪಾದದ್ದು.

ಹೆಸರು ಕೇಳ್ದಾಗ್ಲೇ ನಂಗೆ ನಗು ಬರುತ್ತೆ. ಯಾಕಂದ್ರೆ ಅದ್ರ ಹಿಂದಿರೋ ಕತೆ ನಂಗೆ ಗೊತ್ತಲ್ವಾ. ನಿಮ್ಗೂ ಹೇಳ್ತೀನಿ.

ನಾನು ಒಂದು-ಎರಡು ವರ್ಷದ ಚಿಕ್ಕ - ಪುಟ್ಟ - ತುಂಟ ಹುಡುಗಿಯಾಗಿದ್ದಾಗಿನ ಕತೆ. ನಂಗೆ ಇದು ನಿಜಾನಾ ಅಂತ ನೆನಪಿಲ್ಲ. ಆದ್ರೆ ಅಮ್ಮ ಕೆಲವೊಮ್ಮೆ ನೆನಪಿಸ್ತಾರೆ.

1979-80ರ ಹೊತ್ತಿಗೆ ನಾವಿದ್ದದ್ದು ಮಂಗಳೂರಿನ ಕೊಟ್ಟಾರ ಕ್ರಾಸ್ ಬಳಿ. ಅದು ನನ್ನ ದೊಡ್ಡಮ್ಮನ ಮನೆಗೂ ಹತ್ರ. ದೊಡ್ಡಮ್ಮ ಅಂದ್ರೆ ನನ್ನ ಅಜ್ಜಿ. ಯಾಕೆ ಅಜ್ಜಿಯನ್ನು ದೊಡ್ಡಮ್ಮ ಅಂತ ಕರೀತಿದ್ನೋ ಗೊತ್ತಿಲ್ಲ. ಬಹುಶಃ, ಆಕೆ ಆಗ ಅಜ್ಜಿ ತರಹ ಕಾಣಿಸ್ತಾ ಇರ್ಲಿಲ್ವೇನೋ. ದೊಡ್ಡಮ್ಮನ ಮನೆ ಕತೆಗಳೂ ಚೆನ್ನಾಗಿವೆ. ಇನ್ನೊಂದ್ಸಲ ಹೇಳ್ತೀನಿ. ಈಗ ಪತ ಪತ ಗುಡ್ಡೆ ಹತ್ತೋಣ.

ನಮ್ಮ ಹಳೇ ಮನೆ ಇದ್ದ ಜಾಗದಿಂದ ಸ್ವಲ್ಪವೇ ದೂರದಲ್ಲಿ ಈ ಪತ ಪತ ಗುಡ್ಡೆ ಇದ್ದದ್ದು. ಗುಡ್ಡ ಅಂದ್ರೆ ಅಂಥ ದೊಡ್ಡ ಗುಡ್ಡೆ ಏನಲ್ಲ. ಈಗ ಏನಾದ್ರೂ ಈ ಗುಡ್ಡೆ ನೋಡಿದ್ರೆ.... ಇದಾ.... ಗುಡ್ಡೆ ಅಂತ ಅನ್ನಿಸುತ್ತೆ. 25-30 ವರ್ಷಗಳ ಹಿಂದೆ ಅಲ್ಲಿ ಮನೇನೂ ಇರ್ಲಿಲ್ಲ. ರಸ್ತೆ ಕೂಡಾ ಇರ್ಲಿಲ್ಲ. ಖಾಲಿ ಜಾಗ ಇತ್ತು. ಈಗ ರಾಷ್ಟ್ರೀಯ ಹೆದ್ದಾರಿ 17 ಪಕ್ಕದಲ್ಲೇ ಇದೆ.

ಈ ಪತ ಪತ ಗುಡ್ಡೆಗೆ ಆ ಹೆಸರಿಟ್ಟದ್ದು ನಾನೇ. ಆ ಗುಡ್ಡೆ ಮೇಲೆ ಕೂತ್ಕೊಂಡ್ರೆ ದೂರದಲ್ಲಿ MCF (Mangalore Chemicals and Fertilizers )ನ ಕೊಳವೆಗಳು ಕಾಣ್ತಿದ್ವು. ಸಂಜೆ ಹೊತ್ತು ಕಾಣಿಸ್ತಾ ಇದ್ದ MCFನ ಲೈಟ್ಸ್ ಗಳು ಪತ ಪತ ಅಂತ ಅಲುಗಾಡ್ತಾ ಇದ್ವು. ಅದಕ್ಕೇ ಆ ಗುಡ್ಡೆಗೆ ನಾನು ಹೆಸರಿಟ್ಟದ್ದು ... ಪತ ಪತ ಗುಡ್ಡೆ ಅಂತ.

ಕೊಟ್ಟಾರ ಕ್ರಾಸ್ ಮನೇನಲ್ಲಿ ನಾವಿದ್ದದ್ದು ಎರಡು-ಮೂರು ವರ್ಷ. ಆಮೇಲೆ, ಸುರತ್ಕಲ್ ಹತ್ರದ ಕೃಷ್ಣಾಪುರಕ್ಕೆ ಬಂದ್ವಿ. ನಾನು ಮಂಗಳೂರಿನ ಸೈಂಟ್ ಆನ್ಸ್ ಶಾಲೆಗೆ ಸೇರಿದ ಮೇಲೆ, ದಿನಾ ರಾಷ್ಟ್ರೀಯ ಹೆದ್ದಾರಿ 17ರ ಮೂಲಕ ಮಂಗಳೂರಿಗೆ ಹೋಗುವಾಗ , MCFನ ದೊಡ್ಡ ಕೊಳವೆಗಳನ್ನು ನೋಡೋದೇ ಒಂದು ಖುಷಿ. ಅಲ್ಲೇ ಹತ್ರ KIOCL (Kudremukha Iron Ore Company Ltd.) ಕೂಡಾ ಇತ್ತು. ಅದೀಗ ಮುಚ್ಚಿ ಹೋಗಿದೆ ಅನ್ಸುತ್ತೆ. ಅದೇ ದಾರಿಯಲ್ಲಿ ಪಣಂಬೂರಿನ ಬಂದರಿನ ದೊಡ್ಡ ಗೋಡೆ. ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಒಂದು ಲೈಟ್ ಹೌಸ್ ಇದೆ. ಅದ್ರ ತುದಿಯಲ್ಲಿ, ಹೊರಗಿನ ಬದಿ ಒಂದು ದೊಡ್ಡ ಜೇನುಗೂಡು ತೂಗ್ತಾ ಇರ್ತಿತ್ತು.

ಸುಮಾರು 1994-95ರ ಹೊತ್ತಿಗೆ ಮಂಗಳೂರಿನಲ್ಲಿ MRPL ( Mangalore Refinery and Petrochemicals Ltd.)ನ ಕೆಲಸ ಶುರುವಾಯ್ತು. ಅದೇನು ದೊಡ್ಡ ದೊಡ್ಡ ಪೀಪಾಯಿಗಳು, ಕೊಳವೆಗಳು, ಪೈಪುಗಳು, ಇನ್ನೂ ಏನೇನೋ ... MRPL ಜಾಗಕ್ಕೆ ಇವನ್ನೆಲ್ಲಾ ಸಾಗಿಸ್ತಾ ಇದ್ರು. ಅವುಗಳ ಭಾರಕ್ಕೆ ಸುರತ್ಕಲ್ ನಲ್ಲಿದ್ದ ಒಂದು ಸಣ್ಣ ಸೇತುವೆ ಬೀಳೋಕೆ ರೆಡಿ ಆದಾಗ ಇನ್ನೊಂದು ಹೊಸ ಸೇತುವೆ ಕಟ್ಟಿಸಿದ್ರು. ಈಗ ಅದರಡಿಯಲ್ಲಿ ಕೊಂಕಣ ರೈಲಿನ ಟ್ರಾಕ್ಸ್ ಇವೆ.

ಇತ್ತೀಚೆಗೆ ಆರು ತಿಂಗಳ ಹಿಂದೆ ಆ ದಾರಿಯಲ್ಲಿ ನಾನು ಪ್ರಯಾಣ ಮಾಡ್ತಾ ಆಚೆ ಈಚೆ ಕಣ್ಣು ಹಾಯಿಸಿದೆ. ಎಷ್ಟೊಂದು ಬದಲಾಗಿದೆ ಅಂದ್ರೆ ನಾನು ಈ ದಾರಿಯಲ್ಲಿ ಇಲ್ಲಿವರೆಗೂ ಬರ್ಲೇ ಇಲ್ವೇನೋ ಅನ್ನಿಸ್ತು. ಇನ್ನೊಂದು ವರ್ಷ ಬಿಟ್ಟು ಬಂದ್ರೆ ಈಗಿರೋ ನಮ್ಮ ಮನೆ ಏರಿಯಾ ಕೂಡಾ ಬದಲಾಗುತ್ತೆ. ಮನೆ ಎದುರೇ ಚತುಷ್ಪಥ ರಸ್ತೆ ಆಗ್ತಾ ಇದೆ. ಒಂದು ಫ್ಲೈ ಓವರ್ ಕೂಡಾ ಬರುತ್ತೆ.

ಈಗ ಪತ ಪತ ಗುಡ್ಡೆಯ ಹತ್ರ ಅದೆಷ್ಟು ಮನೆಗಳು. ರಸ್ತೆ . ಗುಡ್ಡೆಯ ಸ್ವರೂಪವೇ ಬದಲಾಗಿದೆ. ನನ್ನ ಕಣ್ಣ ಮುಂದೆಯೇ ನನ್ನ ಬಾಲ್ಯದ ನೆನಪುಗಳನ್ನು ಕಟ್ಟಿಕೊಡುವ ಹಲವು ಜಾಗಗಳು ತಮ್ಮ ಮುಖಗಳನ್ನು ಸಿಂಗರಿಸಿಕೊಳ್ಳುತ್ತಿವೆ. ಕೆಲವೊಂದು ವಿಕಾರಗೊಳ್ಳುತ್ತಿವೆ. ಮಂಗಳೂರು ಬೆಳೀತಾ ಇರೋದು ನಿಜ. ಇದು ಅಗತ್ಯವೇ … ಇದು ಅಭಿವೃದ್ಧಿ ಸಂಕೇತವೇ … ಅಂತ ಕೆಲವೊಮ್ಮೆ ಯೋಚನೆ ಮಾಡಿದ್ರೂ ಉತ್ತರ ಸಿಗೋದು ಕಷ್ಟ. ಅಥವಾ ನಮ್ಮ ನಮ್ಮ ಪಾಲಿನ ಉತ್ತರಗಳನ್ನೇ ನಾವು ಸತ್ಯ ಅಂದುಕೊಂಡು ಈ ಬದಲಾವಣೆಯ ಒಂದು ಪಾತ್ರವಾಗಿಬಿಡುತ್ತೇವೆ. ಅಲ್ವೇ !

Rating
No votes yet

Comments