ರಿಲಯನ್ಸ್‌ನಲ್ಲಿ ಕನ್ನಡ

ರಿಲಯನ್ಸ್‌ನಲ್ಲಿ ಕನ್ನಡ

ನಿನ್ನೆ ನನ್ನ ರಿಲಯನ್ಸ್ ಫೋನಿಗೆ ಒಂದು ಸಂದೇಶ ಬಂತು. ಅದನ್ನು ತೆರದು ನೋಡಿದಾಗ ಆಶ್ವರ್ಯವಾಯಿತು. ಅದು ಅಚ್ಚ ಕನ್ನಡದಲ್ಲಿತ್ತು. ಚಿತ್ರ ನೋಡಿ.


ರಿಲಯನ್ಸಿನಲ್ಲಿ ಕನ್ನಡ

ಈಗಾಗಲೇ ಹಚ್ ಕಂಪೆನಿಯವರ ಕನ್ನಡ ವಿರೋಧಿ ನೀತಿ ಬಗ್ಗೆ ಚರ್ಚೆ ನಡೆದುದು ಎಲ್ಲರಿಗೂ ತಿಳಿದಿದೆ. ಈ ಸಂದರ್ಭದಲ್ಲಿ ರಿಲಯನ್ಸ್‌ನವರು ಒಳ್ಳೆಯ ಕೆಲಸ ಮಾಡಿದ್ದಾರೆ ಎನ್ನಬಹುದು. ಹಾಗೆಂದು ಹೇಳಿ ನಾನು ರಿಲಯನ್ಸ್ ಪರ ಇದ್ದೇನೆ ಎಂದು ತಿಳಿದುಕೊಳ್ಳಬೇಡಿ. ಅವರ ಸೇವೆ ಬಗ್ಗೆ ನನಗೆ ಹಲವು ಅಸಮಾಧಾನಗಳಿವೆ. ಅವುಗಳ ಬಗ್ಗೆ ಈಗ ಬೇಡ. ಇನ್ನೂ ಒಂದು ವಿಷಯ. ರಿಲಯನ್ಸ್ ಅವರ ಗ್ರಾಹಕ ಸೇವಾ ಕೇಂದ್ರಕ್ಕೆ ಫೋನ್ ಮಾಡಿ ಕನ್ನಡ ಭಾಷೆಯನ್ನು ಆಯ್ಕೆ ಮಾಡಿ ಕೇಳಿ. ಅಪ್ಪಟ ಸ್ಪಷ್ಟ ಕನ್ನಡದಲ್ಲಿ ಮಾತನಾಡುತ್ತಾರೆ!

ಆದರೆ ಈಗ ಬಂದಿರುವ ಕನ್ನಡದ ಸಂದೇಶ ಬಗ್ಗೆ ಪೂರ್ತಿ ಸಮಾಧಾನ ಇಲ್ಲ. ಅವರು ಕಳುಹಿಸಿದ ಸಂದೇಶ ಚಿತ್ರ ರೂಪದಲ್ಲಿದೆ. ಅದು ಕನ್ನಡದ ಪಠ್ಯ (text) ಅಲ್ಲ. ಯುನಿಕೋಡ್ ಅಂತು ಇಲ್ಲವೇ ಇಲ್ಲ. ಅವರು ಹಿಂದಿ ಭಾಷೆಯಲ್ಲಿ ಸಂದೇಶ ಕಳುಹಿಸುವ (ಪಠ್ಯ ರೂಪದಲ್ಲಿ) ಸವಲತ್ತು ನೀಡಿದ್ದಾರೆ. ಆದರೆ ಅದು ಯುನಿಕೋಡ್ ವಿಧಾನದಲ್ಲಿ ಇಲ್ಲ. ರಿಲಯನ್ಸ್ ಫೋನಿನಿಂದ ಕಳುಹಿಸಿದ ಹಿಂದಿ ಸಂದೇಶ ನೋಕಿಯಾ ಫೋನಿನಲ್ಲಿ ಓದಲಾಗುವುದಿಲ್ಲ. ಇಪ್ಪತ್ತು ವರ್ಷ ಹಿಂದೆ ಗಣಕಗಳಲ್ಲಿ ಭಾರತೀಯ ಭಾಷೆಗಳನ್ನು ಅಳವಡಿಸುವಾಗ ಮಾಡಿದ ತಪ್ಪನ್ನೇ ಈಗ ಫೋನುಗಳಲ್ಲಿ ಮಾಡುತ್ತಿದ್ದಾರೆ.

ಇತಿಹಾಸದಿಂದ ಪಾಠ ಕಲಿಯದವರು ಅದನ್ನೇ ಪುನರಾವರ್ತಿಸುವ ತಪ್ಪನ್ನು ಮಾಡುತ್ತಾರೆ.

ಸಿಗೋಣ,
ಪವನಜ

Rating
No votes yet

Comments