ದಾರಿ ತಪ್ಪಿದ ಮಕ್ಕಳು!

ದಾರಿ ತಪ್ಪಿದ ಮಕ್ಕಳು!

ನಿಮಗೆ ನೆನಪಿರಬಹುದು, 1997ರಲ್ಲಿ ಕರ್ನಾಟಕದಲ್ಲಿ ಅಂದಿನ ಜೆ.ಎಚ್. ಪಟೇಲ್ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿದ್ದ ಬಿ.ಟಿ ಲಲಿತಾನಾಯಕ್ ಅವರ ಪುತ್ರ ವಿಶ್ವಜಿತ್, ಮದ್ಯದ ಅಮಲಿನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮದ್ಯಾಭಿಷೇಕ ಮಾಡಿದ್ದು. ಈ ಘಟನೆ ಇಡೀ ರಾಜ್ಯಾದ್ಯಂತ ಭಾರಿ ಕೋಲಾಹಲವನ್ನೇ ಎಬ್ಬಿಸಿತ್ತು. ತಾಯಿ ಲಲಿತಾ ನಾಯಕ್ ರಾಜೀನಾಮೆ ಕೊಡುವುದರೊಂದಿಗೆ ಈ ಪ್ರಕರಣ ಅಂತ್ಯ ಕಂಡಿತ್ತು.

ಅದಾಗಿ ಎರಡು ವರ್ಷಗಳ ಬಳಿಕ ಹರಿಯಾಣಾದ ಪ್ರಭಾವಿ ಕಾಂಗ್ರೆಸ್ ನಾಯಕ ವಿನೋದ್ ಶರ್ಮಾ ಅವರ ಸು(ಕು)ಪುತ್ರ ಮನು ಶರ್ಮಾ ದೆಹಲಿಯ ನೈಟ್ ಕ್ಲಬ್ ಒಂದರಲ್ಲಿ ಹಾರಿಸಿದ ಗುಂಡಿಗೆ ಜೆಸಿಕಾ ಲಾಲ್ ಎಂಬ ಹೈ ಪ್ರೊಫೈಲ್ಡ್ ಬಾರ್ ಅಟೆಂಡೆಂಟ್ ಅಸುನೀಗಿದಳು. ಈ ಪ್ರಕರಣವೂ ಸುದ್ದಿಯ ಕೇಂದ್ರಬಿಂದುವಾಗಿತ್ತು.

ಕೆಲವೇ ತಿಂಗಳುಗಳ ಹಿಂದೆ ಬೆಂಗಳೂರಿನ ಇನ್ ಫಂಟ್ರಿ ರಸ್ತೆಯಲ್ಲಿನ ಡಿಸ್ಕೊ ಥೆಕ್ ಒಂದಕ್ಕೆ ನುಗಿದ್ದ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ ಕುಣಿತದ ಹುಡುಗಿ ತನ್ನ ಜೊತೆ ಬರಲು ನಿರಾಕರಿಸಿದ್ದರಿಂದ ಗುಂಡು ಹಾರಿಸಿ ಸುದ್ದಿಯಾಗಿದ್ದ.

ಈ ಮೂರೂ ಘಟನೆಗಳನ್ನೇ ಹೋಲುವ ಇತ್ತೀಚಿನ ಸೇರ್ಪಡೆ-ಕಳೆದ ತಿಂಗಳು ಅಸುನೀಗಿದ ಬಿಜೆಪಿ ನೇತಾರ ಪ್ರಮೋದ್ ಮಹಾಜನ್ ಅವರ ಪುತ್ರ ರಾಹುಲ್ ಮಹಾಜನ್ ಮಾದಕ ದ್ರವ್ಯ ಪ್ರಕರಣ.

ನಾಲ್ಕೂ ಘಟನೆಗಳನ್ನು ತಾಳೆ ಹಾಕಿ ನೋಡಿ ಎಡವಟ್ಟಾಗಿದ್ದು ಎಲ್ಲಿ ಎಂದು ಯೋಚಿಸಿದರೆ ಸಿಗುವ ಉತ್ತರ- "ದೊಡ್ಡವರ" ಮಕ್ಕಳ ಧಾರ್ಷ್ಟ್ಯ, ಏನು ಮಾಡಿದರೂ ಪಾರಾಗಬಹುದು ಎಂಬ ಉಡಾಫೆ ಹಾಗೂ ಸತ್ಯದ ಮೇಲೆ ಬರೆ ಎಳೆದು ಅಪ್ಪಟ ಸುಳ್ಳಿನ ಗಿಲೀಟು ನೀಡಿ ಪಾರು ಮಾಡುವ ನ್ಯಾಯಾಂಗ ವ್ಯವಸ್ಥೆ.

ಈ ಹುಡುಗರ ಪ್ರಭಾವಿ ತಂದೆ-ತಾಯಿಯ ಹಿಂದಿನ ಜೀವನ ನೋಡಿದರೆ, ಅವರು ಕಷ್ಟಪಟ್ಟು ಮೇಲೆ ಬಂದವರಾಗಿರುತ್ತಾರೆ. ಆದರೆ ತಮ್ಮ ಮಕ್ಕಳಿಗೆ ಕಷ್ಟದ ನೆರಳೂ ತಾಕದ ರೀತಿಯಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆಸಿರುತ್ತಾರೆ. ಇವರ ಮಕ್ಕಳಿಗೆ ಜೀವನ ಇರುವುದೇ ಮಜಾ ಉಡಾಯಿಸಲು.

ಇಂದು ಉನ್ನತ ಶಿಕ್ಷಣ ಪಡೆದವರೂ ಒಂದು ಚಿಕ್ಕ ಉದ್ಯೋಗ, ನಾಲ್ಕು ಕಾಸು ಸಂಪಾದಿಸಿ ನೆಮ್ಮದಿಯ ಜೀವನ ನಡೆಸಲು ಪರದಾಡುತ್ತಿರಬೇಕಾದರೆ, ಈ ಅಗವ್ಯ (ಅತಿ ಗಣ್ಯ ವ್ಯಕ್ತಿ)ರ ಮಕ್ಕಳು ದಿನಕ್ಕೊಂದು ಕಾರು, ಅಂಗಿ ಬದಲಾಯಿಸಿದಷ್ಟೇ ಸುಲಭವಾಗಿ ಬದಲಿಸುವ ಗರ್ಲ್ ಫ್ರೆಂಡ್ ಗಳು, ಮೋಜು-ಮಜಾ-ಮಸ್ತಿ‌ಯಲ್ಲಿ ಕಾಲ ಕಳೆಯುತ್ತಿದ್ದಾರೆ. ಅದೂ ಶ್ರೀಸಾಮಾನ್ಯನ ಹಣದಿಂದ ಕಟ್ಟಿದ ಅಪ್ಪನ ಸರಕಾರಿ ಬಂಗಲೆಯಲ್ಲಿ (7 ಸಫ್ದರ್‌ಜಂಗ್ ರಸ್ತೆಯ ಬಂಗಲೆ)!

ರಾಹುಲ್ ಮಹಾಜನ್ ಪ್ರಕರಣದಲ್ಲಿ ಆಗಿದ್ದು ಕೂಡ ಇದೇ. ಈತನಿಗೇನು ಕೊರತೆ? ಅನಧಿಕೃತ ಮೂಲಗಳು ಪ್ರಕಾರ ಈತ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿಯ ಒಡೆಯ. ಒಂದೆಡೆ ಜನ ಹೇಗೆ ಹೊಟ್ಟೆ ಹೊರೆಯಬೇಕು ಎಂದು ಚಿಂತಿಸಿದರೆ, ಈತ ಇರುವ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬ ಜಾಯಮಾನದವ. ಇದಕ್ಕೆ ವಿವೇಕ್ ಮೈತ್ರಾ, ಸಾಹಿಲ್ ನಂಥವರ ಮೈತ್ರಿ.

ಇದಕ್ಕೆಲ್ಲ ಕಲಶವಿಟ್ಟಂತೆ ನಮ್ಮ ನ್ಯಾಯಾಂಗ ವ್ಯವಸ್ಥೆ.

ಈ ವ್ಯವಸ್ಥೆಯಲ್ಲಿನ ಲೋಪ-ದೋಷದಿಂದಾಗಿ ಯಾರು ಏನು ಮಾಡಿದರೂ ಪಾರಾಗಬಹುದು ಎಂಬ ಮನೋಭಾವನೆ ಬೆಳೆದುಬಿಟ್ಟಿದೆ. ವಿಶ್ವಜಿತ್ ಪ್ರಕರಣ ಏನಾಯಿತು? ಜೆಸ್ಸಿಕಾ ಲಾಲ್‌ಳನ್ನು ಮನು ಶರ್ಮಾ ಗುಂಡಿಟ್ಟು ಕೊಂದಿದ್ದು ಜಗತ್ತಿಗೇ ಗೊತ್ತಿದ್ದರೂ ಈಚೆಗೆ ಈಚೆಗೆ ದೆಹಲಿ ಹೈಕೋರ್ಟ್ ಈತನನ್ನು ಖುಲಾಸೆಗೊಳಿಸಿದ್ದು ಏನು ತೋರಿಸುತ್ತದೆ? ರಾಹುಲ್ ಮಹಾಜನ್ ಕೂಡ ಕಾನೂನಿನ ಇಂಥದೇ ಹಿಂಬಾಗಿಲ ಮೂಲಕ ನಗುತ್ತ ಒಂದು ದಿನ ಹೊರಬರುತ್ತಾನೆ.

ಪ್ರಜಾಪ್ರಭುತ್ವದ ಕಾವಲುಗಾರನಂತಿರುವ ಮಾಧ್ಯಮಗಳು ನಾಲ್ಕು ದಿನ ಈ ಬಗ್ಗೆ ವರದಿ ಮಾಡುತ್ತವೆ. ಆಮೇಲೆ ತಣ್ಣಗಾಗುತ್ತವೆ, ಕ್ರಮೇಣ ಇಂಥ ವಿಷಯಗಳು ಶ್ರೀಸಾಮಾನ್ಯರ ಮನಸ್ಸಿನಿಂದಲೂ ಮಾಸಿ ಹೋಗುತ್ತದೆ.

ಕನ್ನಡ ಸಿನಿಮಾವೊಂದರ ಹಾಡಿನ ಈ ಸಾಲುಗಳು ನೆನಪಾಗುತ್ತಿವೆ-

"ಈ ದೇಶದ್ ಕತೆ ಇಷ್ಟೇ ಕಣಮ್ಮೋ, ಇಲ್ಲಿ ನ್ಯಾಯಾ ನೀತೀಗ್ ಜಾಗ ಇಲ್ಲಮ್ಮೋ
ನ್ಯಾಯದ್ ಮನೆಗೀಗ್ಲೂ ಎರಡೆರಡಂತೆ ಬಾಗ್ಲು, ಹಿಂದೆ ಹೋಗಿ ಮುಂದೆ ಬರೋ ಈ ದೇಶದ್ ಕತೆ ಇಷ್ಟೇ ಕಣಮ್ಮೋ||"

----
http://vishwaputa.blogspot.com/

Rating
No votes yet

Comments