ಜ್ಞಾನದೇವ ಮತ್ತು ಆಳಂದಿ

ಜ್ಞಾನದೇವ ಮತ್ತು ಆಳಂದಿ

ಪುಣೆಗೆ ಬಂದ ಹೊಸತರಲ್ಲಿ, ಮಾಹಿತಿಗೆಂದು ಪುಣೆಯ ಕುರಿತಾದ ಪ್ರವಾಸಿ ಮಾರ್ಗದರ್ಶಿಕೆಯೊಂದನ್ನು ಕೊಂಡುಕೊಂಡಿದ್ದೆ. ಅದರ ಮೂಲಕ ನನಗೆ ಆಳಂದಿಯ ಬಗ್ಗೆ ಮೊದಲು ತಿಳಿದದ್ದು. ನಂತರ ವಾರಾಂತ್ಯದ ರಜೆಯ ಸಂದರ್ಭಧಲ್ಲಿ ಒಂದು ಶನಿವಾರ ಆಳಂದಿಯನ್ನು ಭೇಟಿಮಾಡುವ ಸದವಕಾಶ ಒದಗಿ ಬಂತು. ಪುಣೆಯ ಈಶಾನ್ಯ ದಿಕ್ಕಿನಲ್ಲಿ , ೨೦ ಕಿಮೀಗಳಷ್ಟು ದೂರದಲ್ಲಿರುವ ಈ ಗ್ರಾಮ ಮಹಾರಾಷ್ಟ್ರದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಇತಿಹಾಸದಲ್ಲಿ ಒಂದು ಪ್ರಮುಖ ಘಟ್ಟಕ್ಕೆ ಸಾಕ್ಷಿಯಾಗಿದೆ. ಸಹ್ಯಾದ್ರಿಯ ತಪ್ಪಲಿನಲ್ಲಿ ಹರಿಯುವ ಇಂದ್ರಾಯಿಣಿ ನದಿಯ ತಟದಲ್ಲಿದೆ. ಈ ಊರು. ಮರಾಠಿಗರಿಗೆ ಪಂಢರಾಪುರ, ತುಳಜಾಪುರ, ಕೊಲ್ಲಾಪುರ, ನಾಸಿಕದಷ್ಟೇ ಪ್ರಮುಖ ಯಾತ್ರಾಸ್ಥಳ ಈ ಆಳಂದಿ. ಮೊದಲೇ ಹೇಳಿದಂತೆ ಸಹ್ಯಾದ್ರಿ ತಪ್ಪಲಿನ ಕಪ್ಪು ಮಣ್ಣಿನ ಬಯಲಿನ ಆಳಂದಿ, ಮರಾಠೀ ಸಂತ ಕವಿ ಹಾಗೂ ಮರಾಠೀ ಭಾಷೆಯ ಮೊಟ್ಟಮೊದಲ ಪ್ರಮುಖ ಸಾಹಿತ್ಯಕೃತಿಯನ್ನು ರಚಿಸಿದ ಜ್ಞಾನದೇವನ ಸಂಜೀವನ ಸಮಾಧಿಯ ಸ್ಥಳ. ಜ್ಞಾನದೇವ ಹುಟ್ಟಿದ್ದು ೧೩ನೇ ಶತಮಾನದಲ್ಲಿ, ಇಂದಿನ ಅಹಮದ್ ನಗರ ಜಿಲ್ಲೆಯ ಆಪೆಗಾಂವ್ ಎಂಬ ಹಳ್ಳಿಯಲ್ಲಿ. ತಂದೆ ವಿಠಲ ಪಂತ, ಸಂಸಾರ ತೊರೆದು ವೈರಾಗ್ಯವನ್ನರಸಿ ಹೋಗಿದ್ದವರು. ಗುರುಗಳ ಮಾತಿನಂತೆ ಸಂಸಾರಜೀವನಕ್ಕೆ ಮರಳಬೇಕಾಯಿತು. ಆಗ ಸಮಾಜದಿಂದ ತಿರಸ್ಕಾರವನ್ನನುಭವಿಸಿದ ಅವರು ತಮ್ಮ ಮಡದಿ ರುಕ್ಮಿಣಿಬಾಯಿಯೊಡನೆ ಗಂಗಾನದಿಯಲ್ಲಿ ಮುಳುಗಿ ಪ್ರಾಣತ್ಯಾಗ ಮಾಡಿದರು. ಇಷ್ಟಾಗಿಯೂ ಅವರ ನಾಲ್ಕೂ ಮಕ್ಕಳ ಬಗ್ಗೆ ಸಮಾಜದ ತಿರಸ್ಕಾರ ಮುಂದುವರಿಯಿತು. ನೊಂದ ಜ್ಞಾನದೇವ ಸಾತ್ವಿಕ ತತ್ವಗಳನ್ನು ಆಲಿಂಗಿಸಿ ಸಂತನಂತೆ ಬಾಳತೊಡಗಿದ. ತನ್ನ ಕಿರು ಜೀವಿತಾವಧಿಯಲ್ಲೇ (ಆತ ತನ್ನ ೨೧ನೆಯ ವಯಸ್ಸಿನಲ್ಲೇ ಸಂಜೀವನ ಸಮಾಧಿ ಹೊಂದಿದ) ಅತ್ಯಂತ ಮಹತ್ವಪೂರ್ಣ ಕೊಡುಗೆಯನ್ನು ಮರಾಠೀ ಸಾಹಿತ್ಯಕ್ಕೆ ನೀಡಿದ್ದಾನೆ. 'ಜ್ಞಾನೇಶ್ವರಿ' ಎಂದೇ ಪ್ರಸಿದ್ಧವಾಗಿರುವ ಭಾವಾರ್ಥದೀಪಿಕೆಯೆಂದ ಭಗವದ್ಗೀತೆಯ ಬಗೆಗಿನ ಟೀಕೆ ಅವನ ಮಹತ್ವದ ಕೃತಿ. ಈ ಕೃತಿ, ಮೇಲೆ ಹೇಳಿದಂತೆ ಮರಾಠೀ ಭಾಷೆಯ ಮೊಟ್ಟಮೊದಲ ಮಹತ್ವದ ಕೃತಿ. ಅಲ್ಲದೆ, ತನ್ನ ವಿಚಾರತತ್ವ, 'ಚಿದ್ವಿಲಾಸವಾದ'ದ ಬಗ್ಗೆ ಅಮೃತಾನುಭವ ಎನ್ನುವ ಕೃತಿಯನ್ನೂ ರಚಿಸಿದ್ದಾನೆ. ಅಲ್ಲದೆ ಹಲವಾರು ಅಭಂಗಗಳನ್ನು ಕೊಡುಗೆಯಾಗಿ ನೀಡಿದ್ದಾನೆ. ಮಹಾರಾಷ್ಟ್ರದ ಸಂತ ಪರಂಪರೆಯ ಮೊದಲಿಗನೆಂದೇ ಇವನನ್ನು ಗುರುತಿಸಬಹುದಾಗಿದೆ. ಈತನ ಹಿರಿಯಣ್ಣ, ನಿವೃತ್ತಿನಾಥನು ನಾಥ ಸಂಪ್ರದಾಯದ ಪ್ರಮುಖ ಪ್ರವರ್ತಕನು. ತಪತಿ ತೀರಕ್ಕೆ ಹೋಗಿದ್ದಾಗ ಪ್ರವಾಹದಲ್ಲಿ ತಂಗಿ ಮುಕ್ತಾಯಿ ತೀರಿಕೊಂಡ ನಂತರ ಈತ ತ್ಯ್ರಂಬಕೇಶ್ವರದಲ್ಲಿ ಸಮಾಧಿ ಹೊಂದಿದನು. ತಮ್ಮ ಸೋಪಾನದೇವನು ಪುಣೆಯ ಬಳಿ ಸಸ್ವಾಡ ಎಂಬಲ್ಲಿ ಸಮಾಧಿ ಹೊಂದಿದನು. ಜ್ಞಾನದೇವನು ಮಾಡಿದನೆನ್ನಲಾದ ಹಲವಾರು ಪವಾಡಗಳು ಇಂದಿಗೂ ಜನಮಾನಸದಲ್ಲಿ ಪ್ರಚಲಿತವಾಗಿವೆ. ಆಧ್ಯಾತ್ಮಿಕತೆಯ ಪಾರಮ್ಯ, ಸಂಜೀವನ ಸಮಾಧಿಯನ್ನು ಹೊಂದಿದಾಗ ಆತನಿಗೆ ವಯಸ್ಸು ೨೧ ವರ್ಷಗಳಾಗಿತ್ತಷ್ಟೇ! ಇಂದಿನವರೆಗೂ ಮಹಾರಾಷ್ಟ್ರದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಜೀವನದಲ್ಲಿ ಮಹತ್ವವನ್ನು ಪಡೆದಿರುವ "ಭಾಗವತಧರ್ಮ" ಹಾಗೂ "ವಾರಕರೀ" ಪಂಥಗಳ ಆದ್ಯ ಪ್ರತಿಪಾದಕನೂ ಜ್ಞಾನದೇವನೇ.(ಸಂತ ನಾಮದೇವನೂ ಇದೇ ಕಾಲಾವಧಿಯಲ್ಲಿ ಜೀವಿಸಿದ್ದ ಮತ್ತೊಬ್ಬ ವಾರಕರೀ ಸಂಪ್ರದಾಯದ ಪ್ರತಿಪಾದಕ). ಮರಾಠೀ ಭಾಷೆಯಲ್ಲಿ ವಾರಿ ಎಂದರೆ ತೀರ್ಥಯಾತ್ರೆ ಎಂದರ್ಥ. ವಾರಕರೀ ಎಂದರೆ ತೀರ್ಥಯಾತ್ರಿ ಎಂದು. ಪ್ರತಿ ವರ್ಷ ಆಳಂದಿಯಿಂದ ಆಷಾಢಮಾಸದಲ್ಲಿ ಪಂಢರಾಪುರಕ್ಕೆ ಜ್ಞಾನೇಶ್ವರ ಮಹಾರಾಜರ 'ಪಾಲಖೀ' ಹೊರಡುತ್ತದೆ. ಪುಣೆಯಲ್ಲಿ ಇದು ದೇಹುವಿನಿಂದ ಬರುವ 'ಸಂತ ತುಕಾರಾಂ' ಪಾಲಖೀಯನ್ನು ಸಂಧಿಸುತ್ತದೆ. ನಂತರ ಎರಡೂ ಪಲ್ಲಕ್ಕಿಗಳು ಬೇರೆ ಬೇರೆ ಮಾರ್ಗಗಳಲ್ಲಿ ಪಯಣಿಸಿ ಆಷಾಢ ಮಾಸದ ಮೊದಲ ಏಕಾದಶಿ* ಹೊತ್ತಿಗೆ ಪಂಢರಾಪುರವನ್ನು ಸೇರುತ್ತವೆ. ಆಷಾಢ ಮಾಸದ ಮೊದಲ ಏಕಾದಶಿ*ಯ ದಿನ ವಿಠಲನ ಆಸ್ಥಾನದಲ್ಲಿ ಮಹಾಉತ್ಸವ. ಇಂದಿಗೂ ಮಹಾರಾಷ್ಟ್ರದ ಮಹತ್ವದ ಸಾಂಸ್ಕೃತಿಕ ಧಾರ್ಮಿಕ ಸಂಪತ್ತು ಎಂದರೆ ಈ ಸಂತ ಪರಂಪರೆ. ಸಂತರ ಭೂಮಿ, ವೀರರ ಭೂಮಿ ಎಂದು ಮಹಾರಾಷ್ಟ್ರವನ್ನು ಸಂಭೋಧಿಸುವುದು ಅದಕ್ಕೇ. ಕೇಸರಿ ಬಾವುಟ ಹಿಡಿದು, ಸಣ್ಣ ಜೋಳಿಗೆ ಹೆಗಲಿಗೆ ನೇತುಹಾಕಿಕೊಂಡ, ಬಿಳಿಯ ಟೊಪ್ಪಿಧಾರಿ ವಾರಕಾರೀಗಳನ್ನು ಮಹಾರಾಷ್ಟ್ರದ ನಗರ-ಪಟ್ಟಣ-ಹಳ್ಳಿಗಳಲ್ಲಿ ಬಹಳ ಸಾಮಾನ್ಯವಾಗಿ ಕಾಣಬಹುದು. ಮರಾಠಿ ನೆಲದ ಹೃದಯದಂತಿರುವ ಪುಣೆಯ ಸುತ್ತಲಿನ ಯಾವುದೇ ವ್ಯಾಪರೀ ಸಂಸ್ಥೆ, ಹೊಟೆಲು, ಸರಕಾರೀ ದಫ್ತರಗಳಲ್ಲಿ, ಬಸ್ಸುಗಳಲ್ಲಿ ಈ ಸಂತರ ಪಟಗಳು ರಾರಾಜಿಸುತ್ತವೆ. ಕೊನೆಯದಾಗಿ, ಮರಾಠೀ ನೆಲದ ಈ ಸಂತ ಕವಿಯ ಜ್ಞಾನೇಶ್ವರಿಯಲ್ಲಿ ಅನೇಕ ಕನ್ನಡ ಶಬ್ದಗಳು ನುಸುಳಿವೆ. ಅಲ್ಲದೆ ಜ್ಞಾನೇಶ್ವರಿಯ ಮರಾಠೀ ಭಾಷೆಯು ಸಾಕಷ್ಟು ಕನ್ನಡದ ಪ್ರಭಾವವನ್ನು ಹೊಂದಿದೆ. ಇದಕ್ಕೆ ಕಾರಣ ಆ ಕಾಲದಲ್ಲಿ ಮಹಾರಾಷ್ಟ್ರದ ಆಡಳಿತಗಾರರಾದ ದೇವಗಿರಿಯ ಯಾದವರು ಕನ್ನಡಿಗರಾಗಿದ್ದುದು. ಅಲ್ಲದ, ಮುಸ್ಲಿಮರ ಆಗಮಕ್ಕೆ ಮೊದಲು ಮಹಾರಾಷ್ಟ್ರವನ್ನು ಆಳಿದವರೆಲ್ಲ ನಮ್ಮ ಕನ್ನಡ ರಾಜರುಗಳೇ.....ಹಾಗಾಗಿಯೇ ಇಂದಿಗೂ ಮರಾಠೀ ಭಾಷೆಯಲ್ಲಿ ಕನ್ನಡದ ಪ್ರಭಾವ ಢಾಳಾಗಿ ಎದ್ದು ಕಾಣುತ್ತದೆ.
*ಭೀಮನ ಅಮಾವಾಸ್ಯೆ ಎಂದು ತಪ್ಪಾಗಿ ಬರೆದಿದ್ದೆ. ತಪ್ಪನ್ನು ಗಮನಿಸಿ ಸರಿಪಡಿಸಿದ ಗೆಳತಿ ಕೌಮುದಿಕಿಯವರಿಗೆ ನನ್ನ ಧನ್ಯವಾದಗಳು.

Rating
No votes yet

Comments