ನನ್ನ ಆಟೋಗ್ರಾಫ್

ನನ್ನ ಆಟೋಗ್ರಾಫ್

ಬಾಲ್ಯ
ನನ್ನೊಂದಿಗೆ ಅಂಬೆಗಾಲಿಕ್ಕುತ ಬಂದ ಬಾಲ್ಯ, ಮುತ್ತಿಕ್ಕಿತು, ಲಾಲಿ ಹಾಡಿತು, ಮಡಿಲಲ್ಲಿ ಮಲಗಿಸಿಕೊಂಡು ಕತೆ ಹೇಳಿ ತಟ್ಟಿತು. ಕಣ್ಣಲ್ಲಿ ಕಣ್ಣಿಟ್ಟು ಸೂರ್ಯ, ಚಂದ್ರ, ಚಿಕ್ಕೆಗಳನೆಲ್ಲ ತೋರಿತು. ಅದರ ಕಣ್ಣಲ್ಲಿ ತುಂಟ ಹೊಳಪು, ಬೆರಗು, ಬಿಸುಪು, ನೂರಾರು ಬಣ್ಣಗಳು, ಕಾರಂಜಿ, ಮಾಯಾಲೋಕ. ಅದಿನ್ನೂ ಅಂಬೆಗಾಲಿಡುತ್ತಿರುವಾಗಲೇ ನಾನು ನಡಿಗೆ ಕಲಿತೆ. ಬಾಲ್ಯ ಅಳತೊಡಗಿತು. ಅನಿವಾರ್ಯ. ನನ್ನ ಪಯಣ ಇನ್ನೂ ಇತ್ತು. ಬಾಲ್ಯಕ್ಕೆ ಮುತ್ತಿಕ್ಕಿ ಮುಂದುವರಿದೆ................ ಮುಂದೆ ತಾರುಣ್ಯ ನನಗಾಗಿ ಕಾಯುತ್ತಿತ್ತು.

ತಾರುಣ್ಯ
ತಾರುಣ್ಯದ ಸನಿಹ ಹೋಗುವುದರಲ್ಲೇ ಎಲ್ಲ ಬದಲಾಗತೊಡಗಿತು. ಹುಚ್ಚು ಹಸಿರು, ರಭಸ, ವೇಗ, ಎಂದೂ ಕಾಣದ ನಡಿಗೆಯ ವೇಗ, ಉಲ್ಲಸ, ಉತ್ಸಾಹ. ತಾರುಣ್ಯದ ಗೆಳೆತನವೇ ಅಂತಹದು. ಅದರ ಕಣ್ಣುಗಳೋ ಮಿಂಚು, ಸಿಡಿಲು, ಕೋಟಿ ಪ್ರಕಾಶ ಒಟ್ಟಿಗೇ ಸೇರಿ ರೂಪುಗೊಂಡಂತಹುದು. ಕೈಗೆ ಕೈ ಬೆಸೆದು, ಹೆಜ್ಜೆಗೆ ಹೆಜ್ಜೆ ಸೇರಿಸಿ ಹೊರಟೆವು. ದಾರಿಯಲ್ಲೆಲ್ಲ ಹೂ, ಹಸಿರು, ಮಕಮಲ್ಲು. ತಾರುಣ್ಯದ ಕೈಯೆಷ್ಟು ಬೆಚ್ಚಗೆ, ಮೃದು. ಎಷ್ಟೊ ಸಲ ಬಿಗಿಯಾಗಿ ಅಪ್ಪಿಕೊಂಡೆ. ನನ್ನೊಳಗೇ ಒಂದಾಗಿರೆಂದು ವಿನಂತಿಸಿಕೊಂಡೆ. ಕಣ್ಣೀರು ಹಾಕಿದೆ. ತಾರುಣ್ಯ ಒಪ್ಪಲಿಲ್ಲ. ’ನಿನ್ನ ಗಮ್ಯ ತೋರುವುದೊಂದೇ ನನ್ನ ಕೆಲಸ’ ಎಂದ ತಾರುಣ್ಯದ ನಡಿಗೆ ನಿಧಾನವಾಗತೊಡಗಿತು. ನಾನೆಷ್ಟೇ ಪ್ರಯತ್ನಿಸಿದರೂ ತಾರುಣ್ಯದೊಂದಿಗೆ ಹೆಜ್ಜೆಯಿಡಲಾಗಲಿಲ್ಲ. ಅದರ ಕೈಯಿಂದ ಬಿಡಿಸಿಕೊಂಡು ಎಷ್ಟೋ ಮುಂದೆ ಬಂದಿದ್ದೆ. ತಿರುಗಿ ನೋಡಿದೆ. ತಾರುಣ್ಯ ಕೈ ಬೀಸಿ ವಿದಾಯ ಹೇಳುತ್ತಿತ್ತು. ನಿಟ್ಟಿಸಿರು ಬಿಡುತ್ತ ಒಲ್ಲದ ಹೆಜ್ಜೆಯೊಂದಿಗೆ ಮುಂದುವರೆದೆ. ಕಾಲುಗಳಿಗೆ ಧೃಡ ನಿರ್ಧಾರವಿತ್ತು. ಹೊತ್ತ ದೇಹವನ್ನು ಎತ್ತ ಒಯ್ಯಬೇಕೆಂಬ ಗುರಿ ಇತ್ತು. ನನಗೆ?....................

ವೃಧ್ಧ್ಯಾಪ್ಯ
ನಿಧಾನವಾಗಿ ವೃದ್ಧ್ಯಾಪ್ಯದ ಜೊತೆಗೂಡಿದೆ. ಸುಕ್ಕುಸುಕ್ಕಾದ ಅಂಕುಡೊಂಕಾದ ಹಾದಿ. ಅಲ್ಲಲ್ಲಿ ವಿಶ್ರಾಂತಿ. ನನ್ನ ಭುಜದ ಮೇಲೆ ವೃದ್ಧಾಪ್ಯದ ಕೈ. ನನಗೋ ನನ್ನದೇ ಆಯಾಸ. ವೃದ್ಧಾಪ್ಯದ ಕೈ ಬೇರೆ! ಅದನ್ನು ತಿಳಿದೋ ಏನೋ ವೃದ್ಧ್ಯಾಪ್ಯ ನನಗೊಂದು ಊರುಗೋಲು ಕೊಟ್ಟಿತು. ಅದರ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಮಂದ ಪ್ರಕಾಶ. ನೀರು ತುಂಬಿದ ಕಣ್ಣುಗಳಲ್ಲಿ ಏನೋ ಶಾಂತತೆ. ನಿಶ್ಚಲ ಸ್ಥಿತಿ. ಗೊಂದಲಗೊಳ್ಳದ ಕಣ್ಣ ಬೊಂಬೆಗಳಲ್ಲಿ ಅನಂತತೆಯ ಸಾಕಾರ. ಭಯವಾಗಿ ಮುಖ ಬೇರೆಡೆ ತಿರುವಿದೆ. ಮಾತಿಲ್ಲ ಕತೆಯಿಲ್ಲದ ನೀರಸ, ಮೌನದ ದಾರಿಯಲ್ಲಿ ಎಡವಿ ಬೀಳುವ ವೃದ್ಧಾಪ್ಯದ ಕೈಹಿಡಿದು ನಡೆದೆ. ನಿಮಿಶ ನಿಮಿಶವೂ ಸುದೀರ್ಘವೆನ್ನಿಸುವ ಪಯಣ. ಎಲ್ಲೋ ಒಂದೆಡೆ ನಿಂತು ವೃದ್ಧಾಪ್ಯ ಕೊನೆಯ ಮಾತು ಹೇಳಿತು. ’ಅದೇ ನೀನು ತಲುಪಬೇಕಾಗಿರುವ ಗಮ್ಯ’ ಎಂದು. ನಾನು ನೋಡಿದೆ. ಕಣ್ಣು ಕುಕ್ಕುವ ಬೆಳಕಿನ ದಾರಿ, ಮಿಂಚಿನ ಬಳ್ಳಿಯಂತಿರುವ ದಾರಿಯ ತುದಿ ಎಲ್ಲೂ ಕಾಣಲಿಲ್ಲ. ಕಣ್ಣು ದಣಿಯುವ ತನಕ ನೋಡಿದೆ. ಕೊನೆಯೆಂಬುದೇ ಅದಕ್ಕಿಲ್ಲ. ತಿರುಗಿ ನೋಡಿದೆ. ಬಾಲ್ಯ, ತಾರುಣ್ಯ, ವೃದ್ಧಾಪ್ಯ ಯಾವವೂ ಕಾಣಲಿಲ್ಲ. ಬೆಳಕಿನ ದಾರಿಗೆ ತಲುಪಿಸಿದ ಅವುಗಳಿಗೆ ಮನದಲ್ಲೇ ನಮಿಸಿ ಹೆಜ್ಜೆ ಹಾಕಿದೆ.
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ.

Rating
No votes yet

Comments