ದೊಡ್ಡವರ ಸಣ್ಣತನ

ದೊಡ್ಡವರ ಸಣ್ಣತನ

ಮೊನ್ನೆ ಇಲ್ಲಿ ಒಂದು ಉತ್ಸವ ನಡೀತು.  ಇಲ್ಲಿಯ ಕನ್ನಡಕೂಟ ಪ್ರತೀ ವರ್ಷ ಸೆಪ್ಟೆಂಬರ್ ನಲ್ಲಿ ಒಂದು ಮೆಗಾ-ಕಾರ್ಯಕ್ರಮ ಇಟ್ಕೊಳತ್ತೆ. ಬೇರೆ ಸಮಯದಲ್ಲಾಗೋ ಕಾರ್ಯಕ್ರಮ ಸಾಧಾರಣ ಸಂಜೆ ೪ ರಿಂದ ರಾತ್ರಿ ಹತ್ತರ ತನಕ ಆದ್ರೆ, ಈ ಕಾರ್ಯಕ್ರಮ ಬೆಳಗ್ಗೆ ೧೧ರಿಂದ ರಾತ್ರಿ ಹತ್ತರ ತನಕ.

ಬೇಕಾದಷ್ಟು ಸಂಗೀತ ನೃತ್ಯ ಕಾರ್ಯಕ್ರಮಗಳು ಇತ್ತು ಅನ್ನಿ.  ಮತ್ತೆ ಸ್ವಲ್ಪ ಹೆಚ್ಚು ಅನ್ನೋ ಅಷ್ಟೇ ಕಾರ್ಯಕ್ರಮಗಳಿದ್ದರಿಂದ ಎಲ್ಲ ತಡವಾಗಿ ನಡೀತಿತ್ತು. ಅದು ಸ್ವಲ್ಪ ನಮ್ಮ ಜನ್ಮಕ್ಕಂಟಿದ ಖಾಯಿಲೆ ಅನ್ಸತ್ತೆ. ಏನ್ಮಾಡೋದು? ಕೆಲವು ಆಯೋಜಕರ ಕೈಯಳತೆಗೆ ಮೀರಿದ್ದು, ಕೆಲವು ನಿವಾರಿಸಬಹುದಾದ್ದು. ಅಂತೂ ಸಂಜೆ ಐದಕ್ಕೆ ಶುರುವಾಗಬೇಕಾಗಿದ್ದ ಕಾರ್ಯಕ್ರಮ ಇನ್ನೂ ಆರೂವರೆಯಾದರೂ ಶುರುವಾಗಿರಲಿಲ್ಲ.  ನಾನು ಆಯೋಜಕರಲ್ಲಿ ಒಬ್ಬನಾಗಿರಲಿಲ್ಲ, ಆದರೆ, ಇನ್ನೂ ಆರಂಭವಾಗಿರದ ಕಾರ್ಯಕ್ರಮದಲ್ಲಿ ನನಗೊಂದು ಚಿಕ್ಕ ಪಾತ್ರವಿದ್ದರಿಂದ ರಂಗದ ತೆರೆಯ ಹಿಂದೆ ನಿಂತಿದ್ದೆ. ನಮ್ಮ ಕಾರ್ಯಕ್ರಮವಾದ ನಂತರ ಒಬ್ಬ ’ದೊಡ್ಡ’ ಅತಿಥಿ ಕಲಾವಿದರ ತಂಡದ ಕಾರ್ಯಕ್ರಮವಿತ್ತು. ಅವರು ಕರ್ನಾಟಕದಿಂದ ಬಂದವರೆಂದು ಹೇಳಬೇಕಿಲ್ಲವಷ್ಟೇ.

ತೆರೆಯ ಹಿಂದೆ ನಿಂತಿದ್ದಾಗ ಕೇಳಿದ ಮಾತುಕತೆ, ನನಗೆ ಪರಿಚಯವಿದ್ದ ಆಯೋಜಕರ ಮತ್ತೊಬ್ಬ ಅಪರಿಚಿತರ ನಡುವೆ - ಪದಶ: ಇದೇ ಅಲ್ಲದೇ ಇರಬಹುದು, ಆದರೆ ತಿರುಳು ಮಾತ್ರ ಇದೇನೇ.

ಅಪರಿಚಿತ: "ಇನ್ನೂ ಎಷ್ಟು ಹೊತ್ತಾಗತ್ತೆ ಅಂತ ಕೇಳ್ತಾ ಇದಾರೆ ರೀ ’ದೊಡ್ಡ’ ಕಲಾವಿದರು"

ಆಯೋಜಕ: "ಈ ಕಾರ್ಯಕ್ರಮ ಏಳಕ್ಕೆ ಶುರು, ಎಂಟೂವರೆಗೆ ಮುಗಿಯುತ್ತೆ. ಆಮೇಲೆ ಅವರದ್ದು"

ಅಪರಿಚಿತ: "ಹಾಗೆಲ್ಲಾ ಲೇಟ್ ಆಗೋದಾದ್ರೆ, ಹೊರಟೇ ಹೋಗ್ತೀವಿ, ಕಾರ್ಯಕ್ರಮವೇ ಬೇಡಾ ಅಂತಿದಾರ್ರೀ ಅವರು. ಬೆಳಗ್ಗೆ ಫ್ಲೈಟ್ ಬೇಗ ಇದೆ"

ಆಯೋಜಕ: "ಸಾರಿ ಕಣ್ರೀ, ನೀವೇ ನೋಡ್ತಿದೀರಲ್ಲ. ಒಂದುಗಂಟೆ ಡಿಲೇ ಆಗಿದೆ ಎಲ್ಲಾ. ಏಳೂವರೆಗೆ ಬದಲು ಎಂಟೂವರೆಗೆ ಶುರುವಾಗತ್ತೆ, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ"

ಅಪರಿಚಿತ: "ಅವರೆಲ್ಲ ಪ್ರೊಫೆಶನಲ್ಸು ಸಾರ್, ಹಾಗೆಲ್ಲ ಅಡ್ಜಸ್ಟ್ ಮಾಡ್ಕೋಳೋಕ್ಕಾಗಲ್ಲ. ಮೊದುಲೇ ಅಕ್ಕದಲ್ಲಿ ಅರೇಂಜ್ಮೆಂಟ್ಸ್ ಚೆನ್ನಾಗಿ ಆಗ್ಲಿಲ್ಲ ಅಂತ ಅವರಿಗೆ ಬೇಜಾರಿದೆ. ಅವರ ಮುಂಚೆ ಇರೋ ಯಾವುದಾದ್ರೂ ಕಾರ್ಯಕ್ರಮವನ್ನ ಅವರದಾದಮೇಲೆ ಹಾಕಿ.  ಆಗಲ್ಲ ಇಲ್ಲ ಅಂದ್ರೆ, ಬೇಡ ಬಿಡಿ. ಪ್ರೋಗ್ರಾಮ್ ನೇ ಕ್ಯಾನ್ಸಲ್ ಮಾಡ್ಬಿಡಿ. ಹೊರಟುಹೋಗ್ತಾರಂತೆ."

ಆಯೋಜಕ: "ಅಯ್ಯೋ ಅದೆಲ್ಲ ಹಾಗನ್ಬೇಡ್ರೀ. ನಾನು ಮಾತಾಡ್ತೀನಿ ಅವರ ಹತ್ತಿರ"

ಅಪರಿಚಿತ: "ನೋಡ್ರೀ ಏನ್ಮಾಡ್ತೀರೋ, ಪ್ರೊಫೆಶನಲ್ ಕಲಾವಿದರು ಅವರು"

ಆಯೋಜಕರು ಆ ಅಪರಿಚಿತರ ಹಿಂದೆ ಓಡಿದ್ದು ಕಾಣಿಸಿತು. ಆಮೇಲೆ ಹೇಗೆ ಓಲೈಸಿದರೋ ಗೊತ್ತಿಲ್ಲ್ಲ, ಆದರೆ ಅಂತೂ ಇಂತೂ ನಮ್ಮ ಕಾರ್ಯಕ್ರಮವಾಗಿ (ಇನ್ನೊಂದಷ್ಟು ತಡವಾಗಿ) ಒಂಬತ್ತು ಗಂಟೆಗೆ ಆ ಹಿರಿಯ ಕಲಾವಿದರ ಕಾರ್ಯಕ್ರಮವೂ ಶುರುವಾಗಿ ನಡೆಯಿತು.

ನನಗೆ ಬೇಸರವಾದದ್ದು ಅಪರಿಚಿತರ ಧಾಟಿ - ಅವರು ಆ ’ದೊಡ್ಡ’ ಕಲಾವಿದರ ಕಡೆಯವರೇ ಇರಬೇಕೆಂದು ನನ್ನ ಅನಿಸಿಕೆ. ಕಾರ್ಯಕ್ರಮ ತಡವಾಗಿದ್ದು, ರಂಗವನ್ನು ನಿಭಾಯಿಸುವುದರಲ್ಲಿ ಇನ್ನೂ ಚಾಲಾಕಿತನವನ್ನು ಆಯೋಜಕರು ತೋರಬೇಕಾಗಿತ್ತು ಅನ್ನುವುದು ನಿಜ. ಆದರೂ "ಪ್ರೊಫೆಶನಲ್" ಕಲಾವಿದರು ಎಂಬುವರು, ಸರಿಯಾದ ಸಮಯಕ್ಕೆಮಾಡದಿದ್ದರೆ ಕಾರ್ಯಕ್ರಮವನ್ನು ಬಿಟ್ಟೇ ಹೋಗುತ್ತೇವೆ ಎಂದೆಲ್ಲ  ಹೆದರಿಸುವುದು ಸರಿಯೇ? ಅದನ್ನು ಪ್ರೊಫೆಶನಲಿಸ್ಮ್ ಅನ್ನುವ್ವುದಕ್ಕಾಗುತ್ತದೆಯೇ?

ಅವರ ಮುಂಚೆ (ಅಪರಿಚಿತರು) ಮುಂದೆ ಹಾಕಬೇಕೆಂದಿದ್ದ ನಮ್ಮ ಕಾರ್ಯಕ್ರಮದಲ್ಲಿ ಸುಮಾರು ಐವತ್ತು ಜನ ಪಾಲ್ಗೊಂಡಿದ್ದರು. ಹೆಚ್ಚು ಕಡಿಮೆ ಎಲ್ಲರೂ ಬೇರೊಂದು ’ಪ್ರೊಫೆಶನ್’ ಇಟ್ಟುಕೊಂಡಿದ್ದೂ, ನಾಟಕ/ನೃತ್ಯ/ಸಂಗೀತದ ಮೇಲಿನ ಒಲವಿನಿಂದ ಕಷ್ಟಪಟ್ಟು ತಿಂಗಳುಗಟ್ಟಲೆ ಸಿದ್ಧತೆ ಮಾಡಿದ್ದ ಒಂದು ದೃಶ್ಯ ಕಾವ್ಯ. ಇನ್ನು ಈ ’ದೊಡ್ಡ’  ಕಲಾವಿದರು ಹಾಡಿದ್ದು ಸಾವಿರ ಸಲವೋ ಸಾವಿರದೊಂದನೇ ಸಲವೋ ಹಾಡುತ್ತಿದ್ದ ಅವೇ ಹಾಡುಗಳು.
ಈ ಕಾರ್ಯಕ್ರಮಕ್ಕೆಂದೇ ಅವರು ಸಿದ್ಧಪಡಿಸಿಕೊಂಡಿರುವಂತಹ ಹೊಸತಾದ ಅಂಶಗಳೇನೂ ಅಲ್ಲಿ ಕಾಣಲಿಲ್ಲ! ಅಂತಹುದರಲ್ಲಿ, ಒಂದು ಕಾರ್ಯಕ್ರಮ ಹೆಚ್ಚು ಇನ್ನೊಂದು ಕಡಿಮೆ ಎಂದು ಹೇಗೆ ಹೇಳಲು ಸಾಧ್ಯ?

ನಾನು ಕಲಾವಿದರಿಗೆ, ಅವರ ಅನುಭವಕ್ಕೆ, ಗೌರವ ಕೊಡುವಂತಹವನೇ. ಆದರೆ, ಪರಿಸ್ಥಿತಿಯ ಅರಿವಿಲ್ಲದೇ ಅವರು ಹೀಗೆ ಮಾತಾಡಿದ್ದಾರೆಂಬುದು ಮಾತ್ರ ಬಹಳ ಬೇಸರ ತಂದಿತು.ಇದು ಸಣ್ಣತನವಲ್ಲದೇ ಮತ್ತೇನು?

ನಾನು ಭಾಗವಹಿಸಿದ್ದ ಕಾರ್ಯಕ್ರಮವೂ ಬಹಳ ಚೆನ್ನಾಗಿ ಮೂಡಿ ಬಂತು ಅನ್ನುವುದು ಬೇರೆ ವಿಚಾರ. ಅದರ ಬಗ್ಗೆ ಮತ್ತೊಮ್ಮೆ ಬರೆಯುವೆ.

-ಹಂಸಾನಂದಿ

 

 

 

 

Rating
No votes yet

Comments