ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?

ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?

ಕೆಲಸದ ರಗಳೆ ಮುಗಿಸಿ, ಒಂದಿಷ್ಟು ನೆಮ್ಮದಿಯಿಂದ ಕೂಡೋಣ ಎಂದು ಟಿವಿ ಹಾಕುತ್ತೀರಿ. ಥಟ್ ಎಂದು ಬರುತ್ತವೆ ಜಾಹೀರಾತುಗಳು.

ಸಿನಿಮಾ ನಟಿಯಂತಿರುವ, ಹಾಗೇ ಮೇಕಪ್ ಕೂಡಾ ಹಾಕಿರುವ ಸಂಚಾರಿ ಪೇದೆಯೊಬ್ಬಳು ಕಾರೊಂದನ್ನು ನಿಲ್ಲಿಸಿ, ಚಾಲಕ ಕುಡಿದಿದ್ದಾನೋ ಎಂದು ಪರೀಕ್ಷಿಸುವ ಯಂತ್ರವನ್ನು ಅವನ ಬಾಯಿಗಿಟ್ಟು ಉಸಿರು ಬಿಡಲು ಹೇಳುತ್ತಾಳೆ. ದನಿಯಲ್ಲಿ ದರ್ಪ. ಚಾಲಕನಿಗೆ ದಿಗಿಲು. ಹೇಳಿಕೇಳಿ ಅದು ಹಾಡಹಗಲು. ಆಗ ಕುಡಿಯುವಂಥದ್ದು ಏನಾದರೂ ಇದ್ದರೆ ಅದು ವಾತಾವರಣ ತುಂಬಿಕೊಂಡಿರುವ ಕೆಟ್ಟ ಗಾಳಿಯನ್ನು ಮಾತ್ರ. ಅದು ಒತ್ತಟ್ಟಿಗಿರಲಿ, ಉಸಿರು ಬಿಡಲು ಕೇಳುತ್ತಿರುವುದು ಹೆಣ್ಣು. ಹೆಣ್ಣಿನ ಸಮ್ಮುಖದಲ್ಲಿ ಉಸಿರಾಡುವ ಅವಕಾಶ ಎಲ್ಲರಿಗೂ ಸಿಕ್ಕೀತೆ? ಆತನಿಗೆ ನಂಬಲೇ ಕಷ್ಟ. ಆದರೂ ಪಾಪ, ಗಲಿಬಿಯಿಂದಲೇ ಆತ ಉಸಿರು ಬಿಡುತ್ತಾನೆ.

ಏನಾಶ್ಚರ್ಯ? ಪುಳಕಗೊಳಿಸುವಂಥ ಪರಿಮಳ ಆತನ ಬಾಯಿಂದ ಬಂದು, ಯಂತ್ರದ ಶೋಧಕ ಹಾಯ್ದು, ಕೆರಳಿದಾಗ ಮಾತ್ರ ಅರಳುವ ಆ ಹೆಣ್ಣಿನ ನಾಸಿಕದ ಮೂಲಕ ಮೆದುಳಿನ ಅದ್ಯಾವುದೋ ವಾಸನೆ ಪತ್ತೆ ಹಚ್ಚುವ ಭಾಗ ಪ್ರವೇಶಿಸಿ ಆಕೆಯನ್ನು ಪುಳಕಗೊಳಿಸಿಬಿಡುತ್ತದೆ. ಮುನಿದ ಹೆಣ್ಣಿನಿಂದ ಬಚಾವಾಗಬಹುದು, ಆದರೆ, ಪುಳಕಗೊಂಡವಳಿಂದ ಪಾರಾಗುವುದು ಕರ ಕಷ್ಟ. ಚಾಲಕನ ಬಾಯಿಂದ ಅದೆಂಥ ಪರಿಮಳ ಬಂತೋ, ಅದ್ಹೇಗೆ ಆಕೆಗೆ ರೋಮಾಂಚನವಾಯಿತೋ ಗೊತ್ತಾಗುವುದಿಲ್ಲ. ಮೊದಲು ದರ್ಪದಿಂದ ಆಜ್ಞೆ ಮಾಡಿದ್ದ ಆಕೆ, ಈಗ ಇದ್ದಕ್ಕಿದ್ದಂತೆ ಬದಲಾಗುತ್ತಾಳೆ. ಇನ್ನೊಮ್ಮೆ ಉಸಿರಾಡುವಂತೆ ಮಾದಕವಾಗಿ ವಿನಂತಿಸುತ್ತಾಳೆ.

ಚಾಲಕನ ಗಲಿಬಿಲಿ ಈಗ ಕೊಂಚ ಕಡಿಮೆಯಾಗಿದೆ. ಆದರೆ ಪೂರ್ತಿ ಹೋಗಿಲ್ಲ. ಹೀಗಾಗಿ, ಅಳುಕುತ್ತಲೇ ಇನ್ನೊಮ್ಮೆ ಉಸಿರು ಬಿಡುತ್ತಾನೆ. ತಗೊಳಪ್ಪಾ, ಮಹಿಳಾ ಪೇದೆಗೆ ಮತ್ತೆ ಪುಳಕ! ಕಾರಿನ ಕಿಟಕಿ ಪಕ್ಕ ನಿಂತವಳ ಭಾವ, ಮಧುಚಂದ್ರದ ಮಂಚದ ಮೇಲೆ ಕೂತ ವಧುವಂತೆ ಬದಲಾಗುತ್ತದೆ. ’ಇನ್ನೂ ಒಮ್ಮೆ ಉಸಿರು ಬಿಡು’ ಎಂದು ಸೋತವಳಂತೆ ವಿನಂತಿಸಿಕೊಳ್ಳುತ್ತಾಳೆ.

ಈಗ ಚಾಲಕನ ಗೊಂದಲ ಮಾಯ. ಉಲ್ಲಸಿತನಾಗಿ ಉಸಿರಾಡುತ್ತಾನೆ. ಆಕೆ ಬೇಹೋಷ್! ಬೈಕಿಂದ ಇಳಿದವಳೇ, ಹೆಲ್ಮೆಟ್ ಇಳಿಸಿ, ನೀಳಗೂದಲನ್ನೊಮ್ಮೆ ಕೊಡವಿ (ಸರಿಯಾಗಿ ಹೇಳಬೇಕೆಂದರೆ ಆಕೆ ತಲೆ ಕೊಡವುತ್ತಾಳೆ), ನೋಟ್‌ಪ್ಯಾಡ್ ತೆರೆದು ಸರಸರ ಗೀಚುತ್ತಾಳೆ. ಈಗ ಚಾಲಕನಿಗೆ ಮತ್ತೆ ಗಲಿಬಿಲಿ. ಇದೇನಿದು? ಮೂರು ಸಾರಿ ಉಸಿರಾಡಲು ಹೇಳಿ, ಪುಳಕಗೊಂಡಳೆಂದು ಖುಷಿಯಾಗುವಷ್ಟರಲ್ಲಿ ದಂಡ ಹಾಕುತ್ತಿದ್ದಾಳಲ್ಲ ಎಂದು ಗಾಬರಿಯಾಗುತ್ತಾನೆ.

ಆದರೆ, ಆಕೆ ಗೀಚಿದ್ದು ತನ್ನ ಫೋನ್ ನಂಬರನ್ನು. ’ಕಾಲ್ ಮಿ’ ಎಂದವಳೇ ಬೈಕ್‌ ಹತ್ತಿ ಹೋಗುತ್ತಾಳೆ. ಚಾಲಕ ಫುಲ್ ಖುಷ್.

ಜಾಹೀರಾತಿನ ನೀತಿ ಏನಪ್ಪಾ ಅಂದ್ರೆ: ಈ ಪೇಸ್ಟ್‌ನಿಂದ ಹಲ್ಲುಜ್ಜಿದರೆ ಹುಡುಗಿಯರು ಮರುಳಾಗುತ್ತಾರೆ.

*****

ಕೋಲ್ಗೇಟ್‌ನಿಂದ ಹಲ್ಲುಜ್ಜಿದರೆ ಹಲ್ಲುಜ್ಜಿದರೆ ಹುಡುಗಿ ಒಲಿಯುತ್ತಾಳೆ. ಶಾಂಪೂ ಹಾಕಿಕೊಂಡರೆ ಹುಡುಗ ಬೇಹೋಷ್. ರೆಕ್ಸೋನಾ, ಅಲ್ಲಲ್ಲ ಹಮಾಮ್ ಸಾಬೂನು ಬಳಸಿದರೆ ದಾಂಪತ್ಯ ಸುಖಮಯ. ಬೂಸ್ಟ್ ಕುಡಿದರೆ ಮೊದಲು ಅತೀಂದ್ರಿಯ ಶಕ್ತಿಗಳು ಒಲಿಯುತ್ತಿದ್ದವು. ಈಗ ಸಚಿನ್ ತೆಂಡೂಲ್ಕರ್ ಮತ್ತು ಧೋನಿ ಮನೆಗೆ ಬಂದು ಬೂಸ್ಟ್ ಮಾಡಿ ಕುಡಿಸುತ್ತಾರೆ. ಅದೆಂಥದೋ ಬ್ರಾಂಡ್‌ನ ಕ್ಯಾಂಡಿ ತಿಂದರೆ ಸೂಪರ್‍ಮನ್ ನಿಮ್ಮ ಮನೆಕೆಲಸದವನಾಗುತ್ತಾನೆ. ಫೋನ್ ರಿಂಗ್ ಟೋನ್ ಕಾಂಡೊಮ್ ಕಾಂಡೊಮ್ ಎಂದು ಉಲಿಯುತ್ತದೆ. ಮಾತನಾಡುತ್ತ ಆಡುತ್ತ ನೀವು ಮಹಾಶೂರರಾಗಬಹುದು. ಬರೀ ತಿಳಿದುಕೊಂಡರೂ ಸಾಕು, ಮಹಾಶೂರರಾಗುವ ಖಾತರಿ ಇದೆ. ವಡಾಫೋನ್ ಹಾಕಿಸಿದರೆ ನಾಯಿ ಮರಿ ನಿಮ್ಮ ಕೆಲಸ ಮಾಡಿಕೊಡುತ್ತದೆ. ’ಆಕ್ಸ್’ ಸೆಂಟ್ ಹಾಕಿಕೊಂಡರೆ ದೇವಸ್ಥಾನಕ್ಕೆ ಹೊರಟ ಸುಂದರಿ ನಿಮ್ಮೊಂದಿಗೆ ಸರಸವಾಡುವ ಕನಸು ಕಾಣುತ್ತಾಳೆ. ಜಿಲೆಟ್ ಬ್ಲೇಡ್‌ನಿಂದ ಮುಖಕ್ಷೌರ ಮಾಡಿಕೊಂಡರೆ ಸುಂದರಿಯರು ಮುತ್ತಿಕೊಳ್ಳುತ್ತಾರೆ. ಮುತ್ತು ಕೂಡ ಕೊಡುತ್ತಾರೆ. ಅದೆಂಥದೋ ಶೇವಿಂಗ್ ಕ್ರೀಮ್ ಬಳಸಿದರೆ, ಮದುಮಗನ ಬದಲು, ಜೊತೆಗೆ ಹೋದ ನಿಮ್ಮನ್ನೇ ವರ ಅಂದುಕೊಳ್ಳುತ್ತಾರೆ. ಕೆಪಿಜೆ ಆಭರಣ ಹಾಕಿಕೊಂಡರೆ ನೌಕರಿ ಮನೆ ಬಾಗಿಲಿಗೆ ಬರುತ್ತದೆ. ದಾರಿಯಲ್ಲಿ ಹೋಗುವಾಗ ಡಿಕ್ಕಿ ಹೊಡೆದ ಹುಡುಗಿ ಮನೆಯವಳಾಗುತ್ತಾಳೆ. ದೇವಸ್ಥಾನದಲ್ಲಿ ಪ್ರದಕ್ಷಿಣೆ ಮಾಡುತ್ತಿರುವ ಹುಡುಗಿಗೆ ಮನೆಗೇ ಗಂಡು ಬಂದು ನಿಲ್ಲುತ್ತಾನೆ. ಮನೆಯ ಕಷ್ಟಗಳು ದೂರವಾಗುತ್ತವೆ. ಅಂದುಕೊಂಡಿದ್ದೆಲ್ಲ ಆಗುತ್ತದೆ.

*****

ನಸುಕಿನಲ್ಲಿ ಎದ್ದಾಗ ಇಂಟರ್‍ನೆಟ್ ಎಂದಿನಂತೆ ಕೈಕೊಟ್ಟಿತ್ತು. ಬೇಸರಗೊಂಡು ಕೂತಾಗ ಕರೆಂಟ್ ಕೂಡ ಹೋಯಿತು. ಕತ್ತಲಲ್ಲಿ ಕೂತು ಸುಮ್ಮನೇ ಯೋಚಿಸಿದಾಗ ಹೊಳೆದ ಸಂಗತಿಯಿದು.

ವಾಸ್ತವ ಕಟುವಾದಾಗ, ಅವಾಸ್ತವಿಕತೆ ಆಪ್ತವಾಗುತ್ತದಂತೆ, ಥೇಟ್ ಜಾಹೀರಾತುಗಳ ಲೋಕದಂತೆ!

- ಚಾಮರಾಜ ಸವಡಿ

Rating
No votes yet

Comments